ಗುರುವಾರ , ಜೂನ್ 24, 2021
24 °C

ಅಳೆದು ತೂಗಿ ಕಾಂಗ್ರೆಸ್‌ ಸೇರಿದ ಇಸ್ಮಾಯಿಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಜೆಡಿಎಸ್‌ನ ಉತ್ತರ ಕರ್ನಾಟಕದ ಅಧಿನಾಯಕ ಬಸವರಾಜ ಹೊರಟ್ಟಿ ಅವರ ವಿರುದ್ಧ ಬಂಡಾಯ­ವೆದ್ದಿದ್ದ ಧಾರವಾಡ ಅಂಜುಮನ್‌ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್‌ ತಮಾಟಗಾರ ನಿರೀಕ್ಷೆಯಂತೆ ತಾವು ‘ಹೊತ್ತ ತೆನೆ’ಯನ್ನು ಕೆಳಗಿಳಿಸಿ ಶುಕ್ರವಾರ ಕಾಂಗ್ರೆಸ್‌ನ ಕೈ ಹಿಡಿದರು. ಆ ಮೂಲಕ ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಇದ್ದ ವದಂತಿಗಳಿಗೆ ತೆರೆ ಬಿತ್ತು.ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹುಬ್ಬಳ್ಳಿಯ ಅಂಜು­ಮನ್‌ ಇಸ್ಲಾಂ ಅಧ್ಯಕ್ಷ ಜಬ್ಬಾರಖಾನ್‌ ಹೊನ್ನಳ್ಳಿ ಸಹ ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ಸೇರಿದರು. ಇದರೊಂದಿಗೆ, ಕಾಂಗ್ರೆಸ್‌ ಅಭ್ಯರ್ಥಿಯ ಹಿಂದೆ ತಾವು ಹಾಗೂ ತಮ್ಮ ಸಮು­ದಾಯ ಇದೆ ಎಂಬ ಸಂದೇಶವನ್ನು ಪರೋಕ್ಷ­­ವಾಗಿ ಇಬ್ಬರೂ ನಾಯಕರು ತಲುಪಿಸಿದ್ದಾರೆ.ಶಾಸಕ ಸಂತೋಷ್‌ ಲಾಡ್‌ ಅವರೊಟ್ಟಿಗೆ ಕಾಣಿಸಿಕೊಳ್ಳು­ವಾಗಲೇ ಇಸ್ಮಾಯಿಲ್‌ ಕಾಂಗ್ರೆಸ್‌ ಸೇರಿಕೊಳ್ಳುವ ವದಂತಿ ಹರಡಿತ್ತು. ಕಳೆದ ಜನವರಿ 14ರಂದು ಕಮಲಾಪುರದಲ್ಲಿ ಸಂಭವಿಸಿದ ಗುಂಪು ಘರ್ಷಣೆಯ ಬಳಿಕ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಎರಡೂ ಗುಂಪುಗಳು ಮಧ್ಯೆ ಸಂಧಾನ ನಡೆದಾಗ ವದಂತಿ ಇನ್ನಷ್ಟು ಗಟ್ಟಿಯಾಗಿತ್ತು. ಜೆಡಿಎಸ್‌­ನಿಂದ ಆರು ವರ್ಷಗಳವರೆಗೆ ಉಚ್ಚಾಟನೆಗೊಂಡ ಬಳಿಕ ಬೇರೆ ಮಾರ್ಗ ಕಾಣದ ತಮಾಟಗಾರ ಅವರು ಅಧಿಕೃತವಾಗಿ ಕಾಂಗ್ರೆಸ್‌ ಪಾಳೆಯ ಸೇರಿದರು.ಒಂದೊಮ್ಮೆ ಶಾಸಕ ವಿನಯ ಕುಲಕರ್ಣಿ ಚುನಾವಣೆಯಲ್ಲಿ ಗೆದ್ದು ಸಂಸದರಾದರೆ, ಅವರ ರಾಜೀನಾಮೆಯಿಂದ ತೆರವಾಗುವ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಯೋಚನೆಯೂ ಇಸ್ಮಾಯಿಲ್‌ ಪಕ್ಷ ಸೇರ್ಪಡೆಯ ಹಿಂದಿದೆ ಎಂಬ ಮಾತು ಕೇಳಿ ಬರುತ್ತಿದೆ.

ಆದರೆ, ತಾವು ಚುನಾವಣೆಯಲ್ಲಿ ಗೆದ್ದರೆ, ಖಾಲಿಯಾಗುವ ಶಾಸಕ ಸ್ಥಾನಕ್ಕೆ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಿ ಗೆಲ್ಲಿಸಬೇಕು ಎಂದೂ ವಿನಯ ಲೋಕಸಭಾ ಚುನಾವಣೆ ಸ್ಪರ್ಧೆಗೆ ಒಪ್ಪಿಕೊಳ್ಳುವ ಮೊದಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಸೋತರೂ ಕ್ಯಾಬಿನೆಟ್‌ ಸಚಿವರನ್ನಾಗಿ ಮಾಡಬೇಕು ಎಂಬ ಇನ್ನೊಂದು ಬೇಡಿಕೆಯನ್ನೂ ಪಕ್ಷದ ವರಿಷ್ಠರ ಎದುರು ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.‘ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು’ ಎಂಬ ಗಾದೆಯಂತೆ ವಿನಯ ಕುಲಕರ್ಣಿ ಸ್ಪರ್ಧೆ ಖಚಿತವಾದ ಬಳಿಕ ಪಕ್ಷದಲ್ಲಿ ಹಲವು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.