‘ಕ್ರೀಡಾ ಸ್ಫೂರ್ತಿ’ ಎಂಬ ಪದವೊಂದು ಶಾಲಾ ಕ್ರೀಡೆಗಳ ಸಂದರ್ಭದಲ್ಲಿ ಸವಕಲಾಗುವಷ್ಟು ಬಳಕೆಯಾಗುತ್ತದೆ. ಅದೇ ರಾಷ್ಟ್ರಗಳ ನಡುವಣ ಪಂದ್ಯಗಳಲ್ಲಿ ಈ ಪದವೇ ಅನೇಕರಿಗೆ ಮರೆತು ಹೋಗಿರುತ್ತದೆ. ಸರಿ, ಇಷ್ಟಕ್ಕೂ ಈ ಕ್ರೀಡಾ ಸ್ಫೂರ್ತಿ ಎಂದರೇನು? ಕ್ರೀಡೆಗೆ ಸಂಬಂಧಿಸಿದ ಸಿದ್ಧಾಂತಗಳನ್ನೆಲ್ಲಾ ಬದಿಗಿರಿಸಿ ನೇರವಾಗಿ ಅರ್ಥ ಮಾಡಿಕೊಂಡರೆ ಈ ಪದಕ್ಕೆ ಬಹಳ ಸರಳವಾದ, ಆದರೆ ಭಾರಿ ದೊಡ್ಡ ಅರ್ಥವಿದೆ. ಇದನ್ನು ಅಮೆರಿಕದ ಬೇಸ್ಬಾಲ್ ಕಮೀಷನರ್ ಆಗಿದ್ದ ಫ್ರಾನ್ಸಿಸ್ ಟಿ.ವಿನ್ಸೆಂಟ್ ಜ್ಯೂನಿಯರ್ ಬಹಳ ಚೆನ್ನಾಗಿ ಹೇಳಿದ್ದಾರೆ–‘ಬೇಸ್ಬಾಲ್ ನಮಗೆಲ್ಲಾ ಒಂದು ದೊಡ್ಡ ಪಾಠ ಕಲಿಸಿದೆ. ಅದುವೇ ವೈಫಲ್ಯವನ್ನು ನಿರ್ವಹಿಸುವ ತಂತ್ರ.

ಬೇಸ್ಬಾಲ್ನಲ್ಲಿ ವೈಫಲ್ಯ ಎಂಬುದು ಸಾಮಾನ್ಯ. ಅದೇ ಕಾರಣಕ್ಕೆ ವೈಫಲ್ಯವೆಂಬುದು ನಮ್ಮ ಮಟ್ಟಿಗೆ ಸೋಲಲ್ಲ. ನಮ್ಮಲ್ಲಿ ಗೆಲುವು ಎಂದರೆ ಕಡಿಮೆ ವೈಫಲ್ಯ ಮಾತ್ರ. ಅದೇ ಕಾರಣಕ್ಕೆ ಲಭ್ಯವಿರುವ ಮೂರು ಅವಕಾಶಗಳಲ್ಲಿ ಒಂದನ್ನು ಸರಿಯಾಗಿ ಬಳಸಿಕೊಳ್ಳುವವನು ತಾರಾ ಆಟಗಾರನಾಗುತ್ತಾನೆ’.

ಈ ಮಾತುಗಳು ನಮಗೆ ಎರಡು ವಿಚಾರಗಳನ್ನು ಸ್ಪಷ್ಟ ಪಡಿಸುತ್ತವೆ. ಮೊದಲನೆಯದ್ದು ಗುರಿ ತಪ್ಪುವುದು ಸಹಜ. ಎರಡನೆಯದ್ದು ನಿಖರ ಗುರಿ ಎಂಬುದು ಅಸಾಧ್ಯ. ಧರ್ಮ, ಮತ, ಆಚಾರ, ಸಂಪ್ರದಾಯ, ಕ್ರಾಂತಿಕಾರಿ ಧೋರಣೆ ಈ ಎಲ್ಲವುಗಳ ಹಿಂದೆಯೂ ಒಂದು ಅಧ್ಯಾತ್ಮವಿರುತ್ತದೆ. ಅದರ ಅರಿವು ನಮಗಿದ್ದರೆ ವೈಫಲ್ಯವನ್ನು ನಾವು ಸೋಲು ಎಂದು ಭಾವಿಸುವುದಿಲ್ಲ. ಆಟದಿಂದ ಆರಂಭಿಸಿ ತಾತ್ವಿಕತೆಯ ತನಕ ಎಲ್ಲದರಲ್ಲಿಯೂ ಅಧ್ಯಾತ್ಮವನ್ನು ಹುಡುಕುವುದು ಸ್ವಲ್ಪ ಅಸಹಜ ಎನಿಸಬಹುದು. ವಾಸ್ತವ ಇದಕ್ಕೆ ವಿರುದ್ಧವಾಗಿದೆ.

