ಗುರುವಾರ , ಮೇ 19, 2022
20 °C

ಅಪಘಾತ- ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಲಹಂಕದ ಕಟ್ಟಿಗೇನಹಳ್ಳಿ ಬಳಿಯ ರೇವಾ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾನುವಾರ ರಾತ್ರಿ ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.

ಕಾಲೇಜಿನ ಪ್ರಥಮ ಬಿಇ ವಿದ್ಯಾರ್ಥಿ ರಾಮನಾರಾಯಣ ಕಶ್ಯಪ್ (19) ಮೃತಪಟ್ಟವರು. ಇವರು ಕೋಲಾರ ಜಿಲ್ಲೆ ಚಿಂತಾಮಣಿಯ ಅಮರನಾರಾಯಣ ದೇವಾಲಯದ ಅರ್ಚಕ ಕೃಷ್ಣಮಾಚಾರಿ ಎಂಬುವರ ಮಗ. ಭಾನುವಾರ ಮಧ್ಯರಾತ್ರಿ ಕಾಲೇಜಿನ ಆವರಣದಲ್ಲಿ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿತ್ತು. ಕಾಮಗಾರಿಗಾಗಿ ಬಂದಿದ್ದ ಕಾಂಕ್ರೀಟ್ ಮಿಕ್ಸರ್ ಹಿಮ್ಮುಖವಾಗಿ ಬರುತ್ತಿದ್ದ (ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ) ಸಂದರ್ಭದಲ್ಲಿ ರಾಮನಾರಾಯಣ ಕಶ್ಯಪ್ ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಮಾತು ತಂದ ಕುತ್ತು : `ಘಟನೆಯ ಸಂದರ್ಭದಲ್ಲಿ ರಾಮನಾರಾಯಣ ಅವರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದೇ ಅವರ ಜೀವಕ್ಕೆ ಮುಳುವಾಗಿದೆ. ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲೇ ವಾಸವಿದ್ದ ಅವರು ಮಧ್ಯರಾತ್ರಿ ಒಂದು ಗಂಟೆಯ ಸಮಯದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅವರಿಗೆ ಕಾಂಕ್ರೀಟ್ ಮಿಕ್ಸರ್ ವಾಹನ ಹತ್ತಿರ ಬಂದಿರುವುದೂ ಗೊತ್ತಾಗಿಲ್ಲ~ ಎಂದು ಪೊಲೀಸರು ಹೇಳಿದ್ದಾರೆ.

ಕಾಂಕ್ರೀಟ್ ಮಿಕ್ಸರ್ ವಾಹನ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದ್ದಾರೆ.

ಪಾನಮತ್ತನಾಗಿ ವಾಹನ ಚಾಲನೆ : ಬಂಧನ

ಪೊಲೀಸ್ ಸಿಬ್ಬಂದಿಯೊಬ್ಬರ ಮಗ ಪಾನಮತ್ತನಾಗಿ ಕಾರು ಚಾಲನೆ ಮಾಡಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿ ಮಾಡಿರುವ ಘಟನೆ ಮಲ್ಲೇಶ್ವರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕಾರು ಚಾಲನೆ ಮಾಡುತ್ತಿದ್ದ ನರಸಿಂಹಮೂರ್ತಿ (29) ಎಂಬುವರನ್ನು ಬಂಧಿಸಿ, ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

`ಮಾರತ್‌ಹಳ್ಳಿಯ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿರುವ ನರಸಿಂಹಮೂರ್ತಿ ಭಾನುವಾರ ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಮಿಲ್ಕ್ ಕಾಲೋನಿಯ ಏಳನೇ ಮುಖ್ಯರಸ್ತೆಯಲ್ಲಿ ರಾಜಾಜಿನಗರದ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಅವರು ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ.

`ಘಟನೆಯಲ್ಲಿ ಒಂದು ಕಾರು ಹಾಗೂ ಒಂದು ಆಟೊಗೆ ಹಾನಿಯಾಗಿದೆ. ಹಾನಿಯಾದ ಕಾರಿನ ಮಾಲೀಕರು ದೂರು ದಾಖಲಿಸಿದ್ದಾರೆ. ಕಾರು ಚಾಲನೆ ವೇಳೆ ನರಸಿಂಹಮೂರ್ತಿ ಮದ್ಯಪಾನ ಮಾಡಿದ್ದು ಪರೀಕ್ಷೆಯಿಂದ ಸಾಬೀತಾಗಿದೆ~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರ ಅಂಗರಕ್ಷಕ ಕೆಂಪೇಗೌಡ ಎಂಬುವರ ಮಗ ಎಂದು ತಿಳಿದುಬಂದಿದೆ.

ಮೂವರ ಬಂಧನ

ನಕಲಿ ಆಯುರ್ವೇದ ಔಷಧಗಳ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಗರದ ಯಶವಂತಪುರ ನಿವಾಸಿಗಳಾದ ಶಿವಾನಂದ (35), ಸ್ವಾಮಿ (43) ಮತ್ತು ಲಕ್ಷ್ಮೀ (65) ಬಂಧಿತರು.

ಆರೋಪಿಗಳು ಹೆಸರಾಂತ ಕಂಪೆನಿಗಳ ಆಯುರ್ವೇದ ಔಷಧಗಳನ್ನು ನಕಲು ಮಾಡಿ ಅಶೋಕನಗರದ ಪುಲಿಯಾರ್ ದೇವಾಲಯ ರಸ್ತೆಯ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಹೆಸರಾಂತ ಕಂಪೆನಿಗಳ ಆಯುರ್ವೇದ ಔಷಧಗಳು, ಒಂದು ಎಲೆಕ್ಟ್ರಾನಿಕ್ ತೂಕದ ಸಾಧನ, ಮೂರು ಮೊಬೈಲ್‌ಗಳು, ಒಂದು ಹೋಂಡಾ ಆಕ್ಟೀವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಯುರ್ವೇದ ಔಷಧಗಳ ಬಗ್ಗೆ ಅಧಿಕೃತವಾಗಿ ಯಾವುದೇ ವಿದ್ಯಾಭ್ಯಾಸ ಮಾಡದೇ ತಾವು ಆಯುರ್ವೇದ ವೈದ್ಯರೆಂದು ನಂಬಿಸಿ ವಿವಿಧ ರೋಗಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.