ಗುರುವಾರ , ಮೇ 13, 2021
35 °C
`ಸರ್ಕಾರದ ಬಳಿ ಕಿರು ಜಲವಿದ್ಯುತ್ ಯೋಜನೆ ಪ್ರಸ್ತಾವ ದಾಖಲೆ ಲಭ್ಯ'

`ಅಶೀಸರ ಹೇಳಿಕೆಯಿಂದ ತಪ್ಪು ಕಲ್ಪನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ:  `ಅಘನಾಶಿನಿ ಮತ್ತು ಬೇಡ್ತಿ ನದಿಯಲ್ಲಿ ಮಿನಿ ವಿದ್ಯುತ್ ಯೋಜನೆಗಳ ಪ್ರಸ್ತಾವ ಇಲ್ಲ ಎಂದು ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಇತ್ತೀಚೆಗೆ ನೀಡಿರುವ ಹೇಳಿಕೆ ಜನರಲ್ಲಿ ತಪ್ಪು ಕಲ್ಪನೆ ಉಂಟು ಮಾಡುವಂತಿದೆ' ಎಂದು  ಅಘನಾಶಿನಿ-ಸೋಮ ನದಿ ಕಿರು ಜಲ ವಿದ್ಯುತ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಆರ್.ನಾಯ್ಕ ಹೆಗ್ಗಾರಕೈ  ಹೇಳಿದರು.   ಸ್ಥಳೀಯ ಪ್ರವಾಸಿ ಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ನದಿಗಳಲ್ಲಿ ಕಿರು ಜಲವಿದ್ಯುತ್ ಯೋಜನೆ ಕೈಗೊಳ್ಳುವ ಕುರಿತಂತೆ ಸರ್ಕಾರದ ಬಳಿ ಪ್ರಸ್ತಾವ ಇರುವ ಬಗ್ಗೆ ದಾಖಲೆಗಳಿವೆ' ಎಂದರು.ಅನಂತ ಹೆಗಡೆ ಅಶೀಸರ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿಕೆ ನೀಡಿದ್ದಲ್ಲದೇ ಗಣೇಶಪಾಲ್ ಯೋಜನೆಯ ಜಾಗೃತಿ ಸಭೆ ನಡೆಸುವುದಾಗಿ  ಹೇಳಿದ್ದು ಕೂಡ ವರದಿಯಾಗಿದೆ. ಜಿಲ್ಲೆಯಲ್ಲಿ ಕಿರು ಜಲವಿದ್ಯುತ್ ಯೋಜನೆಗಳನ್ನು ಮಾಡಲು 25 ಸ್ಥಳಗಳನ್ನು  ಗುರುತಿಸಲಾಗಿದ್ದು, ಅವುಗಳಲ್ಲಿ ಗಣೇಶಪಾಲ್‌ನೊಂದಿಗೆ  ತಾಲ್ಲೂಕಿನ  ಹುಲ್ಕುತ್ರಿ(ಸೋಮನದಿಗೆ) ಮತ್ತು ದಂಟ್ಕಲ್(ಅಘನಾಶಿನಿ ನದಿಗೆ) ಯೋಜನೆಗಳೂ ಸೇರಿವೆ.

ಈ ಕಿರು ಜಲವಿದ್ಯುತ್ ಯೋಜನೆಗಳನ್ನು ಜಾರಿ ಮಾಡಲು  ಖಾಸಗಿ ಕಂಪೆನಿಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲ ಮಾಹಿತಿಗಳು ಪರಿಸರವಾದಿ ಶಿವರಾಮ ಗಾಂವಕರ ಅವರಿಂದ ನಮಗೆ ದೊರೆತಿದೆ' ಎಂದರು.`ಈ ರೀತಿ ಮಾಹಿತಿ ದೊರೆತ ನಂತರ ನಾವು ಮಾಣಿ ಹೊಳೆಯ ಸೇತುವೆಯ ಮೇಲೆ ಬೃಹತ್ ಪ್ರತಿಭಟನಾ ಸಭೆಯನ್ನು 2012ರ ಅಕ್ಟೋಬರ್ 9ರಂದು ನಡೆಸಿದ್ದೇವೆ. ಆ ಸಭೆಯ ನಿರ್ಣಯಗಳನ್ನು ಮುಖ್ಯಮಂತ್ರಿಗಳೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ಕಳುಹಿಸಿದ್ದೇವೆ. ಹೀಗಿದ್ದರೂ ಇದೇ ವರ್ಷ ಮೇ 24ರಂದು ಧಾರವಾಡದಲ್ಲಿರುವ ರಾಜ್ಯ ಸರ್ಕಾರದ ನೀರಾವರಿ ತನಿಖಾ ವಿಭಾಗದ  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇಲ್ಲಿಗೆ ಆಗಮಿಸಿ  ಹುಲ್ಕುತ್ರಿ ಮತ್ತು ದಂಟ್ಕಲ್‌ನಲ್ಲಿ ಕಿರು ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಕುರಿತು  ನಮ್ಮ ಅಭಿಪ್ರಾಯವ್ನು  ಪಡೆದಿದ್ದಾರೆ. ಒಂದೊಮ್ಮೆ  ಈ ಯೋಜನೆಗಳ ಪ್ರಸ್ತಾವವಿಲ್ಲದಿದ್ದರೆ, ಆ ಅಧಿಕಾರಿ ಯಾಕೆ ಇಲ್ಲಿಗೆ ಬರುತ್ತಿದ್ದರು' ಎಂದು ಪ್ರಶ್ನೆ ಮಾಡಿದರು.`ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಸ್ಥಾನದಂತಹ ಉನ್ನತ ಹುದ್ದೆಯಲ್ಲಿದ್ದ ಅನಂತ ಅಶೀಸರ ಈ ರೀತಿ ಹೇಳಿಕೆ ನೀಡುವ ಬದಲಿಗೆ  ನಮ್ಮ ಹೋರಾಟದೊಡನೆ ಕೈಜೋಡಿಸಲಿ. ಈ ಹೋರಾಟದ ಮುಂದಾಳತ್ವ ವಹಿಸಲಿ. ಇದರಿಂದ  ನಮ್ಮ ಹೋರಾಟ ಮತ್ತಷ್ಟು ಶಕ್ತಿಯುತವಾಗುತ್ತದೆ. ಇಲ್ಲವಾದರೆ ಈ  ರೀತಿ ಹೇಳಿಕೆ ನೀಡುವುದನ್ನು ಬಿಡಲಿ' ಎಂದರು.ಪತ್ರಿಕಾಗೋಷ್ಠಿಯಲ್ಲಿ ಅಘನಾಶಿನಿ-ಸೋಮ ನದಿ ಕಿರು ಜಲ ವಿದ್ಯುತ್ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಗಣಪತಿ ಭಟ್ಟ ಜಾತಕ, ಸೋವಿನಕೊಪ್ಪ ಗ್ರಾ.ಪಂ.ಅಧ್ಯಕ್ಷ ಎನ್.ಎಲ್.ಗೌಡ ಕಿಲವಳ್ಳಿ, ಸದಸ್ಯ  ಅನಂತ ತಿಮ್ಮ ಗೌಡ ಮತ್ತು ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.