ಮಂಗಳವಾರ, ಜನವರಿ 21, 2020
28 °C

ಅದ್ದೂರಿಯಾಗಿ ಜರುಗಿದ ರಂಗಪ್ಪನ ಜಾತ್ರೆ: ಭಕ್ತ ಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಾಥ ಸ್ವಾಮಿಯ ಚಿಕ್ಕರಥೋತ್ಸವವು ಸಹಸ್ರಾರು ಭಕ್ತರ ಉದ್ಘೋಷಗಳ ನಡುವೆ ಸೋಮವಾರ ಸಂಭ್ರಮ ಸಡಗರಗಳಿಂದ ಜರುಗಿತು.ಮೀನಾ ಲಗ್ನದ ಶುಭ ಸಮಯದಲ್ಲಿ ಬಿಳಿಗಿರಿರಂಗನ ಉತ್ಸವಮೂರ್ತಿಯನ್ನು ಮಧ್ಯಾಹ್ನ 12.40 ಗಂಟೆಗೆ ರಥಾರೋಹಣ ಮಾಡಲಾಯಿತು. ಸೂರ್ಯ ನೆತ್ತಿಗೇರಿದ ಸಂದರ್ಭ ಗರುಡ ಪಕ್ಷಿಯ ಆಗಮನವಾಗುತ್ತಿದ್ದಂತೆ ಯಾತ್ರಾರ್ಥಿಗಳು ಹಾಗೂ ಆಗಮಿಕರ ವೇದ ಘೋಷ ಮುಗಿಲು ಮುಟ್ಟಿತು. ಶಂಖ, ಜಾಗಟೆ, ವಾದ್ಯಘೋಷಗಳ ಹಿಮ್ಮೆಳದಲ್ಲಿ ತೇರು ಚಲಿಸಿತು. ಸಾವಿರಾರು ಭಕ್ತರು ಶ್ರದ್ಧಾ ಭಕ್ತಿಗಳಿಂದ ರಂಗಪ್ಪನಿಗೆ ಜೈಕಾರ ಹಾಕಿ ಚಿಕ್ಕತೇರು ಎಳೆದು ಭಕ್ತಿಭಾವದಲ್ಲಿ ಮಿಂದರು.ತೇರಿಗೆ ಅಲಂಕರಿಸಿದ್ದ ಧ್ವಜಗಳು, ಬಾಳೆ, ಕಬ್ಬು ಫಲಪುಷ್ಪಗಳಿಂದ ಶೃಂಗರಿಸಿದ್ದ ರಥಕ್ಕೆ ಭಕ್ತರು ಹಣ್ಣುಜವನ ಹಾಗೂ ತಾವು ಬೆಳೆದ ಭತ್ತ, ರಾಗಿ, ಜೋಳಗಳನ್ನು ಎರಚಿ ಸಂಭ್ರಮಿಸಿದರು.ದೇವಳದ ಮುಂಭಾಗದಲ್ಲಿ ರಥದ ಗಾಲಿಗೆ ತೆಂಗಿನ ಕಾಯಿಗಳನ್ನು ಒಡೆದು ಭಕ್ತಿ ಮೆರೆದರು. ದೇವಸ್ಥಾನವನ್ನು ಸುತ್ತು ಹಾಕಿದ ತೇರು 20 ನಿಮಿಷಗಳಲ್ಲಿ ಸ್ವಸ್ಥಾನ ಸೇರಿತು.ರಥೋತ್ಸವ ಸಂದರ್ಭದಲ್ಲಿ ಸೋಲಿಗರು, ಬಿಳಿಗಿರಿರಂಗನನ್ನು `ಭಾವಾಜಿ~ ಎಂದು ಕೂಗುತ್ತಾ ಮೆಕ್ಕೆ, ಕವಡೆ, ಗುಡಿಮೆ ಕಾಯಿಗಳನ್ನು ತೇರಿಗೆಸೆದು ಹರಕೆ ತೀರಿಸಿದರು.ಸಂಸದ ಆರ್. ಧ್ರುವನಾರಾಯಣ್, ಶಾಸಕ ಜಿ.ಎನ್. ನಂಜುಂಡಸ್ವಾಮಿ, ಜಿ.ಪಂ. ಸದಸ್ಯರಾದ ಕೇತಮ್ಮ, ಕೊಪ್ಪಾಳಿ ಮಹದೇವನಾಯಕ, ತಾ.ಪಂ. ಸದಸ್ಯರಾದ ಮಹೇಶ್‌ಕುಮಾರ್, ಕೆ.ಪಿ. ಶಿವಣ್ಣ, ರಾಮಚಂದ್ರು, ಗ್ರಾ.ಪಂ. ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಮಾದೇಶನಾಯಕ, ಸದಸ್ಯ ತಂಟ್ರಿನಂಜೇಗೌಡ, ಡಿವೈಎಸ್‌ಪಿ ಮಹಾದೇವಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್, ಸಬ್‌ಇನ್ಸ್‌ಪೆಕ್ಟರ್ ಚಿಕ್ಕರಾಜುಶೆಟ್ಟಿ, ಮಹದೇವನಾಯಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೂಂಡಿದ್ದರು.ಹರಿದು ಬಂದ ಭಕ್ತ ಸಾಗರ, ಮುಗಿಲು ಮುಟ್ಟಿದ ಸಡಗರ


ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ  ಸೋಮವಾರ ಜರುಗಿದ ಚಿಕ್ಕರಥೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಿಲೋಮೀಟರ್‌ಗೂ ಹೆಚ್ಚು ಸರದಿ ಸಾಲಿನಲ್ಲಿ ನಿಂತು ಬೆಟ್ಟದ ದೇವರನ್ನು ಕಣ್ತುಂಬಿಕೊಂಡ ಭಕ್ತ ಸಾಗರ ರಂಗಪ್ಪನ ಭಕ್ತರೂ ತೇರನ್ನು ಎಳೆದು ಧನ್ಯರಾದರು.ದೇವಾಲಯದ ಸುತ್ತ ಬೇಟೆಮನೆ ಸೇವೆ ಹಾಗು ಕಡ್ಲೆಪುರಿ ಸೇವೆಗಳು ಬಿಳಿಗಿರಿ ರಂಗನ ವಕ್ಕಲಿನ ದಾಸರಿಂದ ನಡೆದವು. ನವವಿವಾಹಿತರು ಹಣ್ಣ-ಜವನವನ್ನು ತೇರಿಗೆಸೆದು ಪುನೀತರಾದರು.`ರಂಗಪ್ಪನ ತುಳಸಿ ಮಾಲೆ~ಯನ್ನು ಧರಿಸಿದ ಭಕ್ತರು ತೇರಿನ ಮುಂದೆ ಸ್ವಾಮಿ ನಾಮವನ್ನು ಹಾಡಿಕೊಂಡು ಭಜನೆ ಮಾಡಿದರು.ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಗವಿಬೋರೆ ಹಾಗೂ ಚೈನ್‌ಗೇಟ್ ಬಳಿ ವಿಶೇಷ ಪೊಲೀಸ್ ನಿಯೋಜಿಸಲಾಗಿತ್ತು. ಕುಡಿಯುವ ನೀರಿಗೂ ಕೊರತೆ ಇರಲಿಲ್ಲ.ಭಕ್ತರು ಅಲ್ಲಲ್ಲಿ ನಿರ್ಮಿಸಿದ್ದ ಅರವಟ್ಟಿಗೆಗಳಿಂದ ಪಾನಕ ಹಾಗೂ ನೀರು ಮಜ್ಜಿಗೆ, ಪ್ರಸಾದಗಳನ್ನು ಸ್ವೀಕರಿಸಿ ದಣಿವು ನಿವಾರಿಸಿಕೊಂಡರು.ಕಡ್ಲೆಪುರಿ, ಮಿಠಾಯಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ವಿವಾಹಿತರೂ ಹೂ, ಹಣ್ಣು ಕೊಂಡು ಸಂಭ್ರಮಿಸಿದರು. ತೇರಿನ ನಂತರ ಮಂಟಪೋತ್ಸವ ನಡೆಯಿತು. ಮಂಗಳವಾರ, ಬುಧವಾರ ಸಂಧಾನಸೇವೆಗಳ ಪ್ರಯುಕ್ತ ವಿಶೇಷ ಧಾರ್ಮಿಕ ಆಚರಣೆಗಳು ದೇಗುಲದಲ್ಲಿ ನಡೆಯುತ್ತವೆ.ಮುಚ್ಚಿದ ಶೌಚಾಲಯ: ಬಸ್‌ನಿಲ್ದಾಣದ ಬಳಿಯ ಶೌಚಾಲಯವನ್ನು ಮುಚ್ಚಿದ್ದರಿಂದ ಯಾತ್ರಾರ್ಥಿಗಳು ತೊಂದರೆ ಅನುಭವಿಸಿದರು. ನೀರು ಸಮರ್ಪಕವಾಗಿ ಬಾರದ ಕಾರಣ ಮಹಿಳೆಯರೂ ಇದರಿಂದ ಬಾಧಿತರಾದರು.

ಪ್ರತಿಕ್ರಿಯಿಸಿ (+)