ಭಾನುವಾರ, ಮೇ 22, 2022
21 °C

ಅಧಿಕಾರಿಗಳ ಗೈರುಹಾಜರಿ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ದಲಿತರ ಕುಂದು ಕೊರತೆ ಪರಿಶೀಲನಾ ಸಭೆಗೆ ತಾಲ್ಲೂಕು ಮಟ್ಟದ ಕೆಲವು ಅಧಿಕಾರಿಗಳು ಗೈರುಹಾಜರಾದುದನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 11 ಗಂಟೆಗೆ ದಲಿತ ಮುಖಂಡರು ಹಾಗೂ ತಹಶೀಲ್ದಾರ್ ಬಿ.ವಾಣಿ ಸಭೆಗೆ ಹಾಜರಾದರು. ಆದರೆ, ನಿಗದಿಪಡಿಸಿದ ಸಮಯ ಮೀರಿದರೂ ಕೆಲವು ಅಧಿಕಾರಿಗಳು ಸಭೆಗೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ಗೈರು ಹಾಜರಾತಿ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಹೇಳಿದ ವಾಣಿ ಸಭೆಯನ್ನು ಮುಂದೂಡಿದರು.ಬಳಿಕ ಪುನಃ ಸಭೆ ಆರಂಭಿಸಿದರು. ಆಗಲೂ ಕೆಲವು ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮತ್ತೊಂದು ದಿನ ನಡೆಸುವುದಾಗಿ ಹೇಳಿದರು. ಈ ವೇಳೆಗಾಗಲೇ ಅಸಮಾಧಾನಗೊಂಡಿದ್ದ ದಲಿತ ಮುಖಂಡರು ತಾಲ್ಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕೇಳುವವರಿಲ್ಲ. ಸಭೆಗೆ ಅಧಿಕಾರಿಗಳು ಬರುವುದಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳ ಗೈರು ಹಾಜರಿಯನ್ನು ಖಂಡಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ತಾಲ್ಲೂಕಿನ ಬಸವನಹಳ್ಳಿಯಲ್ಲಿ ದಲಿತ ಮಹಿಳೆ ಮೇಲೆ ಅರಣ್ಯ ಇಲಾಖೆ ಅಧಿಕಾರಿ ದೌರ್ಜನ್ಯ ಎಸಗಿದ್ದಾರೆ. ಈಚೆಗೆ ಕಿರುಗಾವಲಿನಲ್ಲಿ ದಲಿತ ವ್ಯಕ್ತಿಗೆ ಕ್ಷೌರ ಮಾಡದೆ ಮೂಗನ್ನೇ ಕತ್ತರಿಸಲಾಗಿದೆ. ಹೀಗೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.