ಶನಿವಾರ, ಮೇ 15, 2021
24 °C
ರಾಜ್ಯ ಅಥ್ಲೆಟಿಕ್ ಸಂಸ್ಥೆಯಲ್ಲಿ ಭಾರಿ ಅವ್ಯವಹಾರ

ಆಡಳಿತಾಧಿಕಾರಿ ನೇಮಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯು ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆಯ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ಈ ಸಂಸ್ಥೆಯು ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಯಾವುದೆ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಬೇಕು ಮತ್ತು ರಾಜ್ಯದಲ್ಲಿ   ಅಥ್ಲೆಟಿಕ್ಸ್ ಚಟುವಟಿಕೆಗಳನ್ನು ನಡೆಸಿಕೊಂಡು  ಹೋಗಲು ತಾತ್ಕಾಲಿಕವಾಗಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರವನ್ನು ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಅವರು ಆಗ್ರಹಿಸಿದ್ದಾರೆ.ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಮೇಲಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಲು `ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25'ರ ಅನ್ವಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ಮಲ್ಲಪ್ಪ ವಿಚಾರಣೆ ನಡೆಸಿದ್ದು, ಅವರು ನೀಡಿರುವ ವರದಿಯಲ್ಲಿ ಏಳು ಆರೋಪಗಳು ಸಾಬೀತಾಗಿವೆ ಎಂದೂ ಅವರು ತಿಳಿಸಿದ್ದಾರೆ.ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಅವರು ವಿಚಾರಣೆ ವೇಳೆ ಸಲ್ಲಿಸಿರುವ ಮಾಹಿತಿಗಳನ್ನು ಪರಿಶೀಲಿಸಿದಾಗ ಈ ಸಂಸ್ಥೆಯು ಯಾವುದೇ ಲೆಕ್ಕಪತ್ರಗಳನ್ನು ಸಮರ್ಪಕವಾಗಿ, ಕ್ರಮಬದ್ಧವಾಗಿ ನಿರ್ವಹಿಸಿಲ್ಲ ಎಂಬುದು ನಿಚ್ಚಳವಾಗಿದೆ ಎಂದು ವಿಚಾರಣಾಧಿಕಾರಿ ತಿಳಿಸಿದ್ದಾರೆ. `ಅಥ್ಲೆಟಿಕ್ ಸಂಸ್ಥೆಯು 1977ರಿಂದ ಲೆಕ್ಕಪತ್ರಗಳ ವರದಿಯನ್ನು ಸಲ್ಲಿಸಿರುವ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ' ಎಂದು ಸ್ವತಃ ಸಂಸ್ಥೆಯ ಗೌರವ ಕಾರ್ಯದರ್ಶಿಯವರೇ ಒಪ್ಪಿಕೊಂಡಿದ್ದಾರೆ. ಇದಲ್ಲದೆ 1999, 2007 ಮತ್ತು 2008ರ ವಾರ್ಷಿಕ ಮಹಾಸಭೆಯ ದಾಖಲೆಗಳ `ನಕಲು' ಹೊರತು ಪಡಿಸಿ ಕಾರ್ಯದರ್ಶಿಯವರು ಇನ್ನೇನನ್ನೂ ನೀಡಿಲ್ಲ ಎಂದೂ ವಿಚಾರಣಾಧಿಕಾರಿ ಹೇಳಿದ್ದಾರೆ.1977ರ ನಂತರ ಐದು ವರ್ಷಗಳಿಗೂ ಹೆಚ್ಚು ವಾರ್ಷಿಕ ಮಹಾಸಭೆಯ ನಡೆವಳಿಗಳು, ಆಡಳಿತ ಮಂಡಳಿ ಪಟ್ಟಿ, ಲೆಕ್ಕಪತ್ರಗಳ ವರದಿಯನ್ನು ಸಲ್ಲಿಸದೇ ಇರುವುದರಿಂದ ಅನಂತರಾಜು ಅವರು ಮಾಡಿರುವ ಆರೋಪಗಳು ಸಾಬೀತಾಗಿವೆ ಎಂದೂ ವಿಚಾರಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.ಕರ್ನಾಟಕ ಕ್ರೀಡಾ ಪ್ರಾಧಿಕಾರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಅಥ್ಲೆಟಿಕ್ ಸಂಸ್ಥೆಯು ವಿವಿಧ ಸಂದರ್ಭಗಳಲ್ಲಿ ಅಥ್ಲೆಟಿಕ್ ಕೂಟಗಳನ್ನು ಆಯೋಜಿಸಲು ಲಕ್ಷಾಂತರ ರೂಪಾಯಿ ಹಣವನ್ನು ಅನುದಾನವಾಗಿ ಪಡೆದು ಅದನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಅನಂತರಾಜು ಅವರು ಮಾಡಿರುವ ಆರೋಪವು ವಿಚಾರಣೆಯ ನಂತರ ಭಾಗಶಃ ಸಾಬೀತಾಗಿದೆ ಎಂದೂ ವಿಚಾರಣಾಧಿಕಾರಿ ತಿಳಿಸಿದ್ದಾರೆ.