ಶುಕ್ರವಾರ, ಏಪ್ರಿಲ್ 16, 2021
31 °C

ಅಭಿವೃದ್ಧಿ ಕಾಣದ ರೈಲ್ವೆ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ಅನುದಾನ ಸಿಗದ ಕಾರಣ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿದ ಹಿನ್ನೆಲೆಯಲ್ಲಿ ನಿರಾಶರಾಗಿರುವ ನಗರದ ಜನರು ಮುಂದಿನ ದಿನಗಳಲ್ಲಿಯಾದರೂ ಭಾರಿ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಚಿಕ್ಕಬಳ್ಳಾಪುರ ರೈಲು ನಿಲ್ದಾಣ ಸ್ಥಳಾಂತರಗೊಳ್ಳುವುದೇ ಇಲ್ಲವೇ ಎಂಬ ವಿಷಯ ಇನ್ನೂ ಸ್ಪಷ್ಟವಾಗಿಲ್ಲ.

 

ನಿಲ್ದಾಣದ ಮೇಲ್ದರ್ಜೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಮುಂದಿನ ರೂಪುರೇಷೆ  ಬೆಳಕಿಗೆ ಬರುತ್ತಿಲ್ಲ. ನಿಲ್ದಾಣ ಸ್ಥಳಾಂತರಗೊಳ್ಳಬೇಕೆ ಅಥವಾ ಬೇಡವೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಮುನಿಯಪ್ಪ ಅವರು ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ನೀಡಿದ ಸೂಚನೆ ಕೂಡ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಈ ಎಲ್ಲದರ ಪರಿಣಾಮ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಆವರಣ ಅಳಿದುಳಿದ ಅವಶೇಷಗಳ ತಾಣ ಎಂಬಂತೆ ಕಾಣಸಿಗುತ್ತದೆ. ಮೇಲ್ದರ್ಜೆ ಕಾಮಗಾರಿಗಾಗಿ ಬಳಸಬೇಕಿದ್ದ ಅವಶ್ಯಕ ವಸ್ತುಗಳು ಅಲ್ಲಲ್ಲಿಯೇ ಚದುರಿಹೋಗಿವೆ. ರೈಲುಹಳಿಗಳ ಕೆಳಗೆ ಹಾಕಬೇಕಿದ್ದ ಕಲ್ಲುಗಳ ರಾಶಿ ಹಳಿಯ ಬದಿಯಲ್ಲಿ ಬಿದ್ದಿವೆ. ಸಿಮೆಂಟಿನ ವಸ್ತುಗಳು ಮೂಲೆ ಸೇರಿಕೊಂಡಿವೆ. ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಗೇಟಿನ ಬಳಿ ಭಾರಿ ಉತ್ಸಾಹದಿಂದ ಕೈಗೊಳ್ಳಲಾದ ಅಂಡರ್‌ಪಾಸ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗುವುದೇ ಅಥವಾ ಸ್ಥಳಾಂತರಗೊಳ್ಳುವುದೇ ಎಂಬ ವಿಷಯ ಸ್ಪಷ್ಟವಾಗುವವರೆಗೆ ಅವಶೇಷ ತೆರವುಗೊಳಿಸುವಂತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಕೆ.ಎಚ್.ಮುನಿಯಪ್ಪ ಅವರು ನಿಲ್ದಾಣ ಸ್ಥಳಾಂತರ ವಿಷಯವೇನಾದರೂ ಆಗಲಿ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದರು. ಆದರೆ, ರೈಲ್ವೆ ಬಜೆಟ್ ಮಂಡನೆಯಾದ ದಿನದಿಂದ ಕೋಲಾರಕ್ಕೆ ಭೇಟಿ ನೀಡಿದರೂ ಚಿಕ್ಕಬಳ್ಳಾಪುರದತ್ತ ಮುಖ ಮಾಡಲಿಲ್ಲ.ಕ್ಷೇತ್ರದ ಸಂಸದರಾಗಿ ಕೋಲಾರ ಜನರಿಗೆ ನೂತನ ರೈಲ್ವೆ ಯೋಜನೆಗಳ ಮೂಲಕ ಸಂತಸಪಡಿಸಿದರು-ಅವರಿಂದ ಸನ್ಮಾನ ಕೂಡ ಸ್ವೀಕರಿಸಿದರು. ಆದರೆ ರೈಲ್ವೆ ಸಚಿವರಾಗಿ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಗೆ ನ್ಯಾಯ ಒದಗಿಸಲಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಏನೂ ಸಿಗದಿದ್ದರೂ ಕ್ಷೇತ್ರದ ಸಂಸದರಾದ ವೀರಪ್ಪ ಮೊಯಿಲಿ ಅವರು ರೈಲ್ವೆ ಬಜೆಟ್ ಶ್ಲಾಘಿಸಿದರು. ಇಂಥ ಪರಿಸ್ಥಿತಿಯಲ್ಲಿ ಯಾರ ಬಳಿ ನ್ಯಾಯ ಕೇಳಬೇಕು? ರೈಲು ನಿಲ್ದಾಣ ಸಮಸ್ಯೆಗಳಿಗೆ ಪರಿಹಾರ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.ಬೃಹತ್ ರೈಲು ಜಂಕ್ಷನ್ ಮಾಡುವ ಮತ್ತು ಇನ್ನಿತರ ಸೌಕರ್ಯ ಕಲ್ಪಿಸುವ ಉದ್ದೇಶವಿದ್ದರೆ, ಊರಿನ ಹೊರವಲಯದ ಖಾಲಿ ಪ್ರದೇಶ ಬಳಸಿಕೊಳ್ಳಬಹುದು. ಆದರೆ ನಿಲ್ದಾಣವನ್ನು ಹೊರವಲಯಕ್ಕೆ ಸ್ಥಳಾಂತರಿಸಿದರೆ, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ನಗರದ ಹೃದಯ ಭಾಗದಲ್ಲಿ ನಿಲ್ದಾಣ ಉಳಿಸಿಕೊಂಡು ಜಂಕ್ಷನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಊರಿನ ಹೊರವಲಯದಲ್ಲಿ ಮಾಡಿದರೆ ಉತ್ತಮ’ ಎಂದು ರೈಲ್ವೆ ಹೋರಾಟ ಸಮಿತಿ ಮುಖಂಡ ಯಲುವಹಳ್ಳಿ ಎನ್.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ರಾಜ್ಯ ಬಜೆಟ್ ಅಧಿವೇಶನ ಮತ್ತು ಇನ್ನಿತರ ಕಾರ್ಯ ಒತ್ತಡದಿಂದ ರೈಲ್ವೆ ಸಚಿವರು ಸೂಚಿಸಿರುವ ವರದಿ ಸಿದ್ಧಪಡಿಸಲು ಆಗಿಲ್ಲ. ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಜನರ ಅಭಿಪ್ರಾಯ ಸಂಗ್ರಹಿಸಿಕೊಂಡು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ವರದಿ ಸಿದ್ಧಪಡಿಸಲಾಗುವುದು. ನಿಲ್ದಾಣದ ಸ್ಥಳಾಂತರ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಿರುವ ಕಾರಣ ವರದಿ ಸಲ್ಲಿಕೆಗೆ  ವಿಳಂಬವಾಗಿದೆ’ ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.