ಸೋಮವಾರ, ಜನವರಿ 20, 2020
25 °C

ಆಕಾಶ ವೀಕ್ಷಕರೇ, ನಿಂತ ನೆಲವನ್ನೂ ನೋಡಿ...

ಪಿ.ಆರ್.ಆನಂದ್,ರಾಯರಹುಂಡಿ,ಟಿ. ನರಸೀಪುರ ತಾಲ್ಲೂಕು Updated:

ಅಕ್ಷರ ಗಾತ್ರ : | |

‘ಪ್ರಜಾವಾಣಿ’ಯ ನವೆಂಬರ್ ೨೮ರ ಸಂಚಿಕೆಯಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಪ್ರಕಟವಾಗಿರುವ ಎರಡು ವರದಿಗಳು ಯಾರನ್ನಾ­ದರೂ ಯೋಚನೆಗೆ ಹಚ್ಚುವಂತಿವೆ. ಒಂದು ಪುಟದಲ್ಲಿ ಸುವರ್ಣಸೌಧದ ಎದುರು ಪ್ರತಿ­ಭಟನಾ­­ನಿರತ ರೈತನ ಆತ್ಮಹತ್ಯೆಯ ವಿವರ­ವಾದ ಸುದ್ದಿ. ಪಕ್ಕದ ಪುಟದಲ್ಲಿ ಡಿ.೧ರಂದು ಭೂಕಕ್ಷೆ­ಯಿಂದ ಸೂರ್ಯನ ಪ್ರಭಾವಲಯಕ್ಕೆ ಮಂಗಳ ನೌಕೆ ಪ್ರವೇಶ ಮಾಡಲಿರುವುದರ ಕುರಿತು ಚಿತ್ರವರದಿ.ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದ ಸ್ಥಳದಲ್ಲಿ ರೈತ ವಿಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈ ಸುದ್ದಿ ಮಹತ್ವ ಪಡೆದಿತ್ತು. ಆಡಳಿತ ಪಕ್ಷದವರು ಹಿಂದಿನ ಸರ್ಕಾರವನ್ನು ಹೊಣೆಮಾಡಲು,  ಪ್ರತಿಪಕ್ಷದವರು ಸರ್ಕಾರವನ್ನು ತಪ್ಪಿತಸ್ಥ ಸ್ಥಾನ­ದಲ್ಲಿ ನಿಲ್ಲಿಸಲು ನಡೆಸಿದ ‘ಹೋರಾಟ’ವೂ ಇದಕ್ಕೊಂದು ಕಾರಣವಾಗಿರಬಹುದು. ನಮ್ಮ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ. ರಾಜಕೀ­ಯ ಮೇಲಾಟ ನಡೆಯದೇ ಇದ್ದಿದ್ದರೆ ಈ ಆತ್ಮಹತ್ಯೆಯೂ ಎಲ್ಲೋ ಒಳಪುಟದಲ್ಲಿ ಎರಡು ಸಾಲಿನ ಸುದ್ದಿಯಾಗಿರುತ್ತಿತ್ತು.ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ­ಕೊಂಡು, ಕಡಿಮೆ ವೆಚ್ಚದಲ್ಲಿ, ಕೇವಲ ೧೫ ತಿಂಗಳ­ಲ್ಲಿ, ಮಂಗಳ­ಯಾನ ಯೋಜನೆಯನ್ನು ನಮ್ಮ ವಿಜ್ಞಾನಿಗಳು  ರೂಪಿಸಿ, ಯಶಸ್ವಿ­ಗೊಳಿಸಿ­ದರು. ಆದರೆ, ಕಣ್ಣಿಗೆ ಕಾಣುವಂತಿರುವ ರೈತರ ಸಮಸ್ಯೆಗಳನ್ನು ಪರಿಹರಿಸಲು ಏಕೆ ಸಾಧ್ಯವಾಗು­ತ್ತಿಲ್ಲ. ರೈತರ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಯಾಗಿ ಏಕೆ ಪರಿಗಣಿಸಲಾಗುತ್ತಿಲ್ಲ?ಹವಾಮಾನ, ಉತ್ತಮ ಮಳೆ, ಗುಣಮಟ್ಟದ ಬಿತ್ತನೆ ಬೀಜ, ಸಕಾಲದಲ್ಲಿ ಗೊಬ್ಬರ ಪೂರೈಕೆ, ನುರಿತ ಕೃಷಿ ಕಾರ್ಮಿಕರ ಲಭ್ಯತೆ ಎಲ್ಲದರ ಮೇಲೆ ಕೃಷಿ ಅವಲಂಬಿತವಾಗಿದೆ. ಈ ಅಂಶಗಳು ರೈತನ ಹತೋಟಿಯಲ್ಲಿಲ್ಲ. ಬಿಸಿಲು ನೆತ್ತಿ ಸುಟ್ಟರೆ, ವ್ಯವಸ್ಥೆ ಒಡಲನ್ನು ಸುಡುತ್ತದೆ. ರೈತರ ಆತ್ಮಬಲ ಕುಸಿದು ಹೋಗಿರುವುದೇ ಆತ್ಮಹತ್ಯೆಗೆ

