ಶುಕ್ರವಾರ, ಮೇ 14, 2021
31 °C

ಅರಾಜಕ ನಾಡಿನಲ್ಲಿ ಅಸಹಾಯಕ ಪ್ರಜೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ರಾಜಕೀಯ ನಾಯಕರ ಹೇಳಿಕೆ, ಪ್ರತಿ ಹೇಳಿಕೆ, ಆತ್ಮವೇ ಇಲ್ಲದ ಸುಳ್ಳು ಹೇಳಿಕೆ, ಒಂದೇ ದಿನದಲ್ಲಿ ವಿರುದ್ಧ ಹೇಳಿಕೆ - ಇವೆಲ್ಲ ಮಾದ್ಯಮಗಳಲ್ಲಿ ಹರಿದಾಡಿ ಸತ್ಯವೇ `ಸುಳ್ಳು~ ಆಗಿ ವಿಚಾರವೇ ಸೋಲುತ್ತಿದೆಯೇ ಎಂದು ಗಾಬರಿಯಾಗುತ್ತಿದೆ.

 

`ಅಧಿಕಾರದ ಬಗ್ಗೆ ಆಸೆ ಇಲ್ಲ~ ಎಂದವರು ದಿನಕ್ಕೊಂದು ಔತಣ ಕೂಟ, ರ‌್ಯಾಲಿ, ರೆಸಾರ್ಟ್ ರಾಜಕಾರಣ ಮಾಡುತ್ತ ಹಪಹಪಿಸುವ ಕ್ಷಣಗಳಲ್ಲಿ ಮಾತು ಮತ್ತು ಕೃತಿ ನಡುವೆ ಅಪಾರ ಕಂದಕ ಸೃಷ್ಟಿಯಾಗುತ್ತಿದೆ. `ಕರ್ನಾಟಕ ಹಿಂದಿನ ಬಿಹಾರವಾಗುತ್ತಿದೆ~ ಎಂಬ ಅಂಕಣಕಾರರ ಮಾತು ಸತ್ಯವಾಗುತ್ತಿರುವಂತಿದೆ.ಕೆಲವು ಮಠಗಳು, ಮಠಾಧೀಶರುಗಳು ರಾಜಕಾರಣಿಗಳನ್ನು ಮಾತನಾಡಿಸಲು  ಜೈಲಿಗೂ, ಆಸ್ಪತ್ರೆಗೂ ಹೋಗಿ ಮಠಗಳ ಪಾವಿತ್ರ್ಯ ನಾಶ ಮಾಡಿದರು. ಪ್ರಗತಿಪರ ಮಠಾಧೀಶರೊಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಮೃದುವಾಗಿ ಹೊಗಳಿ (ಮಠಕ್ಕೆ ಆವರಿಸಿರುವ ಬ್ಯಾಂಕ್ ಸಾಲದ ತಗಾದೆಯಿಂದ ಹೊರಬರಲೂ ಇದ್ದಿರಬಹುದು)

 

