ಸೋಮವಾರ, ಮೇ 23, 2022
21 °C

ಅಮೆರಿಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚೀನಾ ಲಗ್ಗೆ

ಜೂಲಿ ಕ್ರೆಸ್‌ವೆಲ್,ದಿ ನ್ಯೂಯಾರ್ಕ್ ಟೈಮ್ಸ Updated:

ಅಕ್ಷರ ಗಾತ್ರ : | |

ಅಮೆರಿಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚೀನಾ ಲಗ್ಗೆ

ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟದ ಇತಿಹಾಸವನ್ನೇ ಹೊಂದಿರುವ ಕಮ್ಯುನಿಸ್ಟ್ ಚೀನಾ ಈಗ ವಿಶ್ವದ ದೊಡ್ಡಣ್ಣನ ಅಂಗಳದಲ್ಲಿ ಸ್ಥಿರಾಸ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಅಲ್ಲಿನ ಭಾರಿ ಕುಳಗಳು ಹಣದ ಥೈಲಿ ಹಿಡಿದು ಅಮೆರಿಕದಲ್ಲಿನ ದೊಡ್ಡ ದೊಡ್ಡ ಕಟ್ಟಡಗಳ ಮುಂದೆ ಸಾಲುಗಟ್ಟಿದ್ದಾರೆ.ಈಗ ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತು ಅದಕ್ಕೆ ಸಂವಾದಿ ವಲಯದಲ್ಲಿ ಹೂಡಿಕೆ ಮಾಡುತ್ತಿರುವ ವಿದೇಶಿಯರ ಪೈಕಿ ಚೀನಾ ಮತ್ತು ಹಾಂಕಾಂಗ್‌ನವರು ಎರಡನೇ ಸ್ಥಾನದಲ್ಲಿದ್ದಾರೆ.ಗಾಜು ಮತ್ತು ಲೋಹದ ವಿನ್ಯಾಸದಿಂದ ಮಿರಮಿರನೆ ಮಿಂಚುವ ಭವ್ಯ ಕಟ್ಟಡಗಳು ಮತ್ತು ಐಷಾರಾಮಿ ಹೋಟೆಲ್‌ಗಳ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಹಾಂಕಾಂಗ್ ಹೂಡಿಕೆದಾರರು, ಮನೆ, ಭೂಮಿ ಖರೀದಿಯಲ್ಲೂ ಹಿಂದೆ ಬಿದ್ದಿಲ್ಲ.ಅಮೆರಿಕದ ಮೂಲ ನಿವಾಸಿಗಳನ್ನು ಮೂಲೆಗುಂಪು ಮಾಡಿದ ವಲಸಿಗರು ಮೊದಲಿನಿಂದಲೂ ಇಲ್ಲಿ ಪ್ರಾಬಲ್ಯ ಸ್ಥಾಪಿಸಲು ಪೈಪೋಟಿ ನಡೆಸಿದ್ದಾರೆ. ಅದರಲ್ಲೂ ಏಷ್ಯಾದ ಹೂಡಿಕೆದಾರರ ಆಧಿಪತ್ಯ ದೊಡ್ಡ ಮಟ್ಟದಲ್ಲೇ ಇದೆ. ಮೊದಲು ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಧೈರ್ಯದಿಂದ ಮುನ್ನುಗ್ಗಿದ ಏಷ್ಯನ್ನರೆಂದರೆ ಜಪಾನೀಯರು.