ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಿನದ ಜೊತೆಗಾರ ‘ಶೋಲೆ’

Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕಳೆದ ಶತಮಾನದ ಅರವತ್ತರ ದಶಕದಲ್ಲಿ ಹಾಲಿವುಡ್ ಒಂದು ಹೊಸ ಪ್ರಯೋಗ ಮಾಡಿತು. ತನ್ನ ಸಮಕಾಲೀನ ಬದುಕಿನ ಪ್ರತಿಮೆಗಳ ಬದಲು ಹತ್ತೊಂಬತ್ತನೆಯ ಶತಮಾನದ ಅಮೆರಿಕಾದ ದೃಶ್ಯ ಸಂಯೋಜನೆಯಲ್ಲಿ ಹಳೆಯ ದಪ್ಪ ಅರಿವೆಗಳ ಉಡುಪುಗಳುಳ್ಳ, ಗಡ್ಡವಿರುವ, ವಿಚಿತ್ರ ಹ್ಯಾಟುಗಳನ್ನು ತೊಟ್ಟು ಓಡಾಡುವ, ಕಾರುಗಳ ಬದಲಿಗೆ ಹೆಚ್ಚಾಗಿ ಕುದುರೆಗಳನ್ನು ಓಡಿಸುವ, ಕೈಯಲ್ಲಿ ಮೊಳದಷ್ಟು ಉದ್ದದ ಬಂದೂಕುಗಳಿಂದ ಕಿವಿಗಡಚಿಕ್ಕುವ ಸದ್ದುಗಳ ಗುಂಡು ಹಾರಿಸುವ ಪಾತ್ರಗಳನ್ನು ಸೃಷ್ಟಿ ಮಾಡಿತು.

ಹತ್ತೊಂಬತ್ತನೆಯ ಶತಮಾನವಾದುದರಿಂದ ಹಳೆಯ ಕಾಲದ ಮನೆಗಳು, ಹೋಟೇಲುಗಳು, ಉದ್ದೋಉದ್ದನ್ನ ಗುಡ್ಡಗಾಡುಗಳು, ಬಯಲುಗಳು, ಹಳ್ಳಿಗಳು, ಇತ್ಯಾದಿಗಳಿಂದ ಅಮೆರಿಕಾದ ಸಿನಿಮಾ ಪ್ರೇಕ್ಷಕರಿಗೆ, ವಿಶೇಷತಃ ನಗರವಾಸಿಗಳಿಗೆ ಮೈ ನವಿರೇಳಿಸುವ ಸಿನಿಮಾಗಳನ್ನು ಹಾಲಿವುಡ್ ಪ್ರಸ್ತುತಪಡಿಸಿತು. ಅದಕ್ಕೆ ಸರಿಯಾಗಿ ಅಮೆರಿಕಾದ ಹಳೆಯ ರಮ್ಯ ತಾಣಗಳಾದ ಅರಿಜೋನಾ, ಕೊಲರಾಡೊ, ಮುಂತಾದ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಚಿತ್ರೀಕರಣ ನಡೆಸಿತು. ತಮ್ಮ ದೇಶದ ಇತಿಹಾಸದ ಬಗ್ಗೆ ಸಾಹಸಪೂರ್ಣ ಕಥೆಗಳನ್ನು ನಿರೀಕ್ಷಿಸಿದ ಅಲ್ಲಿಯ ಜನರಿಗೆ ಇದು ಬಹಳ ಬೇಗ ಹಿಡಿಸಿತು. ನಿರ್ಮಾಪಕರು ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆಹೊಡೆದರು. ಒಂದರ ಹಿಂದೆ ಒಂದು ಎಂಬಂತೆ ಹಲವಾರು ಚಿತ್ರಗಳು ಬಂದು ಈ ಪರಂಪರೆಗೆ ‘ಕೌಬಾಯ್ ಫಿಲ್ಮ್ಸ್’ ಅಥವಾ ‘ವೆಸ್ಟರ್ನ್ ಸಿನಿಮಾ’ಗಳು ಎಂಬ ಹೊಸ ಪ್ರಕಾರವೇ ಜನಪ್ರಿಯವಾಯಿತು.

