ಶುಕ್ರವಾರ, ಜುಲೈ 1, 2022
28 °C

ಅಗ್ನಿ ಪುತ್ರಿ

ಸಿ. ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಅಗ್ನಿ ಪುತ್ರಿ

`ಅಗ್ನಿ ಪುತ್ರಿ~, `ಕ್ಷಿಪಣಿ ಮಹಿಳೆ~ - ಈ ಬಿರುದುಗಳ ಒಡತಿ ಟೆಸ್ಸಿ ಥಾಮಸ್. ಆರಂಭದಿಂದಲೂ `ಅಗ್ನಿ~ ಕ್ಷಿಪಣಿ ಯೋಜನೆಗಳಲ್ಲಿ ಅವರದ್ದು ಮಹತ್ವದ ಸಾಧನೆ. ಹೀಗೆಂದೇ ಅವರನ್ನು ಪ್ರೀತಿಯಿಂದ `ಅಗ್ನಿ ಪುತ್ರಿ~ ಎಂದು ಕರೆಯಲಾಗುತ್ತದೆ. 1988ರಿಂದ `ಅಗ್ನಿ~ ಕ್ಷಿಪಣಿಯ ಸರಣಿ ಯೋಜನೆಗಳಲ್ಲೆಲ್ಲಾ ಅವರು ಕೆಲಸಮಾಡಿದ್ದಾರೆ.ಮೊದಲ `ಅಗ್ನಿ~ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆದದ್ದು 1989ರಲ್ಲಿ.  2006ರಲ್ಲಿ 3500 ಕಿಮೀ ವ್ಯಾಪ್ತಿಯ `ಅಗ್ನಿ 3~ ಕ್ಷಿಪಣಿ ಯೋಜನೆಗೆ ಅವರು ಸಹಯೋಜನಾ ನಿರ್ದೇಶಕರಾಗಿದ್ದರು. ನಂತರ ಕಳೆದ ವರ್ಷ ಯಶಸ್ವಿಯಾಗಿ ಉಡಾಯಿಸಲಾದ `ಅಗ್ನಿ 4~ ಕ್ಷಿಪಣಿ ಯೋಜನೆಗೆ ಅವರು ಯೋಜನಾ ನಿರ್ದೇಶಕರಾಗಿದ್ದರು.ಈಗ ಏಪ್ರಿಲ್ 19ರಂದು ಯಶಸ್ವಿಯಾಗಿ ಉಡಾಯಿಸಲಾದ 5000 ಕಿಮೀ ದೂರ ಕ್ರಮಿಸುವ ಖಂಡಾಂತರ ಕ್ಷಿಪಣಿ `ಅಗ್ನಿ 5~ ಯೋಜನೆಯಲ್ಲೂ ಅವರ ನೇತೃತ್ವವಿತ್ತು. 
ಡಿಆರ್‌ಡಿಓ ದ ವಿಜ್ಞಾನಿ ಸಮುದಾಯದಲ್ಲಿ ಹಿಂದೆಲ್ಲಾ ಮಹಿಳೆಯರು ಶೇ. ಎರಡರಿಂದ ಮೂರರಷ್ಟಿರುತ್ತಿದ್ದರು. ಈಗ ಶೇ 12ರಿಂದ 15ರಷ್ಟು ಮಹಿಳಾ ವಿಜ್ಞಾನಿಗಳಿದ್ದಾರೆ. ಈ ವ್ಯತ್ಯಾಸ ಕಳೆದ 20 ವರ್ಷಗಳಲ್ಲಿ ಸಾಧ್ಯವಾಗಿದೆ.

