ಹಲವು ದಿನಗಳಿಂದ ಪ್ರವಾಸದ ರೂಪುರೇಷೆ ಸಿದ್ಧಪಡಿಸುತ್ತಿದ್ದ ನಮ್ಮೆದುರು ಕೊನೆಗೂ ಪ್ರವಾಸಕ್ಕೆ ಹೋಗುವ ಆ ಸುದಿನ ಬಂದೇ ಬಿಟ್ಟಿತು. ಪರೀಕ್ಷೆ ಬರೆದು ಹರಳೆಣ್ಣೆ ಕುಡಿದಂತಾಗಿದ್ದ ಮುಖಗಳು ಪ್ರವಾಸ ಎಂದೊಡನೆ ಅರಳಿದ್ದವು. ರಾತ್ರಿಯಿಡಿ ಪಯಣದ ಸುಗ್ಗಿ ಎಲ್ಲರೆದೆಯೊಳಗೆ. ನಾಳೆ ಬೆಳಿಗ್ಗೆ ಹೊರಡುವ ತರಾತುರಿಯೊಂದಿಗೆ ಪ್ರವಾಸದ ಮಜದ ಅನುಭವ ನೆನೆದು ನಿದ್ದೆಗೈಯ್ಯದ ಕಣ್ಣುಗಳೆಷ್ಟೋ! ಆದರೆ, ಇದಕ್ಕೂ ಉಪಾಯ ಹುಡುಕಿದ್ದರು ನಮ್ಮ ಮೇಷ್ಟ್ರು. ಇದು ಅಧ್ಯಯನ ಪ್ರವಾಸ. ಮೋಜು-ಮಸ್ತಿ ಜಾಸ್ತಿ ಇಲ್ಲ. ಎಲ್ಲವೂ ನಿಮ್ಮ ಗ್ರಹಿಕೆಗೆ ಬಿಟ್ಟದ್ದು. ತರ್ಲೆ ಮಾಡೋ ಹಾಗಿಲ್ಲವೆಂದು ಕಟ್ಟಾಜ್ಞೆ ಹೊರಡಿಸಿದ್ದರು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಹುಚ್ಚು ಕೋಡಿ ಮನಸ್ಸು ಎಲ್ಲರೊಳಗೂ ಪಯಣದ ರಂಗೇರಿಸಿತ್ತು!

ಅಂತೂ ಮುಂಜಾನೆ ತೂಕಡಿಸುತ್ತಲೇ ಹೊರಟೆವು ಹೊಸ ಪರಿಸರದ ಲೋಕಕ್ಕೆ. ಬೆಳ್ಳಂಬೆಳಿಗ್ಗೆ ಹಬೆಯಾಡುವ ಕಾಫಿ ಹೀರಿ ವ್ಯಾನಿನ ಸೀಟಿಗೆ ಒರಗಿದ ನಮಗೆ, ಮತ್ತೆ ಮೇಷ್ಟ್ರುಗಳ ಉಪದೇಶದ ಸುರಿಮಳೆ... ಮೊದಲಿಗೆ ರಾಮನಗರದ ಕಡೆ ಪಯಣ ಬೆಳೆಸಿದ ನಮ್ಮ ಅಧ್ಯಯನ ಪ್ರವಾಸಕ್ಕೆ ಸಹಕಾರಿಯಾಗಲೆಂದು ಬಂಜಗೆರೆ ಜಯಪ್ರಕಾಶ್ ಅವರ ಮನೆಗೆ ಕರೆದೊಯ್ಯಲಾಯಿತು. ಅವರು ಮಾರ್ಗದರ್ಶನ ನೀಡುತ್ತಿದ್ದರು. ಇತ್ತ ಕಡೆ ನಿದ್ರಾದೇವಿ ನಮ್ಮನ್ನು ನಿಯಂತ್ರಿಸುತ್ತಿದ್ದಳು. ಅಲ್ಲಿಂದ ಸೀದಾ ಮಂಡ್ಯದ ಮದ್ದೂರು ತಾಲ್ಲೂಕಿನ ಕಿರುಗಾವಲು ಗ್ರಾಮಕ್ಕೆ ನಮ್ಮ ಪಯಣ ಸಾಗಿತು. ಪೂರ್ವಜರ ಕಾಲದ ವಿವಿಧ ತಳಿಯ ಭತ್ತ ಹಾಗೂ ಮಾವನ್ನು ಸಂರಕ್ಷಿಸಿ, ಅದರಲ್ಲೇ ಗೆಲುವು ಕಾಣುತ್ತಿರುವ ಸೈಯ್ಯದ್ ಘನಿಖಾನ್ ಅವರ ಮನೆಗೆ ಹೋದೆವು.

