ಶುಕ್ರವಾರ, ಏಪ್ರಿಲ್ 23, 2021
24 °C

ಅಟೆಂಡೆನ್ಸ್ ಓಕೆ; ಕೆಲ್ಸಾನೂ ಮಾಡಬೇಕೇ?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ವೈದ್ಯಕೀಯ ಶಿಕ್ಷಣ ಸಚಿವರೇ ಖುದ್ದು ದಿಢೀರ್ ಭೇಟಿ ನೀಡಿ ಮಂಡ್ಯ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಚಿಕಿತ್ಸೆ ನೀಡಲು ಯತ್ನಿಸಿದರೂ ಆಸ್ಪತ್ರೆಯ ಆರೋಗ್ಯ ಸುಧಾರಿಸಿಲ್ಲ. ಹಾಜರಿ ಹಾಕಿ, ಕೆಲಸಕ್ಕೆ ಗೈರುಹಾಜರಾಗುವ ವೈದ್ಯರ ‘ಸೇವೆ’ ಮಂಡ್ಯ ಜಿಲ್ಲಾ ಅಸ್ಪತ್ರೆಯಲ್ಲಿ ನಿರಂತರ ವಾಗಿ ಮುಂದುವರಿದಿದೆ. ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರ ನಿರ್ದೇಶನದ ಮೇರೆ ಬುಧವಾರ ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ದೀಢೀರ್ ಭೇಟಿ ನೀಡಿದ ತರಬೇತಿ ನಿರತ ಜಿಲ್ಲಾಧಿಕಾರಿ ಸೆಂಥಿಲ್, ಉಪ ವಿಭಾಗಾ ಧಿಕಾರಿ ರಂಗಪ್ಪ ಮತ್ತು ತಹಶೀಲ್ದಾರ್ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಹೆಚ್ಚಿನ ವೈದ್ಯರು ಕಾಣಿಸಲಿಲ್ಲ. ಆದರೆ, ದಾಖಲೆ ಪ್ರಕಾರ ಅವರೆಲ್ಲಾ ಹಾಜರಾಗಿದ್ದರು!ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಮೂವರು ಅಧಿಕಾರಿಗಳು  ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ  ಡಾಕ್ಟರ್‌ಗಳ ಹಾಜರಾತಿಯನ್ನು ಖುದ್ದು ಪರಿ ಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ಬಹುತೇಕ ರೌಂಡ್ಸ್‌ಗೆ ಬರುವುದಿಲ್ಲ ಎಂಬ ದೂರುಗಳು ರೋಗಿಗಳಿಂದಲೂ ಬಂದವು. ಉಪ ವಿಭಾಗಾಧಿಕಾರಿಗಳು ಪರಿಶೀಲನೆಯಲ್ಲಿ ಕಂಡುಬಂದಂತೆ ಎಆರ್‌ಟಿ ಸೆಂಟರ್‌ನಲ್ಲಿ 8 ಮಂದಿ ಹಾಜರಿ ಹಾಕಿದ್ದರೆ, ಕೇವಲ ಒಬ್ಬ ಸಿಬ್ಬಂದಿ ಸೇವೆಯಲ್ಲಿದ್ದರು.