ತಮ್ಮ ಈ ಸಾಧನೆಯ ಮೂಲಕ ಭಾರತದ  ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ಯ ಪುರುಷ ಕೋಟೆಯ ರಹಸ್ಯ ಪ್ರಪಂಚಕ್ಕೆ ತೀರಾ ಹೊಸತೆನ್ನಿಸುವ ಆಯಾಮವೊಂದನ್ನು ಒದಗಿಸಿದವರು ಟೆಸ್ಸಿ. “ವಿಜ್ಞಾನದಲ್ಲಿ ಲಿಂಗ ತಾರತಮ್ಯವಿಲ್ಲ. ಏಕೆಂದರೆ ತನಗಾಗಿ ಕೆಲಸ ಮಾಡುತ್ತಿರುವವರು ಯಾರೆಂಬುದು ವಿಜ್ಞಾನಕ್ಕೆ ತಿಳಿಯುವುದಿಲ್ಲ. ನಾನಲ್ಲಿ ಕೆಲಸಕ್ಕೆ ಹಾಜರಾದ ಕೂಡಲೇ ನಾನು ಮಹಿಳೆಯಾಗಿರುವುದಿಲ್ಲ. ನಾನು ಬರೀ ವಿಜ್ಞಾನಿ~ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಹೈದರಾಬಾದ್ ಡಿಆರ್‌ಡಿಓ ದಲ್ಲಿ ಕಾರ್ಯನಿರ್ವಹಿಸುತ್ತಿರುವ 48 ವರ್ಷದ ಟೆಸ್ಸಿ ಥಾಮಸ್.`ನಾನೂ ಎಲ್ಲಾ ಹಳ್ಳಿಮಕ್ಕಳಂತೆಯೇ ಶಾಲೆಗೆ ಹೋಗುವುದು, ಆಟವಾಡುವುದು ಮಾಡುತ್ತಿದ್ದೆ. ತಿರುವನಂತಪುರದ ಹೊರವಲಯದಲ್ಲಿರುವ ಥುಂಬಾ ರಾಕೆಟ್ ಸ್ಟೇಷನ್‌ಗೆ ಶಾಲಾ ಪ್ರವಾಸದ ವೇಳೆ ಭೇಟಿ ನೀಡುವ ಅವಕಾಶಗಳು ಸಿಗುತ್ತಿತ್ತು. ಎಂಜಿನಿಯರಿಂಗ್ ಮಾಡುವ ಸ್ಫೂರ್ತಿ ದಕ್ಕಿದ್ದು ಅಲ್ಲೇ ` ಎಂದಿದ್ದಾರೆ ಅವರು.  ತ್ರಿಶ್ಶೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್, ಪುಣೆಯಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಎಂಟೆಕ್ ಮಾಡಿದ ನಂತರ 1988ರಲ್ಲಿ  ಅವರು ಡಿಆರ್‌ಡಿಓ ಸೇರಿದರು.  ಆ ಸಂದರ್ಭದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕರಾಗಿದ್ದವರು ಭಾರತದ  ಮಾಜಿ ರಾಷ್ಟ್ರಪತಿ ಹಾಗೂ `ಭಾರತ ಕ್ಷಿಪಣಿ ಕಾರ್ಯಕ್ರಮಗಳ ಪಿತಾಮಹ~ ಎಂದೇ ಹೆಸರಾದ ಎ.ಪಿ.ಜೆ. ಅಬ್ದುಲ್ ಕಲಾಂ. `ನನಗೆ ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಕೆಲಸ ಮಾಡುವ ಹೊಣೆಗಾರಿಕೆ ವಹಿಸಿದ ಅವರೇ ಈಗಲೂ ನನ್ನ ದೊಡ್ಡ ಪ್ರೇರಣೆ~ ಎಂದು ಟೆಸ್ಸಿ ಸ್ಮರಿಸಿಕೊಂಡಿದ್ದಾರೆ.ಮನೆಯೊಳಗೆ  ಸ್ಫೂರ್ತಿಯಾಗಿದ್ದವರು ಅಮ್ಮ. `ಅಮ್ಮ ತರಬೇತಿ ಪಡೆದ ಟೀಚರ್. ಆದರೆ ಹೊರಗೆ ಕೆಲಸಕ್ಕೆ ಹೋಗಲಿಲ್ಲ. ಮನೆಯ್ಲ್ಲಲೇ ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಸೋದರನಿಗೆ ಕಲಿಸಲು ತಮ್ಮೆಲ್ಲಾ ಶ್ರಮ ವಿನಿಯೋಗಿಸಿದರು.

 