ಅವರ ಜೀವನ ಕ್ರಮ, ಕೃಷಿ ಕೈಗೊಳ್ಳಲು ಪ್ರೇರಕವಾದ ಅಂಶಗಳು, ಸಾಗುತ್ತಿರುವ ಹಾದಿಯ ಬಗ್ಗೆ ಮಾಹಿತಿ ಪಡೆದುಕೊಂಡೆವು. ತಮ್ಮ ಅಜ್ಜಿ-ಅಜ್ಜರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ 800 ವಿವಿಧ ತಳಿಯ ಭತ್ತ ಹಾಗೂ 80 ವಿವಿಧ ತಳಿಯ ಮಾವು ಇವರೊಂದಿಗೆ ಚೈತನ್ಯಗೊಂಡು ಉಸಿರಾಡುತ್ತಿವೆ. ಘನಿಖಾನ್ರವರ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಗದ್ದೆಯನ್ನು, ಇವರ ಕಾರ್ಯವೈಖರಿಯನ್ನು ಕಣ್ತುಂಬಿಕೊಂಡ ನಮ್ಮ ತಂಡ ಅಲ್ಲಿಂದ ಮೇಲುಕೋಟೆ ಜನಸೇವಾ ಟ್ರಸ್ಟ್ಗೆ ನಮ್ಮ ತಂಡ ಭೇಟಿ ನೀಡಿತು.

ಹಿರಿಯ ಮುತ್ಸದ್ಧಿ, ಗಾಂಧಿವಾದಿ ಸುರೇಂದ್ರ ಕೌಲಗಿ ಅವರ ಸಮಾಗಮ. ನನಗಂತೂ ಅವರ ಇಳಿ ವಯಸ್ಸಿನ ಹುಮ್ಮಸ್ಸು, ದಿಟ್ಟತನ ಹಿಡಿಸಿತು. ಅವರೊಂದಿಗೆ ಪರಿಚಯ ವಿನಿಮಯವಾಗಿ ಅವರ ಅನುಭವಗಳನ್ನು ಪ್ರಶ್ನಿಸುವ ಮೂಲಕ ತಿಳಿದುಕೊಂಡೆವು. ಅವರ ಹಳೆಯ ನೆನಪುಗಳನ್ನು ಕೆದಕುತ್ತಾ ಜಯಪ್ರಕಾಶ್ ನಾರಾಯಣ್ ಅವರೊಂದಿಗಿನ ಒಡನಾಟ, ಜನಸೇವಾ ಟ್ರಸ್ಟ್ನ ಬಗ್ಗೆಯೂ ಅರಿತುಕೊಂಡೆವು. ಅಲ್ಲಿನ ಜೀವನ ಶಾಲೆ, ಜನಪದ ಅಧ್ಯಯನ ಕೇಂದ್ರದಲ್ಲಿ ನಮ್ಮ ಅಂದಿನ ರಾತ್ರಿ ಕಳೆಯಿತು. ಇದರಿಂದ ಟ್ರಸ್ಟ್ನ ಇತರೆ ಕಾರ್ಯಗಳ ಮಾಹಿತಿ ಪಡೆಯಲು ಸಹಾಯವಾಯಿತು.