ಈ ರೀತಿಯ ಚಿತ್ರಗಳು ಮೂಕಿ ಸಿನಿಮಾಗಳ ಕಾಲಘಟ್ಟಗಳಲ್ಲೂ ಬಂದಿದ್ದುವು. ಮೊಟ್ಟಮೊದಲು ಬಂದ ‘ದಿ ಗ್ರೇಟ್ ಟ್ರೈನ್ ರಾಬರಿ’ (1903) ಇಂಥದ್ದೇ ಒಂದು ಚಿತ್ರವೆನ್ನಬೇಕು. ಆದರೆ ಯಾವಾಗ ಚಲನಚಿತ್ರಗಳಲ್ಲಿ ಬಣ್ಣದ ಆವಿಷ್ಕಾರವಾಯಿತೋ ಮತ್ತು ಶಬ್ದಗಳ ಅಳವಡಿಕೆ ಉಂಟಾಯಿತೋ ಈ ವೆಸ್ಟರ್ನ್ ಸಿನಿಮಾಗಳನ್ನು ನೋಡುವ ಜನರೂ ಹೆಚ್ಚಾದರು. ‘ದಿ ಮ್ಯಾಗ್ನಿಫಿಸೆಂಟ್ ಸೆವೆನ್’, ‘ಗುಡ್ ಬ್ಯಾಡ್ ಅಂಡ್ ಅಗ್ಲಿ’, ‘ವನ್ಸ್ ಅಪಾನ್ ಅ ಟೈಂ ಇನ್ ದಿ ವೆಸ್ಟ್’, ‘ಮೆಕೆನ್ನಾಸ್ ಗೋಲ್ಡ್’– ಹೀಗೆ ನೂರಾರು ನೆನಪಿನಲ್ಲಿ ಉಳಿಯುವಂಥ ಇಂಥ ಚಿತ್ರಗಳು ಬಂದುವು. ಇಲ್ಲಿ ಮನುಷ್ಯ ಜೀವಕ್ಕೆ ಬೆಲೆಯಿಲ್ಲ. ಮೂಲನಿವಾಸಿಗಳ ಪರಸ್ಪರ ಜಗಳಗಳನ್ನು ಚಿತ್ರಿಸುವ ಈ ಚಿತ್ರಗಳು ಎಷ್ಟೊಂದು ಪ್ರಭಾವ ಬೀರಿದುವೆಂದರೆ, ಜಗತ್ತಿನ ಅತ್ಯಂತ ಮೇಧಾವಿ ನಿರ್ದೇಶಕ ಜಪಾನಿನ ಅಕಿರ ಕುರಾಸೋವ ಕೂಡಾ ಈ ಪರಂಪರೆಯ ಚಿತ್ರವನ್ನು ಮಾಡಿದ್ದಿದೆ (‘ಸೆವೆನ್ ಸಮುರಾಯ್’). ಅತ್ಯಂತ ಶ್ರೇಷ್ಠ ನಟರೂ ಇಂಥ ಚಿತ್ರಗಳಲ್ಲಿ ನಟಿಸಲು ಮುಂದೆ ಬಂದದ್ದಿದೆ.

ಒಂದು ಸಲ ಹಾಲಿವುಡ್‌ನಲ್ಲಿ ಒಂದು ಬಗೆಯ ಸಿನಿಮಾ ಜನಪ್ರಿಯವಾದಾಗ ನಮ್ಮ ಬಾಲಿವುಡ್ ಕೂಡಾ ಅದೇ ರೀತಿಯ ಚಿತ್ರಗಳನ್ನು ನಿರ್ಮಿಸಲು ಮುಂದೆ ಬರುತ್ತದೆ. ಹಾಲಿವುಡ್ ಹತ್ತೊಂಬತ್ತನೇ ಶತಮಾನದ ಪಶ್ಚಿಮ ಅಮೆರಿಕಾದ ತನ್ನ ಇತಿಹಾಸದ ಚರಿತ್ರೆಯನ್ನು ಕೊಟ್ಟರೆ, ಬಾಲಿವುಡ್ ತನ್ನ ಭಾರತೀಯ ಸಂದರ್ಭದಲ್ಲಿ ಬಾರತೀಯ ಸಾಮಾಜಿಕ ಸಾಂಸಾರಿಕ ಚಿತ್ರಗಳ ನಡುವೆ ಈ ರೀತಿಯ ಕಥೆ ಹೆಣೆಯುವ ತರಾತುರಿಯಲ್ಲಿತ್ತು. ಆದರೆ ಅದು ಸಾಕಾರಗೊಳ್ಳಲು 1970ರವರೆಗೆ ಕಾಯಬೇಕಾಯಿತು.

