ಭಾನುವಾರ, ಜನವರಿ 19, 2020
23 °C

ಅನಂತೇಶ್ವರ ಸನ್ನಿಧಿಯಲ್ಲಿ 17ರಂದು ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:  ಸೋದೆ ಮಠದ ಪರ್ಯಾಯ ಮಹೋತ್ಸವಕ್ಕೆ ಆಹ್ವಾನ ನೀಡದೇ ಇರುವ ವಿಚಾರದಲ್ಲಿ ಪುತ್ತಿಗೆ ಮಠ ಹಾಗೂ ಸೋದೆ ಮಠದ ನಡುವಣ ವಿವಾದ ಉಲ್ಬಣಗೊಂಡಿದೆ. ತಮ್ಮನ್ನು ಪರ್ಯಾಯದಿಂದ ಬಹಿಷ್ಕರಿಸಿರುವುದನ್ನು ಖಂಡಿಸಿ ಇದೇ 17ರಂದು ರಥಬೀದಿಯ ಅನಂತೇಶ್ವರ ದೇವಸ್ಥಾನದಲ್ಲಿ ಉಪವಾಸ  ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ  ಹೇಳಿದರು.ಪರ್ಯಾಯ ಮಹೋತ್ಸವಕ್ಕೆ ತಮಗೆ ಆಹ್ವಾನ ನೀಡದೆ ಸೋದೆ ಮಠದವರು ಹುಟ್ಟುಹಾಕಿರುವ ಸಮಸ್ಯೆಯನ್ನು ಬಗೆಹರಿಸಲು ಹಿರಿಯ ಯತಿ ಪೇಜಾವರ ವಿಶ್ವೇಶತೀರ್ಥರು ಮಧ್ಯಸ್ಥಿಕೆ ವಹಿಸಬೇಕು ಎಂದು ಪುತ್ತಿಗೆ ಶ್ರೀ ಆಗ್ರಹಿಸಿದರು.ಯಾವ ಭಿನ್ನಾಭಿಪ್ರಾಯವಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಭಾನುವಾರ ಸಂಜೆ 6 ಗಂಟೆಯೊಳಗೆ ಪುತ್ತಿಗೆ ಮಠಕ್ಕೆ ಬಂದು ಆತಿಥ್ಯ ಸ್ವೀಕರಿಸಬೇಕು ಎಂದು ತಾವು ನೀಡಿದ್ದ ಆಹ್ವಾನಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸುಗುಣೇಂದ್ರ ತೀರ್ಥರು ರಾತ್ರಿ 7 ಗಂಟೆಗೆ ಪುತ್ತಿಗೆ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ, `ಪುತ್ತಿಗೆ ಮಠದ ವಿರುದ್ಧ ಸೋದೆ ಮಠದವರು ಹಾಕಿರುವ ಬಹಿಷ್ಕಾರ ಹಿಂತೆಗೆದುಕೊಂಡು ಅಷ್ಟ ಮಠಗಳ ಏಕತೆ ಕಾಪಾಡಬೇಕು~ ಎಂದು ಆಗ್ರಹಿಸಿದರು.`ನಮ್ಮ ಮನವಿಯನ್ನು ಸೋದೆ ಮಠದವರು ನಿರ್ಲಕ್ಷ್ಯ ಮಾಡಿರುವುದು ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಹಿರಿಯ ಯತಿಗಳಾದ ವಿಶ್ವೇಶತೀರ್ಥರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದರೆ ಎಲ್ಲವೂ ಸುಖಾಂತ್ಯವಾಗುತ್ತದೆ. ಮಾಧ್ಯಮಗಳೆದುರಷ್ಟೇ ಬೆಂಬಲ ವ್ಯಕ್ತಪಡಿಸಿರುವ ಪೇಜಾವರ ಸ್ವಾಮೀಜಿ, ಈ ಹಿಂದೆ ನಮ್ಮ 3ನೇ ಪರ್ಯಾಯ ಕಾಲದ ವಿವಾದ ಸಂದರ್ಭದಲ್ಲಿ ತೋರಿಸಿದ ಇಚ್ಛಾಶಕ್ತಿಯನ್ನು ಈಗ ಪ್ರದರ್ಶಿಸಿಲ್ಲ ಎಂದು ಬೇಸರಿಸಿದರು.ಕೃಷ್ಣಾಪುರ ಮಠದ ಸ್ವಾಮೀಜಿಯಿಂದ ಮಾತ್ರ ತಮ್ಮ ಆಹ್ವಾನಕ್ಕೆ ವಿರೋಧವಿದೆ ಎನ್ನುವ ಮಾತನ್ನು ಪೇಜಾವರ ಶ್ರೀಗಳೇ ತಿಳಿಸಿದ್ದು. ಅವರು ಮಾತುಕತೆ ನಡೆಸಿದರೆ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ನಾವು ಅವರ ಮೇಲೆಯೇ ವಿಶ್ವಾಸವಿಟ್ಟಿದ್ದೇವೆ. ಅವರು ಈ ಮನವಿ ಸ್ವೀಕರಿಸಬೇಕು~ ಎಂದು ಆಗ್ರಹಿಸಿದರು.