ಶುಕ್ರವಾರ, ಮೇ 14, 2021
21 °C

ಅವಕಾಶಗಳ ಬೆನ್ನೇರಿ ಆಗಂತುಕ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಕೆಲವರು ನೋಡಲು ದ್ವಾರಕೀಶ್ ಥರ ಇದ್ದೀರಿ ಎಂದರು. ಇನ್ನು ಕೆಲವರು ವಾದಿರಾಜ್ ಥರ ಇದ್ದೀರಿ ಸಿನಿಮಾದಲ್ಲಿ ಏಕೆ ನಟಿಸಬಾರದು ಎಂದು ಕೇಳಿದರು. ಅಭಿನಯದ ಗೀಳು ಮೊದಲೇ ಅಂಟಿಕೊಂಡಿತ್ತು. ಸ್ನೇಹಿತರಾದ ಬ್ಯಾಂಕ್ ಗಂಗಾಧರಯ್ಯ ನಿರ್ದೇಶಕ ವಿ.ಸೋಮಶೇಖರ್ ಪರಿಚಯ ಮಾಡಿಸಿದರು.

 

`ಗಂಡೆಂದರೆ ಗಂಡು~ ಚಿತ್ರದಲ್ಲಿ ಚಿಕ್ಕ ಪಾತ್ರ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 90 ಚಿತ್ರಗಳಲ್ಲಿ ನಟಿಸಿದ್ದೇನೆ. ಹಳೆಯ ನಿರ್ದೇಶಕರು ನೆನಪಿಟ್ಟುಕೊಂಡು ಕರೆದು ಅವಕಾಶ ಕೊಡುತ್ತಾರೆ. ಹೊಸಬರಿಗೆ ನನ್ನ ಪರಿಚಯವಿಲ್ಲ. ಹೀಗಾಗಿ ಅವಕಾಶಗಳು ಕಡಿಮೆಯಾಗಿವೆ ಎಂದು ತುಸು ಬೇಸರದಿಂದ ಹೇಳಿಕೊಂಡರು `ಆಗಂತುಕ~ ನಾಗರಾಜ್.ಬಿಇಎಲ್ ಉದ್ಯೋಗಿಯಾಗಿದ್ದ ಡಿಪ್ಲೊಮಾ ಪದವೀಧರ ನಾಗರಾಜ್ ಬಿಇಎಲ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಕೆಲವು ನಾಟಕ ಕಂಪೆನಿಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದರು. ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ಚಿತ್ರರಂಗಕ್ಕೂ ಕಾಲಿಟ್ಟರು.ಅವರ `ಎತ್ತರ~ದ ಕಾರಣದಿಂದಲೇ ಸ್ನೇಹಿತರು ಅವರನ್ನು ದ್ವಾರಕೀಶ್,ವಾದಿರಾಜ್‌ಗೆ ಹೋಲಿಸಿದ್ದು. ಭಿಕ್ಷುಕ, ಹುಚ್ಚ, ವಕೀಲ, ಮಂತ್ರಿ ಹೀಗೆ ಕೆಲವು ಸನ್ನಿವೇಶಗಳಲ್ಲಿ ಬಂದುಹೋಗುವ ಪಾತ್ರಗಳಾದರೂ ಜನ ಗುರುತಿಸುವಂತಹ ಪಾತ್ರಗಳನ್ನು ನಾಗರಾಜ್ ನಿರ್ವಹಿಸಿದರು. ಇವರ ನಟನೆ ಮೆಚ್ಚಿರುವ ಸಾಯಿಪ್ರಕಾಶ್, ಸುರೇಶ್ ಹೆಬ್ಳೀಕರ್, ಶಿವಮಣಿ ಮುಂತಾದ ನಿರ್ದೇಶಕರು ಕರೆದು ಪಾತ್ರ ನೀಡುತ್ತಾರೆ.