ನ್ಯೂಯಾರ್ಕ್‌ನ ರಾಕ್‌ಫೆಲ್ಲರ್‌ನಿಂದ ಹಿಡಿದು ಕ್ಯಾಲಿಫೋರ್ನಿಯಾದ ಪಿಬ್ಬಲ್ ಬೀಚ್ ತನಕ ಜಪಾನೀಯರು ಆಸ್ತಿ ಮಾಡಿದರು. ಅವರ ಆಸ್ತಿ ಬೇಟೆ ಯಾವ ಪರಿ ಇತ್ತೆಂದರೆ `ಇಡೀ ಅಮೆರಿಕ, ಜಪಾನ್ ದೇಶದವರಿಗೆ ಬಿಕರಿ ಆಗಿಬಿಡುತ್ತದೆ' ಎಂಬ ಮಾತುಗಳು 1980ರ ದಶಕದಲ್ಲಿ ವ್ಯಾಪಕವಾಗಿದ್ದವು. ಕೆಲವು ಜಪಾನಿ `ಬುದ್ಧಿವಂತರು' ಅಮೆರಿಕದಲ್ಲಿ ಆಸ್ತಿ ಮಾಡಲೇಬೇಕೆಂಬ ಹಟಕ್ಕೆ ಬಿದ್ದವರಂತೆ ಹಣವನ್ನು ನೀರಿನಂತೆ ಸುರಿಯತೊಡಗಿದರು. ಈ ಹಪಾಹಪಿತನವೇ ಅವರಿಗೆ ಮುಳುವಾಯಿತೇನೋ ಎಂಬಂತೆ ಅವರು ಏರಿದ ವೇಗದಲ್ಲೇ ಕೆಳಗಿಳಿಯತೊಡಗಿದರು. ಜೊತೆಗೆ ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದ ಜಪಾನ್‌ನ ರಿಯಲ್ ಎಸ್ಟೇಟ್ ಉದ್ಯಮಕ್ಕೆ 80ರ ದಶಕದಲ್ಲಿ ಗರ ಬಡಿಯಿತು. ಇದರ ಪರಿಣಾಮ ಅಮೆರಿಕದ ರಿಯಲ್ ಎಸ್ಟೇಟ್ ಮೇಲೂ ಉಂಟಾಯಿತು. ಜಪಾನಿ ಹೂಡಿಕೆದಾರರು ಹಿಂದೆ ಸರಿಯಲು ಆರಂಭಿಸಿದರು.ಕಾಲು ಶತಮಾನದ ನಂತರ ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮತ್ತೆ ಏಷ್ಯನ್ನರು ಮುಂಚೂಣಿಗೆ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಆಸ್ತಿ ಖರೀದಿಗೆ ಇಳಿದ ಚೀನೀಯರು, ಈಗ ನೂರಾರು ಕೋಟಿ ಡಾಲರ್ ಸುರಿದು ದೊಡ್ಡ ಮಟ್ಟದಲ್ಲೇ ಆಸ್ತಿ ಕೊಳ್ಳುತ್ತಿದ್ದಾರೆ. ಚೀನಿ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಲಾಗುತ್ತಿದೆ; ಅಮೆರಿಕದ ರಿಯಲ್ ಎಸ್ಟೇಟ್ ಸಂಭ್ರಮಿಸುತ್ತಿದೆ.ಆದರೆ, ಬೀಗುತ್ತಿರುವ ಚೀನಿ ಹೂಡಿಕೆದಾರರಿಗೆ ಆ ರಾಷ್ಟ್ರದಿಂದಲೇ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಚೀನಾದ ಹಣಕಾಸು ಸ್ಥಿತಿ ಬಿಗಡಾಯಿಸುತ್ತಿರುವ ಸುಳಿವು ವ್ಯಕ್ತವಾಗತೊಡಗಿದೆ. ಹಿನ್ನಡೆಯ ಹಾದಿ ಹಿಡಿದಿರುವ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಬೀಜಿಂಗ್ ಕ್ರಮ ಕೈಗೊಂಡರೆ ಮಾತ್ರ ಅಮೆರಿಕದ ರಿಯಲ್ ಎಸ್ಟೇಟ್ ಕೂಡ ಉತ್ತಮ ದಿನಗಳನ್ನು ಕಾಣುತ್ತದೆ. ಆದರೆ, ಆರ್ಥಿಕ ವಿಶ್ಲೇಷಕರು ಚೀನಾದ ಹಣಕಾಸು ಸ್ಥಿತಿ ಅಪಾಯದತ್ತಲೇ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಇಷ್ಟಾದರೂ ಚೀನಾ ಸರ್ಕಾರ ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರನ್ನು ಉತ್ತೇಜಿಸುತ್ತಲೇ ಇದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮೂಲಕ ಹಣಕಾಸು ನೆರವನ್ನೂ ಒದಗಿಸುತ್ತಿದೆ. ಅಮೆರಿಕದ ವಾಣಿಜ್ಯ ವಲಯದಲ್ಲಿ ದೊಡ್ಡ ಮಟ್ಟದ ಹಣದ ವಹಿವಾಟು ನಡೆಸುತ್ತಿದ್ದ ಯೂರೋಪ್‌ನ ಬ್ಯಾಂಕ್‌ಗಳನ್ನೂ ಚೀನಾ ಬ್ಯಾಂಕ್ ಹಿಂದಿಕ್ಕಿದೆ.ಚೀನಾ ತನ್ನ ರಾಷ್ಟ್ರದಿಂದ ಅಮೆರಿಕಕ್ಕೆ ಹರಿದು ಬರುತ್ತಿರುವ ಹೂಡಿಕೆಯ ಹರಿವನ್ನು ರಿಯಲ್ ಎಸ್ಟೇಟ್ ಮತ್ತು ಅದಕ್ಕೆ ಸಂವಾದಿಯಾಗಿರುವ ಕ್ಷೇತ್ರದೆಡೆಗೆ ತಿರುಗಿಸಲು ತವಕಿಸುತ್ತಿದೆ. ಇದಕ್ಕಾಗಿ ಚೀನಾ ಸರ್ಕಾರವು ಒಂದು ಸಾವಿರ ಕೋಟಿ ಡಾಲರ್‌ನಷ್ಟು ಭದ್ರತಾ ಹಣವನ್ನು ಅಮೆರಿಕದ ಖಜಾನೆಯಲ್ಲಿ ಇರಿಸಿದೆ.ಈ ಮಧ್ಯೆ, ಕೆಲವು ವಾರಗಳಿಂದ ನ್ಯೂಯಾರ್ಕ್‌ನಲ್ಲಿ ದೊಡ್ಡ ಮಟ್ಟದ ಆಸ್ತಿ ಖರೀದಿ ವ್ಯವಹಾರಗಳು ಕುದುರುತ್ತಿವೆ. ನ್ಯೂಯಾರ್ಕ್‌ನ ಹೃದಯ ಭಾಗದಲ್ಲಿರುವ ಜನರಲ್ ಮೋಟಾರ್ಸ್‌ ಕಟ್ಟಡ ಸಮುಚ್ಚಯದಲ್ಲಿ ಆಸ್ತಿ ಖರೀದಿಸಲು ಚೀನಾದ ಅತಿ ದೊಡ್ಡ ವಾಣಿಜ್ಯ ರಿಯಲ್ ಎಸ್ಟೇಟ್ ಉದ್ದಿಮೆಯ ಮುಖ್ಯ ಕಾರ್ಯನಿರ್ವಾಹಕರಾದ ಜಹಾಂಗ್ ಕ್ಸಿನ್ ಅವರು, ಬ್ರೆಜಿಲ್‌ನ ಆಗರ್ಭ ಶ್ರೀಮಂತ ಸಫ್ರಾ ಕುಟುಂಬದವರೊಂದಿಗೆ ಕೈಜೋಡಿಸಿದ್ದಾರೆ.`ಚೀನೀಯರು ಬರೀ ದೊಡ್ಡ ಮಟ್ಟದ ಆಸ್ತಿಯನ್ನಷ್ಟೆ ಖರೀದಿಸುತ್ತಿಲ್ಲ. ಸಣ್ಣಮಟ್ಟದ ಮತ್ತು ಸುಸ್ಥಿರವಾದ ವಾಣಿಜ್ಯ ಆಸ್ತಿಗಳನ್ನೂ ನಿಯಮಿತವಾಗಿ ಖರೀದಿಸುತ್ತಿದ್ದಾರೆ' ಎಂದು ಜಹಾಂಗ್ ಹೇಳಿದ್ದಾರೆ. ವಿಶ್ವದ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಜಹಾಂಗ್, 2011ರಲ್ಲೇ ಮ್ಯಾನ್‌ಹಟನ್‌ನಲ್ಲಿರುವ `ಪಾರ್ಕ್ ಅವಿನ್ಯೂ ಪ್ಲಾಜಾ'ದಲ್ಲಿ ಶೇ 49ರಷ್ಟು ಹೂಡಿಕೆ ಮಾಡಿದ್ದಾರೆ (60 ಕೋಟಿ ಡಾಲರ್).