ಕಾಯಿಲೆಯ ಅಪ್ಪ ಹಾಗೂ ನಮ್ಮೆಲ್ಲರನ್ನೂ ನೋಡಿಕೊಳ್ಳುವ ಇಚ್ಛಾಶಕ್ತಿ ಅಮ್ಮನಲ್ಲಿತ್ತು. ಈಗ ಅವರಿಗೆ 75 ವರ್ಷ. ತಾಯಿಯಾಗಿ ಈಗಲೂ ನಮ್ಮನ್ನು ಹುರಿದುಂಬಿಸುತ್ತಿರುತ್ತಾರೆ~ ಎಂದು ಕೇರಳದ ಅಲೆಪ್ಪಿಯಲ್ಲಿ ನೆಲೆಸಿರುವ ಅಮ್ಮ ಕುಂಜಮ್ಮ ಥಾಮಸ್ ಅವರನ್ನು ಆಪ್ತವಾಗಿ ನೆನೆಯುತ್ತಾರೆ. ಅಕೌಂಟೆಂಟ್ ಆಗಿದ್ದ ಅಪ್ಪನಿಗೆ ಲಕ್ವ ಹೊಡೆದು ಹಾಸಿಗೆ ಹಿಡಿದಾಗ ಟೆಸ್ಸಿ 8ನೇ ತರಗತಿಯಲ್ಲಿದ್ದರು.1991ರಲ್ಲಿ ಅಪ್ಪ ನಿಧನರಾಗುವವರೆಗೂ ಮನೆಯಲ್ಲೇ ಬಂಧಿಯಾಗಬೇಕಾಯಿತು. `ನಾನು ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಾಗ ಬೆಂಬಲಿಸಿದ ಅಪ್ಪ ಕಡೆಯವರೆಗೂ ನನಗೆ ಜೊತೆಯಾಗಿದ್ದರು~ ಎಂದು ನೆನೆದುಕೊಂಡಿದ್ದಾರೆ.ಟೆಸ್ಸಿ ಅವರ ಒಡಹುಟ್ಟಿದವರೆಲ್ಲಾ ಎಂಜಿನಿಯರ್, ಮ್ಯಾನೇಜರ್ ಹಾಗೂ ಬ್ಯಾಂಕ್ ಅಧಿಕಾರಿಗಳಂತಹ ಹುದ್ದೆಗಳಲ್ಲಿದ್ದಾರೆ.`ಗೃಹಿಣಿ ಹಾಗೂ ವಿಜ್ಞಾನಿಯ ಕೆಲಸ ಸರಿದೂಗಿಸುವುದು ಸವಾಲಿನದು. ನನ್ನ ಮಗ ಶಾಲೆಗೆ ಹೋಗುತ್ತಿದ್ದಂತಹ ಕಾಲದಲ್ಲಿ ತುಂಬಾ ಕಷ್ಟವಾಗುತ್ತಿತ್ತು. ನನಗೆ ಅಡುಗೆ ಮಾಡುವುದು ಇಷ್ಟ. ಬೆಳಿಗ್ಗೆ ಬೇಗನೇ ಎದ್ದು ಇಡೀ ದಿನಕ್ಕಾಗುವಷ್ಟು ಅಡುಗೆ ಮಾಡಿಹೋಗುತ್ತಿದ್ದೆ. ರಾತ್ರಿಗೆ ಸುಲಭವಾಗುತ್ತಿತ್ತು~ ಎಂದು ನೆನಪಿಸಿಕೊಂಡಿದ್ದಾರೆ ಈ `ಕ್ಷಿಪಣಿ~ ಮಾತೆ. ಭಾರತದ ರಕ್ಷಣಾ ಉತ್ಪನ್ನಗಳ ಕುರಿತಾದ ವ್ಯಾಮೋಹ ಎಷ್ಟೆಂದರೆ ದೇಶಿ ನಿರ್ಮಿತ ಹಗುರ ಯುದ್ಧ ವಿಮಾನ  `ತೇಜಸ್~ ಹೆಸರನ್ನೇ ತಮ್ಮ ಒಬ್ಬನೇ ಮಗನಿಗೆ ಇಟ್ಟಿದ್ದಾರೆ. ಈಗ ಆತ ವೆಲ್ಲೂರಿನಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ. ಒರಿಸ್ಸಾ ಮೂಲದ ಪತಿ ಸರೋಜ್ ಪಟೇಲ್ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿ ಮುಂಬೈನಲ್ಲಿದ್ದಾರೆ.`ಪರಸ್ಪರರಿಗಿರುವ ಬದ್ಧತೆಯ ಅರಿವೇ  ಯಶಸ್ಸಿನ ಸೂತ್ರ~ ಎಂಬುದು ಅವರ ಅನಿಸಿಕೆ.

ಶಾಂತಿದೂತೆ ಎನಿಸಿದ ಮದರ್ ಥೆರೆಸಾ ಅವರ ಹೆಸರೇ ಟೆಸ್ಸಿ ಎಂದಾಗಿದೆ.ಶಾಂತಿ ದೂತೆಯ ಹೆಸರು ಹೊತ್ತವರು ಸಮೂಹ ನಾಶದ ಅಸ್ತ್ರವನ್ನು ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸವಲ್ಲವೆ ಎಂಬ ಪ್ರಶ್ನೆಗೆ ಟೆಸ್ಸಿ ಅವರ ಉತ್ತರ ಇದು: `ಕ್ಷಿಪಣಿಗಳು ಶಾಂತಿಯ ಶಸ್ತ್ರಾಸ್ತ್ರ. ನೀವು ಹೆಚ್ಚು ಬಲಯುತವಾಗಿದ್ದಲ್ಲಿ, ಯಾರೂ ನಿಮ್ಮನ್ನು ಮುಟ್ಟಲು ಧೈರ್ಯ ಮಾಡುವುದಿಲ್ಲ. ನಿಮ್ಮ ಕೈಯಲ್ಲಿ ದೊಣ್ಣೆ ಇದ್ದಲ್ಲಿ ನೀವು ತಿರುಗಿಸಿ ಹೊಡೆಯಬಹುದೆಂದು ನಿಮ್ಮನ್ನು ಹೊಡೆಯಲು ಯಾರೂ ಬರುವುದಿಲ್ಲ. ಅಷ್ಟರ ಮಟ್ಟಿಗೆ ಇದು ಸರಳವಾದದ್ದು.  ನನಗೆ ಬೇಕಾದದ್ದಲ್ಲ ಇದು. ಇದು ರಾಷ್ಟ್ರದ ಅಗತ್ಯ.~ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.