ಮಂಗಳವಾರ, ಮೇ 11, 2021
24 °C

ಅಧ್ಯಕ್ಷರ ಅಧಿಕಾರ ಪ್ರಶ್ನಿಸಿ ತಕರಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರಸಭೆಯು ಬಜೆಟ್ ಅನುಮೋದನೆಗಾಗಿ ಇದೇ 10ರಂದು ವಿಶೇಷ ಸಭೆಯನ್ನು ಕರೆದಿದೆ. ಆದರೆ, ಸಭೆಯ ದಿನಾಂಕ ಹೊರಬಿದ್ದ ಹಿಂದೆಯೇ ಸಭೆ ಕರೆಯುವ ಅಧ್ಯಕ್ಷರ ಅಧಿಕಾರವನ್ನೇ ಪ್ರಶ್ನಿಸಿ ತಕರಾರು ವ್ಯಕ್ತವಾಗಿದೆ.ಇನ್ನೊಂದೆಡೆ, ಒಟ್ಟು 35 ಸದಸ್ಯ ಬಲದ ಮಂಡ್ಯ ನಗರಸಭೆಯಲ್ಲಿ 18 ಮಂದಿ ಸದನದಿಂದ ಹೊರಗಿದ್ದು, ನಿರೀಕ್ಷೆಯಂತೆ ಬಜೆಟ್ ಸಭೆ ನಡೆದರೆ ಕೇವಲ 17 ಮಂದಿ ಚುನಾಯಿತ ಸದಸ್ಯರು ಮಾತ್ರವೇ 2012-13ನೇ ಸಾಲಿನ ಬಜೆಟ್ ಸಾಧಕ-ಬಾಧಕಗಳನ್ನು ಚರ್ಚಿಸಬೇಕಾಗಿದೆ.ಈ ಸದಸ್ಯರೊಂದಿಗೆ ಸರ್ಕಾರ ಈಚೆಗೆ ಹೊಸದಾಗಿ ನಾಮಕರಣ ಮಾಡಿರುವ ಐವರು ಸದಸ್ಯರು ಸೇರಲಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆಯ ಪರಿಣಾಮ ಜೆಡಿಎಸ್‌ನ 13 ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರೆ, ಕಳೆದ ಸಭೆಯಲ್ಲಿ ಅನುಚಿತ ವರ್ತನೆಗಾಗಿ ಐವರು ಸದಸ್ಯರು ಆರು ತಿಂಗಳ ಅವಧಿಗೆ ಅಮಾನತುಗೊಂಡಿದ್ದಾರೆ.ಜೆಡಿಎಸ್‌ನ ಒಳಜಗಳದ ಪರಿಣಾಮ ನಗರಸಭೆಯಲ್ಲಿ ಆಡಳಿತ ವೈಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಅದರ ನಡುವೆಯೇ ನಗರಸಭೆಯ ವಾರ್ಷಿಕ ಬಜೆಟ್‌ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷವೂ ಆರ್ಥಿಕ ವರ್ಷ ಶುರುವಾದ ನಂತರವೇ ಏಪ್ರಿಲ್‌ನಲ್ಲಿ ಬಜೆಟ್ ಅನುಮೋದನೆಯಾಗಿತ್ತು.ಸಭೆಗೆ ತಕರಾರು: ಈ ನಡುವೆ, ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಬೇಕು ಎಂಬ ಒತ್ತಾಯ ಕುರಿತ ಮನವಿ ಸಲ್ಲಿಸಿರುವ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಇದೇ 7ರಂದು ವಿಶೇಷ ಸಭೆ ಮತ್ತು 10ರಂದು ಬಜೆಟ್ ಅನುಮೋದನೆಗೆ ಸಭೆ ಕರೆದಿರುವುದು ಅಸಿಂಧುವಾಗಿದೆ ಎಂದು ಮಾಜಿ ಸದಸ್ಯ ನಾಗೇಶ್ ಆರೋಪಿಸಿದ್ದಾರೆ.ಈಗಾಗಲೇ ಜೆಡಿಎಸ್‌ನ ಕೆಲ ಸದಸ್ಯರೇ ಅವಿಶ್ವಾಸ ನಿಲುವಳಿಗೆ ಮಂಡನೆಗಾಗಿ ಸಭೆ ಕರೆಯಲು ಒತ್ತಾಯಿಸಿದ್ದಾರೆ. ಆ ಮನವಿಗೆ ಸ್ಪಂದಿಸದೇ ಈಗ ಬಜೆಟ್‌ಗಾಗಿ ಸಭೆ ಕರೆದಿರುವುದು ಸರಿಯಲ್ಲ. ಅವಿಶ್ವಾಸ ನಿಲುವಳಿ ಚರ್ಚೆಗಾಗಿ ಸಭೆ ಕರೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಎಂ.ಜೆ.ಚಿಕ್ಕಣ್ಣ ಅವರು, `ಈಗ 7 ಮತ್ತು 10ರಂದು ಕರೆದಿರುವ ನಗರಸಭೆಯ ವಿಶೇಷ ಸಭೆಗಳು ಅಸಿಂಧು ಆಗಲಿವೆ. ಅಧ್ಯಕ್ಷರಿಗೆ ಈಗಿನ ಸ್ಥಿತಿಯಲ್ಲಿ ಸಭೆ ಕರೆಯುವ ಅಧಿಕಾರವೇ ಇಲ್ಲ~ ಎಂದು ಪ್ರತಿಪಾದಿಸಿದ್ದಾರೆ.ಈಗಾಗಲೇ 10 ಮಂದಿ ಸದಸ್ಯರು ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಲು ಕೋರಿ ಮನವಿ ಸಲ್ಲಿಸಿದ್ದೇವೆ. ಅದು ಇನ್ನೂ ಇತ್ಯರ್ಥವಾಗಬೇಕು.  ಹೀಗಾಗಿ, ಪುರಸಭೆ ಕಾಯ್ದೆ 51/3ರ ಅನ್ವಯ ಇವರು ಸಭೆ ಕರೆಯಲು ಬರುವುದಿಲ್ಲ ಎಂದು ವಾದಿಸಿದರು.ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಅವರು, `ಅವಿಶ್ವಾಸ ನಿಲುವಳಿ ಕುರಿತು ನನಗೆ ನೇರವಾಗಿ ಯಾವುದೇ ಅರ್ಜಿ ಬಂದಿಲ್ಲ. ಈಗ ಬಜೆಟ್ ಸಭೆಯನ್ನು ಆಯುಕ್ತರ ಜೊತೆಗೆ ಚರ್ಚಿಸಿ, ನಿಯಮಗಳ ಅನುಸಾರವೇ ಕರೆಯಲಾಗಿದೆ. ಇಲ್ಲಿ  ನಿಯಮಗಳ ಉಲ್ಲಂಘನೆಯಾಗಿಲ್ಲ~ ಎಂದು ಸಮರ್ಥಿಸಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.