ಪಾಂಡವಪುರ ಅಂಕೇಗೌಡರ ಗ್ರಂಥಾಲಯಕ್ಕೆ ನಮ್ಮ ಗುಂಪು ಲಗ್ಗೆ ಇಟ್ಟಿತು. ಅವರು ಒಟ್ಟಿದ್ದ ಪುಸ್ತಕಗಳ ರಾಶಿ ನೋಡಿಯೇ ನಾವು ಉಸಿರೊಡೆದುಕೊಂಡೆವು. ಅವರ ಹಿನ್ನೆಲೆ ಕೇಳಿಸಿಕೊಳ್ಳುತ್ತಲೇ ಕೂಡಿಟ್ಟ ನಾಣ್ಯಗಳ ಪರಿಚಯ ಮಾಡಿಕೊಂಡು ಕೂತೆವು. ಅವುಗಳಲ್ಲಿ ಜೀತಪದ್ಧತಿ ಬಿಂಬಿಸುವ ಚಿತ್ರಗಳು, ಈಸ್ಟ್ ಇಂಡಿಯಾ ಕಂಪನಿ ಕುರುಹು, ರಾಣಿ ವಿಕ್ಟೋರಿಯಾಳ ಭಾವಚಿತ್ರವುಳ್ಳ ನಾಣ್ಯಗಳು, ರಾಮ-ಲಕ್ಷ್ಮಣ-ಸೀತಾ, ಚಾಮುಂಡೇಶ್ವರಿ ಚಿತ್ರಗಳನ್ನು ಹೊಂದಿದ್ದ ನಾಣ್ಯಗಳು ನಮ್ಮನ್ನು ಹೆಚ್ಚೆಚ್ಚು ಸೆಳೆದವು. ಇಂಥ ಹಲವು ನಾಣ್ಯಗಳನ್ನು ಮೊದಲ ಬಾರಿಗೆ ನೋಡಿದ್ದರಿಂದ ಎಲ್ಲರಲ್ಲೂ ಒಂದು ರೀತಿ ಪುಳಕ ಮನೆ ಮಾಡಿತ್ತು. ಅಲ್ಲಿ ಬೇಕಾದ ಪುಸ್ತಕಗಳನ್ನು ಖರೀದಿಸಿ ಮುಂದಕ್ಕೆ ಸಾಗಿದೆವು.

ಅಲ್ಲಿಂದ ತೆರಳಿದ ನಮ್ಮ ಗ್ಯಾಂಗು ಸಂಗಮದಲ್ಲಿ ಬೀಡುಬಿಟ್ಟಿತು. ನೀರನ್ನು ಕಂಡೊಡನೆ ಮೈಮೇಲೆ ಏನೋ ಬಂದವರಂತೆ ಧರಿಸಿದ್ದ ಉಡುಪುಗಳನ್ನು ಕಳಚಿಟ್ಟು ಒಬ್ಬೊಬ್ಬರಾಗಿ ಧುಮುಕಿದರು. ಶ್ರೀರಂಗಪಟ್ಟಣ ಬಿಡುವಾಗ ಅರ್ಧ ಚಂದ್ರ ಮೂಡಿದ್ದ. ಸಾಲುಗಟ್ಟಿ ಸಾಗುತ್ತಿರುವ ವಾಹನಗಳ ಬೆಳಕಿನಲ್ಲಿ ಅವನೂ ಮಂಕಾಗಿ ಗೋಚರಿಸುತ್ತಿದ್ದ. ನಮ್ಮ ಬಂಡಿಯೂ ಮೈಸೂರಿನ ಗೂಡು ಸೇರಲು ತನ್ನ ಮುಂದಿದ್ದ ವಾಹನಗಳ ಹಿಂದಿಕ್ಕುತ್ತಿತ್ತು. ನಮ್ಮ ಮೇಷ್ಟ್ರು ಮುಂದಿನ ಯೋಜನೆ ರೂಪಿಸುತ್ತ ಫೋನಿನೊಳಗೆ ಮುಳುಗಿದ್ದರು. ಮಬ್ಬು ಕವಿದ ವಾತಾವರಣದಲ್ಲಿ ಎಲ್ಲವೂ ಮಿಣುಕು ಹುಳುಗಳಂತೆ ತೋರುತ್ತಿದ್ದವು. ರಸ್ತೆ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿತ್ತು.