ಸಾವಿರಾರು ವರ್ಷಗಳಿಂದ ನಮ್ಮೆಲ್ಲಾ ಋಷಿಗಳು, ಸಂತರು, ಕ್ರಾಂತಿಕಾರಿಗಳು, ಜ್ಞಾನಿಗಳು ಎಲ್ಲರೂ ಮಾಡಿದ್ದೂ ಇದನ್ನೇ. ಗಾಂಧೀಜಿಯ ಅಧ್ಯಾತ್ಮವಿದ್ದದ್ದು ಅವರ ರಾಜಕಾರಣದಲ್ಲಿ. ಸಿ.ವಿ.ರಾಮನ್ ಅವರ ಅಧ್ಯಾತ್ಮವಿದ್ದದ್ದು ವಿಜ್ಞಾನದಲ್ಲಿ, ರಮಣ ಮಹರ್ಷಿಗಳದ್ದು ಒಳಗಣ ಬದುಕನ್ನು ಹೊರಗಣ ಬದುಕಿನ ಜೊತೆಗೆ ಬೆಸೆದು ಒಂದು ಮಾಡುವುದರಲ್ಲಿ. ಅಂಬೇಡ್ಕರ್ ಅವರ ಅಧ್ಯಾತ್ಮವಿದ್ದದ್ದು ಸಮಾನತೆಯ ತುಡಿತದಲ್ಲಿ. ನಿತ್ಯವೂ ಮಾಡುವ ಕೆಲಸಗಳಲ್ಲಿಯೂ ಇಂಥದ್ದನ್ನು ಗುರುತಿಸಲು ಸಾಧ್ಯ. ಕಚೇರಿಯೊಳಗೆ ತನ್ನ ಕೆಲಸದ ಸ್ಥಳಕ್ಕೆ ಬಂದು ಕುಳಿತಾಕ್ಷಣ ಬಹಳ ವಿಧ್ಯುಕ್ತವಾಗಿ ಮೇಜು ಕುರ್ಚಿಗಳನ್ನು ಶುಚಿಗೊಳಿಸುವವರಿದ್ದಾರೆ.

ಈ ವಿಧ್ಯುಕ್ತತೆ ಇಡೀ ದಿನದ ಕೆಲಸಕ್ಕೆ ಆವರಿಸಿಕೊಂಡುಬಿಟ್ಟರೆ ಅವರ ಉತ್ಪಾದಕತೆ ಇನ್ನಿಲ್ಲದಂತೆ ಹೆಚ್ಚಾಗಿಬಿಡುತ್ತದೆ. ಅಷ್ಟೇಕೆ ಕೆಲಸದಿಂದ ಅವರಿಗೆ ದೊರೆಯುವ ಸಂತೃಪ್ತಿಯೂ ಹೆಚ್ಚಾಗುತ್ತದೆ. ಬಸವಣ್ಣ ಕಾಯಕವೇ ಕೈಲಾಸ ಎಂದದ್ದು ಇದನ್ನೇ.

ನಾವು ನಿತ್ಯ ಮಾಡುವ ಕೆಲಸಕ್ಕೊಂದು ಅಧ್ಯಾತ್ಮದ ಆಯಾಮವಿದೆಯೆಂದು ಅರಿತಾಕ್ಷಣ ಅದಕ್ಕೆ ಔದಾರ್ಯ, ಸಹನೆ ಮತ್ತು ಕ್ಷಮೆಗಳೆಲ್ಲಾ ಸೇರಿಕೊಂಡುಬಿಡುತ್ತವೆ. ಸಾವಿನ ಮೇಲಿನ ನಿಯಂತ್ರಣ ತನ್ನದಲ್ಲವೆಂದು ತಿಳಿದಿದ್ದರೂ ಚಿಕಿತ್ಸೆ ನೀಡುವ ವೈದ್ಯನಿಗೆ ರೋಗಿ ಬದುಕುತ್ತಾನೆಂಬ ವಿಶ್ವಾಸವಿರುವುದು ಮತ್ತು ರೋಗಿಗೆ ಅದು ವಿಸ್ತರಿಸಿಕೊಳ್ಳುವುದೂ ವೃತ್ತಿಯೊಂದರ ಅಧ್ಯಾತ್ಮಿಕ ಆಯಾಮವೇ ತಾನೆ.

