ಸೋಮವಾರ, ಜೂನ್ 14, 2021
21 °C

ಅಧ್ಯಕ್ಷ ಭಕ್ತವತ್ಸಲಂ, ಉಪಾಧ್ಯಕ್ಷ ಆರೋಕ್ಯದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆಯ ನೂತನ ಅಧ್ಯಕ್ಷ­ರಾಗಿ ಎಂ.ಭಕ್ತವತ್ಸಲಂ ಮತ್ತು ಉಪಾಧ್ಯಕ್ಷರಾಗಿ ಆರೋಕ್ಯ­ದಾಸ್‌ (ದಾಸ್‌ಚಿನ್ನಸವರಿ) ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ತೀವ್ರ ಕುತೂಹಲ, ಆತಂಕ, ನ್ಯಾಯಾಲಯದ ಆದೇಶ ಮುಂತಾದ ಕಾರಣಗಳಿಗೆ ಚುನಾವಣೆ ನಡೆಯುವುದೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಶುರುವಾಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್‌ನ ಎಂ.ಭಕ್ತವತ್ಸಲಂ ಮತ್ತು ಪಕ್ಷೇತರ ಸದಸ್ಯ ಕೆ.ಸಿ.ಮುರಳಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆಜೆಪಿಯ ಆರೋಕ್ಯ­ದಾಸ್‌ ಮತ್ತು ಬಿಜೆಪಿ ವಿಜಯಕುಮಾರ್‌ ನಾಮ­ಪತ್ರ ಸಲ್ಲಿಸಿದರು.ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ನಾಮಪತ್ರ ಪರಿ­ಶೀಲನೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೆ.ಸಿ.ಮುರಳಿ ಅವರ ಮೇಲೆ ಬೆಮಲ್‌ನಗರದಲ್ಲಿ ಹಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿತು.

ಈ ವೇಳೆಗಾಗಲೇ ನೂತನ ಅಧ್ಯಕ್ಷ ಎಂ.ಭಕ್ತವತ್ಸಲಂ ಮತ್ತು ಅವರ 17 ಬೆಂಬಲಿಗರು ಚುನಾವಣೆ ಹಾಲ್‌ನಲ್ಲಿ ಆಸೀನರಾಗಿದ್ದರು. ಬಿಜೆಪಿ ಸದಸ್ಯ ನಟರಾಜ್‌ ಮತ್ತು ರವಿ ಚುನಾವಣಾಧಿಕಾರಿ ಮಂಜುನಾಥ್‌ ಅವರನ್ನು ಭೇಟಿ ಮಾಡಿ, ಸದಸ್ಯ ಕೆ.ಸಿ.ಮುರಳಿ ಅವರ ಮೇಲೆ ಹಲ್ಲೆ ನಡೆಸ­ಲಾಗಿದೆ. ಆದ್ದರಿಂದ ಚುನಾವಣೆ ಮುಂದೂಡಬೇಕು ಎಂದು ಮನವಿ ಸಲ್ಲಿಸಿದರು.ಆದರೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗ ಇಂತಹ ಘಟನೆ ನಡೆದರೆ ಮುಂದೂಡಲು ಅವಕಾಶವಿಲ್ಲ ಎಂದು ನಿರ್ಣಯಿಸಿದ ಚುನಾವಣಾಧಿಕಾರಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ನಡೆಸಿದರು.

ನೆರೆದಿದ್ದ 18 ಸದಸ್ಯರ ಪೈಕಿ ಹದಿನೇಳು ಮಂದಿ ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು. ಆಂಡ­ರಸನ್‌ಪೇಟೆ ಬಜಾರ್‌ ವಾರ್ಡ್‌ ಸದಸ್ಯೆ ಮಹಮದ್‌ ಬೇಗಂ ಅವರಿಗೆ ಗೋಪ್ಯ ಮತದಾನ ಮಾಡಲು ಸಿವಿಲ್‌ ನ್ಯಾಯಾ­ಲಯದಿಂದ ಆದೇಶ ಬಂದಿದ್ದರಿಂದ ಅವರಿಗೆ ಪ್ರತ್ಯೇಕ ಮತದಾನ ಮಾಡಲು ಅವಕಾಶ ನೀಡಲಾಯಿತು. ಆದರೆ ಅವರ ಮತಪತ್ರವನ್ನು ನ್ಯಾಯಾಲಯದ ಮುಂದಿನ ಆದೇಶ ಬರುವ ತನಕ ತೆರೆಯದಿರಲು ತೀರ್ಮಾನಿಸ­ಲಾಯಿತು.ಜೆಡಿಎಸ್‌ನ ಎಂ.ಭಕ್ತವತ್ಸಲಂ  ವಿರುದ್ಧ ಬಿಜೆಪಿ ಶಾಸಕಿ ವೈ.ರಾಮಕ್ಕ ಮತ್ತು ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಜಂಟಿಯಾಗಿ ಅಭ್ಯರ್ಥಿಯನ್ನು ನಿಲ್ಲಿಸಿದ್ದರಿಂದ ಯಾವು­ದಾದರೂ ಕಾರಣ ನೀಡಿ ಚುನಾವಣೆ ಮುಂದೂಡಬಹುದು ಎಂಬ ಶಂಕೆ ಜೆಡಿಎಸ್‌ ಸದಸ್ಯರಲ್ಲಿ ಕಾಡುತ್ತಿತ್ತು. ಒಂದು ಗಂಟೆ ಸುಮಾರಿಗೆ ನಡೆಯಬೇಕಾಗಿದ್ದ ಚುನಾವಣೆ ಸಂಜೆ ನಾಲ್ಕು ಗಂಟೆ ತನಕ ಮುಂದುವರಿಸಿಕೊಂಡು ಬಂದಾಗ ಎಲ್ಲರ ಮುಖದಲ್ಲಿಯೂ ಆತಂಕ ಮೂಡಿತ್ತು. ನಂತರ ಮತ­ದಾನ ನಡೆದಾಗ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿತು.ಜೆಡಿಎಸ್ ಬೆಂಬಲಿಗರು ನಗರದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.ಪ್ರಕರಣ ದಾಖಲು:  ಕಾಂಗ್ರೆಸ್ ಬೆಂಬಲಿಗ ಮತ್ತು ಪಕ್ಷೇತರ ಸದಸ್ಯ ಕೆ.ಸಿ.ಮುರಳಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸುರೇಶ್‌, ಡೇವಿಡ್‌, ಎಳನೀರು ಕುಮಾರ್‌, ದಾಡಿ ರಮೇಶ್‌, ನಂದಕುಮಾರ್‌ ಮತ್ತು ಮುರುಗೇಶ್‌ ವಿರುದ್ಧ ಬೆಮಲ್‌ನಗರ ಪೊಲೀಸರು ಮಂಗಳವಾರ ಪ್ರಕರಣ ದಾಖಲು ಮಾಡಿದ್ದಾರೆ.ನಾಮಪತ್ರ ಸಲ್ಲಿಸಿ ಕಾರಿನಲ್ಲಿ ಹೋಗುತ್ತಿದ್ದಾಗ ಬೆಮಲ್‌ನಗರದ ಆಲದ ಮರದ ಬಳಿ ಆರೋಪಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆ.ಸಿ.ಮುರಳಿ ದೂರಿನಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.