ಅಳುಮೋರೆಯ ಪ್ರೇಮಿ ರಾಜೇಂದ್ರಕುಮಾರ್ (‘ಮೇರೆಮೆಹಬೂಬ್’) ಹಳ್ಳಿಪೆದ್ದ ರಾಜ್‌ಕಪೂರ್ (‘ಶ್ರೀ420’), ಮಂದಸ್ವರದಲ್ಲಿ ಮಾತನಾಡುವ ದಿಲೀಪ್ ಕುಮಾರ್ ಮುಂತಾದವರು ಹೆಚ್ಚಾಗಿ ರಾಮಾಯಣದ ಕಥೆಯನ್ನೇ (ಒಬ್ಬ ಧೀರೋದ್ಧಾತ ನಾಯಕ, ಅವನ ಹೆಂಡತಿ ಮತ್ತು ಅವಳನ್ನು ಹಾರಿಸಿಕೊಂಡು ಹೋಗುವ ಖಳನಾಯಕ) ಮತ್ತೆ ಮತ್ತೆ ಮಸಾಲೆ ಹಾಕಿ ಕೊಡುತ್ತಿದ್ದ ಬಾಲಿವುಡ್ ಸಿನಿಮಾಗಳಿಗಿಂತ ಭಿನ್ನವಾದ ಒಂದು ಚಿತ್ರ ಕೊಡಲು ಹಾತೊರೆಯುತ್ತಿತ್ತು.  ನಮ್ಮದೇ ಪರಿಸರವುಳ್ಳ, ನಮ್ಮ ನಡುವೆಯೇ ನಡೆದಿರಬಹುದು ಎಂಬ ಕಥೆಯಿರುವ, ಆದರೆ ಸಂಪೂರ್ಣ ಮನರಂಜನೆಯೊದಗಿಸುವ, ನಮ್ಮ ಇತಿಹಾಸಕ್ಕೆ ಯಾವುದೇ ಸಂಬಂಧವಿಲ್ಲದ, ಇಲ್ಲ ಅಂತ ಹೇಳುವ ಹಾಗಿಲ್ಲದ ಒಂದು ಚಿತ್ರವನ್ನು ಬಾಲಿವುಡ್‌ನ ಸೃಜನಶೀಲ ವ್ಯಕ್ತಿಗಳು ನಮ್ಮೆದುರು ಇಟ್ಟರು. ಎರಡಕ್ಷರದ ಅದರ ಹೆಸರು ‘ಶೋಲೆ’.

ಶೋಲೆಯ ಜನಕರು
ಶೋಲೆಯ ನಿರ್ಮಾಪಕರು ಆಗ ಹಿಂದಿ ಸಿನಿಮಾದ ಹಿರಿಯ ನಿರ್ಮಾಪಕ ಜಿ.ಪಿ. ಸಿಪ್ಪಿ. ಅವರ ಮಗ 25 ವರ್ಷ ವಯಸ್ಸಿನ ರಮೇಶ್ ಸಿಪ್ಪಿ ಚಿತ್ರದ ನಿರ್ದೇಶಕರು. ಚಿತ್ರಕಥೆ ಅದೇ ತಾನೇ ಕೆಲವು ಯಶಸ್ವೀ ಚಿತ್ರಗಳಿಗೆ ಕೆಲಸ ಮಾಡಿದ ಸಲೀಮ್ ಜಾವೆದ್ ಜೋಡಿಯದು. ಇದರ ಸಂಗೀತ ನಿರ್ದೇಶಕರು ಪ್ರಖ್ಯಾತ ಸಂಗೀತಗಾರ ಆರ್.ಡಿ. ಬರ್ಮನ್. ಕ್ಯಾಮೆರಾ ಹಿಡಿದವರು ದ್ವಾರಕಾ ದಿವೇಚಾ. ಸಂಕಲನಕಾರ ಎಂ.ಎಸ್. ಶಿಂದೆ. ಶೂಟಿಂಗ್ ಆರಂಭವಾದ ದಿನ ಅಕ್ಟೋಬರ್ 3, 1973. ಸುಮಾರು ಎರಡೂವರೆ ವರುಷದ ಬಳಿಕ ಚಿತ್ರ ಸಿದ್ಧವಾಗಿ ತೆರೆ ಕಂಡದ್ದು ಆಗಸ್ಟ್ 15, 1975ರಂದು. ಮುಖ್ಯ ನಟರು ಸಂಜೀವಕುಮಾರ್, ಧರ್ಮೇಂದ್ರ, ಹೇಮಾಮಾಲಿನಿ, ಅಮಿತಾಭ್ ಬಚ್ಚನ್ ಮತ್ತು ಅಮ್ಜದ್ ಖಾನ್. ಚಿತ್ರದ ಉದ್ದ 193 ನಿಮಿಷಗಳು. ಈಗ ಅದು ಮೂರೂವರೆ ಗಂಟೆಗಳ (204 ನಿಮಿಷಗಳ) ಚಿತ್ರವಾಗಿ ಹಾರ್ಡ್ ಡಿಸ್ಕ್, ಡಿವಿಡಿ, ಯೂ ಟ್ಯೂಬ್ ಮುಂತಾದ ಕಡೆಗಳಲ್ಲಿ ಸುಲಭವಾಗಿ ಸಿಗುತ್ತಿದೆ. 

