ಸೋಮವಾರ, ಮೇ 23, 2022
20 °C

ಅಡ್ವಾಣಿ ಯಾತ್ರೆ: ಉ.ಕ.ದಲ್ಲಿ ಬಂದೋಬಸ್ತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಅವರ ಜನ ಚೇತನ ಯಾತ್ರೆ ಸೋಮವಾರ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.ಮದುರೈ ಸಮೀಪದ ತಿರುಮಂಗಲಂ ಬಳಿ ಅಲಂಪಟ್ಟಿ ಎಂಬಲ್ಲಿ ಸೇತುವೆ ಕೆಳಗೆ ಬಾಂಬ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನ ಚೇತನ ಯಾತ್ರೆ ಸ್ವಾಗತಿಸಲು ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಬೈಕ್  ರಾಲಿಗಳು ರದ್ದುಗೊಂಡಿವೆ. ಮೊದಲು ನಿಗದಿಯಾಗಿದ್ದಂತೆ ಅಡ್ವಾಣಿ ಅವರ ಯಾತ್ರೆಯ ಜೊತೆಗೆ ಕರಾವಳಿಯಗುಂಟ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಬೈಕ್  ರಾಲಿ ಹಮ್ಮಿಕೊಂಡಿದ್ದರು. ಆದರೆ ಭದ್ರತಾ ಕಾರಣಗಳಿಂದಾಗಿ ಬೈಕ್ ರಾಲಿಗಳನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ-17 ಮತ್ತು 63ರಲ್ಲಿ ಸಂಚರಿಸುವ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದ್ದಾರೆ. ಕರಾವಳಿ ಕಾವಲು ಪಡೆಯ ಪೊಲೀಸರು ಇನ್ನಷ್ಟು ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಸಮುದ್ರದಲ್ಲಿ ಸತತ ಗಸ್ತು ನಡೆಸುತ್ತಿದ್ದಾರೆ.ಭಟ್ಕಳ, ಕುಮಟಾ, ಕಾರವಾರ ಮೊದಲಾದೆಡೆ ಮೀನುಗಾರಿಕೆಗೆ ಹೋಗುವ ಮತ್ತು ಬರುವ ದೋಣಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿರುವ ಸೂಕ್ಷ್ಮ ಪ್ರದೇಶಗಳಾದ ನೇತ್ರಾಣಿ, ಕೂರ್ಮಗಡ, ಲೈಟ್ ಹೌಸ್ ಮೇಲೆ ಕರಾವಳಿ ಕಾವಲು ಪಡೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.ಅಡ್ವಾಣಿ ಅವರು ಮುರುಡೇಶ್ವರದ ಕಡಲ ದಂಡೆಯಲ್ಲಿರುವ ಆರ್‌ಎನ್‌ಎಸ್ ರೆಸಿಡೆನ್ಸಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.1ರಂದು ಕುಮಟಾದ ಮಣಕಿ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ.`ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ ಭದ್ರತೆಯನ್ನು ಕೈಗೊಳ್ಳಲಾಗಿದೆ~ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ ಗುಡಿಮನಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.