ಶನಿವಾರ, ಮಾರ್ಚ್ 6, 2021
18 °C

ಆತ್ಮತೃಪ್ತಿಯೂ ವಸ್ತ್ರಪ್ರೀತಿಯೂ

ಸಂದರ್ಶನ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಆತ್ಮತೃಪ್ತಿಯೂ ವಸ್ತ್ರಪ್ರೀತಿಯೂ

ಕೆಂಪು ಬಣ್ಣದ ಮಕಮಲ್ ಲೆಹೆಂಗಾ. ಅಂಚಿಗೆ ಕಪ್ಪು ಬಣ್ಣದ ಹೊಳೆಯುವ ಜರಿ, ತಲೆಯ ಮೇಲೆ ಕೆನೆ ಬಣ್ಣದ ನೆಟೆಡ್ ದುಪಟ್ಟಾ. ಒಂದು ಭಾಗದ ಮುಖ ಮಾತ್ರ ತೋರಿಸುವಂತೆ ಅಡ್ಡವಾಗಿ ದುಪಟ್ಟಾ ಹಿಡಿದು ಬರುತ್ತಿದ್ದ ಆ ರೂಪದರ್ಶಿಯ ಮೇಲೆ ಎಲ್ಲರ ಕಣ್ಣು. ಅವಳೋ ಕುಲುಕುತ್ತಾ, ಬಳುಕುತ್ತಾ ನಗು ಸೂಸಿ ಆ ದಿರಿಸಿನಲ್ಲಿ ಮುದ್ದಾಗಿ ಕಾಣಿಸುತ್ತಿದ್ದಳು. ಇದು ಈ ಬಾರಿಯ `ಬ್ಲೆಂಡರ್ಸ್‌ ಪ್ರೈಡ್ ಸಪ್ತಾಹ'ದಲ್ಲಿ ಭಾಗವಹಿಸಿದ ಮೌಶ್ಮಿ ಬಾದ್ರಾ ಅವರ ವಿನ್ಯಾಸ. ಶಿಮ್ಲಾದ ಈ ಹುಡುಗಿ ಕನಸು ಕಟ್ಟಿಕೊಂಡಿದ್ದು ಗಗನಸಖಿಯಾಗಿ ವಿಮಾನದಲ್ಲಿ ಹಾರಾಡಬೇಕು ಎಂದು. ಕಲಾ ವಿಭಾಗದಲ್ಲಿ ಪದವಿ ಮುಗಿಸಿದ ಇವರು ಪಾಕೆಟ್ ಮನಿಗಾಗಿ ಮಾಡೆಲಿಂಗ್ ಮಾಡಿ ಸೈ ಎನಿಸಿಕೊಂಡು ಈಗ ವಿನ್ಯಾಸ ಕ್ಷೇತ್ರದಲ್ಲೂ ತನ್ನ ಕೈಚಳಕ ತೋರಿಸಿದ್ದಾರೆ.ಬ್ಲೆಂಡರ್ಸ್‌ ಪ್ರೈಡ್‌ನಲ್ಲಿ ನಿಮ್ಮ ಸಂಗ್ರಹದ ವಿಶೇಷ ಏನು?

ಹೆಣ್ಣಿನ ಶಕ್ತಿ, ರೂಪಸಿರಿ, ಸರಳತೆ, ಭಾವನೆಗಳೇ ಈ ವಿನ್ಯಾಸದಲ್ಲಿ ರೂಪು ತಳೆದಿವೆ. ವಿನ್ಯಾಸದ ಹೆಸರು `ಅಗ್ನಿ'. ಭಾರತೀಯ ಶೈಲಿಯ ಉಡುಪುಗಳಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ನೆಟ್, ಟಿಶ್ಯೂ, ಮಕಮಲ್, ಹತ್ತಿ, ರೇಷ್ಮೆ ಬಟ್ಟೆಗಳನ್ನು ಉಪಯೋಗಿಸಿಕೊಂಡು ಸೀರೆ, ಸೆಲ್ವಾರ್, ಲೆಹಂಗಾಗಳನ್ನು ವಿನ್ಯಾಸ ಮಾಡಿದ್ದೇನೆ. ಬೂದು ಬಣ್ಣ, ಕಡು ಗೆಂಪು, ಹಸಿರು ಹಾಗೂ ನನ್ನಿಷ್ಟದ ಮಣ್ಣಿನ ಬಣ್ಣವನ್ನು ಈ ದಿರಿಸಿನಲ್ಲಿ ಕಾಣಬಹುದು. ಮಹಿಳೆಯರಿಗೆ ಇದು ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.ವಿನ್ಯಾಸ ಕ್ಷೇತ್ರವನ್ನು ವೃತ್ತಿಯಾಗಿ ಪರಿಗಣಿಸಿರುವುದರ ಉದ್ದೇಶ?