ಕಾರಣ. ರೈತರಿಗೆ ಬೇಕಾದದ್ದು ಪರಿಹಾರವೊಂದೇ ಅಲ್ಲ. ಸ್ವಾವಲಂಬನೆಗೆ ನೆರವಾಗುವ ಅರ್ಥವ್ಯವಸ್ಥೆ. ಸಬ್ಸಿಡಿ, ಸಾಲಮನ್ನಾ ಮೊದಲಾದ, ಕೆಲವರನ್ನು ಮಾತ್ರ ತಲುಪಬಹುದಾದ, ಆರ್ಥಿಕ ಸಹಾ ಯದ ಬದಲು, ರೈತ ಸಮುದಾಯಕ್ಕೆ ಸಾರ್ವತ್ರಿಕ­ವಾಗಿ ಅನುಕೂಲವಾಗುವ ಕೃಷಿ ಉತ್ಪನ್ನ ಗಳಿಗೆ ಸೂಕ್ತ ಬೆಲೆ ನಿಗದಿ ವ್ಯವಸ್ಥೆ ಆಗಬೇಕು.ಸಾಲ ಸೌಲಭ್ಯ, ಬಿತ್ತನೆ ಬೀಜ, ಸಮರ್ಪಕ ವಿದ್ಯುತ್ ಸರಬರಾಜು, ನ್ಯಾಯೋಚಿತ ಬೆಂಬಲ ಬೆಲೆ ರೈತರನ್ನು ಮುಟ್ಟುವ ವೇಳೆಗೆ ಭ್ರಷ್ಟತೆ, ತಾಂತ್ರಿಕ ತೊಂದರೆಗಳಿಂದ ವಿಳಂಬವಾಗುತ್ತದೆ. ರೈತರ ಸಾಲ ಮನ್ನಾ ಮಾಡಲೆಂದು ಕೇಂದ್ರ ಸರ್ಕಾರ ೨೦೦೭ರಲ್ಲಿ ೬೦ ಸಾವಿರ ಕೋಟಿ ರೂಪಾಯಿ ತೆಗೆದಿರಿಸಿತು. ಮಾಧ್ಯಮದವರು ಸರ್ಕಾರಕ್ಕೆ ರೈತರ ಬಗೆಗಿರುವ ಕಾಳಜಿಯನ್ನು ಹೊಗಳಿದರು. ಆದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಹಾಗಾಗಿ ಸಾಲ ಮನ್ನಾ ಯೋಜನೆ ನಿಜವಾದ ರೈತರಿಗೆ ತಲುಪಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.ಜಾಗತೀಕರಣವು ನಮ್ಮ ದೇಶದ ಬೆನ್ನೆಲು­ಬಾದ ಕೃಷಿ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಎಲ್ಲರೂ ಕೃಷಿಸಂಬಂಧಿ ಸಮಸ್ಯೆಗೆ ಜಾಗತೀಕರಣ­ದತ್ತ ಕೈ ತೋರುತ್ತಾರೆ. ತೀವ್ರ ಬರಗಾಲದಲ್ಲೂ ಜೀವ ಹಿಡಿದುಕೊಂಡು ಬದುಕುವ ರೈತನಿಗೆ, ಬೆಳೆ ಕಣ್ಣೆದುರಿಗಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿರುವುದು ರೈತರ ಹತಾಶ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ನೀರಾವರಿ ಪ್ರದೇಶದಲ್ಲೇ ರೈತರ ಆತ್ಮಹತ್ಯೆ ಸಂಖ್ಯೆಯ ಹೆಚ್ಚಳ ಯೋಚಿಸುವಂತೆ ಮಾಡುತ್ತದೆ.