ಸೋಮವಾರ, ಮಾರ್ಚ್ 1, 2021
31 °C
ಕ್ರೇಜಿ ಬಾಯ್

ಅದೇ ರಾಗ, ಅದೇ ಹಾಡು

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಅದೇ ರಾಗ, ಅದೇ ಹಾಡು

ಕ್ರೇಜಿ ಬಾಯ್

ನಿರ್ಮಾಪಕ: ಜಿ. ಚಂದ್ರು

ನಿರ್ದೇಶನ: ಮಹೇಶ್ ಬಾಬು

ತಾರಾಗಣ: ದಿಲೀಪ್, ಆಶಿಕಾ, ರಂಗಾಯಣ ರಘು, ರವಿಶಂಕರ್, ಸಾಧುಕೋಕಿಲ

ಜೋರು ಮಳೆ. ನಾಯಕ ಅರ್ಜುನ್ (ದಿಲೀಪ್) ಕೈಲಿದ್ದ ಛತ್ರಿ ಹಾರಿಹೋಗಿ ಆತ ತೊಯ್ದು ತೊಪ್ಪೆಯಾಗುತ್ತಾನೆ. ಆದರೆ ಛತ್ರಿಯೇ ಇಲ್ಲದೆ ಎದುರಿನಿಂದ ಬರುವ ನಾಯಕಿ ನಂದಿನಿಯ ಬಟ್ಟೆಯೂ ಒದ್ದೆಯಾಗುವುದಿಲ್ಲ. ಮೇಕಪ್ ಕೆಡುವುದಿಲ್ಲ.ನಂದಿನಿ ಕಾಲೇಜಿನಲ್ಲಿ ಕತ್ತಿನ ಸರ ಕಳೆದುಕೊಳ್ಳುತ್ತಾಳೆ. ‘ಹೋದ್ರೆ ಹೋಗ್ಲಿ’ ಎನ್ನುವ ಗೆಳತಿಗೆ, ಅದು ನನ್ನ ಅಮ್ಮ ಕೊಟ್ಟ ಕೊನೆಯ ಉಡುಗೊರೆ. ಸರ ಕೊಳ್ಳಬಹುದು, ತೀರಿಹೋದ ಅಮ್ಮ ಮತ್ತೆ ಬರುತ್ತಾರಾ ಎಂದು ಕಣ್ಣೀರಾಗುತ್ತಾಳೆ. ಆ ಸರ ಸಿಕ್ಕುವುದು ನಾಯಕನ ಕೈಗೇ.ಆವರೆಗೆ ಯಾರೂ ಆಗಿರದ ಅರ್ಜುನ್ ಅರ್ಧ ಕುಡಿದು ಇಟ್ಟಿದ್ದ ಕಾಫಿಯನ್ನು ಗೊತ್ತಿಲ್ಲದೇ ನಂದಿನಿ ಕುಡಿಯುತ್ತಾಳೆ. ಪ್ರಮಾದಕ್ಕೆ ನಂದಿನಿ ಕ್ಷಮೆ ಕೇಳಿದರೆ, ಪಕ್ಕದ ಟೇಬಲ್ಲಿನಲ್ಲಿದ್ದ ಒಬ್ಬ ‘ನೀವಿಬ್ಬರೂ ಪ್ರೇಮಿಗಳು. ಇದೆಲ್ಲ ಮಾಮೂಲಿ’ ಎಂದು ಇಲ್ಲದ ಆಸೆ ಹುಟ್ಟಿಸುತ್ತಾನೆ.ತಂಗಿಯ ಮದುವೆಯನ್ನು ಶ್ರೀಮಂತ ಹುಡುಗನ ಜೊತೆ ಮಾಡಿಸಬೇಕು ಎಂದುಕೊಂಡ ನಂದಿನಿ ಅಣ್ಣ ರವಿ (ರವಿಶಂಕರ್). ಆಕೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ಗೊತ್ತಿದ್ದೂ ಅವರನ್ನು ನಯವಾಗಿ ಬೇರೆ ಮಾಡುವ ಹುನ್ನಾರ ಅವನದು. ಇವೆಲ್ಲ ಹಳೇ ಸಿನಿಮಾಗಳಲ್ಲಿ ಸಾಕಷ್ಟು ಬಾರಿ ನೋಡಿಬಿಟ್ಟ ದೃಶ್ಯಗಳು. ‘ಕ್ರೇಜಿ ಬಾಯ್’ನಲ್ಲೂ ಇರುವುದು ಇಂಥ ಹಳೆಯ ದೃಶ್ಯಗಳೇ.