`ಅಯ್ಯೋ ಇವರೂ ಇಷ್ಟೆಯೆ~ ಎನ್ನಿಸಿಬಿಟ್ಟರು. ಗಟ್ಟಿ ಧ್ವನಿಯಲ್ಲಿ `ಅಹಿಂದ~ ಸಿದ್ಧಾಂತ ಜಪಿಸುತ್ತಿದ್ದವರು, ಯಡ್ಡಿಯವರಿಗೆ ಪ್ರತಿ ತಿಂಗಳೂ ಸೂಟ್‌ಕೇಸ್ ಕೊಟ್ಟ ಗಣಿ ಧೂಳು ಮೆತ್ತಿಕೊಂಡಿರುವ ಶ್ರೀರಾಮುಲು ನಾಯಕತ್ವದ ಹೋರಾಟವೇ ಸರಿ ಎನ್ನುವ ಹತಾಶವಾದ ತಲುಪಿಬಿಟ್ಟರು.ನಿಡುಮಾಮಿಡಿ ಶ್ರೀಗಳು ಸುಖಾಸುಮ್ಮನೆ, ಎಚ್ಚರದಿಂದ ಹೇಳುವುದಾದರೆ ಅಗತ್ಯವೂ ಇರದ, ಭೈರಪ್ಪನಂತಹ ಬರಹಗಾರರ ಬಗ್ಗೆ ಬಾಯಿ ಬಿಚ್ಚಿ ರಾಡಿಯನ್ನೇ ಎಬ್ಬಿಸಿಬಿಟ್ಟರು. ಹೀಗೆ ಮಠ, ಮಠಾಧೀಶರು, ರಾಜಕಾರಣಿಗಳು, ಉದ್ಯಮಿಗಳು, ಬುದ್ಧಿಜೀವಿಗಳು, ಸರ್ಕಾರಿ ಅಧಿಕಾರಿಗಳು ಎಲ್ಲರೂ ತಪ್ಪು ಹೆಜ್ಜೆಗಳನ್ನಿಡುತ್ತಲೇ `ಅದು ಸರಿಯಾಗಿಯೇ ಇದೆ~ ಎನ್ನುವ ಭಂಡತನದ ಎಲ್ಲೆಯನ್ನೂ ದಾಟುತ್ತಿದ್ದಾರೆ.ಬಜೆಟ್ ಬಂದ ಕೂಡಲೇ ಬಿಸ್ಕೆಟ್ ಎಸೆಯುವಂತೆ ಮಠಗಳಿಗೆ ಅನುದಾನಿತ ಬಿಸ್ಕೆಟ್ ಎಸೆದಾಗ ಮಠಾಧೀಶರು ಬಾಯಿ ಹೊಲಿದು ಕೊಳ್ಳುವುದು ಅನಿವಾರ್ಯವೇನೋ ಅನಿಸಿಬಿಟ್ಟಿದೆ.ನಾವೀಗ `ಸರ್ಕಾರ~ವೇ ಇಲ್ಲದ ಪ್ರಜೆಗಳಾಗಿದ್ದೇವೆ. ಕಳೆದ ಬಜೆಟ್ ವೇಳೆ `ಕೃಷಿ ಬಜೆಟ್~ ಎಂಬ ಬೂಟಾಟಿಕೆ ಸಂಪೂರ್ಣ ಮೋಸದ ಮುಖವಾಡವಾಗಿದ್ದು ಅದು ಕಳಚಿ ಬಿದ್ದರೂ ಆ ಬಗ್ಗೆ ಕೇಳದ, ಪ್ರಶ್ನಿಸದ ನಾವು, ಈ ಬಾರಿ ನಾನೇ ಮಂಡಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಅವರ ಆಸೆಯ ಪ್ರಹಸನ ನೋಡಿ ತೆಪ್ಪಗಿರಬೇಕಾಯಿತು.

 