‘ಶೋಲೆ’ ರೂಪುಗೊಂಡ ಹಿನ್ನೆಲೆ
ಸಲೀಮ್ ಜಾವೆದ್ ಜೋಡಿಗೆ ಒಂದು ಪುಸ್ತಕ ಸಿಕ್ಕಿತ್ತು. ಅದರ ಹೆಸರು ‘ಅಭಿಶಪ್ತ ಚಂಬಲ್’ ಎಂದು. ಬರೆದವರು ತರುಣ್ ಕುಮಾರ್ ಭಾದುರಿ (ಜಯಾ ಭಾದುರಿ ಅವರ ತಂದೆ). ಆಗ ಚಂಬಲ್ ಕಣಿವೆಯ ಡಕಾಯಿತರ ಬಗ್ಗೆ ದೇಶದಲ್ಲಿ ಅನೇಕ ಕಥೆಗಳು ಹರಡಿ ಉತ್ಸುಕತೆ ಮೂಡಿತ್ತು. ಅದನ್ನು ಓದಿ ಸಲೀಮ್ ಜಾವೆದ್ ನಾಲ್ಕು ವಾಕ್ಯಗಳ ಕಥೆಯನ್ನು ಸಿಪ್ಪಿ ಅಪ್ಪ ಮಗನಿಗೆ ಹೇಳಿದರು. ಕೇವಲ ಒಂದು ತಿಂಗಳಿನೊಳಗೆ ಸಲೀಮ್ ಜಾವೆದ್ ಚಿತ್ರಕಥೆ ಬರೆದುಕೊಟ್ಟರು. ಕಥೆ ಅನೇಕ ಬದಲಾವಣೆಗಳನ್ನು ಪಡೆದು, ಮೂಲ ಲೇಖಕರಾಗಲೀ ಮೊದಲು ಆಯ್ಕೆ ಮಾಡಿದ ನಟರಾಗಲೀ ಇಲ್ಲದೆ ಬೇರೆಯೇ ಒಂದು ರೂಪ ಪಡೆಯಿತು.

