ಮಂಗಳವಾರ, ಮೇ 11, 2021
25 °C
ಆಯ್ಕೆ ಪ್ರಕ್ರಿಯೆ ಪುನರ್ ಪರಿಶೀಲಿಸಲು ಆಗ್ರಹ

ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಹೊಸ ಮಾನದಂಡ ಅನುಸರಿಸಿ ಆಯ್ಕೆ ಪ್ರಕ್ರಿಯೆ ಮಾಡಿರುವುದು ಅತಿಥಿ ಉಪನ್ಯಾಸಕರಿಗೆ ಮಾರಕವಾಗಿದ್ದು, ಕೂಡಲೇ ಆಯ್ಕೆ ಪ್ರಕ್ರಿಯೆಯನ್ನು ಪುನರ್ ಪರಿಶೀಲಿಸಬೇಕು ಎಂದು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಸದಸ್ಯರು ನಗರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ 2013-14ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಹೊಸ ಮಾನದಂಡವನ್ನು ಪ್ರಕಟಿಸಿ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಅತಿಥಿ ಉಪನ್ಯಾಸಕರ ಒಂದು ವರ್ಷ ಸೇವೆಗೆ 5 ಅಂಕಗಳಂತೆ ಗರಿಷ್ಠ 5 ವರ್ಷದ ಸೇವೆ 25 ಅಂಕಗಳನ್ನು ನಿಗದಿಪಡಿಸುವಂತೆ ಸಂಘವು ಇಲಾಖೆಗೆ ಮನವಿ ಮಾಡಿಕೊಂಡು ಬಂದಿದೆ.2012-13ನೇ ಸಾಲಿನಲ್ಲಿ 1 ವರ್ಷಕ್ಕೆ 4 ಅಂಕಗಳನ್ನು ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 3 ಅಂಕಗಳನ್ನಷ್ಟೇ ನೀಡಲಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಮಾಸಿಕ ರೂ 2-5 ಸಾವಿರ ಗೌರವಧನಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಡೆಗಣಿಸಿದಂತಾಗಿದೆ. ಹಾಗಾಗಿ, 1 ವರ್ಷಕ್ಕೆ 5 ಅಂಕದಂತೆ ಗರಿಷ್ಠ 5 ವರ್ಷಕ್ಕೆ 25 ಅಂಕ ನೀಡುವುದರ ಮೂಲಕ ಸೇವೆಗೆ ಮಾನ್ಯತೆ ಹೆಚ್ಚು ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಅತಿಥಿ ಉಪನ್ಯಾಸಕರು ಆಯ್ಕೆಗೊಂಡ ನಂತರ ಪೂರ್ಣಕಾಲಿಕ ಉಪನ್ಯಾಸಕರ ವರ್ಗಾವಣೆ ಮಾಡುವುದರಿಂದ ಸಾಕಷ್ಟು ಅರ್ಹ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಮೊದಲು ವರ್ಗಾವಣೆ ಪೂರ್ಣಗೊಳಿಸಿ ನಂತರ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ನಡೆಸಲು ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.ಯುಜಿಸಿ ನಿಯಮಾವಳಿಗಳಲ್ಲೇ ಅತಿಥಿ ಉಪನ್ಯಾಸಕರಿಗೆ ಮಾಸಿಕ ರೂ 25 ಸಾವಿರ ಕಡಿಮೆ ಇಲ್ಲದಂತೆ ಗೌರವಧನ ಕೊಡಿ ಎಂದು ತಿಳಿಸಲಾಗಿದೆ. ಹಾಗಾಗಿ, 8 ಗಂಟೆಗಳ ಕಾರ್ಯಭಾರ ನಿರ್ವಹಿಸುತ್ತಿರುವ ನಮಗೆ ಮಾಸಿಕ ರೂ.15 ಸಾವಿರಕ್ಕೆ ಗೌರವಧನ ಹೆಚ್ಚಳ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷ ಕೆ. ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಆರ್. ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸಿ.ವಿ. ಶ್ರೀನಿವಾಸ್, ಖಜಾಂಚಿ ವೈ.ಸಿ. ಪ್ರಭುಶಂಕರ್, ಸಂಘಟನಾ ಸಂಯೋಜಕ ಹನುಮಂತೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.