ಸೋಮವಾರ, ಜನವರಿ 20, 2020
26 °C
ನಂಜಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಭೇಟಿ

ಅಗ್ನಿ ದುರಂತ: ನೆರವಿನ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ಹಳೇಬೀಡು: ‘ಬೆಂಕಿ ಆಕಸ್ಮಿಕದಿಂದ ಮನೆ ಕಳೆದು­ಕೊಂಡಿರುವ ಬೇಲೂರು ತಾಲ್ಲೂಕು ನಂಜಾಪುರ ಗ್ರಾಮದ ಏಳು ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ  ನೆರವು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಭರವಸೆ ನೀಡಿದರು.ಗುರುವಾರ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ತೆರಳಿದ ಅವರು ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.‘ನಿರಾಶ್ರಿತರಿಗೆ ಮನೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆಗೆ ಸ್ವಲ್ಪ ಕಾಲಾವಕಾಶ ಬೇಕು. ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಒಂದು ವಾರದೊಳಗೆ ಒದಗಿಸಲಾಗುವುದು ಎಂದರು.ಏಳು ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಹಸುಗಳನ್ನು ದೊರಕಿಸಲಾ­ಗು­ವುದು. ಬ್ಯಾಂಕ್‌ಗಳಲ್ಲಿ ಸಾಲಗಳ ಬಡ್ಡಿ ಮನ್ನಾ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು. ಏಳು ಕುಟುಂಬಗಳಿಗೆ ತಿಂಗಳಿಗಾಗುವಷ್ಟು ದವಸ ಧಾನ್ಯ ಸೀಮೆ ಎಣ್ಣೆ, ಜೊತೆಗೆ ಹೊಸ ಪಡಿತರ ಕಾರ್ಡ್‌ ವಿತರಿಸು­ವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಐದನೇ ತರಗತಿ ಮೇಲ್ಪಟ್ಟು ಕಲಿಯುತ್ತಿರುವ ಇಬ್ಬರು ಮಕ್ಕಳಿಗೆ ಮುರಾರ್ಜಿ ವಸತಿ ಶಾಲೆಗಳಲ್ಲಿ ಪ್ರವೇಶ ಒದಗಿಸಲಾಗುವುದು. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌, ಭಾಗ್ಯಲಕ್ಷ್ಮಿ ಬಾಂಡ್ ಸುಟ್ಟುಹೋಗಿದ್ದರೆ ಅಂಥವರಿಗೆ ಹೊಸದಾಗಿ ಅವುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.ತಾವು ಹಲವು ವರ್ಷಗಳಿಂದ ಅನುಭವಿಸುತ್ತಿ­ರುವ ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಇವುಗಳಲ್ಲಿ ಕೆಲವನ್ನು ಪರಿಹರಿಸುವಂತೆ ಅವರು ಸಂಬಂಧಪಟ್ಟ ಇಲಾಖೆ­ಯವರಿಗೆ ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ‘ಗ್ರಾಮಸ್ಥರ ಮನವಿಯಂತೆ ಹಳೇಬೀಡು ಠಾಣೆ ಮೂಲಕ ನಂಜಾಪುರ ಗ್ರಾಮವನ್ನು 2014ನೇ ಸಾಲಿನಿಂದ ದತ್ತು ಪಡೆದು ಅಭಿವೃದ್ಧಿಗೆ ಕ್ರಮ ವಹಿಸುತ್ತೇವೆ. 15 ದಿನಗಳಿ ಗೊಮ್ಮೆ ಇನ್‌ಸ್ಪೆಕ್ಟರ್‌, ಸಬ್ ಇನ್‌ಸ್ಪೆಕ್ಟರ್‌ ಹಾಗೂ ಇತರ ಪೊಲೀಸರ ತಂಡ ನಂಜಾಪುರಕ್ಕೆ ಭೇಟಿ ನೀಡಲಿದೆ’ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಗ್ರಾಮ ಪಂಚಾಯಿತಿ ಆಧ್ಯಕ್ಷೆ ಅನ್ನಪೂರ್ಣಾ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)