ಮೊದಲ ಎರಡು ವಾರ ಚಿತ್ರ ಒಳ್ಳೆಯ ಹೆಸರು ಪಡೆಯಲಿಲ್ಲ. ಪತ್ರಿಕೆಗಳಲ್ಲಿ ಅದಕ್ಕೆ ಒಳ್ಳೆಯ ವಿಮರ್ಶೆ ಬರಲಿಲ್ಲ. ಸೆನ್ಸಾರ್‌ನವರು 204 ನಿಮಿಷಗಳ ಈ ಚಿತ್ರದಲ್ಲಿ ಸುಮಾರು 11 ನಿಮಿಷಗಳ ಉದ್ದವನ್ನು ಕತ್ತರಿಸಿದರು. ಆದರೆ ಮೌಖಿಕ ಪ್ರಚಾರದಿಂದಾಗಿ ಚಿತ್ರ ಗೆಲ್ಲಲು ಆರಂಭವಾಗಿ, ಈಗ ಅದು ಒಂದು ದಂತಕಥೆಯಾಗಿ ಹೋಗಿದೆ. ಅನೇಕ ಕೇಂದ್ರಗಳಲ್ಲಿ ಶತದಿನ ಪ್ರದರ್ಶನ ಕಂಡಿರುವ ‘ಶೋಲೆ’ ಮುಂಬಯಿಯ ‘ಮಿನರ್ವಾ’ ಚಿತ್ರಮಂದಿರದಲ್ಲಿ ಸತತ 5 ವರ್ಷ ಓಡಿದ ದಾಖಲೆ ಸ್ಥಾಪಿಸಿದೆ. ನೂರಾರು ಪ್ರಶಸ್ತಿಗಳನ್ನು ಗೆದ್ದಿದೆ. ಯಾವ ಪತ್ರಿಕೆಗಳು ಅದರ ಬಗ್ಗೆ ಒಳ್ಳೆಯ ಚಿತ್ರ ಎಂದು ವಿಮರ್ಶೆ ಬರೆಯಲಿಲ್ಲವೋ ಅವೆಲ್ಲ ಈಗ ಬರೆದ ವಿಮರ್ಶೆಗಳನ್ನು ತೂಕ ಹಾಕಿದರೆ ಟನ್ನುಗಟ್ಟಲೆ ಪುಟಗಳಾದಾವು. ಕಳೆದ ಐವತ್ತು ವರ್ಷಗಳಲ್ಲಿ ಬಂದ ಚಿತ್ರಗಳಲ್ಲಿ ಜನಪ್ರಿಯವಾದ ಚಿತ್ರಗಳ ಪಟ್ಟಿ ತೆಗೆದರೆ ಈಗ ‘ಶೋಲೆ’ ಮೊದಲ ಸ್ಥಾನದಲ್ಲಿದೆ. ಮತ್ತು ಈಗಲೂ ಅದನ್ನು ಮೀರಿಸುವ ಇನ್ನೊಂದು ಚಿತ್ರ ಸೃಷ್ಟಿಯಾಗಿಲ್ಲ.

‘ಶೋಲೆ’ಯನ್ನು ಆಗ ನೋಡದ ಭಾರತೀಯನಿಲ್ಲ ಎನ್ನಬಹುದು. ಮಾತ್ರವಲ್ಲ, ಅಲ್ಲಿಯ ಪಾತ್ರಗಳಾಡುವ ಮಾತುಗಳು ಜನರ ಬಾಯಿಯಲ್ಲಿ ಮತ್ತೆ ಮತ್ತೆ ಮರುಕಳಿಸಿದುವು. ಯಾವುದೇ ಶಾಲೆಗೆ ಹೋಗಲಿ, ಅಲ್ಲಿನ ಪ್ರಹಸನಗಳಲ್ಲಿ ಶೋಲೆಯ ಗಬ್ಬರ್‌ನ ಮಾತುಗಳನ್ನಾಡುವ ಹುಡುಗ ಒಬ್ಬನಾದರೂ ಇರುತ್ತಿದ್ದ. ಕೈಯಲ್ಲಿ ಬಂದೂಕಿನ ಗುಂಡುಗಳ ಹಾರವನ್ನು ಹಿಡಿದು ಅತ್ತಿತ್ತ ಕಾಲು ಹಾಕುವ, ‘ಕಿತನೇ ಆದ್ಮಿ ಥೆ’ ಎಂದು ಕೇಳುವ ಗಬ್ಬರ್‌ನ ಮಾತುಗಳನ್ನು ಅಭಿನಯಿಸುವ ಮಕ್ಕಳನ್ನು ತಂದೆ ತಾಯಿಯರು ಹಳ್ಳಿಹಳ್ಳಿಗಳಲ್ಲಿಯೂ ಬೆಳೆಸಿದರು.

