ಗುರುವಾರ , ಜನವರಿ 30, 2020
20 °C

ಅಲೌಕಿಕ ಬದುಕು ಅನಿವಾರ್ಯ: ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಮನುಷ್ಯನಿಗೆ ಲೌಕಿಕ ಮತ್ತು ಅಲೌಕಿಕ ಬದುಕು ಅನಿವಾರ್ಯ ವಾಗಿದೆ. ಇವು ಒಂದಕ್ಕೊಂದು ಬಿಡಿಸಲಾರದ ನಂಟು ಹೊಂದಿವೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸೋಮವಾರ ಹೇಳಿದರು.ಜಯಲಕ್ಷ್ಮಿಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಸ್ಮಾರಕ ಒಳಾಂಗಣದಲ್ಲಿ ಗಣರಾಜ್ಯೊತ್ಸವ-62 ರ ಅಂಗವಾಗಿ ಏರ್ಪಡಿಸಿದ್ದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.`ಆದಿಕವಿ ಪಂಪನಿಂದ ಹಿಡಿದು ಗೋಪಾಲಕೃಷ್ಣ ಅಡಿಗರ ತನಕ ಅಲೌಕಿಕ ತುಡಿತವನ್ನು ಕಾಣಬಹುದು. ಆದ್ದರಿಂದಲೇ ಅಡಿಗರು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಎಂದು ಕವಿತೆ ಬರೆದರು. ನಾವು ಲೌಕಿಕದಲ್ಲಿ ಇದ್ದರೂ ಅಲೌಕಿಕ ಬದುಕು ನಮ್ಮನ್ನು ತನ್ನತ್ತ ಸೆಳೆಯುತ್ತದೆ. ಆದ್ದರಿಂದ ಮನುಷ್ಯನಿಗೂ ಅಲೌಕಿಕತೆಗೂ ಬಿಡಿಸಲಾರದ ಬಂಧವಿದೆ. ಇದು ಅನಿವಾರ್ಯ~ ಎಂದರು ಹೇಳಿದರು.`ಮಂದಾರ ಮರವು ಭೂ ಲೋಕದಲ್ಲಿ ಹುಟ್ಟಿ ಕೈಲಾಸದಲ್ಲಿ ಹೂ ಬಿಡುತ್ತದೆ. ಕಾರಣವೇನು? ಇಲ್ಲಿ ಸಲ್ಲದವರು ಅಲ್ಲಿ ಸಲ್ಲರಯ್ಯ ಎಂದು ಬಸವಣ್ಣ ಹೇಳುತ್ತಾನೆ. ಧರ್ಮ, ಕ್ಷಿತಿಜದಾಚೆ ಏನಿದೆ? ದೇವರು ಇರಬಹುದು. ಅದನ್ನು ನಂಬಿಕೊಂಡು ಬದುಕುವುದೇ ಅಲೌಕಿಕವಾಗುತ್ತದೆ.ಕಾಣದ ಅಲೌಕಿಕ ಲೋಕವನ್ನು ಕಲ್ಪಿಸಿಕೊಂಡು ಲೌಕಿಕ ಬದುಕಿನ ನಡೆ, ನುಡಿಗಳನ್ನು ಸರಿಪಡಿಸಿ ಕೊಳ್ಳುತ್ತೇವೆ. ವಯಸ್ಸಾಗುತ್ತಿದ್ದಂತೆ ಸಾವಿನ ಭಯ ಕಂಗೆಡಿಸುತ್ತದೆ. ಅದರಿಂದ ದೂರ ಹೋಗಲು ಪ್ರಯತ್ನಿಸುತ್ತೇವೆ. ಆಗ ಅಲೌಕಿಕ ಬದುಕು ಹೆಚ್ಚು ಇಷ್ಟವಾಗುತ್ತದೆ~ ಎಂದು ತಿಳಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಮುಖ್ಯ ಭಾಷಣ ಮಾಡಿ `ಮಲಗಿರುವವರನ್ನು ಎಬ್ಬಿಸಿ ಸುತ್ತಮತ್ತಲ ವಾತಾ ವರಣ ವನ್ನು ಆವರಿಸಿಕೊಳ್ಳುವ ಶಕ್ತಿ ಕಂಬಾರದ ಹಾಡಿಗೆ ಇದೆ. ಆದ್ದರಿಂದ ಇವರು ಸಮಕಾಲೀನ ಸಿರಿ ನವಿಲು, ಹಾಡಿನ ಮೋಡಿಗಾರ~ ಎಂದು ಹೊಗಳಿದರು.`ದ.ರಾ.ಬೇಂದ್ರೆ ಮತ್ತು ಕಂಬಾರ ಒಂದೇ ನೆಲಗಟ್ಟಿನಲ್ಲಿ ಸಾಹಿತ್ಯವನ್ನು ರೂಪಿಸಿದರು. ಅದು ಜನಪದ ನೆಲೆಗಟ್ಟಾಗಿತ್ತು. ಕಂಬಾರರ ಕೃತಿಗಳು ಶ್ರೀಸಾಮಾನ್ಯ ಮತ್ತು ವಿದ್ವಾಂಸ ಇಬ್ಬರನ್ನೂ ಸಮಾಜವಾಗಿ ಆಕರ್ಷಿಸಿದವು. ಕಂಬಾರರು ದೇಸಿಯ ತೆಯ ಹರಿಕಾರ. ತಮ್ಮ ಭಾಷೆ, ಲಯ, ಛಂದಸ್ಸು ಮೂಲಕ ಹೊಸಲೋಕವನ್ನು ತೆರೆದುಕೊಟ್ಟರು~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ ಡಾ.ಚಂದ್ರಶೇಖರ ಕಂಬಾರರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಡಾ.ಕಂಬಾರ `ಯುವ ಜನ ಗಣ~ ಕವನ ಸಂಕಲನನ್ನು ಬಿಡುಗಡೆಗೊಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಸುಬ್ರಮಣ್ಯಂ ಇದ್ದರು. ಪ್ರಾಂಶುಪಾಲ ಪ್ರೊ.ಕೆ.ವಿ.ಪ್ರಭಾಕರ ಸ್ವಾಗತಿಸಿ ದರು.ಪ್ರಾಂಶುಪಾಲರಾದ ನಾಗರತ್ನಕುಮಾರಿ ಕಂಬಾರರನ್ನು ಪರಿಚಯಿಸಿದರು. ಉಪನ್ಯಾಸಕ ಡಾ.ಎಚ್.ಆರ್. ತಿಮ್ಮೇಗೌಡ ವಂದಿಸಿದರು. ಉಪನ್ಯಾಸಕಿ ವಿನೋದಮ್ಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)