ಭತ್ತದ ಕೊಯ್ಲಿನ ಹಂಗಾಮು ಆರಂಭ­ವಾಗಿದೆ. ಸರ್ಕಾರದ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಸರ್ಕಾರ ಕ್ವಿಂಟಲ್ ಭತ್ತಕ್ಕೆ ₨ ೧,೬೦೦-  ಬೆಂಬಲ ಬೆಲೆಯನ್ನು ಘೋಷಿಸಿದೆ.  ಕಳೆದ ವರ್ಷದ ಸುಗ್ಗಿ ಹಂಗಾಮಿನಲ್ಲಿ ಅಕ್ಕಿ ಗಿರಣಿ ಮಾಲೀಕರು ರೈತರಿಂದ ಕ್ವಿಂಟಲ್‌ಗೆ ₨ ೨,೨೦೦ ರಿಂದ -೨,೪೦೦ಕ್ಕೆ  ಭತ್ತವನ್ನು ಖರೀದಿಸಿದ್ದರು. ಜಲಾಶಯಗಳಲ್ಲಿ ನೀರಿಲ್ಲದ ಕಾರಣ ಈ ವರ್ಷ ಬೇಸಿಗೆಯಲ್ಲೂ ರೈತರು ಭತ್ತ ಬೆಳೆದಿರಲಿಲ್ಲ. ವರ್ಷದ ನಂತರ ಬೆಳೆದ ಬೆಳೆಯನ್ನು ನೋಡಿ ಸಂತೋಷಪಡುವ ಸ್ಥಿತಿಯಲ್ಲಿ ರೈತನಿಲ್ಲ.ಸರ್ಕಾರದಿಂದ ಕೊಡಮಾಡುತ್ತಿರುವ ಅನ್ನ­ಭಾಗ್ಯದ ಅಕ್ಕಿ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸಿ­ರುವುದರಿಂದ ಅಕ್ಕಿ ಗಿರಣಿ ಮಾಲೀಕರು ರೈತರಿಂದ ಭತ್ತ ಖರೀದಿಸಲು ಹಿಂದೇಟು ಹಾಕುತ್ತಿ­ದ್ದಾರೆ. ಈಗಾಗಲೇ ಎಷ್ಟೋ ಕಡೆಗಳಲ್ಲಿ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಭತ್ತ ಮಾರಾಟ ಮಾಡುವ ಅನಿವಾರ್ಯಕ್ಕೆ ರೈತರು ಒಳಗಾಗಿದ್ದಾರೆ. ಹೋದ­ವರ್ಷ ಬೆಳೆ ಬೆಳೆಯಲು ತಗುಲಿರುವ ಖರ್ಚಿಗಿಂತ ಈ ವರ್ಷ ಬೆಳೆ ಬೆಳೆಯಲು ಖರ್ಚು ಹೆಚ್ಚಾಗಿದೆ. ಆದರೆ ಕಳೆದ ಸುಗ್ಗಿ ಹಂಗಾಮಿಗಿಂತ ಕ್ವಿಂಟಲ್ ಭತ್ತಕ್ಕೆ ಸುಮಾರು ₨ ೮೦೦ರಷ್ಟು ದರ ಕುಸಿದಿದೆ.ವ್ಯವಹಾರಿಕವಾಗಿ ಲೆಕ್ಕ ಹಾಕಿದರೆ, ಒಂದು ಎಕರೆಗೆ ೨೦ ಕ್ವಿಂಟಲ್ ಭತ್ತ ಬೆಳೆಯುವ ರೈತ ಅನುಭವಿಸುವ ನಷ್ಟ ₨ ೧೬,೦೦೦ (ಕಳೆದ ವರ್ಷದ ದರಕ್ಕೆ ಹೋಲಿಸಿದರೆ). ಬದುಕಿದ್ದೂ ಸತ್ತಂತಿರುವ ರೈತರತ್ತ ಸರ್ಕಾರದ ಚಿತ್ತ ಹರಿಯ­ಲು ಇನ್ನೆಷ್ಟು ಆತ್ಮಹತ್ಯೆಗಳಾಗಬೇಕು? ದೇಶದಲ್ಲಿ ಸರಾಸರಿ ೩೫ ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಒಳಗಾಗುತ್ತಿದ್ದಾನೆಂದು ವರದಿಗಳು ತಿಳಿಸಿವೆ. ಆದರೆ ಸಾವಿಗೆ ಯಾರನ್ನು ಹೊಣೆ ಮಾಡಬ­ಹುದೆಂದು ರಾಜಕಾರಣಿಗಳು ಲೆಕ್ಕಾಚಾರದಲ್ಲಿ ತೊಡಗುತ್ತಾರೆ.ರೈತ ಬೆಳೆದ ಭತ್ತಕ್ಕೆ ದರ ಕುಸಿಯಲು ಕಾರಣವೇನು? ಸರ್ಕಾರ ಅನ್ನಭಾಗ್ಯ ಯೋಜನೆ­ಗಾಗಿ ಬೇರೆ ರಾಜ್ಯಗಳಿಂದ ತರಿಸಿ ವಿತರಿಸಿದ ಅಕ್ಕಿಯೇ? ಸರ್ಕಾರದ ಲೆವಿ ಸಂಗ್ರಹಣಾ ನೀತಿಯೇ? ಅಥವಾ ರೈತರಿಗೆ ಭತ್ತವನ್ನು ಕಾಪಿಟ್ಟು ಮಾರುವ ಶಕ್ತಿ ಇಲ್ಲದಿ­ರುವುದನ್ನು ಮನಗಂಡು ಅಕ್ಕಿಗಿರಣಿ ಮಾಲೀಕರು ನಡೆಸು­ತ್ತಿರುವ ಹುನ್ನಾರವೋ? ಇನ್ನೂ ಆರಂಭ­ವಾಗದ ಖರೀದಿ ಕೇಂದ್ರಗಳೋ?ರೈತರಷ್ಟು ದೊಡ್ಡ ಪ್ರಮಾಣದ ಅಸಂಘಟಿತ ವಲಯದ ಮತದಾರರಿಲ್ಲ. ರೈತರನ್ನು ಓಲೈಸಲು ಅನೇಕ ಯೋಜನೆಗಳನ್ನು ಜಾರಿ ಮಾಡಿ ಪ್ರಕಟಿಸುತ್ತಾರಾದರೂ, ಕಬ್ಬು, ಭತ್ತ, ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು, ದಾಳಿಂಬೆ, ದ್ರಾಕ್ಷಿ, ಇತರ ಹಣ್ಣಿನ ಬೆಳೆಗಳು, ಕಾಫಿ, ಅಡಿಕೆ,  ತರಕಾರಿ ಇತ್ಯಾದಿ ಯಾವ ಬೆಳೆಗೂ ಸೂಕ್ತ ದರ ಸಿಗುತ್ತಿಲ್ಲವೆಂದು ರೈತರು ಹೇಳುತ್ತಿದ್ದರೂ, ಗ್ರಾಹಕ­ರಿಗೇನೂ ಕೈಗೆಟುಕುವ ದರದಲ್ಲಿ ಇವ್ಯಾ­ವುದೂ ದೊರಕುತ್ತಿಲ್ಲ.ಹಾಗಾಗಿ ರೈತ ಒಬ್ಬ ಗ್ರಾಹಕನಾಗಿ ಪದಾರ್ಥಗಳನ್ನು ಕೊಂಡು ಉಪಯೋಗಿಸುವ ಸ್ಥಿತಿಯಲ್ಲೂ ಇಲ್ಲ. ಸರ್ಕಾರ, ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದೆಂದು ಹೇಳಿದರೂ ಕೃಷಿ ಚಟುವಟಿಕೆ ಬಿಟ್ಟು ಮಾರು­ಕಟ್ಟೆಗೆ ಹೋಗಿ ತಾವೇ ನಿಂತು ಮಾರಲು ಬೇಕಾದ ಸಮಯ, ತಿಳಿವಳಿಕೆ ರೈತರಿಗೆ ಇಲ್ಲ. ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ನೇರವಾಗಿ ರೈತರನ್ನು ತಲುಪಲು, ಕೃಷಿ ವಿಸ್ತರಣಾ ಚಟುವಟಿಕೆ ಸಮರ್ಪಕವಾಗಿರಬೇಕು. ಅಂಕಿ ಅಂಶಗಳ ಸಂಗ್ರಹಕ್ಕೆ ಸೀಮಿತವಾಗಿರುವ ಕೃಷಿ ಇಲಾಖೆ ಸೂಕ್ತ ಮಾರ್ಪಾಡು ಮಾಡಿಕೊಂಡು ರೈತರ ಕಡೆಗೆ ಗಮನಹರಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳಂತೆ ಎಲ್ಲಾ ಬೆಳೆಗಳಿಗೂ ಮನೆ ಬಾಗಿಲಲ್ಲಿ ಮಾರುಕಟ್ಟೆ ಸಿಗುವಂತಾದರೆ ರೈತರಿಗೆ ಅನುಕೂಲ.ಕಣ್ಣಿಗೆ ಕಾಣದ ಮಂಗಳನ ಕಡೆಗೆ ನೌಕೆ ಕಳುಹಿಸಲು ಸಾಧ್ಯವಾದ ದೇಶಕ್ಕೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸಲು ಏಕೆ ಸಾಧ್ಯವಾಗುತ್ತಿಲ್ಲ?

ಪ್ರತಿಕ್ರಿಯಿಸಿ (+)