ಕದ್ದ ಮಾಲುಗಳನ್ನು ಖರೀದಿಸಿ ದೊಡ್ಡ ದೊಡ್ಡ ಶೌರ್ಯಗಳನ್ನು ಮಾಡಿದೆನೆಂದು ಬಡಾಯಿಕೊಚ್ಚಿಕೊಳ್ಳುವ ಸೂರಮಾ ಭೋಪಾಲಿ (ಜಗದೀಪ್), ‘ಅಂಗ್ರೇಜೋಂಕೆ ಜಮಾನೆಕಾ ಜೈಲರ್ ಹೈ’ ಎಂದು ‘ಶಿಸ್ತಿ’ನ ಪ್ರತಿಮೂರ್ತಿಯಾದ ಜೈಲರ್ ಅಸ್ರಾಣಿ, ಮಾತು ನಿಲ್ಲಿಸದ ಹರಟೆಮಲ್ಲಿ ಬಸಂತಿ (ಹೇಮಾಮಾಲಿನಿ), ಮತ್ತು ಮಾತೇ ಇಲ್ಲದ ಜಯಾ ಭಾದುರಿ, ‘ಮುಝೆ ಯೇ ಹಾತ್ ಚಾಹಿಯೇ’ ಎಂದು ಅರಚುವ ಕ್ರೂರಿ ಗಬ್ಬರ್ (ಅಮ್ಜದ್ ಖಾನ್), ಕೈಗಳೇ ಇಲ್ಲದ ಠಾಕುರ್ ಬಲದೇವ್ ಸಿಂಗ್ (ಸಂಜೀವ ಕುಮಾರ್), ಮುಗ್ಧತೆಯ ಪ್ರತಿರೂಪವಾದ ಅಹಮದ್ (ಸಚಿನ್) ಮತ್ತು ಅವನ ತಂದೆ ರಹೀಂ ಚಾಚಾ (ಹಾನಗಲ್)– ಇವರೆಲ್ಲ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದರು.

ಇವುಗಳ ನಡುವೆ ಟಪೋರಿಯಂತೆ ವರ್ತಿಸುವ ಧೀರ ವೀರು (ಧರ್ಮೇಂದ್ರ) ಮತ್ತು ಮಾತಿಲ್ಲದ ವಿಧವೆಯ ಮೇಲೆ ಮನಸ್ಸು ನೆಟ್ಟ, ತೂಕದ ಮಾತಿನ ಜೈ (ಅಮಿತಾಭ ಬಚ್ಚನ್) ಇವರುಗಳು! ಆರ್.ಡಿ. ಬರ್ಮನ್ನರ ಸಂಗೀತ, ಆನಂದ ಭಕ್ಷಿಯವರ ಹಾಡುಗಳು (ಒಟ್ಟು ಆರು ಹಾಡುಗಳು ಇವೆ. ಒಂದು ಹಾಡನ್ನು ಎರಡು ಬಾರಿ ಚಿತ್ರೀಕರಿಸಲಾಗಿದೆ), ‘ಮೆಹಬೂಬಾ ಮೆಹಬೂಬಾ’ ಎಂದು ಕುಣಿಯುವ ಜಲಾಲ್ ಆಗಾ ಹಾಗೂ ಹೆಲೆನ್ ಮತ್ತು ನಮ್ಮ ರಾಮನಗರದ ಕಲ್ಲುಬಂಡೆಗಳ ನಡುವಿನ ‘ರಾಮಘರ್’ (ಕಲೆ: ರಾಂ ಯೆಡೆಕಾರ್)– ಇವೆಲ್ಲ ‘ಶೋಲೆ’ಯ ಜನಪ್ರಿಯತೆಗೆ ಪೂರಕವಾದುವು.

