ಶುಕ್ರವಾರ, ಮೇ 14, 2021
31 °C

ಆಟಗಾರರ ಮೇಲಿನ ನಿಷೇಧ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟಗಾರರ ಮೇಲಿನ ನಿಷೇಧ ತೆರವು

ನವದೆಹಲಿ (ಪಿಟಿಐ): ಅಶಿಸ್ತು ತೋರಿದ ಕಾರಣಕ್ಕಾಗಿ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಮೇಲೆ ಹೇರಲಾಗಿದ್ದ ಎರಡು ವರ್ಷಗಳ ನಿಷೇಧ ಶಿಕ್ಷೆಯನ್ನು ಹಾಕಿ ಇಂಡಿಯಾ (ಎಚ್‌ಐ) ಬುಧವಾರ ತೆರವು ಮಾಡಿದೆ. ಆದ್ದರಿಂದ ಈ ಆಟಗಾರರು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಶಿಬಿರವನ್ನು ಗುರುವಾರ ಸೇರಿಕೊಳ್ಳಲಿದ್ದಾರೆ.ತಾವು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿರುವ ಇಬ್ಬರು ಆಟಗಾರರು, ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿದಂತೆ ಎಚ್ಚರಿಕೆ ವಹಿಸುವುದಾಗಿ ಲಿಖಿತ ಹೇಳಿಕೆ ನೀಡಿರುವುದರಿಂದ ಹಾಕಿ ಇಂಡಿಯಾ ಈ ಆಟಗಾರರಿಗೆ `ಕೊನೆಯ ಅವಕಾಶ~ ನೀಡಿದೆ.`ನಿಷೇಧ ಹೇರಿರುವ ಕ್ರಮ ಪ್ರಶ್ನಿಸಿ ಸಂದೀಪ್ ಹಾಗೂ ಸರ್ದಾರ್ ಸಿಂಗ್ ಅವರು ಸಮಿತಿಗೆ ಕಳೆದ ವಾರ ಮೇಲ್ಮನವಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿ ಇವರಿಬ್ಬರ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ~ ಎಂದು ಎಚ್‌ಐ ಕಾರ್ಯ ನಿರ್ವಾಹಕ ನಿರ್ದೇಶಕ ಅನುಪಮ್ ಗುಲಾಟಿ ತಿಳಿಸಿದ್ದಾರೆ.ಕಳೆದ ತಿಂಗಳು ಬೆಂಗಳೂರಿನಲ್ಲಿ ಹಾಕಿ ತಂಡದ ರಾಷ್ಟ್ರೀಯ ಶಿಬಿರ ನಡೆದಾಗ ಅಶಿಸ್ತು ತೋರಿದ ಕಾರಣಕ್ಕಾಗಿ ಇಬ್ಬರನ್ನೂ ಎರಡು ವರ್ಷಗಳ ಕಾಲ ನಿಷೇಧ ಮಾಡಲಾಗಿತ್ತು. ವೈಯಕ್ತಿಕ ಕಾರಣ ನೀಡಿ ಹಾಕಿ ಕ್ರೀಡೆಯನ್ನೇ ತೊರೆಯುವುದಾಗಿ ಹೇಳಿದ್ದರು. ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಟೂರ್ನಿ ಆರಂಭವಾಗಲು ಕೆಲ ದಿನ ಬಾಕಿ ಇರುವಾಗ ಈ ಘಟನೆ ನಡೆದಿತ್ತು.ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ನಾಲ್ಕು ರಾಷ್ಟ್ರಗಳ ನಡುವಿನ (ಒಂಬತ್ತು ಆಟಗಾರರನ್ನು ಒಳಗೊಂಡ ತಂಡ) ಹಾಕಿ ಸರಣಿಗೆ ಸಜ್ಜುಗೊಳ್ಳಲು ಬೆಂಗಳೂರಿನಲ್ಲಿ ಮಂಗಳವಾರ ಶಿಬಿರ ಶುರುವಾಗಿದೆ. ಈ ಸರಣಿಗೆ ಸೆಪ್ಟೆಂಬರ್ 26ರಂದು ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ಈ ಆಟಗಾರರು ದೈಹಿಕ ಸಾಮರ್ಥ್ಯ ಸಾಬೀತು ಪಡಿಸಬೇಕಿದೆ.`ಇದೊಂದು ನನ್ನ ಬದುಕಿನ ಕರಾಳ ಅಧ್ಯಾಯ. ಮತ್ತೆ ನನಗೆ ಆಡಲು ಅವಕಾಶ ನೀಡಿದ್ದಕ್ಕೆ ಖುಷಿಯಾಗಿದೆ. ಗುರುವಾರ ಶಿಬಿರಕ್ಕೆ ಮರಳಲಿದ್ದೇನೆ. ಇನ್ನು ಮುಂದೆ ಹಾಕಿಯತ್ತ ಮಾತ್ರ ಗಮನ. ಭಾರತ ತಂಡದಲ್ಲಿ ನಿಷ್ಠೆಯಿಂದ ಆಡುವುದಷ್ಟೇ ನನ್ನ ಕೆಲಸ~ ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.ವಿಚಾರಣೆ ವೇಳೆ ಭಾರತೀಯ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪಿ.ಸಿ. ಕಶ್ಯಪ್, ಸರ್ಕಾರದ ವೀಕ್ಷಕರಾದ ಹರ್ಬಿಂದರ್ ಸಿಂಗ್ ಹಾಗೂ ದಿಲೀಪ್ ಠಾಕ್ರೆ, ಹಾಕಿ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಸೇರಿದಂತೆ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.