ಅನಸ್ತೇಷಿಯಾ ವಿಭಾಗದಲ್ಲಿ ಇಬ್ಬರು ಹಾಜರಿ ಹಾಕಿ ಗೈರು ಹಾಜರಾಗಿದ್ದರು; ದಂತ ವೈದ್ಯ ವಿಭಾಗದಲ್ಲಿ ಒಬ್ಬರು, ಇಎನ್ ಟಿಯಲ್ಲಿ ಇಬ್ಬರು, ಜನರಲ್ ಮೆಡಿಸಿನ್‌ನಲ್ಲಿ ಒಬ್ಬರು, ಜನರಲ್ ಸರ್ಜರಿ ವಿಭಾಗದಲ್ಲಿ ಇಬ್ಬರು, ಆಪ್ತಮಾಲಜಿ ವಿಭಾಗದಲ್ಲಿ ಇಬ್ಬರು ವೈದ್ಯರು ಹಾಜರಿ ಹಾಕಿ ಗೈರು ಹಾಜರಾಗಿದ್ದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ರಂಗಪ್ಪ ಅವರು, ‘ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ಬೆರಳ ಮುದ್ರೆ ಮೂಲಕ ಹಾಜರಾತಿ ಹಾಕುವ ವೈದ್ಯರು ಸೇವೆಗೆ ತೆರಳದೇ ಹೋಗುತ್ತಾರೆ. ಇಂಥ ದೂರುಗಳು ಸತ್ಯ ಎಂಬುದು ಇಂದಿನ ಪರಿಶೀಲನೆಯಲ್ಲಿ ಸಾಬೀತಾ ಗಿದೆ;’ ಎಂದರು.ಪ್ರತಿ ಡಿಪಾರ್ಟ್‌ಮೆಂಟ್‌ಗೂ ಹೋಗಿ ಪರಿಶೀಲನೆ ಮಾಡಿದ್ದೇವೆ. ಗೈರು ಹಾಜರಿ ಪ್ರಮಾಣ ಹೆಚ್ಚಿದೆ. ನಗದು ವಿಭಾಗದಲ್ಲ 3,500 ರೂಪಾಯಿ ದುರ್ಬಳಕೆ ಆಗಿರುವುದು ಕಂಡು ಬಂದಿದೆ. ಈ ಎಲ್ಲರಿಗೂ ಷೋಕಾಸ್ ನೋಟಿಸ್ ನೀಡಿ ವಿವರ ಕೇಳಲಿದ್ದೇವೆ. ಸರ್ಕಾರಕ್ಕೂ ವರದಿ ಕಳುಹಿಸಲಿದ್ದೇವೆ ಎಂದರು. ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರು ಭೇಟಿ ನೀಡಿದ್ದಾಗಲೂ ನೋಟಿಸ್ ನೀಡಲಾಗಿತ್ತು. ಈಗ ಏನಾದರೂಪರಿಣಾಮ ಆಗಲಿದೆಯಾ ಎಂಬ ಪ್ರಶ್ನೆಗೆ, ಇನ್ನು ಮುಂದೆ ನಿಯಮಿತವಾಗಿ ಹೀಗೆ ಭೇಟಿ ನೀಡಲಿದ್ದೇವೆ. ಹಿಂದೆ ನೋಟಿಸ್ ನೀಡಿರ ಬಹುದು. ಈಗ ಸರ್ಕಾರಕ್ಕೂ ವರದಿ ಹೋಗಲಿದೆ ಎಂದು ಪ್ರತಿಕ್ರಿಯಿಸಿದರು.ಪ್ರಸೂತಿಶಾಸ್ತ್ರ ವಿಭಾಗದಲ್ಲಿ ಡಾ. ಸವಿತಾ, ಡಾ. ಮನೋಹರ, ಡಾ. ಚಂಪಕ ಮಾಲಿನಿ, ಪಿರಿಯಾಟ್ರಿಕ್ಸ್ ವಿಭಾಗದಲ್ಲಿ ಡಾ. ಮಂಚೇಗೌಡ,  ಡಾ. ಡಾ. ಶ್ರೀಧರಮೂರ್ತಿ, ಡಾ. ಪದ್ಮಜಾ ಸ್ವಾಮಿ,  ಡಾ. ಶ್ರೀಧರ, ಡಾ. ತಮ್ಮಣ್ಣ ಸೇರಿದಂತೆ ಅನೇಕ ವೈದ್ಯರು ಹಾಜರಿ ಹಾಕಿದ್ದರೂ ಪರಿಶೀಲನೆ ನಡೆಸಿದಾಗ ಆಸ್ಪತ್ರೆ, ವಿಭಾಗದಲ್ಲಿ ಹಾಜರಿರಲಿಲ್ಲ ಎಂದರು. ಪರಿಶೀಲನೆಯ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ರಾಮಲಿಂಗೇಗೌಡ ಅವರು ಹಾಜರಿದ್ದು, ಅಧಿಕಾರಿಗಳು ಅವರಿಂದಲೂ ಸಿಬ್ಬಂದಿ, ವೈದ್ಯರ ಗೈರು ಹಾಜರಾತಿ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.