ಮೈಸೂರಿಗೆ ಪದಾರ್ಪಣೆ ಮಾಡಿದಾಗ ನಮ್ಮತನವ ಪರೀಕ್ಷಿಸಿಕೊಳ್ಳುವಂತೆ ಕೈ ತೋರಿ ನಿಂತಿದ್ದ ಅಂಬೇಡ್ಕರ್ ಪ್ರತಿಮೆ ನನ್ನನ್ನು ಸೆಳೆದಿತ್ತು. ಆಲೋಚನೆಯೊಳಗೆ ಬಂಧಿಯಾಗಿ ಅತ್ತಿಂದಿತ್ತ ಇರುವೆಗಳಂತೆ ಹರಿದಾಡುತ್ತಿರುವ ಜನ... ಮನೆ ಮುಟ್ಟುವುದರೊಳಗೆ ನಾಲ್ಕು ಕಾಸಾದರೂ ಗಿಟ್ಟಬಹುದೆಂಬ ಆಟೊದವರ ನಿರೀಕ್ಷಿತ ಕಣ್ಣುಗಳು... ತಮ್ಮ ಬದಿ ಹಾದು ಹೋಗುವವರನ್ನು ಹುಡುಕುತ್ತಿದ್ದವು.ಅಂದು ಅಲ್ಲಿಯೇ ತಂಗಿ, ಮುಂಜಾನೆ ನಂಜರಾಜ ಅರಸ್ ಅವರನ್ನು ಕಾಣಲು ಹೊರಟೆವು. ನಮ್ಮ ಉದ್ದೇಶ ಮೈಸೂರು ರಾಜಮನೆತನದ ಇತಿಹಾಸ ತಿಳಿದುಕೊಳ್ಳುವುದಾಗಿತ್ತು. ಕಣ್ಣು, ಬಾಯಿ ಬಿಟ್ಟುಕೊಂಡು ಕೂತ ನಮಗೆ ಅವರ ನೇರ ಮಾತುಗಳು ಚಾಟಿ ಬೀಸಿದಂತಿದ್ದವು.

ಅವರು ವಿಷಯಗಳನ್ನು ಒಂದಕ್ಕೊಂದು ಬೆಸೆಯುತ್ತಾ ಆಳವಾಗಿ ಹೇಳುತ್ತಲೇ ಹೋದರು. ನಾವೂ ಆಲಿಸುತ್ತಲೇ ಕೂತೆವು. ಖಾಲಿ ಹೊಟ್ಟೆ ತಾಳ ಹಾಕುತ್ತಿತ್ತು. ನಂತರ ಮಾನಸಗಂಗೋತ್ರಿ ಪ್ರಾಧ್ಯಾಪಕ ಮುಜಾಫರ್ ಅಸ್ಸಾದಿ ಅವರ ಮನೆ ಬಾಗಿಲು ತಟ್ಟಿದೆವು. ಕೆಲ ಕಾಲ ಅವರೊಂದಿಗೆ ಸಮಾಲೋಚಿಸಿ, ನಮ್ಮ ಗ್ರಹಿಕೆ ವಿಸ್ತಾರಗೊಳಿಸಿಕೊಂಡು ಮುಂದೆ ಸಾಗಿದೆವು. ಮುಂಜಾನೆ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ ಅಮೃತಭೂಮಿಗೆ ತೆರಳಿ, ಚುಕ್ಕಿ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿದೆವು.