ಇದೇ ವರ್ಷ ಚೀನಾದ ವಿಮಾನಯಾನ ಕಂಪೆನಿ `ಎಚ್‌ಎನ್‌ಎ' ಸಮೂಹವು ತನ್ನ ಕಚೇರಿಗಾಗಿ 26.50 ಕೋಟಿ ಡಾಲರ್ ವ್ಯಯ ಮಾಡಿ ಸ್ವಂತ ಕಟ್ಟಡ ಖರೀದಿಸಿದೆ. ಜೊತೆಗೆ ನ್ಯೂಯಾರ್ಕ್‌ನ ಪ್ರಖ್ಯಾತ ಟೈಮ್ಸ ಚೌಕದಲ್ಲಿ ಐಷಾರಾಮಿ `ಕಾಸಾ ಹೋಟೆಲ್' ಅನ್ನೂ ಕೊಂಡಿದೆ. ಚೀನಾದ ದೊಡ್ಡ ನಿರ್ಮಾಣ ಕಂಪೆನಿಯಾದ `ಡಾಲಿಯಾನ್ ವಾಂಡ' ಸಮೂಹವು ಮ್ಯಾನ್‌ಹಟನ್‌ನಲ್ಲಿ ದೊಡ್ಡದಾದ ಐಷಾರಾಮಿ ಹೋಟೆಲ್ ತೆರೆಯುವುದಾಗಿ ಹೇಳಿದೆ.ಕ್ಯಾಲಿಫೋರ್ನಿಯಾದಲ್ಲೂ ಚೀನಿ ಹೂಡಿಕೆದಾರರು ಸಾಕಷ್ಟು ಹೋಟೆಲ್‌ಗಳನ್ನು ಖರೀದಿಸಿದ್ದಾರೆ. ಯೂನಿವರ್ಸಲ್ ನಗರದಲ್ಲಿ `ಶೆರ್ಟಾನ್ ಹೋಟೆಲ್', ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣ ಸಮೀಪವಿರುವ `ಕ್ರೌನ್ ಪ್ಲಾಜಾ', ಓಂಟರಿಯೊದಲ್ಲಿನ `ಹಿಲ್ಟನ್ ಓಂಟರಿಯೊ', ಟೊಲೆಡೊದಲ್ಲಿ `ಓಹಿಯೊ ಹೋಟೆಲ್'ಗಳು ಹಾಗೂ ನ್ಯೂ ಜರ್ಸಿಯ ಮೋರಿಸ್‌ಟೌನ್‌ನಲ್ಲಿ ಕಟ್ಟಡವೊಂದನ್ನು ಖರೀದಿಸಿದ್ದಾರೆ.ಕಟ್ಟಡ, ಐಷಾರಾಮಿ ಹೋಟೆಲ್‌ಗಳ ಜೊತೆಗೆ ಮನೆಗಳ ಮೇಲೂ ಚೀನಾ, ಹಾಂಕಾಂಗ್‌ನವರು ಕಣ್ಣಿಟ್ಟಿದ್ದಾರೆ. ಈ ಮೂಲಕ ಕೆನಡಾದ ಹೂಡಿಕೆದಾರರಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಚೀನಿ ಮತ್ತು ಹಾಂಕಾಂಗ್ ಹೂಡಿಕೆದಾರರಿಂದಾಗಿ ಅಮೆರಿಕದ ರಿಯಲ್ ಎಸ್ಟೇಟ್ ವಲಯವು ವಿಶ್ವದ ಇತರೆಡೆಗಳಿಗಿಂತ ಮೂಂಚೂಣಿಯಲ್ಲಿದ್ದರೂ, ಹೂಡಿಕೆದಾರರು ನಿಶ್ಚಿತ ಆದಾಯಕ್ಕಾಗಿ ಸ್ಪರ್ಧೆ ಎದುರಿಸುತ್ತಿದ್ದಾರೆ. ಕಚೇರಿ, ಕೈಗಾರಿಕೆಗಳು, ಚಿಲ್ಲರೆ ವ್ಯಾಪಾರಿ ಮಳಿಗೆಗಳ ದರ ನೆಲಕಚ್ಚಿದೆ. ಕಚೇರಿ ಬಾಡಿಗೆ ದರವೂ ಇಳಿದಿದೆ. ಇನ್ನಿತರ ಬಾಡಿಗೆ ದರಗಳು ಸ್ಥಿರವಾಗಿವೆ. ಆದರೂ ಆರ್ಥಿಕ ಸುಧಾರಣೆಯ ಲಕ್ಷಣಗಳು ಕಂಡುಬರುತ್ತಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಯೂರೋಪ್ ರಾಷ್ಟ್ರಗಳಲ್ಲಿ ಇರುವ ಆರ್ಥಿಕ ಹಿಂಜರಿಕೆ ನಡುವೆಯೂ ಅಲ್ಲಿನ ಹೂಡಿಕೆದಾರರು, ಚೀನಿ, ಹಾಂಕಾಂಗ್ ಹೂಡಿಕೆದಾರರಿಗೆ ಸಾಕಷ್ಟು ಪೈಪೋಟಿ ನೀಡಿದ್ದಾರೆ. ಇದರಿಂದ ಮ್ಯಾನ್‌ಹಟನ್ ಪ್ರದೇಶದಲ್ಲಿನ ಮೂರು ವಾಣಿಜ್ಯ ಕಟ್ಟಡಗಳು ಈ ವರ್ಷ 100 ಕೋಟಿ ಡಾಲರ್‌ಗಳಿಗೆ ಬಿಕರಿಯಾಗಿವೆ. `ಅವರು (ಚೀನೀಯರು) ಈಗ ಆಸ್ತಿ ಖರೀದಿಸಲು ಆರಂಭಿಸಿದ್ದಾರೆ' ಎಂದು `ಜೋನ್ಸ್ ಲಾಂಗ್ ಲಾಸಲ್ಲೆ ಕ್ಯಾಪಿಟಲ್ ರಿಯಲ್ ಎಸ್ಟೇಟ್' ಕಂಪೆನಿಯ ಅಂತರರಾಷ್ಟ್ರೀಯ ನಿರ್ದೇಶಕ ಸ್ಟೀವ್ ಕೊಲಿನ್ಸ್ ಹೇಳಿದ್ದಾರೆ. ಅವರ ಕಂಪೆನಿಯು ಇತ್ತೀಚೆಗಷ್ಟೇ ಶಾಂಘೈ ಮತ್ತು ಬೀಜಿಂಗ್‌ನಲ್ಲಿ ಹೂಡಿಕೆದಾರರ ಸಮ್ಮೇಳನ ನಡೆಸಿತ್ತು. ಅಮೆರಿಕದ ಖಜಾನೆಯಲ್ಲಿ ಇರಿಸಿರುವ ಭದ್ರತಾ ಖಾತರಿ ಮೊತ್ತಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ತನ್ನ ಹೂಡಿಕೆದಾರರಿಗೆ ಚೀನಾ ರಾಜಕೀಯ ಒತ್ತಾಸೆ ನೀಡಿದೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಿ ಇಮ್ಮಡಿಯ ಹುರುಪು ನೀಡಿದೆ. ಆದ್ದರಿಂದಲೇ ಅವರು ನ್ಯೂಯಾರ್ಕ್ ಮತ್ತಿತರ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಆಸ್ತಿ ಖರೀದಿಗೆ ಇಳಿದಿದ್ದಾರೆ' ಎಂದು `ರೋಡಿಯಂ' ಸಮೂಹದ ಸಂಶೋಧನಾ ನಿರ್ದೇಶಕ ಥಿಲೊ ಹೆನ್‌ಮನ್ ಹೇಳಿದ್ದಾರೆ.

ಹೆಚ್ಚಿದ ಚೀನಾ ಬ್ಯಾಂಕಿಂಗ್

ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಚೀನಾ ದಾಂಗುಡಿ ಇರಿಸುತ್ತಿರುವ ಜೊತೆಗೆ ಆ ರಾಷ್ಟ್ರದ ಬ್ಯಾಂಕ್ ಸಹ ಅಮೆರಿಕ ನೆಲದಲ್ಲಿ ಪ್ರಬಲವಾಗುತ್ತಿದೆ. ಚೀನಾ ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕ್‌ಗಳಲ್ಲಿ ಪ್ರಮುಖವಾದ `ಚೀನಾ ಬ್ಯಾಂಕ್' ಈಗ ಅಮೆರಿಕದಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ.`ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ತೊಡಗಿಸಿರುವ ವಿದೇಶಿ ಬ್ಯಾಂಕ್‌ಗಳಲ್ಲಿ ಜರ್ಮನಿ ಬ್ಯಾಂಕ್‌ಗಳು ಕೆಲವು ವರ್ಷಗಳಿಂದ ಮುಂಚೂಣಿಯಲ್ಲಿದ್ದವು. ಆದರೆ ಈಗ ಈ ಸ್ಥಾನವನ್ನು `ಚೀನಾ ಬ್ಯಾಂಕ್' ಆಕ್ರಮಿಸಿಕೊಂಡಿದೆ' ಎಂದು ಬ್ಯಾಂಕಿಂಗ್ ಕ್ಷೇತ್ರದ ವಿಶ್ಲೇಷಕ ಕಂಪೆನಿ `ಟ್ರೆಪ್ ಎಲ್‌ಎಲ್‌ಸಿ' ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಆ್ಯಂಡರ್‌ಸನ್ ಹೇಳಿದ್ದಾರೆ.