ಜಗ್ಗೇಶ್ ಅಭಿನಯದ `ರಾಯರ ಮಗ~ ಚಿತ್ರದ ಪಾತ್ರಕ್ಕಾಗಿ ನಿರಂತರ 15 ದಿನ ಕೇಶಮುಂಡನ ಮಾಡಿಸಿಕೊಂಡಿದ್ದು ಇವರಿಗೆ ಆರಂಭದ ದಿನಗಳಲ್ಲಿ ದೊರೆತ ಅವಿಸ್ಮರಣೀಯ ಅನುಭವ. ಇವರ ಹೆಸರಿಗೆ ಅಂಟಿಕೊಂಡ `ಆಗಂತುಕ~ ವಿಶೇಷಣ ಸುರೇಶ್ ಹೆಬ್ಳೀಕರ್ ಅವರ `ಆಗಂತುಕ~ ಚಿತ್ರದಿಂದ ಬಂದಿದ್ದು. ಚಿತ್ರದಲ್ಲಿ ಪೈಲ್ವಾನನ ಪಾತ್ರ ಮಾಡಿದ್ದ ಅವರನ್ನು ಮಿತ್ರರು `ಆಗಂತುಕ~ ನಾಗರಾಜ್ ಎಂದೇ ಕರೆಯಲಾರಂಭಿಸಿದರು.ಮುಂಚೆ ಹೆಚ್ಚು ದಪ್ಪಗಿದ್ದ ನಾಗರಾಜ್ ಸೊಂಡಿಲಿನ ಮುಖವಾಡ ತೊಟ್ಟ ಗಣಪನ ಪಾತ್ರ ಹೆಚ್ಚಾಗಿ ಮಾಡುತ್ತಿದ್ದರಿಂದ ಸಹೋದ್ಯೋಗಿಗಳು ಇವರನ್ನು ಗಣೇಶ ಎಂದೇ ಕರೆಯುತ್ತಿದ್ದರಂತೆ.`ದೇವತಾ ಮನುಷ್ಯ~ ಚಿತ್ರದಲ್ಲಿ ರಾಜ್‌ಕುಮಾರ್ ತಮ್ಮನ್ನು ಗುರುತಿಸಿದ್ದನ್ನು ನೆನೆಸಿಕೊಂಡು ನಾಗರಾಜ್ ರೋಮಾಂಚಿತರಾಗುತ್ತಾರೆ. ಜೈಲಿನಲ್ಲಿ ರಾಜ್ ಜೊತೆ ಕೈದಿಯಾಗಿ ನಟಿಸಿದ್ದ ನಾಗರಾಜ್ ರಾಜ್ ಹಿಂದೆ ವಾಹನ ಹತ್ತುವ ದೃಶ್ಯವಿತ್ತು. ಆದರೆ ರಾಜ್‌ಕುಮಾರ್ ನಾನು ದೊಡ್ಡ ಪರದೆ ಮೇಲೆ ಯಾವಾಗಲೂ ಕಾಣಿಸುತ್ತೇನೆ. ಆದರೆ ನಿಮ್ಮಂತಹ ಕಿರಿಯ ಕಲಾವಿದರು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಬೆನ್ನುತಟ್ಟಿ ಅವರನ್ನು ಕ್ಯಾಮೆರಾ ಕಣ್ಣಿಗೆ ಕಾಣುವಂತೆ ಮುಂದೆ ಕಳುಹಿಸಿದ್ದರಂತೆ.ನಾಗರಾಜ್‌ಗೆ ಆತ್ಮೀಯರಾಗಿದ್ದ ಶಂಕರ್‌ನಾಗ್ ತಮ್ಮ ಅನೇಕ ಚಿತ್ರಗಳಿಗೆ ಅವರಿಗೆ ಪಾತ್ರ ನೀಡಿದ್ದರು. `ಶೃತಿ ಸೇರಿದಾಗ~, `ಗೋಲಿಬಾರ್~, `ಓಂ~, `ಅನುರಾಗ ಸಂಗಮ~, `ಮಾಯಾಬಜಾರ್~ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ನಾಗರಾಜ್ ವೈಯಕ್ತಿಕ ಕಾರಣದಿಂದ ಸುಮಾರು ಏಳೆಂಟು ವರ್ಷ ಬಣ್ಣದ ಬದುಕನ್ನು ತ್ಯಜಿಸುವಂತಾಯಿತು. ಉದ್ಯೋಗದಿಂದ ನಿವೃತ್ತಿಯಾದ ಬಳಿಕ `ದೇವ್ರಾಣೆ~, `ಶಿಕಾರಿ~, `ಪರಮಶಿವ~, `ಪರಿ~, `ಕೋಕೋ~ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಚಾರ್ಲಿ ಚಾಪ್ಲಿನ್‌ನ ಪಾತ್ರ ಮಾಡಬೇಕೆನ್ನುವ ಮಹದಾಸೆ ವ್ಯಕ್ತಪಡಿಸುವ 63 ವರ್ಷದ ನಾಗರಾಜ್ ಎಂತಹ ಪಾತ್ರವಾದರೂ ಸರಿ, ಆದರೆ ಅವಕಾಶ ಬೇಕಷ್ಟೇ. ಹೊಸ ನಿರ್ದೇಶಕರು ತಮ್ಮತ್ತ ಕಣ್ಣುಹಾಯಿಸಲಿ ಎಂಬುದು ಅವರ ಮನವಿ.

-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.