ಭಾನುವಾರ, ಮೇ 16, 2021
28 °C

ಆಟದ ಮೂಲಕ ಮಕ್ಕಳಿಗೆ ಗಣಿತದ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟದ ಮೂಲಕ ಮಕ್ಕಳಿಗೆ ಗಣಿತದ ಪಾಠ

ಬೆಂಗಳೂರು:  ಕಬ್ಬಿಣದ ಕಡಲೆ ಎನಿಸುವ ಗಣಿತದ ಪಾಠವನ್ನು ಆಟದ ಮೂಲಕ ಮಕ್ಕಳಿಗೆ ಕಲಿಸುವ `ಹ್ಯಾಂಡ್ಸ್ ಆನ್ ಮ್ಯಾಥ್ಸ್' ಪ್ರದರ್ಶನ ಮತ್ತು ಪ್ರಯೋಗ ಕಾರ್ಯಕ್ರಮ ನಗರದ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಇತ್ತೀಚೆಗೆ  ಆರಂಭವಾಯಿತು. ಗೋಥೆ ಇನ್‌ಸ್ಟಿಟ್ಯೂಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ.ಪೈತಾಗೊರಸ್ ನಿಯಮ, ಪಿರಮಿಡ್ ಕೋನಗಳ ವಿವರಣೆಗಳು, ತ್ರಿಭುಜ ಮತ್ತು ಚತುರ್ಭುಜಗಳಿಗೆ ಸಂಬಂಧಿಸಿದ ಗಣಿತದ ನಿಯಮಗಳನ್ನು ಆಟಿಕೆಗಳ ಮೂಲಕ ಮಕ್ಕಳಿಗೆ ಮನಮುಟ್ಟುವಂತೆ ಕಲಿಸಲಾಗುತ್ತದೆ.ಗೋಥೆ ಇನ್‌ಸ್ಟಿಟ್ಯೂಟ್ ಸಂಚಾಲಕಿ ಲಲಿತಾ ನಾಗರಾಮ್ ಮಾತನಾಡಿ, `ಗಣಿತವೆಂದರೆ ಇಂದಿನ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿದೆ. ಮಕ್ಕಳಿಗೆ ಕೇವಲ ಪುಸ್ತಕದ ಮೂಲಕ ಗಣಿತ ಕಲಿಸುವುದು ಕಷ್ಟ. ಇದರಿಂದ ಮಕ್ಕಳು ಗಣಿತದ ಲೆಕ್ಕಗಳನ್ನು ಬಿಡಿಸಲು ಕಷ್ಟಪಡುತ್ತಾರೆ' ಎಂದರು.`ಜರ್ಮನಿಯಲ್ಲಿ ಗಣಿತವನ್ನು ಮಕ್ಕಳಿಗೆ ಕಲಿಸಲು ನೂತನ ಕ್ರಮಗಳನ್ನು ಅನುಸರಿಸುತ್ತಾರೆ. ಅಲ್ಲಿ ಪುಸ್ತಕ ಅಥವಾ ಬೋರ್ಡ್ ಮೇಲೆ ಪಾಠ ಮಾಡುವುದಿಲ್ಲ. ಬದಲಿಗೆ ಪ್ರಾಯೋಗಿಕವಾಗಿ ಮಕ್ಕಳಿಗೆ ಗಣಿತವನ್ನು ಕಲಿಸಲಾಗುತ್ತದೆ. ಆಟದ ಮೂಲಕ ಗಣಿತದ ಪಾಠ ಸುಲಭ' ಎಂದು ಹೇಳಿದರು.`ಸ್ವತಃ ಮಕ್ಕಳೇ ಪ್ರಾಯೋಗಿಕವಾಗಿ ಕಲಿಯುವುದರಿಂದ ಅವರ ಬುದ್ಧಿ ಬೆಳವಣಿಗೆಯಾಗುತ್ತದೆ. ಯೋಚನಾ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಪ್ರಾಯೋಗಿಕವಾಗಿ ಗಣಿತವನ್ನು ಕಲಿಸುವ ದೃಷ್ಟಿಯಿಂದ ಜರ್ಮನಿಯಲ್ಲಿ ಬಳಸುವ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹ ಪ್ರಯೋಗಗಳಿಂದ ಮಕ್ಕಳು ಆಟವಾಡುತ್ತ ಕಲಿಯಬಹುದು' ಎಂದು ವಿವರಿಸಿದರು.ಪ್ರದರ್ಶನದಲ್ಲಿ ಸುತ್ತಾಡಿದ ನಂತರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಆನಿಯಾ, `ನನಗೆ ಆಟವಾಡುತ್ತ ಕಲಿಯುವುದು ತುಂಬ ಇಷ್ಟ. ಇಲ್ಲಿ ಆಟದ ಜತೆಗೆ ಪಾಠವೂ ಇದೆ. ಇದರಿಂದ ಗಣಿತ ಕಲಿಯುವುದು ಸುಲಭ' ಎಂದು ಹೇಳಿದಳು.`ಶಾಲೆಯಲ್ಲಿ ಮಕ್ಕಳಿಗೆ ವಿಪರೀತ ಮನೆ ಪಾಠ ನೀಡುತ್ತಾರೆ. ಇದರಿಂದ ಮಕ್ಕಳ ಮನಸ್ಸು ವಿಕಸನವಾಗುವುದಿಲ್ಲ. ಆದ್ದರಿಂದ, ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸಬೇಕು. ಮಾದರಿಗಳ ಮೂಲಕ ಮಕ್ಕಳೇ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಂತೆ ಆಗಬೇಕು' ಎಂದು ಪೋಷಕಿ ನಿರ್ಮಲಾ ಹೇಳಿದರು.ಪ್ರದರ್ಶನವನ್ನು ಜರ್ಮನಿಯ ಕೌನ್ಸಿಲರ್ ಹನ್ಸ್- ಗ್ಯುನಟರ್ ಲ್ಯೊಫೆಲರ್, ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಂತ್ರಜ್ಞಾನ ಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್ ಉದ್ಘಾಟಿಸಿದರು.ಪ್ರದರ್ಶನ ಜೂನ್ 15 ರವರೆಗೆ ನಡೆಯಲಿದೆ. ಮಕ್ಕಳನ್ನು ಒಟ್ಟಾಗಿ ಕರೆತರುವ ಶಾಲೆಗಳು ಮುಂಚಿತವಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.ವಿವರಗಳಿಗೆ  : 2520 5305/6/7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.