ಮೇಲಿನ ಎಲ್ಲಾ ಉದಾಹರಣೆಗಳಲ್ಲಿ ಕೇವಲ ಯಶಸ್ಸನ್ನು ಮಾತ್ರ ಕಾಣುವವನಿಗೆ ಅದು ಮಾತ್ರ ಕಾಣಸಿಗುತ್ತದೆ. ಸೋಲನ್ನು ಮಾತ್ರ ಕಾಣುವವರಿಗೆ ಅದು ಮಾತ್ರ ಕಾಣಿಸುತ್ತದೆ. ನಿತ್ಯದ ಬದುಕಿನ ಆಧ್ಯಾತ್ಮಿಕ ಆಯಾಮವನ್ನು ಅರಿತರೆ ಈ ಕಪ್ಪು–ಬಿಳುಪು ಚಿತ್ರದಾಚೆಗಿನ ವರ್ಣಮಯ ಲೋಕ ಅನಾವರಣಗೊಳ್ಳುತ್ತದೆ. ನಿಷ್ಕೃಷ್ಟವಲ್ಲದ್ದನ್ನೂ ವೈಫಲ್ಯವನ್ನೂ ಸಹಜ ಎಂದು ಒಪ್ಪಿಕೊಳ್ಳುವುದು ಆಧ್ಯಾತ್ಮಿಕ ದೃಷ್ಟಿಕೋನ. ಇದೇನೂ ತಪ್ಪೊಪ್ಪಿಗೆಯಲ್ಲ. ನಿಸರ್ಗ ಸಹಜವಾದುದನ್ನು ಅದಿದ್ದಂತೆಯೇ ಸ್ವೀಕರಿಸುವುದು.

ಹೀಗೆ ಸ್ವೀಕರಿಸಲಾರಂಭಿಸಿದ ಕ್ಷಣವೇ ಯಶಸ್ಸಿನ ಹೊಸದಾರಿಗಳು ಹೊಳೆಯಲಾರಂಭಿಸುತ್ತವೆ. ಒಂದೊಂದು ಸೋಲೂ ಒಂದೊಂದು ಹೊಸದಾರಿಗಳನ್ನು ತೆರೆಯುತ್ತಿರುತ್ತದೆ ಅಥವಾ ಇಡೀ ಸಮಸ್ಯೆಯನ್ನು ಹೊಸ ಸ್ವರೂಪದಲ್ಲಿ ಗ್ರಹಿಸಲು ಅನುಕೂಲ ಮಾಡಿಕೊಡುತ್ತದೆ. ಗುರು ಬಾಲ್ ಶೆಮ್ ತೊವ್ ಬಳಿಗೆ ಬಂದ ಒಬ್ಬ ಭಕ್ತನ ದೃಷ್ಟಾಂತ ಈ ಪರಿಕಲ್ಪನೆಯನ್ನು ಹೆಚ್ಚು ಸ್ಪಷ್ಟಪಡಿಸಬಹುದು. ಅದು ಹೀಗಿದೆ. ಗುರುವಿನ ಬಳಿ ಬಂದ ಆ ಭಕ್ತ ಹೇಳಿದ. ‘ನಾನು ದೇವರನ್ನು ಸದಾ ಧ್ಯಾನಿಸಿದೆ, ಹೊತ್ತು ಹೊತ್ತಿಗೆ ಪೂಜಿಸಿದೆ. ಅದರಿಂದ ನಾನೇನೂ ಅಭಿವೃದ್ಧಿ ಹೊಂದಲಿಲ್ಲ. ಹಿಂದಿನಂತೆಯೇ ಸಾಮಾನ್ಯನೂ ಅಜ್ಞಾನಿಯೂ ಆಗಿ ಉಳಿದಿದ್ದೇನೆ’.

ಇದಕ್ಕೆ ಬಾಲ್ ಶೆಮ್ ತೊವ್ನ ಉತ್ತರ ಹೀಗಿತ್ತು ‘ನೀನು ಸಾಮಾನ್ಯನೂ ಅಜ್ಞಾನಿಯೂ ಆಗಿ ಉಳಿದಿರುವುದು ನಿನಗೇ ಅರ್ಥವಾಗಿರುವುದು ಏನು ಸಾಮಾನ್ಯ ಸಂಗತಿಯೇ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.