ಚೀನಾದ ನಿರ್ಮಾಣ ಸಂಸ್ಥೆಗಳೂ ಅಮೆರಿಕದಲ್ಲಿ ಪ್ರಗತಿ ಸಾಧಿಸಿವೆ. ವಾಣಿಜ್ಯ ಕಟ್ಟಡಗಳ ಕಾಮಗಾರಿಗಳು ಹೆಚ್ಚಿನ ಮಟ್ಟದಲ್ಲಿ ಚೀನಾ ಕಂಪೆನಿಗಳ ಪಾಲಾಗುತ್ತಿವೆ. ಅಲ್ಲಿಯ `ವಾಂಕೆ' ಕಂಪೆನಿಯು ಉತ್ತರ ಅಮೆರಿಕದಲ್ಲಿ ತನ್ನ ಮೊದಲ ಯೋಜನೆಯನ್ನು `ಟಿಶ್‌ಮೆನ್ ಸ್ಪೆಯರ್' ಕಂಪೆನಿ ಜೊತೆಗೆ ಕೈಗೆತ್ತಿಕೊಂಡಿದೆ. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಐಷಾರಾಮಿಯ ದೊಡ್ಡ ಕಟ್ಟಡವನ್ನು ನಿರ್ಮಿಸುತ್ತಿದೆ. ಮತ್ತೊಂದು ಕಂಪೆನಿಯು ಕ್ಯಾಲಿಫ್‌ನ ಓಕ್ಲೆಂಡ್‌ನಲ್ಲಿರುವ 65 ಎಕರೆಗಳ ಕೈಗಾರಿಕಾ ಪ್ರದೇಶದಲ್ಲಿ 3100 ಮನೆಗಳಿರುವ ಉಪನಗರವನ್ನು ನಿರ್ಮಿಸಲು 150 ಕೋಟಿ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಬ್ರೂಕ್ಲಿನ್‌ನ ವಿಲಿಯಮ್ಸಬರ್ಗ್ ನಗರಕ್ಕೂ ಲಗ್ಗೆ ಇರಿಸಿರುವ ಚೀನಿ ನಿರ್ಮಾಣಗಾರರು ಇಲ್ಲಿ 216 ಮನೆಗಳಿರುವ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಿದ್ದಾರೆ.ಚೀನಾದ ಪ್ರಮುಖ ಹಣಕಾಸು ನಿಧಿ, ಚೀನಾ ಬಂಡವಾಳ ಕಾರ್ಪೊರೇಷನ್‌ಗಳು ಅಮೆರಿಕದಲ್ಲಿ ಹಲವು ಆಸ್ತಿಗಳ ಒಡೆತನದಲ್ಲಿ ನೇರವಾಗಿ ಪಾಲು ಹೊಂದಿವೆ. ಜೊತೆಗೆ ಖಾಸಗಿ ಕಂಪೆನಿಗಳು ನಿರ್ವಹಿಸುವ ರಿಯಲ್ ಎಸ್ಟೇಟ್ ಹೂಡಿಕೆಯ ಬಂಡವಾಳದಲ್ಲೂ ನೂರಾರು ಕೋಟಿ ಡಾಲರ್‌ಗಳನ್ನು ಹೂಡಿವೆ. `ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಚೀನಾ ನೇರ ಇಲ್ಲವೇ ಪರೋಕ್ಷವಾಗಿ ಬಹುತೇಕ ಆಕ್ರಮಿಸಿಕೊಂಡಿದೆ. ಚೀನಿಯರು ನೂರಾರು ಕೋಟಿ ಡಾಲರ್‌ಗಳನ್ನು ಸದ್ದಿಲ್ಲದೆ ಹೂಡಿಕೆ ಮಾಡುತ್ತಿದ್ದಾರೆ' ಎಂದು `ರಿಯಲ್ ಕ್ಯಾಪಿಟಲ್ ಅನಾಲಿಸ್ಟಿಕ್ಸ್' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡೇನ್ ಫಾಸ್ಲೊ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.