ಸೋಮವಾರ, ಏಪ್ರಿಲ್ 12, 2021
26 °C

ಅದಿರು ರಫ್ತಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದಿರು ರಫ್ತು ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತಡೆ ರಾಜ್ಯ ಸರ್ಕಾರಕ್ಕೆ ಆಗಿರುವ ಮುಖಭಂಗ. ಅಕ್ರಮ ಗಣಿಗಾರಿಕೆಯನ್ನು ತಡೆಯುವ ಕಾರಣ ನೀಡಿ ಅದಿರು ರಫ್ತನ್ನು ನಿಷೇಧಿಸಿದ ಎಂಟು ತಿಂಗಳಲ್ಲಿಯೇ ಅದನ್ನು ಹಿಂದಕ್ಕೆ ಪಡೆಯಬೇಕಾಗಿ ಬಂದಿರುವುದಕ್ಕೆ ಸರ್ಕಾರದ ಬೇಜವಾಬ್ದಾರಿ ವರ್ತನೆಯೇ ಕಾರಣ. ಅದಿರು ರಫ್ತನ್ನು ನಿಷೇಧಿಸುವ ಮೂಲಕ ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಕ್ರಮ ಕೈಗೊಂಡ ಮೊಟ್ಟ ಮೊದಲ ರಾಜ್ಯವೆಂದು ಪಡೆದ ಪ್ರಚಾರಕ್ಕೆ ಅನುಗುಣವಾಗಿ ಆಡಳಿತಾತ್ಮಕ ಕ್ರಮಗಳನ್ನು ಜಾರಿಗೊಳಿಸಲಿಲ್ಲ. ಅಕ್ರಮ ಗಣಿಗಾರಿಕೆ, ಅದಿರಿನ ಅಕ್ರಮ ಸಾಗಣೆ ಮತ್ತು ಅಕ್ರಮ ದಾಸ್ತಾನು ತಡೆಯುವುದಕ್ಕೆ ನೀತಿಯನ್ನು ಪ್ರಕಟಿಸಿದ ಸರ್ಕಾರ ಅದರ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ.

 

‘ಅದಿರು ರಫ್ತು ನಿಷೇಧ ಅಕ್ರಮ ಗಣಿಗಾರಿಕೆಯನ್ನು ತಡೆಯುವ ತಾತ್ಕಾಲಿಕ ಕ್ರಮ, ಆರು ತಿಂಗಳ ಕಾಲವಷ್ಟೆ ಈ ನಿಷೇಧ ಜಾರಿಯಲ್ಲಿರುತ್ತದೆ’ ಎಂದು ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಭರವಸೆಯನ್ನೂ ಉಳಿಸಿಕೊಳ್ಳಲಿಲ್ಲ. ಅಕ್ರಮ ಗಣಿಗಾರಿಕೆಯನ್ನು ಕೂಡ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲಿಲ್ಲ. ಈ ಸಂಬಂಧದಲ್ಲಿ  ಹೊಸ ಖನಿಜ ನೀತಿಯನ್ನು ಜಾರಿಗೆ ತರುವುದಕ್ಕೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ನೂ ನಿರ್ಲಕ್ಷಿಸಿದ ಸರ್ಕಾರ ಇದೀಗ ತನ್ನ ರಫ್ತು ನಿಷೇಧ ಆದೇಶವನ್ನೇ ಹಿಂತೆಗೆದುಕೊಳ್ಳಬೇಕಾದ ಮುಜುಗರಕ್ಕೆ ಒಳಗಾಗಿದೆ. ಸರ್ಕಾರದ ನಿಷೇಧ ಕ್ರಮದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕರ್ನಾಟಕದ ರಫ್ತು ಉದ್ಯಮಿಗಳು ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಪಡೆದಂತಾಗಿದೆ.ಅದಿರು ರಫ್ತು ನಿಷೇಧ ಆದೇಶ ಹೊರಡಿಸಿದ ಸರ್ಕಾರ ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕಡೆಗಣಿಸಿತು. ಅದಿರಿನ ಅಕ್ರಮ ಸಾಗಣೆಯನ್ನು ತಡೆಯಲು ಅವಶ್ಯಕತೆ ಇರುವ ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಮುಂದಾಗಲಿಲ್ಲ. ಗಣಿ ಲಾರಿಗಳ ಮೇಲೆ ನಿಗಾ ಇಡಲು ಆಧುನಿಕ ಉಪಕರಣಗಳನ್ನು ಅಳವಡಿಸುವ ಪ್ರಕ್ರಿಯೆಗೂ ಚಾಲನೆ ನೀಡಲಿಲ್ಲ. ರಾಜ್ಯದಲ್ಲಿನ ಅದಿರು ಇಲ್ಲಿಯೇ ಸಂಸ್ಕರಣವಾಗುವಂತೆ ಕಾರ್ಖಾನೆಗಳನ್ನು ಸ್ಥಾಪಿಸಲು ಜಾಗತಿಕ ಬಂಡವಾಳ ಹೂಡಿಕೆಯ ಸಮಾವೇಶ ನಡೆಸಿ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತಾದರೂ ಅದರಿಂದ ಪ್ರಚಾರ ಪಡೆಯುವುದರ ವಿನಾ ಹೆಚ್ಚಿನ ಪ್ರಗತಿ ಕಾಣಲಿಲ್ಲ. ಬೇಲೇಕೇರಿ ಬಂದರಿನಲ್ಲಿ ಅದಿರಿನ ಅಕ್ರಮ ದಾಸ್ತಾನು ಪತ್ತೆಯಾಗಿದ್ದರೂ ಅದು ನಿಗೂಢವಾಗಿ ನಾಪತ್ತೆಯಾಗುವುದನ್ನು ತಪ್ಪಿಸುವುದು ಸರ್ಕಾರದಿಂದ ಸಾಧ್ಯವಾಗಲಿಲ್ಲ.ಸರ್ಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಷ್ಟು ಪ್ರಬಲವಾಗಿದ್ದ ಗಣಿ ಲಾಬಿಯನ್ನು ಮಣಿಸುವ ರಾಜಕೀಯ ಉದ್ದೇಶದಿಂದ ಅದಿರು ರಫ್ತು ನಿಷೇಧದ ಆದೇಶ ಹೊರಡಿಸಲಾಗಿತ್ತೆಂಬುದರಲ್ಲಿ ಸಂಶಯವಿರಲಿಲ್ಲ. ಆದರೆ ಈ ಭಾವನೆಯನ್ನು ನಿವಾರಿಸುವ ಯಾವ ಪ್ರಯತ್ನವೂ ಸರ್ಕಾರದ ಕಡೆಯಿಂದ ಆಗಲಿಲ್ಲ. ರಫ್ತು ನಿಷೇಧಿಸಿದ ಮಾತ್ರಕ್ಕೆ ಗಣಿಗಾರಿಕೆಯಲ್ಲಿನ ಅಕ್ರಮ ತಡೆಯಬಹುದೆಂಬ ನಿರೀಕ್ಷೆಯೇ ಸರಿಯಲ್ಲ. ಅಕ್ರಮ ಗಣಿಗಾರಿಕೆ ಕುರಿತಾಗಿ ರಾಜ್ಯದ ಲೋಕಾಯುಕ್ತರು ಮಾಡುವ ಸಲಹೆಗಳನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಪೀಠದಿಂದ ಆದೇಶ ಪಡೆದಿರುವ ರಾಜ್ಯ ಸರ್ಕಾರ ಆ ಮೂಲಕವಾದರೂ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಬದ್ಧತೆಯನ್ನು ಪ್ರದರ್ಶಿಸಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.