ಇದರ ಮಧ್ಯೆಯೂ ಸ್ವಲ್ಪ ಮಜಾ ಕೊಡುವ ಸನ್ನಿವೇಶಗಳಿವೆ. ಯಾವುದೇ ತಕರಾರಿಲ್ಲದೆ ನಂದಿನಿ–ಅರ್ಜುನ್ ಪ್ರೀತಿಗೆ ರವಿ ಹಸಿರು ನಿಶಾನೆ ತೋರುತ್ತಾನೆ. ಆದರೆ ಅದು ಬರೀ ನಾಟಕ, ಅವನ ನಿರೀಕ್ಷೆಗಳು ಬೇರೆಯೇ ಇವೆ ಎಂದು ತಿಳಿದಾಗ ಅರ್ಜುನ್ ರವಿಯನ್ನು ಎದುರು ಹಾಕಿಕೊಳ್ಳುತ್ತಾನೆ. ಇದು ಕೇಳಿ ಪಡೆದ ‘ತಿರುವು’.ಉಪಾಯವಾಗಿ ನಂದಿನಿ–ಅರ್ಜುನ್ ದೂರವಾಗುವಂತೆ ಮಾಡುವ ಅಣ್ಣ, ಉದ್ಯಮಿಯೊಬ್ಬನ ಜೊತೆ ನಂದಿನಿಯ ಮದುವೆಗೆ ಸಿದ್ಧತೆ ನಡೆಸುತ್ತಾನೆ. ನಂದಿನಿ ಆ ಉದ್ಯಮಿಯ ಜೊತೆ ಮದುವೆ ಆಗುತ್ತಾಳೆಯೇ ಅಥವಾ ‘ದುಃಖಾಂತ್ಯದ ಪ್ರೇಮ ಕಥೆಗಳನ್ನು ನಾನು ಇಷ್ಟಪಡುವುದಿಲ್ಲ’ ಎನ್ನುವ ಅರ್ಜುನ್ ತನ್ನ ಪ್ರೀತಿಯನ್ನು ಸುಖಾಂತ್ಯ ಮಾಡಿಕೊಳ್ಳುತ್ತಾನೆಯೇ ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್‌ವರೆಗೂ ಕಾಯಲೇಬೇಕು.ದಿಲೀಪ್ ಅಭಿನಯಕ್ಕಿಂತ ನೃತ್ಯದಲ್ಲಿ ‘ಓಕೆ’ ಎನ್ನಿಸಿಕೊಂಡರೆ ಆಶಿಕಾ ಅಭಿನಯದಲ್ಲಿ ಅವರದು ಇದು ಮೊದಲ ಸಿನಿಮಾ ಎಂಬುದು ಸ್ಪಷ್ಟವಾಗಿಯೇ ತಿಳಿಯುತ್ತದೆ. ಬಳಸಿ ಹಳತಾದ ಸಂಭಾಷಣೆಗಳನ್ನು ನಾಯಕ ಭಾವರಹಿತವಾಗಿ ಪುಂಖಾನುಪುಂಖವಾಗಿ ಹರಿಬಿಡುತ್ತಾನೆ. ನಾಯಕನ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಹಾಸ್ಯದಲ್ಲೂ ಸಮರ್ಥವಾಗಿ ವಿಷಾದಭಾವವನ್ನು ದಾಟಿಸುತ್ತಾರೆ. ಊಹಿಸಿಕೊಂಡಾಗಲೆಲ್ಲ ನಿರ್ದೇಶಕರು ತಮ್ಮ ಬತ್ತಳಿಕೆಯಿಂದ ಹಾಡುಗಳನ್ನು ಎತ್ತಿ ಎದುರಿಡುತ್ತಾರೆ.ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಮೂರು ಹಾಡುಗಳು ನೆನಪಿರುವಂತಿವೆ. ಛಾಯಾಗ್ರಹಣಕ್ಕೆ (ಶೇಖರ್ ಚಂದ್ರ) ಹೆಚ್ಚೇನೂ ಅವಕಾಶವಿಲ್ಲ. ಮೊದಲರ್ಧದಲ್ಲಿ ತುಂಬಿಕೊಂಡ ಕಾಲೇಜು ದೃಶ್ಯಗಳು, ಚಿತ್ರದ ಗತಿಗೆ ಯಾವ ಕೊಡುಗೆಯನ್ನೂ ಕೊಡುವುದಿಲ್ಲ. ಅಜಯ್ ಕುಮಾರ್ ಅವರ ಕಥೆ–ಚಿತ್ರಕಥೆಯಲ್ಲಿ ಮುದಗೊಳಿಸುವ ಮಾತು–ದೃಶ್ಯಗಳ ಕೊರತೆ ಎದ್ದು ಕಾಣುತ್ತದೆ. ಕೊನೆಗೂ ಈ ಕಥೆ ಇಂದಿಗೆ ಸೂಕ್ತವೇ ಎಂಬ ಪ್ರಶ್ನೆ ಉಳಿಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.