ಅಮೆಚೂರ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಎಂಬ ಹೆಸರನ್ನು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಎಂಬುದಾಗಿ 2004ರ ಏಪ್ರಿಲ್‌ನಲ್ಲಿ ಕಾನೂನಿಗೆ ಬದ್ದವಾಗಿ ಬದಲಾವಣೆ ಮಾಡಲಾಗಿದೆ. ಆದರೆ ಕರ್ನಾಟಕ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅನ್ನು ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಎಂದು ಬದಲಾವಣೆ ಮಾಡಿಕೊಂಡಿರುವುದಕ್ಕೆ ರಾಜ್ಯ ಸಂಸ್ಥೆಯ ಕಾರ್ಯದರ್ಶಿಯವರು ಯಾವುದೇ ಸಮರ್ಪಕ ದಾಖಲೆ ಪತ್ರವನ್ನು ನೀಡಿಲ್ಲ ಎಂದೂ ವಿಚಾರಣಾಧಿಕಾರಿಯವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಪ್ರಕಾರ ನೋಂದಾಯಿಸಿರುವುದಿಲ್ಲ ಮತ್ತು ನೋಂದಾಯಿಸದ ಸಂಸ್ಥೆಗಳನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಿಕೊಂಡು ಅಕ್ರಮ ಎಸಗಲಾಗಿದೆ ಎಂದೂ ಅನಂತರಾಜು ಆರೋಪಿಸಿದ್ದರು.ಈ ಕುರಿತು ವಿಚಾರಣಾಧಿಕಾರಿಯವರು ವಿಚಾರಣೆ ನಡೆಸಿದ ನಂತರ “ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿಯವರು ಈ ಆರೋಪವನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ದಾಖಲೆ ಮತ್ತು ಮಾಹಿತಿಗಳನ್ನು ನೀಡಿಲ್ಲದ ಕಾರಣ ಆರೋಪ ಸಾಬೀತಾಗಿರುತ್ತದೆ' ಎಂದೂ ಸ್ಪಷ್ಟ ಪಡಿಸಿದ್ದಾರೆ.ಕೆಒಎ ಜತೆಗೆ ಸಂಬಂಧ ಕಡಿದ ಅಥ್ಲೆಟಿಕ್ ಸಂಸ್ಥೆ

ಬೆಂಗಳೂರು: ಎರಡು ವರ್ಷಗಳ ಹಿಂದೆ ಅಥ್ಲೆಟಿಕ್ಸ್ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ)ಯು ಅದರ ಕಾರ್ಯದರ್ಶಿ ಸತ್ಯನಾರಾಯಣ ಅವರಿಗೆ ಷೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಾರ್ಯದರ್ಶಿಯವರು ಕೆಒಎ ಸದಸ್ಯತ್ವವೇ ಬೇಡವೆಂದು ಪತ್ರ ಬರೆದಿದ್ದರು.`ಸತ್ಯನಾರಾಯಣ ಅವರು ಕ್ರೀಡಾಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ ಮತ್ತು ಕೆಒಎ ಸಂಸ್ಥೆಯ ಹೆಸರಿಗೆ ಕಳಂಕ ತರುವಂತಹ ಚಟುವಟಿಕೆಯಲ್ಲಿ ತೊಡಗಿದ್ದಾರೆ' ಎಂಬ ಒಕ್ಕೊರಲ ಅಭಿಪ್ರಾಯ ಕೆಒಎ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮೂಡಿಬಂದಿತ್ತು. ಹೀಗಾಗಿ ಕೆಒಎ ಚಟುವಟಿಕೆಗಳಿಂದ ಸತ್ಯನಾರಾಯಣ ಅವರನ್ನು ಹತ್ತು ವರ್ಷಗಳ ಕಾಲ ಅಮಾನತುಗೊಳಿಸಲು ಕೆಒಎ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.ಈ ಬಗ್ಗೆ ಭಾರತ ಅಥ್ಲೆಟಿಕ್ ಫೆಡರೇಷನ್(ಎಎಫ್‌ಐ)ಗೂ ಕೆಒಎ ಪತ್ರ ಬರೆದಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿದ ಎಎಫ್‌ಐ ಕಾರ್ಯದರ್ಶಿ ಸಿ.ಕೆ.ವಲ್ಸನ್ ವಿವರಣೆ ಕೋರಿ ಸತ್ಯನಾರಾಯಣ ಅವರಿಗೂ ಪತ್ರ ಬರೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.