ಬಿಳಿಗಿರಿ ರಂಗನಬೆಟ್ಟ ಹತ್ತಿ ರಂಗನಾಥಸ್ವಾಮಿಯ ಹಿನ್ನೆಲೆ-ಮುನ್ನೆಲೆ ತಿಳಿದುಕೊಂಡು ಸ್ವಲ್ಪ ಸಮಯ ಅಲ್ಲೇ ಅಲೆದು ಕಾಲ ಕಳೆದದ್ದಾಯಿತು. ರಂಗನಾಥನ ಸಂಬಂಧಿಕರನ್ನು ಕಾಣುವ ಸರದಿ. ಮುತ್ತಾಗದ್ದೆ ಪೋಡಿಗೆ ನಮ್ಮ ಗಾಡಿ ಮುಖ ಮಾಡಿತು. ಅಲ್ಲಿ ಸೊರಗಿದ ಮುಖ, ಬಾಡಿ ಬೆಂಡಾದ ದೇಹದೊಳಗೆ ಉಸಿರಾಡುತ್ತಿರುವ ಜೀವ... ಗಾಳಿಗೆ ಹಾರಾಡುತ್ತಿರುವ ತನ್ನ ಹಾಲಿನ ನೊರೆಯಂಥ ಸುರುಳಿಗಟ್ಟಿದ ಕೂದಲನ್ನು ಹಿಂದಕ್ಕೆ ಸರಿಸುತ್ತಾ, ದೂರದ ವಾಸನೆಯನ್ನು ಗ್ರಹಿಸಿಯೂ ಗ್ರಹಿಸದಂತೆ ಬಿಸಿಲಿಗೆ ಒಣ ಹಾಕಿದ ಕಾಫಿ ಬೀಜವನ್ನು ಮರದಲ್ಲಿ ಕೇರಿ ಗೋಣಿಚೀಲಕ್ಕೆ ತುಂಬುತ್ತಿತ್ತು. ನಾನು, ನನ್ನ ಸ್ನೇಹಿತೆ ಅಂಜುತ್ತಲೇ ಪಕ್ಕಕ್ಕೆ ಹೋಗಿ, ಅಜ್ಜಿ... ಎಂದೆವು.

‘ಏನಾ...ಪ್ಯಾಟೇರಲ್ವಾ ದುಡ್ಕೊಡಿ ನೂರುಪಾಯ’ ಅನ್ನುವ ಮಾತು ಬೆಚ್ಚಿ ಬೀಳಿಸಿತು. ಇವರು ಪರೋಕ್ಷವಾಗಿ ನಮಗೆ ಜಾಡಿಸಿ ಒದ್ದಂತಿತ್ತು. ನಿಜಕ್ಕೂ ನನಗೆ ಇದರಿಂದ ಬೇಸರವಾಯಿತು. ಅವರು ದುಡ್ಡು ಕೇಳಿದ್ದಕ್ಕಲ್ಲ, ಅವರನ್ನು ಈ ಸ್ಥಿತಿಗೆ ತಳ್ಳಿರುವುದಕ್ಕೆ. ಪೋಡಿನ ಹಲವು ಮಂದಿ ನಮ್ಮೊಂದಿಗೆ ಬೆರೆಯಲು ಹಿಂದೇಟು ಹಾಕುತ್ತಿದ್ದರು. ನಾವು ಬಲವಂತವಾಗಿ ಮಾತಾಡಿಸಿದಾಗಲೂ ಮುಖ ಸಿಂಡರಿಸುತ್ತಾ ಸಾಗುತ್ತಿದ್ದರು. ಕೊನೆಗೂ ಪ್ರೇಮ ಎಂಬುವರಿಂದ ಕೆಲ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡೆವು. ಆದರೆ, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದ ಕೆಲವರ ಪ್ರಶ್ನೆಗಳು ಅವರನ್ನು ರೊಚ್ಚಿಗೇಳಿಸುತ್ತಿದ್ದವು. ಆ ವೇಳೆ ಅವರ ಮುಖಭಾವ ಹಲವು ಗೊಂದಲಗಳ ಜೊತೆ ಜೊತೆಗೇ ಪ್ರಶ್ನೆಗಳನ್ನೂ ಹುಟ್ಟು ಹಾಕಿಸುವಂತಿತ್ತು.

