ಸೋಮವಾರ, ಜನವರಿ 27, 2020
22 °C
ಓಂಕಾರ ಅರಣ್ಯ ಸೇರಿದ ಬಂಡೀಪುರದ ಕಾಡಾನೆ

ಆತಂಕ ಸೃಷ್ಟಿಸಿದ ಆನೆ ಹಿಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸತತ ಮೂರು ದಿನ ನಗರದ ಸುತ್ತ ಬೀಡುಬಿಟ್ಟು ಆತಂಕ ಸೃಷ್ಟಿಸಿದ್ದ ಕಾಡಾನೆಗಳನ್ನು ಗುರುವಾರ ಬೆಳಗಿನ ಜಾವ ಓಂಕಾರ ಅರಣ್ಯಕ್ಕೆ ಅಟ್ಟಿದ ಬೆನ್ನಲ್ಲೇ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಕ್ಕೆ ಮತ್ತೊಂದು ಆನೆ ಹಿಂಡು ನುಗ್ಗಿದೆ. ಇದರಿಂದ ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ದಿನವಿಡೀ ಭಯದ ವಾತಾವರಣ ನಿರ್ಮಾಣವಾಗಿತ್ತು.ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ವಲಯದ ನಾಗಾಪುರದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ 13 ಕಾಡಾನೆಗಳು ಪ್ರತ್ಯಕ್ಷ­ವಾದವು. ಅರಣ್ಯದಿಂದ ಸುಮಾರು 10 ಕಿ.ಮೀ. ದೂರದವರೆಗೆ ಬಂದಿದ್ದ ಆನೆ ಹಿಂಡನ್ನು ಕಂಡು ಜನ ಆತಂಕಗೊಂಡರು.ಬಳಿಕ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಜಗಳನ್ನು ಕಾಡಿಗೆ ಅಟ್ಟುವ ಕಾರ್ಯಾ­ಚರಣೆ ಆರಂಭಿಸಿದರು. ಆದರೆ,  ನಾಗಾಪುರದ ಶಾಲೆಯ ಹಿಂಭಾಗದ ಕುರುಚಲು ಕಾಡನ್ನು ಬಿಟ್ಟು ಆನೆಗಳು ಕದಲ­ಲಿಲ್ಲ. ಸಂಜೆಯ ನಂತರ ರಾಷ್ಟ್ರೀಯ ಉದ್ಯಾನದ ಕಡೆ ಸಾಗಿ­ದವು ಎಂದು ಆರ್‌ಎಫ್‌ಒ ರಾಜಪ್ಪ ತಿಳಿಸಿದ್ದಾರೆ.ಕಾಡಾನೆ ದಾಳಿಯಿಂದ ನಾಗರ­ಹೊಳೆಯ ಮಾರ್ಗವಾಗಿ ಕೊಡಗು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮೈಸೂರಿ­ನಿಂದ ಕೊಡುಗು ಜಿಲ್ಲೆಗೆ ಪ್ರಯಾಣ ಬೆಳೆಸಿದ್ದ ಪ್ರವಾಸಿಗರು ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಕೆಲ ಕಾಲ ತಂಗಬೇಕಾಯಿತು. ಕಾಡಾನೆಗಳು ಗ್ರಾಮದ ಸಮೀಪದವರೆಗೆ ಧಾವಿಸಿ­ದರೂ ಯಾವುದೇ ಹಾನಿ  ಉಂಟಾಗಿಲ್ಲ.ಕಾಡು ಸೇರಿದ ಆನೆ ಹಿಂಡು: ಮೈಸೂರು ಸಮೀಪದವರೆಗೆ ಬಂದಿದ್ದ ಬಂಡೀಪುರದ ಎಂಟು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಓಂಕಾರ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿ­ಯಾಯಿತು. ಗುರುವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಕಾಡಿನ ಅಂಚು ತಲುಪಿವೆ. ಬುಧವಾರ ಬೆಳಿಗ್ಗೆಯಿಂದ ಆರಂಭವಾದ ಕಾರ್ಯಾಚರಣೆ ರಾತ್ರಿಯ­ವರೆಗೆ ನಿರಂತರವಾಗಿ ನಡೆಯಿತು.40 ಮಂದಿ ವನಪಾಲಕರು ಪಟಾಕಿ ಸಿಡಿಸಿ ಆನೆಗಳನ್ನು ಸುರಕ್ಷಿತವಾಗಿ ಅರಣ್ಯ ತಲುಪಿಸಿದ್ದಾರೆ ಎಂದು ಉಪ

ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಡಿ. ಗಾಂವ್ಕರ್‌ ಖಚಿತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)