ಸೋಮವಾರ, ಮೇ 17, 2021
21 °C

ಅಭ್ಯಾಸದ ಜತೆಗೆ ಶ್ರಮದಾನಕ್ಕೂ ಸೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ಪುಸ್ತಕ ಹಾಗೂ ಪೆನ್ನು ಹಿಡಿದು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಪುರಾತನ ಕಾಲದ ಕಸ್ತೂರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈಚೆಗೆ ಸ್ವಚ್ಚತೆಯ ಕೆಲಸ ನಿರ್ವಹಿಸಿದರು. ಒಬ್ಬರಿಗೊಬ್ಬರು ತಮಾಷೆ ಮಾಡುತ್ತ ಕೆಲಸದ ಅಯಾಸ ಮರೆತು ಮಧ್ಯಾಹ್ನದ ವೇಳೆಗೆ ದೇವಾಲಯದ ಸುತ್ತಮುತ್ತ ಬೆಳೆದು ನಿಂತಿದ್ದ ಬೃಹತ್ ಗಿಡಗಳನ್ನು ತೆರವು ಮಾಡಿ ನೋಡುಗರು ಅಶ್ಚರ್ಯದಿಂದ ಮೂಗಿನ ಮೇಲೆ ಬೆರಳು ಇರಿಸುವಂತೆ ಮಾಡಿದರು.ಗ್ರಾಮೀಣ ಸ್ವಚ್ಚತೆ ಹಾಗೂ ಗ್ರಾಮೀಣ ಅಭಿವೃದ್ದಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಅರಿವು ಮೂಡಿಸಲು ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಈಚೆಗೆ ಏರ್ಪಡಿಸಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕೆಲಸ ಮಧ್ಯೆ ಜ್ಞಾನವನ್ನು ಸಂಪಾದಿಸಿದರು.ಹೆಣ್ಣು ಮಕ್ಕಳು ಸಹ ಕತ್ತಿ ಹಿಡಿದು ಅನುಪಯುಕ್ತವಾದ ಬೃಹತ್ ಗಿಡಗಳನ್ನು ಕತ್ತರಿಸಿ ನಾವೇನೂ ಕಡಿಮೆ ಅಲ್ಲ ಎಂದು ಸಾಧಿಸಿ ತೋರಿಸಿದರು. ದಣಿದಿದ್ದ ವಿದ್ಯಾರ್ಥಿಗಳಿಗೆ ಸ್ಥಳೀಯರು ತಂಪು ಪಾನಿಯ, ಹಣ್ಣು ಹಾಗೂ ಕುರಕಲು ತಿಂಡಿಗಳನ್ನು ವಿತರಿಸಿದರು.ನಾಲ್ಕು ವರ್ಷದ ಹಿಂದೆ ಆರಂಭವಾಗಿರುವ ಕಾಲೇಜಿನಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ ಸೌಲಭ್ಯ ಇಲ್ಲ. ಅಲ್ಲದೆ ಪ್ರತಿ ವಿದ್ಯಾರ್ಥಿಯೂ ಕ್ರೀಡಾ, ಸಾಂಸ್ಕೃತಿಕ ಚಟು ವಟಿಕೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡ ಕಾಲೇಜೀನ ಕ್ರೀಡಾವಿಭಾಗ ಪ್ರತಿ ವಿದ್ಯಾರ್ಥಿಯೂ ಭಾಗವಹಿಸಿ ಶಾಶ್ವತವಾಗಿ ಉಳಿಯುವ ಕೆಲಸ ನಿರ್ವಹಿಸಿದರೆ, ಜೀವನದ ಉದ್ದಕ್ಕೂ ವಿದ್ಯಾರ್ಥಿ ಜೀವನದ ಸಾಧನೆ ನೆನಪಿಸಿಕೊಳ್ಳಬಹುದು. ಮುಂದಿನ ಪೀಳಿಗೆಗೂ ಶ್ರಮದಾನ ಮಹತ್ವವನ್ನು ಪರಿಚಯಿಸಬಹುದು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಉಪನ್ಯಾಸಕ ವೃಂದದವರು ಸೊಂಟದ ಮೇಲೆ ಕೈಹಿಡಿದು ನಿಲ್ಲದೆ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದ್ದು, ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜಕ್ಕೆ ಉಪಯುಕ್ತವಾದ ಸೇವೆ ಮಾಡಿದರೆ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಮುಂದಿನ ಜೀವನಕ್ಕೆ ಅಗತ್ಯವಿರುವ ಪಾಠ ಕಲಿಯಬಹುದು ಎಂದು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ನಡಸಲಾಗುತ್ತಿದೆ ಎಂದು ಉಪನ್ಯಾಸಕರು ತಿಳಿಸಿದರು.ಶ್ರಮದಾನದಿಂದ ಮನಸ್ಸಿಗೆ ಉಲ್ಲಾಸ ದೊರಕಿದೆ. ಸಮಾಜದ ಆಗು ಹೋಗುಗಳ ಬಗ್ಗೆ ಜ್ಞಾನೋದಯ ಅಯಿತು. ಪ್ರಾಚೀನ ದೇಗುಲ ಹಾಗೂ ಅವರಣ ಸ್ವಚ್ಚವಾಯಿತು ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಸಹಾಯಕ ಪ್ರಾದ್ಯಪಾಕರಾದ            ಎಸ್.ನಾರಾಯಣ್, ಡಾ.ದೇವರಯ್ಯ, ಅಧೀಕ್ಷಕ ಸತ್ಯಮೂರ್ತಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.