ಜನ ಮರುಳೋ ‘ಶೋಲೆ’ ಮರುಳೋ...
‘ಶೋಲೆ’ ಅಪಾರ ಜನಪ್ರಿಯತೆ ಗಳಿಸಲು ಏನು ಕಾರಣ? ಸಿನಿಮಾದ ಕಥೆಯೇ? ನಿರ್ದೇಶನವೇ? ಸಂಕಲನವೇ? ನಟರ ನಟನಾ ಚತುರತೆಯೇ? ಸಂಗೀತವೇ?... ಕತೆಯಲ್ಲಿ ಹೊಸತನವಿತ್ತು. ಚಿತ್ರ ಮಸಾಲೆಗೆ ಅಗತ್ಯವಾದ ಎಲ್ಲವನ್ನೂ ಬಳಸಿದ ನಿರ್ದೇಶನ (ಉದಾಹರಣೆಗೆ ಧರ್ಮೇಂದ್ರನ ನೀರಿನ ಟ್ಯಾಂಕ್‌ನ ಮೇಲಿನ ಆತ್ಮಹತ್ಯೆಯ ನಾಟಕ, ಜಗದೀಪ ಮತ್ತು ಅಸ್ರಾಣಿಯ ಹಾಸ್ಯ, ಸಚಿನ್‌ನ ಕೊಲೆಯ ಕಣ್ಣೀರು ತರುವ ಕೊಲೆ, ಹಾಡು ನೃತ್ಯ, ಕೊಲೆ ಸುಲಿಗೆ ಇತ್ಯಾದಿ ತುಣುಕುಗಳು), ಎಲ್ಲವೂ ಸಿನಿಮಾದ ಗೆಲುವಿಗೆ ಕಾರಣವಾಗಿತ್ತು. ನಟರು ಪ್ರಬುದ್ಧರಲ್ಲದಿದ್ದರೂ (ಸಂಜೀವಕುಮಾರ, ಧರ್ಮೇಂದ್ರ, ಮತ್ತು ಹೇಮಾಮಾಲಿನಿ ಬಿಟ್ಟು) ಈ ಚಿತ್ರದಲ್ಲಿ ಕೆಲಸ ಮಾಡಿದ ಮೇಲೆ ಅವರೆಲ್ಲ ಎತ್ತರಕ್ಕೆ ಬೆಳೆದರು. ಅಲ್ಲಿಯತನಕ ಸಿನಿಮಾದಲ್ಲಿ ನಟಿಸದ ಅಮ್ಜದ್ ಖಾನ್ (ಆತ ನಾಟಕಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದ) ದಿನ ಬೆಳಗಾಗುವಷ್ಟರಲ್ಲಿ ಪ್ರಖ್ಯಾತನಾಗಿ ಬಿಟ್ಟ.

ಗೆಳೆತನದ ಬಗ್ಗೆ, ಪ್ರೇಮಿಯ ಬಗ್ಗೆ, ಹಬ್ಬದ ಬಗ್ಗೆ ಮತ್ತು ಸೌಂದರ್ಯಾರಾಧನೆಯ ಬಗ್ಗೆ– ಹೀಗೆ, ವಿಭಿನ್ನ ಹಾಡುಗಳನ್ನು ರೂಪಿಸಿದ ಬರ್ಮನ್ನರ ಸಂಗೀತವೂ ಚಿತ್ರದ ಜನಪ್ರಿಯತೆಗೆ ಪೂರಕವಾಗಿತ್ತು. ಎಲ್ಲಕ್ಕಿಂತ ಚಿತ್ರರಸಿಕರ ಮನಸೆಳೆದ ಅಂಶ, ರಾಮನಗರದ ಲೊಕೇಶನ್ನು ಹಾಗೂ ಬಣ್ಣಗಳು, ಚಿತ್ರಕಥೆ ಮತ್ತು ಸಂಭಾಷಣೆ. ಎಲ್ಲವೂ ಭಿನ್ನವಾದ ಕಾರಣ ಭಾರತೀಯರಷ್ಟೇ ಅಲ್ಲ, ವಿಶ್ವದ ಎಲ್ಲರ ಮನಸ್ಸನ್ನೂ ‘ಶೋಲೆ’ ಗೆದ್ದಿತು. ಮೂರು ಕೋಟಿ ರೂಪಾಯಿ ಬಂಡವಾಳ ಹೂಡಿ ಮಾಡಿದ ‘ಶೋಲೆ’ ಆಗಿನ ಕಾಲಕ್ಕೆ 15 ಕೋಟಿ ರೂಪಾಯಿಗಳನ್ನು ತಂದುಕೊಟ್ಟಿತು. ಈಗಲೂ ‘ಶೋಲೆ’ಯನ್ನು ಒಮ್ಮೆ ನೋಡಲು ಆರಂಭಿಸಿದಿರೋ, ಕೊನೆಯತನಕವೂ ಅದು ನಿಮ್ಮನ್ನು ಅದರ ತೆಕ್ಕೆಯಲ್ಲಿ ಇಟ್ಟುಕೊಳ್ಳುತ್ತದೆ.

