ಬುಧವಾರ, ಮೇ 25, 2022
31 °C

ಅವನು-ಅವಳು: ಅವಕಾಶ ಕಳೆದುಕೊಳ್ಳಲು ಆಕೆ ಸಿದ್ಧ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವನು-ಅವಳು: ಅವಕಾಶ ಕಳೆದುಕೊಳ್ಳಲು ಆಕೆ ಸಿದ್ಧ ಇಲ್ಲ

ಮಹಿಳೆಯ ಪರಿಸ್ಥಿತಿ ಬಹಳ, ಬಹಳ ಬದಲಾಗಿದೆ. ಬದಲಾಗಿದೆ ಎನ್ನುವುದಕ್ಕಿಂತ ಹೆಚ್ಚು ಸುಧಾರಿಸಿದೆ ಅನ್ನೋದು ಸೂಕ್ತ. ಹೆಚ್ಚು ಆತ್ಮ ವಿಶ್ವಾಸದಿಂದ ಆಕೆ ಸಮಾಜದಲ್ಲಿ ಎದ್ದು ನಿಂತಿದ್ದಾಳೆ. ತಲೆ ಎತ್ತಿ ನಿಂತಿದ್ದಾಳೆ. ಹೀಗೆ ಬದಲಾಗಿದ್ದು ಕೇವಲ ಮಹಿಳೆ ಮಾತ್ರವೇ?

ಅಲ್ಲ. ಅದಕ್ಕೆ ತಕ್ಕ ಹಾಗೆ ಪುರುಷರೂ ಬದಲಾಗಿದ್ದಾರೆ. ಒಟ್ಟಾರೆ ನಮ್ಮ ಸಮಾಜವೇ ಬದಲಾವಣೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಹಿಂದೆ ಸಂಗೀತ, ನೃತ್ಯ, ನಾಟಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವ ಮಹಿಳೆಯರೇ ಬೇರೆ ಇದ್ದರು. ಅವರ ಬಗ್ಗೆ ಸಮಾಜದ ದೃಷ್ಟಿ ಭಿನ್ನವಾಗಿತ್ತು. ದೇವದಾಸಿ ಪದ್ಧತಿ ಇತ್ತು. ರಾಜ ಮಹಾರಾಜರ ಆಸ್ಥಾನಗಳಲ್ಲಿ ನೃತ್ಯಗಾತಿಯರು ಎಂದರೆ ಸಮಾಜದಲ್ಲಿ ಅಂತಹ ಗೌರವ ಏನೂ ಇರಲಿಲ್ಲ. ಒಟ್ಟಾರೆಯಾಗಿ ಕಲಾವಿದರ ಬಗ್ಗೆಯೇ ಗೌರವ ಇರಲಿಲ್ಲ. ಕಲಾವಿದರನ್ನು ಮನೆಗೆ  ಸೇರಿಸಿಕೊಳ್ಳುವಾಗ ಹಿಂದು ಮುಂದೆ ನೋಡುವ ಪರಿಸ್ಥಿತಿ ಇತ್ತು.ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಪ್ರಜಾಪ್ರಭುತ್ವ ಜಾರಿಯಾದ ನಂತರ ರಾಜರ ಆಸ್ಥಾನಗಳು ಹಿಂದಕ್ಕೆ ಸರಿದ ಮೇಲೆ ಬದಲಾವಣೆಯ ಗಾಳಿ ಬೀಸತೊಡಗಿತು. ದೇವದಾಸಿ ಪದ್ಧತಿಗಳಿಗೆ ಕಾನೂನಿನ ಕಡಿವಾಣ ಬಿದ್ದ ಮೇಲೆ ಸುಧಾರಣೆಯ ಪರ್ವ ಆರಂಭವಾಯಿತು. ಬ್ರಿಟಿಷರು ಕೊಟ್ಟ ಶಿಕ್ಷಣ, ಮೀಸಲಾತಿಗಳು ಕೂಡ ಬದಲಾವಣೆಯನ್ನು ಹೆಚ್ಚಿಸಿದವು. ಈ ಎಲ್ಲ ಅವಕಾಶವನ್ನು ಬಾಚಿಕೊಂಡ ಮಹಿಳೆ ಲಲಿತ ಕಲೆಗಳಲ್ಲಿಯೂ ಮಿಂಚತೊಡಗಿದಳು. ಜೊತೆ ಜೊತೆಗೆ ಪುರುಷರ ಮನೋಭಾವದಲ್ಲಿ ಕೂಡ ಬದಲಾವಣೆಯಾಯಿತು.ಕಲಾವಿದರೂ ಕೂಡ ತಮ್ಮ ನಡವಳಿಕೆಯನ್ನು ಬದಲು ಮಾಡಿಕೊಂಡರು. ಇಂತಹ ಮಹತ್ವದ ಬದಲಾವಣೆಗೆ ಕೂಡ ಮಹಿಳೆ ಕಾರಣಳಾದಳು.

ಎಂ.ಎಸ್.ಸುಬ್ಬಲಕ್ಷ್ಮಿ, ಗಂಗೂಬಾಯಿ ಹಾನಗಲ್, ಎಂ.ಎಲ್.ವಸಂತಕುಮಾರಿ, ಡಿ.ಕೆ.ಪಟ್ಟಮ್ಮಾಳ್, ಬಿ.ವೃಂದ, ಪರ್ವಿನ್ ಸುಲ್ತಾನ್, ಕಿಶೋರಿ ಅಮೋಣಕರ್, ಕೇಸರಿಬಾಯಿ ಕೇರಕರ್, ಹೀರಾಬಾಯಿ, ಲತಾ ಮಂಗೇಶ್ಕರ್ ಮುಂತಾದ ಮಹಿಳೆಯರು ಸಂಗೀತ ಪ್ರಪಂಚದಲ್ಲಿ ಕಾಣಿಸಿಕೊಂಡ ನಂತರ ಸಾವಿರ ಸಾವಿರ ಮಹಿಳೆಯರಿಗೆ ಅವರು ಮಾದರಿಯಾದರು. ಸ್ಫೂರ್ತಿ ತುಂಬಿದರು. ಇಡೀ ದೇಶದಲ್ಲಿ ಸಂಗೀತ, ನೃತ್ಯ ಕ್ಷೇತ್ರಕ್ಕೆ ಹೊಸ ನೀರು ನುಗ್ಗಿತು.ಕಲೆಯಿಂದ ವರಮಾನ, ಬಹುಮಾನ, ಪ್ರಶಸ್ತಿ, ಗೌರವ, ಸರ್ಕಾರಿ ನೌಕರಿ ಮುಂತಾದ ಅವಕಾಶಗಳ ಬಾಗಿಲುಗಳು ತೆರೆದುಕೊಂಡ ನಂತರ ಎಲ್ಲ ವರ್ಗದ ಮಹಿಳೆಯರೂ ಕಲಾ ಪ್ರಪಂಚದಲ್ಲಿ ಕಾಲಿಟ್ಟರು. ಹಿಂದಿನ ಕಾಲದಲ್ಲಿ ಬ್ರಾಹ್ಮಣ ಪುರುಷರು ಕಲಾವಿದರಾದರೆ ಅಡ್ಡಿ ಇರಲಿಲ್ಲ. ಆದರೆ ಮೇಲ್ವರ್ಗದ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಆದರೆ ಕಾಲ ಬದಲಾದ ಹಾಗೆ ಈ ಎಲ್ಲ ಪೊಳ್ಳು ಮೌಲ್ಯಗಳೂ ಕಳಚಿದವು. ಸಾಮಾಜಿಕ ಕಟ್ಟುಪಾಡುಗಳೂ ಸಡಿಲವಾದವು. ಆಗಿನ ಕಾಲದಲ್ಲಿ ಮೇಲ್ವರ್ಗದ ಮಹಿಳೆಯರಿಗೆ ಲಲಿತ ಕಲಾ ಕ್ಷೇತ್ರದಲ್ಲಿ ಮಿಂಚುವ ಆಸೆ ಇರಲಿಲ್ಲ ಎಂದಲ್ಲ. ಆದರೆ ಕಟ್ಟುಪಾಡುಗಳಿದ್ದವು. ಪ್ರಜಾಪ್ರಭುತ್ವ ಆ ಕಟ್ಟುಪಾಡನ್ನು ಸಡಿಲಿಸಿತು.ಆಕಾಶವಾಣಿ ಮತ್ತು ದೃಶ್ಯ ಮಾಧ್ಯಮಗಳು ಬಂದ ಮೇಲಂತೂ ಮಹಿಳೆ ಯಾವುದೇ ಅವಕಾಶವನ್ನು ಬಿಡಲಿಲ್ಲ.  ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಬೇರುಗಳು ಬಲಗೊಳ್ಳುತ್ತಾ ಸಾಗಿದ ನಂತರ ಸಾಮಾಜಿಕ ದೃಷ್ಟಿಕೋನ ಕೂಡ ಬದಲಾಗುತ್ತಾ ಬಂತು. ಮುಖ್ಯವಾಹಿನಿಗೆ ಬಂದ ಮಹಿಳೆ ಪುರುಷ ಕಲಾವಿದರೊಂದಿಗೆ ಸಂವಹನ, ಸಹವರ್ತನೆ, ಕೂಡಿ ಕೆಲಸ ಮಾಡುವ ಗುಣವನ್ನು ಬೆಳೆಸಿಕೊಂಡಳು. ಇದಕ್ಕೆ ಪುರುಷರೂ ಸಹಕರಿಸಿದರು.ಲಲಿತಕಲಾ ಪ್ರಪಂಚಕ್ಕೆ ಮಹಿಳೆಯರು ಬಂದಿದ್ದರಿಂದ ಈ ಕ್ಷೇತ್ರ ಸಮೃದ್ಧವಾಯಿತು. ಇಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸ್ಪರ್ಧೆಗೆ ಅವಕಾಶವೇ ಇಲ್ಲ. ಸ್ಪರ್ಧೆ ನಡೆಯುವುದಾದರೆ ಅದು ಪುರುಷ ಪುರುಷರ ನಡುವೆ ಮತ್ತು ಮಹಿಳೆ ಮಹಿಳೆಯ ನಡುವೆ ಮಾತ್ರ. ಅದಕ್ಕಾಗಿ ಪುರುಷ-ಮಹಿಳೆಯ ನಡುವಿನ ಸಂಬಂಧಗಳಲ್ಲಿ ಯಾವುದೇ ರೀತಿಯ ಸಂಘರ್ಷ ಉಂಟಾಗಲಿಲ್ಲ. ಮಹಿಳೆಯರು ಹೆಚ್ಚಾಗಿ ಬಂದಿದ್ದರಿಂದ ಪುರುಷರ ಅವಕಾಶವೇನೂ ಕಡಿಮೆಯಾಗಲಿಲ್ಲ.ನಾನು ಧಾರವಾಡದಲ್ಲಿ ಇದ್ದಾಗ ಒಮ್ಮೆ ಎಂ.ಎಲ್.ವಸಂತಕುಮಾರಿ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರ ಹಾಡುಗಾರಿಕೆ ಎಷ್ಟು ಪ್ರಭಾವ ಬೀರಿತು ಎಂದರೆ ಅವರ ಗಮಕ, ಪಲುಕುಗಳು ನನ್ನನ್ನೂ ತುಂಬಿಕೊಂಡವು. ನಾನು ಅವರನ್ನು ಅನುಕರಿಸಲು ಆರಂಭ ಮಾಡಿಬಿಟ್ಟೆ. ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಕಾರ್ಯಕ್ರಮಕ್ಕೆ ನಾನು ಹೋಗಿಲ್ಲ. ಆದರೆ ಅವರು ತಮ್ಮ ಕ್ಯಾಸೆಟ್ ಮೂಲಕವೇ ಪ್ರಭಾವ ಬೀರಿದರು.ಕುಂದಗೋಳದಲ್ಲಿ ಒಮ್ಮೆ ಉಷಾ ಫಾರಕಿ ಅವರ ಕಾರ್ಯಕ್ರಮವಿತ್ತು. ಅವರ ನಟಮಲ್ಹಾರ ಕೇಳಿ ನಾನು ಅವರ ಬೆನ್ನು ಹತ್ತಿದ್ದೆ. ಗಂಗೂ ಬಾಯಿ ಹಾನಗಲ್ ಅವರು ಮೂರು ವರ್ಷಗಳ ಕಾಲ ನನಗೆ ಪಾಠ ಮಾಡಿದ್ದರು. ಅವರದ್ದು ಪರಿಶುದ್ಧ ಸಂಗೀತ. ಯಾವ ಡೌಲೂ ಇಲ್ಲ. ಸೀದಾ ಸಾದಾ ಸರಳರೇಖಾತ್ಮಕ ಪರಿಶುದ್ಧ ಗಾಯನ. ಶ್ರೇಷ್ಠ ಸಂಗೀತ. ಅವರೂ ಕೂಡ ನನ್ನ ನಡವಳಿಕೆಯನ್ನೇ ತಿದ್ದಿದವರು.ಸ್ವಂತ ಆಲೋಚನೆ, ಸ್ವಂತ ಕ್ರಿಯೆ ಮತ್ತು ಸ್ವಂತ ನಿರ್ಧಾರ ಹೊಂದಿರುವಾಕೆ ಆದರ್ಶ ಮಹಿಳೆ. ಇದು ಕೇವಲ ಸಂಗೀತ ಲೋಕಕ್ಕೆ ಸೀಮಿತವಲ್ಲ. ಎಲ್ಲ ಕ್ಷೇತ್ರಕ್ಕೂ ಅನ್ವಯವಾಗುವಂತಹದ್ದು. ಈಗ ಕೆಲವು ಕಡೆ ಸಂಗೀತ, ನೃತ್ಯ ಎಂದರೆ ಅದು ಕೇವಲ ಮಹಿಳೆಯರಿಗೆ ಸೀಮಿತ ಎನ್ನುವ ಭಾವನೆಯೂ ಇರಬಹುದು. ಆದರೆ ಅದು ತಪ್ಪು. ಯಾವುದೇ ಕ್ಷೇತ್ರ ಈಗ ಕೇವಲ ಮಹಿಳೆಗೆ ಅಥವಾ ಕೇವಲ ಪುರುಷರಿಗೆ ಎಂದು ಸೀಮಿತವಾಗಿಲ್ಲ.ಇಲ್ಲಿ ಇನ್ನೊಂದು ಮಾತನ್ನು ಹೇಳಬೇಕು. ಭಾರತದಲ್ಲಿ ಸಿನಿಮಾ ಯುಗ ಆರಂಭವಾದ ನಂತರ ಮಹಿಳೆ ಮತ್ತು ಪುರುಷರಲ್ಲಿ ಸಮಾನತೆ ಬಂತು. ಸಂಗೀತ ಕ್ಷೇತ್ರದಲ್ಲಿಯಂತೂ ಇದು ಹೆಚ್ಚಾಯಿತು. ನಾಯಕನಿಗೆ ಹಾಡುವ ಹಾಡುಗಾರರಿಗಿಂತ ನಾಯಕಿಗೆ ಹಾಡುವ ಹಾಡುಗಾರರು ಯಾವ ಕಾಲದಲ್ಲಿಯೂ ಕಡಿಮೆಯಾಗಲಿಲ್ಲ. ಅವರಿಗೆ ಸಿಗುವ ಗೌರವದಲ್ಲಿಯೂ ಕಡಿಮೆ ಇರಲಿಲ್ಲ. ಇಂತಹ ಸಹಬಾಳ್ವೆ ಮುಂದುವರಿದರೆ ಚೆನ್ನ. ಹಾಗಂತ ಯಾಕೆ ಹೇಳಬೇಕು. ಇದು ಮುಂದುವರಿಯುತ್ತದೆ. ಈಗ ಅದೊಂದೇ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.