ಗುರುವಾರ , ಮೇ 19, 2022
23 °C

ಅವಮಾನಿಸಿದ ಪಕ್ಷವನ್ನೇ ಸೇರಿದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕೊಟ್ಟ ಮಾತಿನಂತೆ ನಡೆಯದೇ, ಬಿಜೆಪಿ ಸಾಕಷ್ಟು ಅವಮಾನ ಮಾಡಿದೆ. ಆದರೂ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಸಂಗಣ್ಣ ಕರಡಿ ಆ ಪಕ್ಷವನ್ನೇ ಸೇರಿಕೊಳ್ಳುವುದು ಎಷ್ಟು ಸರಿ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಾಲೋಣಿ ನಾಗಪ್ಪ ಪ್ರಶ್ನಿಸಿದ್ದಾರೆ.ಅಲ್ಲದೇ, 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಂಗಣ್ಣ ಕರಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಅವರಿಗೆ ರಾಜಕೀಯ ಪುನರ್ಜನ್ಯ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರಿಗೇ ಸಂಗಣ್ಣ ಕರಡಿ ದ್ರೋಹ ಬಗೆದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಅವರು ಶನಿವಾರ ಇಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕಳೆದ ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮಾತು ಕೊಟ್ಟಿದ್ದರು. ಆದರೆ, ನಂತರ ಅನೇಕ ಬಾರಿ ತಾವು ಹಾಗೂ ಸಂಗಣ್ಣ ಅವರು ಕರೆ ಮಾಡಿದರೂ ಸಚಿವ ಸವದಿ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಕೊನೆಗೆ ಚುನಾವಣೆ ನಡೆಯುವ ದಿನವೇ ಕೈಕೊಟ್ಟು, ಅವಮಾನ ಮಾಡಿದರು. ಆಗ ಅನಿವಾರ್ಯವಾಗಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಮೂಲಕ ಉಪಾಧ್ಯಕ್ಷ ಸ್ಥಾನವನ್ನು ಆ ಪಕ್ಷಕ್ಕೆ ಕೊಡಬೇಕಾಯಿತು ಎಂದು ಅವರು ಹೇಳಿದರು.ಈ ರೀತಿ ಅವಮಾನ ಮಾಡಿರುವ ಬಿಜೆಪಿಯನ್ನು ಸೇರುವ ಮೂಲಕ ಸಂಗಣ್ಣ ಕರಡಿ ಪಕ್ಷಕ್ಕೆ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಿದ್ದಾರೆ ಎಂದು ಅವರು ಟೀಕಿಸಿದರು.ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸೇರಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಬಿಜೆಪಿ ಶಾಸಕರೇ ಇರುವ ಜಿಲ್ಲೆಯ ಯಲಬುರ್ಗಾ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ವ್ಯಂಗ್ಯವಾಡಿದ ಅವರು, ಈ ಹಿಂದೆ ಬಿಜೆಪಿ ಸೇರಿದಾಗ ಅನುಭವಿಸಿದ್ದನ್ನು ಸಂಗಣ್ಣ ಮರೆತಿರುವಂತಿದೆ ಎಂದು ಕಟಕಿಯಾಡಿದರು.2004ರಲ್ಲಿ ಬಿಜೆಪಿ ಸೇರಿ, ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿ ಇವರಿಗೆ ಹಣವನ್ನೇ ನೀಡಿರಲಿಲ್ಲ. ಆಗಿನ ಚುನಾವಣಾ ವೆಚ್ಚಕ್ಕಾಗಿ ತಾವು ಸಾಲ ಮಾಡಿ ಸಂಗಣ್ಣ ಅವರಿಗೆ ಹಣ ನೀಡಿದ್ದೆ ಎಂದೂ ಅವರು ಮೆಲುಕು ಹಾಕಿದರು.ಶೀಘ್ರದಲ್ಲಿಯೇ ತಾವು ಪಕ್ಷದ ವಿವಿಧ ಘಟಕಗಳ ಹಾಗೂ ತಾಲ್ಲೂಕು ಪದಾಧಿಕಾರಿಗಳ ಸಭೆಯನ್ನು ಕರೆಯುವುದಾಗಿ ಹೇಳಿದ ಅವರು, ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದರು.

ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದ ಬಾರದು. ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಆಗಮಿಸಲಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಿದ್ದಾರೆ ಎಂದೂ ಅವರು ಹೇಳಿದರು.ತಾವು ಜೆಡಿಎಸ್‌ನಿಂದ ಆಯ್ಕೆಯಾಗಿದ್ದು, ಈ ಪಕ್ಷದಲ್ಲಿಯೇ ಇರುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ನಾಗನಗೌಡ ಮಾಲಿಪಾಟೀಲ ಸ್ಪಷ್ಟಪಡಿಸಿದರು. ಒಂದು ವೇಳೆ ಬಿಜೆಪಿ ಸೇರಲು ಆಹ್ವಾನ ಬಂದರೆ, ಆ ಸಂದರ್ಭದಲ್ಲಿ ಸಮಾಲೋಚನೆ ನಡೆಸಿ ನಿರ್ಧರಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಗರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಸಹ ತಾವು ಜೆಡಿಎಸ್‌ನಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.