‘ಶೋಲೆ’ಯ ಪ್ರಭಾವ
ಅದೆಷ್ಟು ಜನಪ್ರಿಯವಾದರೂ ‘ಶೋಲೆ’ ವಿಮರ್ಶೆಯ ಅಡಕತ್ತರಿಯಿಂದ ಪಾರಾಗಿಲ್ಲ. ಅನೇಕ ಕೌಬಾಯ್ ಸಿನೆಮಾಗಳಿಂದ ಪ್ರಭಾವಿತವಾದ, ಸಂಗೀತವನ್ನು ಶಬ್ದಗಳನ್ನು ಹಾಗೆ ಹಾಗೆಯೇ ಎತ್ತಿಕೊಂಡ, ಅವುಗಳ ನಟನೆಯನ್ನೇ ತುಂಬ ಕಡೆ ಅನುಕರಿಸಿದ ‘ಶೋಲೆ’ ಊಳಿಗಮಾನ್ಯ ಪದ್ಧತಿಯನ್ನು ವಿಜೃಂಭಿಸುವ, ಸಾಧಾರಣ ಕಳ್ಳರನ್ನು ಹೀರೋಗಳಾಗಿ ಚಿತ್ರಿಸುವ ಒಂದು ಪರಂಪರೆಯನ್ನು ಹಾಕಿ ಕೊಟ್ಟಿದೆ. ಎಪ್ಪತ್ತರ ಎಂಬತ್ತರ ದಶಕದ ಚಿಕ್ಕ ಮಕ್ಕಳ ಕೈಗೆ ಆಟದ ಬಂದೂಕುಗಳನ್ನು ಕೊಟ್ಟು ಅವರ ಬಾಯಿಗಳಿಂದ ಕ್ರೌರ್ಯದ ಮಾತುಗಳನ್ನು ಆಡಿಸುವ ಹಿಂಸೆಯನ್ನು ಈ ಚಿತ್ರ ಕಲಿಸಿಕೊಟ್ಟಂತಾಗಿದೆ.

ಅ ಮಕ್ಕಳೆಲ್ಲ ಈಗ ದೊಡ್ಡವರಾಗಿದ್ದಾರೆ ಮತ್ತು ಈಗ ನಮ್ಮ ಸುತ್ತ ಹಿಂಸೆಯೇ ಬದುಕಿನ ಮುಖ್ಯ ಅಂಗವಾಗಿದೆ. ‘ಶೋಲೆ’ ಎಂಥ ಒಂದು ಮಾನಸಿಕ ಸ್ಥಿತಿಯನ್ನು ಜನರ ಮನಸ್ಸಿನಲ್ಲಿ ಮೂಡಿಸಿತು ಎಂದರೆ, 1977ರ ತುರ್ತುಪರಿಸ್ಥಿತಿಯ ಘೋಷಣೆಗೆ ಈ ಸಿನಿಮಾ ಕೂಡಾ ಒಂದು ಪರ್ಯಾಯ ಕಾರಣವೆನ್ನುವ ಸಿದ್ಧಾಂತವೂ ಇದೆ. ಹೀಗೆ, ಅಡ್ಡಮಾತುಗಳ ನಡುವೆಯೂ ಕಥೆಯೇ ಮುಖ್ಯವಾಗಿರುವ ಭಾರತೀಯ ಸಿನಿಮಾಗಳಿಗೆ ‘ಶೋಲೆ’ ಒಂದು ಪರಂಪರೆಯನ್ನು ಹಾಕಿಕೊಟ್ಟಿದ್ದು ಕಡಿಮೆ ಸಾಧನೆಯೇನಲ್ಲ. ಭಾರತೀಯ ಚಿತ್ರರಂಗದ ಜನಪ್ರಿಯ ಕ್ಲಾಸಿಕ್‌ಗಳಲ್ಲಿ ಒಂದಾದ ‘ಶೋಲೆ’ ನಾಲ್ಕು ದಶಕಗಳ ನಂತರವೂ ತನ್ನ ಹೊಳಪನ್ನು ಕಳೆದುಕೊಂಡಿಲ್ಲ ಎನ್ನುವುದೇ ಅದರ ಮಹತ್ವವನ್ನು ಹೇಳುವಂತಿದೆ.

(ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಥಾ ಲೇಖಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT