ಸೋಮವಾರ, ಜನವರಿ 20, 2020
27 °C

ಅಪಘಾತ: ಬೈಕ್ ಸವಾರ ಸೇರಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮೆಜೆಸ್ಟಿಕ್ ಮತ್ತು ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಬೈಕ್ ಸವಾರ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮೆಜೆಸ್ಟಿಕ್‌ನಲ್ಲಿ ಬೆಳಗಿನ ಜಾವ ನಡೆದಿದೆ. ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮೌನೇಶ್ (24) ಮೃತಪಟ್ಟವರು.ಡಿ.ಇಡಿ ಓದಿದ್ದ ಅವರು ಕೆಲಸ ಹುಡುಕಿಕೊಂಡು ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಅವರು ಚಂದಾಪುರದಲ್ಲಿರುವ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದರು. ನಗರದಲ್ಲೇ ನೆಲೆಸಿರುವ ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಿದ್ದ ಮೌನೇಶ್ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮೆಜೆಸ್ಟಿಕ್‌ಗೆ ಬಂದಿದ್ದಾರೆ.ಈ ವೇಳೆ ಪಾನಮತ್ತರಾಗಿದ್ದ ಅವರು ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಬಸ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಚಾಲಕನ ಗುರುತು ಪತ್ತೆಯಾಗಿಲ್ಲ~ ಎಂದು ಉಪ್ಪಾರಪೇಟೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂಜೀವ್‌ಕುಮಾರ್ ಜಂಬು ಮಹಾಜನ್ `ಪ್ರಜಾವಾಣಿ~ಗೆ ತಿಳಿಸಿದರು. ಪ್ರಕರಣ ದಾಖಲಾಗಿದೆ.ಮತ್ತೊಂದು ಘಟನೆ: ಉತ್ತರಹಳ್ಳಿ ಮುಖ್ಯರಸ್ತೆ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.ಕೆಂಗೇರಿ ರಸ್ತೆ ಸಮೀಪದ ಮೈಲಸಂದ್ರ ನಿವಾಸಿ ನಾಗರಾಜ್ (43) ಮೃತಪಟ್ಟವರು. ಔಷಧ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಅವರು, ಮಗಳು ಮೇಘನಾಳನ್ನು ಶಾಲೆಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ನಾಗರಾಜ್ ಮತ್ತು ಬದರಿನಾಥ್ ಎಂಬುವರ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ನಾಗರಾಜ್ ಅವರಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೇಘನಾ ಮತ್ತು ಬದರಿನಾಥ್ ಸಹ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರಸ್ವಾಮಿಲೇಔಟ್ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)