ಗದ್ದಲ ಮಾಡಿದ್ದು ಸರಿಯೇ?: `ಪೇಜಾವರ ಶ್ರೀಗಳು ಇದು ಆಯಾ ಮಠಗಳ ನಡುವಣ ಸಂಪ್ರದಾಯದ ವಿಚಾರ. ತಮ್ಮಿಂದ ಮಧ್ಯಪ್ರವೇಶ ಸಾಧ್ಯವಿಲ್ಲ ಎನ್ನುವ ಮಾತನ್ನು ಚೋಣೋತ್ಸವ ಸಂದರ್ಭದಲ್ಲಿ ಸಿಕ್ಕಾಗ ತಿಳಿಸಿದ್ದಾರೆ. ಹಾಗಿದ್ದರೆ ನಮ್ಮ ಪರ್ಯಾಯದ ಸಂದರ್ಭದಲ್ಲಿಯೂ ಇದು ಪುತ್ತಿಗೆ ಮಠಕ್ಕೆ ಸಂಬಂಧಿಸಿದ್ದು ಎನ್ನುವಂತೆ ಉಳಿದ ಮಠಗಳೂ ಬಿಡಬಹುದಿತ್ತಲ್ಲ? ಆದರೆ ಎಲ್ಲ ಮಠಗಳೂ ನಮ್ಮ ಪೀಠಾರೋಹಣಕ್ಕೆ ಪ್ರತಿಭಟನೆ, ಉಪವಾಸ, ಕರಪತ್ರ ಹಂಚಿದ್ದೇಕೆ? ಈಗ ನಾವು ಮಧ್ಯಪ್ರವೇಶಿಸುವುದಿಲ್ಲ ಎನ್ನುವುದು ಸರಿಯೇ?~ ಎಂದು ಪ್ರಶ್ನಿಸಿದರು.ವಿವಾದ ಶಾಂತಿಯುತವಾಗಿ ಬಗೆಹರಿಸಲು ಮಂತ್ರಾಲಯದ ಸುಶಮೀಂದ್ರ ತೀರ್ಥರು ಮತ್ತು ರಾಜಗೋಪಾಲಚಾರ್ಯರು ಕೂಡ ಸೋದೆ ಮಠದೊಂದಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸುಸೂತ್ರವಾಗಿ ಬಗೆ ಹರಿಯಬಹುದು ಎನ್ನುವ ವಿಶ್ವಾಸ ನಮ್ಮಲ್ಲಿದೆ. ಆದರೂ ಪೇಜಾವರ ಶ್ರೀಗಳು ಮಧ್ಯಪ್ರವೇಶಿಸಿದರೆ ಪರಿಹಾರ ಸಾಧ್ಯ ಎಂಬ ದೃಢ ನಂಬಿಕೆ ನಮ್ಮದು ಎಂದು ಸ್ವಾಮೀಜಿ ತಿಳಿಸಿದರು.`ಈ ವಿವಾದ ಆರಂಭಿಸಿದ್ದು ನಾವಲ್ಲ. ಸೋದೆ ಮಠದವರು ಪರ್ಯಾಯದ ಆಮಂತ್ರಣ ಪತ್ರಿಕೆಯಲ್ಲಿ ಪುತ್ತಿಗೆ ಮಠದ ಹೆಸರು ಹಾಕಿದ್ದರೆ ವಿವಾದ ಇರುತ್ತಲೇ ಇರಲಿಲ್ಲ. ಈಗ ನಮ್ಮ ಭಕ್ತರ ಒತ್ತಡ ಹೆಚ್ಚಿದ ಬಳಿಕ ಮಾಧ್ಯಮಗಳೆದುರು ಬರಬೇಕಾಯಿತು. ನಮ್ಮ ಮಠದ ಪರಂಪರೆ ಎತ್ತಿಹಿಡಿಯಲು, ಮಠಕ್ಕೆ ಆಗುತ್ತಿರುವ ಅವಮಾನ ತಪ್ಪಿಸಲು ಸಾತ್ವಿಕ ಪ್ರತಿಭಟನೆ ನಡೆಸುತ್ತಿರುವೆ~ ಎಂದರು.17ರಂದು ಬೆಳಿಗ್ಗೆ 9 ಗಂಟೆಗೆ ಅನಂತೇಶ್ವರ ದೇವಸ್ಥಾನದ ಮಧ್ವಾಚಾರ್ಯರ ಸನ್ನಿಧಿ ಬಳಿ 18ರ (ಪರ್ಯಾಯದ ದಿನ) ಬೆಳಿಗ್ಗೆ 5ಗಂಟೆವರೆಗೆ ಉಪವಾಸ ಕೈಗೊಳ್ಳುವೆ ಎಂದರು.

ಪೇಜಾವರ ಶ್ರೀ ಪ್ರತಿಕ್ರಿಯೆ...

`ಪುತ್ತಿಗೆ ಶ್ರೀಗಳನ್ನು ಸೋದೆ ಪರ್ಯಾಯೋತ್ಸವಕ್ಕೆ ಆಮಂತ್ರಿಸುವ ವಿಚಾರದಲ್ಲಿ ನನ್ನ ಪ್ರಯತ್ನ ಮಾಡಿದ್ದೇನೆ. ಇದು ನನ್ನಿಂದ ಸಾಧ್ಯವಾಗುವಂತೆ ಕಾಣುತ್ತಿಲ್ಲ~ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಭಾನುವಾರ ರಾತ್ರಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)