ಎಚ್.ಡಿ.ಕೋಟೆ ತಾಲ್ಲೂಕಿನ ನಮ್ಮ ಸ್ನೇಹಿತೆ ಮನೆಯಲ್ಲಿ ಬಾಡೂಟ ಉಂಡು ಉದ್ಗೂರಿನ ಆದಿವಾಸಿ ಸರ್ಕಾರಿ ಶಾಲೆಯಲ್ಲಿ ರಾತ್ರಿ ಕಳೆದೆವು. ಮಾರನೆ ದಿನ ಗೋಳೂರು ಹಾಡಿಗೆ ಹೆಜ್ಜೆ ಇಟ್ಟೆವು. ಅಲ್ಲಿನ ಬುಡಕಟ್ಟು ನಾಯಕರೊಂದಿಗೆ ಸಮಯ ದೂಡಿ, ಅವರ ಜೀವನ ಕ್ರಮ, ನಡೆ-ನುಡಿ, ಸಂಸ್ಕೃತಿ ಬಗ್ಗೆ ಅರಿತುಕೊಂಡೆವು. ಆನಂತರ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯತ್ತ ಹೆಜ್ಜೆಹಾಕಿದೆವು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ವಾಸವಿದ್ದ ಮನೆಗೆ ಭೇಟಿ ನೀಡಿದೆವು. ಬೈಲುಕುಪ್ಪೆಗೆ ಸಾಗಿತು ನಮ್ಮ ಪಯಣ. ಟಿಬೆಟಿಯನ್ನರ ಬಗ್ಗೆ ವಿಚಾರಿಸಿ, ಅಲ್ಲೆಲ್ಲಾ ಸುತ್ತಾಡಿ, ಪ್ರತಿಯೊಂದನ್ನೂ ವೀಕ್ಷಿಸಿ ಕ್ಯಾಂಪ್ನಿಂದ ಹೊರ ಬಂದೆವು.

ಕೊಡಗಿನಲ್ಲಿಳಿದಾಗ ಕತ್ತಲು ಆವರಿಸಿತ್ತು. ಮುಂಜಾನೆ ಕೊರೆಯುವ ಚಳಿಯಲ್ಲಿ ಕೊಡಗಿನ ತಲಕಾವೇರಿ ದರ್ಶನ. ಭಾಗಮಂಡಲದಲ್ಲಿ ಮತ್ತೊಮ್ಮೆ ನೀರಿಗಿಳಿಯುವ ಅದೃಷ್ಟ ನಮ್ಮದಾಗಿತ್ತು. ಕುಣಿತ, ಹಾಡುಗಳ ಮೋಜು ಮಸ್ತಿಯ ಲೋಕ ಎಲ್ಲರಲ್ಲೂ ಗೆಲುವು ಮೂಡಿಸಿತ್ತು. ನಮ್ಮ ಅರಿವಿನ ಪಯಣಕ್ಕೆ ಅಂತ್ಯವಾಡುವ ದಿನ ಬಂದೇಬಿಟ್ಟಿತು. ಅಂದು ರಾತ್ರಿ ನಮ್ಮ ಲಗೇಜುಗಳೊಂದಿಗೆ ನಡೆಯುವಾಗ ಪೆಚ್ಚು ಮೋರೆ ಹಾಕಿಕೊಂಡಿದ್ದೆವು. ಆದರೆ, ಸವಿನೆನಪುಗಳ ಆರ್ದ್ರತೆ ಎಲ್ಲರೊಳಗೆ ಅಚ್ಚಹಸಿರಾಗಿತ್ತು; ನಮ್ಮೊಳಗಿನ ಮೌನದ ತಂತಿ ಮೀಟಿ ಹೊಸ ನಾದ ಹೊಮ್ಮಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.