ಮೊಬೈಲ್ ಅಶ್ಲೀಲ ಚಿತ್ರ ವೀಕ್ಷಿಸಿದ ಮಂತ್ರಿಗಳ ನಿರ್ಲಜ್ಜೆಯ ಮಾತು ಕೇಳಿ ಸದನವೂ ಬೆಚ್ಚಿ ಬಿದ್ದಿದೆ. ವಕೀಲರು ಪತ್ರಕರ್ತರನ್ನು ಮನಸೋ ಇಚ್ಛೆ ಚಚ್ಚಿ ತಾವೇ ಮೂರು ವಾರ ಕೋರ್ಟ್ ಬಹಿಷ್ಕರಿಸಿದ ಕೃತ್ಯ ನಡೆದೇ ಹೋಯಿತು.ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಅವಕಾಶವಿರುವ ಗಣಿ ಧೂಳಿನ ಕೇಸನ್ನು ಹೈಕೋರ್ಟಿನ ತೀರ್ಪಿಗೆ ಅಂತಿಮ ವಿಜಯ ಎಂಬಂತೆ ನಡೆದುಕೊಂಡ ಪಕ್ಷ. ರಾಜ್ಯವನ್ನು ನಿರಾಳವಾಗಿ ಆಳುತ್ತಿದೆ! ಮಂತ್ರಿಮಂಡಲವನ್ನು ಪುನರ್‌ರಚನೆಗೆ ಕೈಹಾಕಲಾರದ ಅಸಹಾಯಕ ಸರ್ಕಾರದ ಪ್ರಜೆಗಳಾಗಿ ನಾವು ಇದ್ದೇವೆ. ಈ ತರಹೇವಾರಿ ಸಂಗತಿಗಳನ್ನು ಗಮನಿಸಿದರೆ ನಿಜವಾಗಿಯೂ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ.ರಾಜ್ಯದಲ್ಲಿ ಸರ್ಕಾರ ಇದ್ದಿದ್ದರೆ ಅದು, ಪತ್ತೆಯಾಗಿರುವ ಖೊಟ್ಟಿ ರೇಷನ್ ಕಾರ್ಡ್ ಮಾಡಿಸಿದ ಸುಮಾರು ಇಪ್ಪತ್ತೈದು ಲಕ್ಷ ಕ್ರಿಮಿನಲ್‌ಗಳಿಗೆ ದಂಡ ಹಾಕುತ್ತಿತ್ತು; ಅನಧಿಕೃತ ಅಡುಗೆ ಸಿಲಿಂಡರ್‌ಗಳನ್ನು ತತ್‌ಕ್ಷಣ ಮುಟ್ಟುಗೋಲು ಹಾಕಿಕೊಂಡು ಕಾಯುತ್ತಿರುವ ಹೊಸಕುಟುಂಬಗಳಿಗೆ ನೀಡಿರುತ್ತಿತ್ತು;ಪತ್ತೆ ಹಚ್ಚಿರುವ ಖೊಟ್ಟಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನದಾರರಿಗೆ ಕಾನೂನಿನ ಕ್ರಮ ಕೈಗೊಂಡು ಕಳೆದ ಹತ್ತು ತಿಂಗಳಿಂದ ಕಾಯುತ್ತಿರುವ ಎಲ್ಲಾ ನೈಜ ಪಿಂಚಣಿದಾರರಿಗೆ ಅವರವರ ಹಣ ಬಿಡುಗಡೆ ಮಾಡಿ ಅನೇಕ ಸಾವುಗಳನ್ನು ತಪ್ಪಿಸುತ್ತಿತ್ತು (ಈ ಪತ್ತೆ ಹಚ್ಚುವ ತಲಾಶ್ ಯತ್ನಕ್ಕೆ ಅಡ್ಡಗಾಲು ಹಾಕಿರುವ ದುಷ್ಟ ಶಕ್ತಿಗಳಿಂದ ಅರ್ಹರಿಗೂ ವೇತನ ಸ್ಥಗಿತವಾಗಿದೆ!);ಉತ್ತರ ಕರ್ನಾಟಕದ ನೆರೆ ಹಾವಳಿಗೆ ನಲುಗಿರುವವರಿಗೆ ಮನೆ ಕಟ್ಟಿಸಿಕೊಡುವ ಕೆಲಸ ಸ್ಥಳೀಯ ಶಾಸಕರು ಮಾಡುತ್ತಿದ್ದರು ಮತ್ತು ನೀರು, ವಿದ್ಯುತ್ ಸಾಲ ಸೌಲಭ್ಯ, ಅಪ್ಪಟ ಬೀಜ, ಗೊಬ್ಬರ, ಬೆಂಬಲ ಬೆಲೆ ಖರೀದಿ - ಇವೆಲ್ಲ ಹಳ್ಳಿಗಳ ಬಡ ರೈತರಿಗೆ ತ್ವರಿತವಾಗಿ ಸಿಗುತ್ತಿದ್ದವು. ಈ ಯಾವೊಂದು ಸೌಲಭ್ಯವೂ ಸೂಕ್ತವಾಗಿಲ್ಲದಿರುವಾಗ ಸರ್ಕಾರ ಇದೆ ಎಂದು ಹೇಳುವುದಾದರೂ ಹೇಗೆ?