ಗುರುವಾರ , ಮೇ 19, 2022
24 °C

ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶ: ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  ಮಾನವನ ಅತಿರೇಕ ವರ್ತನೆಗಳಿಂದಾಗಿ ಪ್ರಕೃತಿಯಲ್ಲಿ ಅನೇಕ ಏರುಪೇರುಗಳು ಘಟಿಸುತ್ತಿವೆ. ಪರಿಸರದ ಬಗೆಗೆ ಮನುಷ್ಯನಿಗೆ ಒಲುಮೆ, ಎಚ್ಚರಿಕೆ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ಬೆಂಗಳೂರಿನ ಸಹನ ಕಲ್ಚರಲ್, ಕ್ರಿಯೇಷನ್ಸ್, ಪಬ್ಲಿಕೇಷನ್ಸ್ ಹಾಗೂ ಸ್ಮಾರ್ಟ್ ಇಂಗ್ಲಿಷ್ ಅಕಾಡೆಮಿ ಮತ್ತು ಕಂಪ್ಯೂಟರ್ ವರ್ಲ್ಡ್ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕುರಿತ ಸಾಕ್ಷ್ಯಚಿತ್ರ `ನಮ್ಮ ಭೂಮಿ' ಡಿವಿಡಿ ಬಿಡುಗಡೆ, ಸಸಿಗಳ ವಿತರಣೆ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ನಮಗಿರುವುದು ಒಂದೇ ಭೂಮಿ. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪರಿಸರದಲ್ಲಿರುವ ಜೀವಸಂಕುಲ, ಜೀವ ವೈವವಿಧ್ಯತೆಯನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆಧುನಿಕ ಜೀವನ ಭರಾಟೆ ಮತ್ತು ಅಭಿವೃದ್ಧಿ ನೆಪದಲ್ಲಿ ಪರಿಸರ ಇತ್ತೀಚಿನ ದಿನಗಳಲ್ಲಿ ನಾಶವಾಗುತ್ತಿದೆ. ಅದರ ಪ್ರತಿಫಲವನ್ನು ಪ್ರಕೃತಿ ವಿಕೋಪಗಳ ರೂಪದಲ್ಲಿ ಎದುರಿಸುವಂತಾಗಿದೆ ಎಂದು ಹೇಳಿದರು.ಎಲ್ಲವನ್ನೂ ಪ್ರೀತಿಸುವುದರ ಜೊತೆಗೆ ಸಮಾನವಾಗಿ ಕಾಣುವ ದೃಷ್ಟಿಕೋನ ಹೊಂದಬೇಕು. ಪರಿಸರ ರಕ್ಷಿಸಿದರೆ, ಪ್ರಕೃತಿಯೂ ನಮ್ಮನ್ನು ಸಲಹುತ್ತದೆ ಎಂದು ಹೇಳಿದರು. ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, `ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮಗೆ, ಪರಿಸರ ಸಂರಕ್ಷಣೆಯೇ ದೊಡ್ಡ ಸಾವಾಲು. ಪ್ರಕೃತಿ ಸಂರಕ್ಷಣೆ ಬಗ್ಗೆ ವಿದೇಶಿಯರಿಗೆ ಇರುವಷ್ಟು ಕಾಳಜಿ ನಮ್ಮಲ್ಲಿ ಕಂಡಬರುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.  ಇದೇ ಸಂದರ್ಭದಲ್ಲಿ ಬಿ.ಎನ್.ಸುರೇಶ್‌ಬಾಬು ನಿರ್ಮಾಣದ, ರಾಜು ಸೂನಗಹಳ್ಳಿ ಪರಿಕಲ್ಪನೆಯ `ನಮ್ಮ ಭೂಮಿ' ಡಿವಿಡಿ ಬಿಡುಗಡೆ ಮಾಡಲಾಯಿತು.ದಿ. ಆರ್.ಕೆ.ರೆಹಮತ್ ಉಲ್ಲಾಖಾನ್-ದಿ. ಸೈಯರ್ ಖೈರುನ್ನೀಸಾ ಸ್ಮರಣಾರ್ಥ `ಕರ್ನಾಟಕ ಪರಿಸರ ಪ್ರೇಮಿ' ಪ್ರಶಸ್ತಿಯನ್ನು ಡಾ. ಈಶ್ವರ ಎಸ್.ರಾಯುಡು ಅವರಿಗೆ ಹಾಗೂ ದಿ.ಕೆ.ಸರೋಜಮ್ಮ-ದಿ. ಬಿ.ಎಸ್.ನಾರಾಯಣ ಸ್ವಾಮಿ ಸ್ಮರಣಾರ್ಥ `ಕರ್ನಾಟಕ ಪರಿಸರ ಮಿತ್ರ' ಪ್ರಶಸ್ತಿಯನ್ನು ಕೆ.ಪದ್ಮನಾಭ ಅವರಿಗೆ ನೀಡಲಾಯಿತು. ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಸಸಿಗಳನ್ನು ವಿತರಿಸಿದರು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಂಗಲ ಎಂ. ಯೋಗೀಶ್, ಜಯದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.