ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಮಠಗಳಿಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮಠಗಳ ಬಗೆಗಿನ ತಮ್ಮ ವ್ಯಾಮೋಹವನ್ನು ವ್ಯಕ್ತಪಡಿಸುವ ಮೂಲಕ ಅವರು ಸರ್ಕಾರಿ ಆಡಳಿತ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಹೊರಟಂತಿದೆ. ಜನರಿಗೆ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಯಾವುದೇ ಒಂದು ನಾಗರಿಕ ಸರ್ಕಾರದ ಪ್ರಾಥಮಿಕ ಕರ್ತವ್ಯ. ಆ ಕರ್ತವ್ಯದಲ್ಲಿ ಸರ್ಕಾರ ವಿಮುಖವಾಗುತ್ತಿರುವುದು ವಿಪರ್ಯಾಸ.

ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಸ್ಥಿತಿಯಲ್ಲಿರುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಭ್ರಷ್ಟಾಚಾರ, ಕರ್ತವ್ಯ ನಿರ್ವಹಣೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಆಲಸ್ಯ, ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಆದರೆ ಈ ಲೋಪಗಳನ್ನೆಲ್ಲ ಸರಿಪಡಿಸಬೇಕಾದುದು ಸರ್ಕಾರದ ಕರ್ತವ್ಯ. ಆರೋಗ್ಯ ಇಲಾಖೆ ದೊಡ್ಡದು. ಅದನ್ನು ನೋಡಿಕೊಳ್ಳಲೆಂದು ಅದಕ್ಕಾಗಿ ಒಬ್ಬ ಸಂಪುಟ ದರ್ಜೆಯ ಮಂತ್ರಿ ಎಲ್ಲ ಪಕ್ಷಗಳ ಆಡಳಿತದಲ್ಲೂ ಇರುವ ವ್ಯವಸ್ಥೆ. ಜೊತೆಗೆ ಇಲಾಖೆಯಲ್ಲಿ ಉನ್ನತಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಇರುತ್ತಾರೆ. ಇಷ್ಟೆಲ್ಲ ಇದ್ದೂ, ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ಸೇವೆ ಸಿಗುತ್ತಿಲ್ಲ ಎಂದರೆ ಅದು ಆಡಳಿತ ವ್ಯವಸ್ಥೆಯಲ್ಲಿನ ದೋಷವಷ್ಟೆ. ಮಂತ್ರಿಯಾದವರು ಈ ದೋಷವನ್ನು ನಿವಾರಿಸಲು ಕಾಲಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಹದಗೆಟ್ಟ ಆಸ್ಪತ್ರೆಗಳ ವ್ಯವಸ್ಥೆಯನ್ನು ಸರಿಪಡಿಸಬೇಕು.

ಇಷ್ಟಾಗಿಯೂ ಸರ್ಕಾರಿ ಆಸ್ಪತ್ರೆಗಳು ತೀರಾ ಹದಗೆಟ್ಟಿದ್ದರೆ, ಅದಕ್ಕೆ ಸಂಬಂಧಿಸಿದ ಮಂತ್ರಿ ಮತ್ತು ಅಧಿಕಾರಿಗಳನ್ನು ಹೊಣೆ ಮಾಡಬೇಕು. ಆರೋಗ್ಯ ಸೇವೆಯ ಬಗೆಗೆ ಮುಖ್ಯಮಂತ್ರಿ ಅವರಿಗೆ ನಿಜವಾದ ಕಾಳಜಿ ಇದ್ದರೆ, ಆಸ್ಪತ್ರೆಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮ ಆಡಳಿತದಲ್ಲಿನ ಲೋಪಗಳನ್ನು ಸರಿಪಡಿಸುವ ಬದಲಿಗೆ ಆ ವ್ಯವಸ್ಥೆಯನ್ನೇ ಆರೋಗ್ಯ ಸೇವೆಯಲ್ಲಿ ಅನುಭವವೇ ಇಲ್ಲದ ಮಠ ಮಂದಿರಗಳಿಗೆ ವಹಿಸುವುದು ಹೊಣೆಗೇಡಿತನ. ಈ ಚಿಂತನೆ ನಿಜಕ್ಕೂ ವಿವೇಚನೆಯಿಂದ ಕೂಡಿದೆ ಎನ್ನಲಾಗದು. ಕೆಲವು ಮಠಗಳು ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಿರ್ವಹಿಸುತ್ತಿರಬಹುದು.

ಒಂದೆರಡು ಮಠಗಳು ಹೈಟೆಕ್ ಗುಣಮಟ್ಟದ ಆಸ್ಪತ್ರೆಗಳನ್ನು ನಡೆಸುತ್ತಿರುವುದು ನಿಜ. ಅಂತಹ ಕಡೆ ಜನಸೇವೆಗಿಂತ ಹಣ ಸುಲಿಯುವುದೇ ಮುಖ್ಯ ಗುರಿಯಾಗಿರುವುದು ಗುಟ್ಟಿನ ವಿಷಯವೇನಲ್ಲ. ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಎನ್ನುವ ಅರ್ಥವೇ ಕಳೆದುಹೋಗಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ನಿಜವಾದ ಬದ್ಧತೆ ಮತ್ತು ಅನುಭವ, ಮಠಗಳಿಗಿಂತ ಕ್ರೈಸ್ತ ಮಿಷನರಿಗಳಿಗೆ ಇರುವ ವಾಸ್ತವವನ್ನು ತಳ್ಳಿಹಾಕಲಾಗದು.

ಮಠಗಳಿಗೆ ಈಗಾಗಲೇ ಜನರ ತೆರಿಗೆ ಹಣದ ರುಚಿ ತೋರಿಸಿ ಅವುಗಳನ್ನು ಬಲಗೊಳಿಸಲು ಹೊರಟಿರುವ ಮುಖ್ಯಮಂತ್ರಿ ಅವರು, ಜನತಂತ್ರ ವ್ಯವಸ್ಥೆಯ ಸರ್ಕಾರಿ ಯಂತ್ರವನ್ನು ದುರ್ಬಲಗೊಳಿಸಲು ಹೋಗಬಾರದು. ಆರೋಗ್ಯ ಇಲಾಖೆಗೆ ಬೇಕಾದ ಕಾಯಕಲ್ಪ ಮಾಡಲು ಗಂಭೀರವಾಗಿ ಚಿಂತಿಸಬೇಕಿದೆ. ಆ ಮೂಲಕ ಜನರು ಆಯ್ಕೆ ಮಾಡಿದ ಸರ್ಕಾರ ಜನಪರವಾಗಿ, ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.