ಈಚೆಗೆ ನಿವೃತ್ತಿ ವೇತನ, ಸರ್ಕಾರಿ ನೌಕರರ ವೇತನ ದ್ವಿಗುಣಗೊಂಡಿರುವುದರ ಜೊತೆಗೆ ಶಾಸಕರ ಭತ್ಯೆಗಳನ್ನು ಏರಿಸುವ ಚಿಂತನೆಗಳು, ವ್ಯೆಹಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅಂದರೆ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಂದಿನಂತೆ ಇದೆಯೆ? ಹಿಂದೆ ಟೆಲಿಫೋನ್ ಕದ್ದಾಲಿಕೆಗೆ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ಮಾತಿಗೆ, ಹೇಳಿಕೆಗೆ ಅಂಜಿ ರಾಜೀನಾಮೆ ನೀಡಿದರು.ಬೆಂಬಲದ ಕೊರತೆ ಆದಾಗ ನಿಜಲಿಂಗಪ್ಪ ಮನೆಗೆ ತೆರಳಿದರು. ತತ್ವ, ಸಿದ್ಧಾಂತ, ಜನರ ಭಯಕ್ಕೆ ಅಂಜಿಕೆ ಅವರಿಗೆ ಕಾಡಿತ್ತು. ಅಧಿಕಾರ ದೊಡ್ಡದಲ್ಲ ಎಂದು ಖಂಡಿತ ಎನ್ನಿಸಿತ್ತು. ಈಗ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಎರಡೂವರೆ ಗಂಟೆ ಕೂತು `ಜಿಂದಗಿ ನ ಮಿಲೇಗಿ ದುಬಾರ~ ಸಿನಿಮಾ ನೋಡಲು ಕೂಡ ಸಾಧ್ಯವಾಗದೆ ಎದ್ದು ಹೊರಬಂದ ಮನಸ್ಸು, ಮತ್ತೊಮ್ಮೆ ಮುಖ್ಯಮಂತ್ರಿ ಆದರೂ ನಮ್ಮ ಕರ್ನಾಟಕವನ್ನು ಹೇಗೆ ಆರೋಗ್ಯಕರವಾಗಿ ಕಟ್ಟಿ ಕೊಡುತ್ತದೆ?ಆದ್ದರಿಂದ ಈಗ ಜನತೆ ಮೌನ ಮುರಿಯಬೇಕಿದೆ. ಪ್ರಶ್ನೆ ಮಾಡಬೇಕಿದೆ. ವಿಧಾನ ಸೌಧವು ಮೂಲಭೂತ ಸೌಕರ್ಯಗಳಿಲ್ಲದವರ ಬಗ್ಗೆ, ಇಲ್ಲದವರ ಬಗ್ಗೆ ದನಿ ಎತ್ತಿ ಮಾತನಾಡುವಂತೆ ಪ್ರೇರೇಪಿಸಬೇಕಿದೆ. ಗೋಪಾಲಗೌಡರಂತೆ ಬದುಕಲು ಜನ ಪ್ರತಿನಿಧಿಗಳಿಗೆ ಯಾಕೆ ಆಗುತ್ತಿಲ್ಲ ಎಂದು ಹೇಳಿ ಕೊಡಬೇಕಾಗಿದೆ. ಈ ಸೂಕ್ಷ್ಮವನ್ನು ಕರ್ನಾಟಕದ ಎಲ್ಲ ಜನತೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.