ಭಾನುವಾರ, ಜನವರಿ 19, 2020
28 °C

ಅಡಿಕೆ ಬೆಳೆಗಾರರ ಸಾಲ ಮನ್ನಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಡಿಕೆ ಬೆಳೆಗಾರರಿಗೆ ನೀಡಿದ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮಲೆನಾಡು ಪ್ರಾಂತೀಯ ಅಡಿಕೆ ಬೆಳೆಗಾರರ ಸಂಘಟನೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮಲೆನಾಡು ವ್ಯಾಪ್ತಿಯ ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಲಕ್ಷಾಂತರ ರೈತರು ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಿಂದಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ, ಈಗ ಅಡಿಕೆ ಬೆಳೆ ಅನೇಕ ರೋಗಗಳಿಂದಾಗಿ ಕುಸಿದಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಈಚೆಗೆ ಅಡಿಕೆ ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದ್ದು, ಅದನ್ನು ಪತ್ತೆ ಹಚ್ಚುವಲ್ಲಿ ಕೃಷಿ ಹಾಗೂ ತೋಟಗಾರಿಕಾ ಸಂಶೋಧಕರು ವಿಫಲರಾಗಿದ್ದಾರೆ ಎಂದು ದೂರಿದ ಸದಸ್ಯರು, ಈ ರೋಗದಿಂದಾಗಿ ಅಪಾರ ಪ್ರಮಾಣದ ಅಡಿಕೆ ನಷ್ಟವಾಗಿದೆ. ಆದ್ದರಿಂದ ಅಡಿಕೆ ಬೆಳೆಗಾಗಿ ಮಾಡಿದ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೋರಖ್‌ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಪಡೆದಿದೆ. ಪಡೆದ ವರದಿಯನ್ನು ಯಥಾವತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಇಲ್ಲಿಯವರೆಗೂ ಅಡಿಕೆ ಬೆಳೆಗಾರರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ಸಂಚಾಲಕ ರಮೇಶ್ ಹೆಗ್ಡೆ, ರಾಮೇಗೌಡ, ವೈ.ಎಚ್.ನಾಗರಾಜ್, ತೀ.ನಾ.ಶ್ರೀನಿವಾಸ್, ಕೆ.ಪಿ. ಶ್ರೀಪಾಲ್, ಕೆ.ಸಿ. ಮಲ್ಲಿಕಾರ್ಜುನ್, ಬಿ.ಎಂ. ಸುಂದರೇಶ್, ಅನಿಲ್, ಕೂಳಿಗೆ ವಾಸಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)