ವಿನ್ಯಾಸ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಆಕಸ್ಮಿಕವಾಗಿ ಅಲ್ಲ. ಕ್ರಿಯಾಶೀಲತೆಯ ಬಗ್ಗೆ ಆಸಕ್ತಿ ಇತ್ತು. ಜೀವನದಲ್ಲಿ ಸವಾಲುಗಳಿಗೆ ಒಡ್ಡಿಕೊಳ್ಳುವ ಧೈರ್ಯವಿತ್ತು. ಹಾಗಾಗಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದೆ. ಈ ವಿನ್ಯಾಸ ಕ್ಷೇತ್ರಕ್ಕೆ ಬರುವ ಮುಂಚೆ ನಾನು ರೂಪದರ್ಶಿಯಾಗಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೆ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ಯಾರೋ ವಿನ್ಯಾಸ ಮಾಡಿದ ಉಡುಪು ಹಾಕಿಕೊಂಡಾಗ ನನಗೂ ಈ ವಿನ್ಯಾಸ ಕ್ಷೇತ್ರ ಇಷ್ಟವಾಯಿತು. ಬಟ್ಟೆಗಳೊಂದಿಗೆ, ಬಣ್ಣಗಳೊಂದಿಗೆ ಕೈ ಚಳಕ ವೃತ್ತಿ ನನ್ನದಾಗಿದೆ. ಈಗ ಬಟ್ಟೆಗಳೇ ನನ್ನ ಆತ್ಮೀಯ ಸ್ನೇಹಿತೆಯರು.ನಾಲ್ಕೈದು ಶೋ ಕೊಟ್ಟ ಮಾತ್ರಕ್ಕೆ ದೊಡ್ಡ ವಿನ್ಯಾಸಕಿ ಆಗುವುದಿಲ್ಲ. ಪ್ರತಿ ನಿಮಿಷ ಜೀವನದಲ್ಲಿ ಒಂದಲ್ಲ ಒಂದು ಅನುಭವವಾಗುತ್ತಾ ಹೋಗುತ್ತದೆ. ಇದರ ಮೂಲಕ ಕಲಿಯುವುದು ಸಾಕಷ್ಟು ಇದೆ. ಹಾಗಾಗಿ ನನ್ನ ವಿನ್ಯಾಸವನ್ನು ಮನಸ್ಸಿಟ್ಟು ಮಾಡುತ್ತೇನೆ. ಏನೋ ಒಂದು ವಿನ್ಯಾಸ ಮಾಡಿ ರ್‍ಯಾಂಪ್ ಮೇಲೆ ರೂಪದರ್ಶಿಗಳು ಪ್ರದರ್ಶಿಸಿದರೆ ಸಾಲದು, ನನ್ನ ವಿನ್ಯಾಸದ ದಿರಿಸನ್ನು ಎಲ್ಲರೂ ಧರಿಸಿದಾಗಲಷ್ಟೇ ತೃಪ್ತಿ ಸಿಗುತ್ತದೆ.ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್ ಎಂದರೇನು?

ನಾವು ಧರಿಸುವ ಬಟ್ಟೆ ನಮಗೆ ಖುಷಿ ನೀಡಬೇಕು. ದುಬಾರಿ ಬಟ್ಟೆ ಹಾಕಿಕೊಂಡರೆ ಮಾತ್ರ ಸುಂದರವಾಗಿ ಕಾಣುತ್ತೇವೆ ಎಂಬುದು ತಪ್ಪು ಕಲ್ಪನೆ. ನಮ್ಮನ್ನು ನಾವು ಪ್ರೀತಿಸಿದರಷ್ಟೇ ಹಾಕುವ ಬಟ್ಟೆ ಕೂಡ ಚೆನ್ನಾಗಿ ಕಾಣುತ್ತದೆ.ಈ ಕ್ಷೇತ್ರದಲ್ಲಿ ನೀವು ಮೆಚ್ಚುವ ವಿನ್ಯಾಸಕರು ಯಾರು?

ಎಲ್ಲಾ ವಿನ್ಯಾಸಕರಿಗೂ ಅವರದೇ ಆಗಿರುವ ಕ್ರಿಯಾಶೀಲತೆ ಇರುತ್ತದೆ. ನನಗೆ ಸವ್ಯಸಾಚಿ ತುಂಬಾ ಇಷ್ಟವಾಗುತ್ತಾರೆ. ಅವರು ಬಳಸುವ ಬಣ್ಣ, ಫ್ಯಾಬ್ರಿಕ್ಸ್ ಎಲ್ಲರನ್ನೂ ಸೆಳೆಯುತ್ತವೆ.ನಿಮ್ಮ ವಿನ್ಯಾಸಕ್ಕೆ ಬೇಕಾದ ವಸ್ತುಗಳನ್ನು ಎಲ್ಲಿಂದ ಖರೀದಿ ಮಾಡುತ್ತೀರಿ?

ನಾನು ಮುಂಬೈನಲ್ಲಿ ಇರುವುದರಿಂದ ಅಲ್ಲಿಯೇ ಹೆಚ್ಚಾಗಿ ಖರೀದಿ ಮಾಡುತ್ತೇನೆ.ವಿನ್ಯಾಸ ಕ್ಷೇತ್ರದಲ್ಲಿನ ನಿಮ್ಮ ಕನಸು?

ನನ್ನ ಸಂಗ್ರಹದ ಹಲವಾರು ಮಳಿಗೆಯನ್ನು ತೆಗೆಯಬೇಕು, ಸಿನಿಮಾಗಳಿಗೆ ವಿನ್ಯಾಸ ಮಾಡಬೇಕು.ನಿಮ್ಮ ವಿನ್ಯಾಸಕ್ಕೆ ಸ್ಫೂರ್ತಿ?

ನನ್ನ ಮನಸ್ಸೇ ನನಗೆ ಸ್ಫೂರ್ತಿ. ವಿನ್ಯಾಸ ಮಾಡುವಾಗ ನನ್ನ ಮನಸ್ಸಿನ ಮಾತಿಗೆ ಮೊದಲು ಕಿವಿಯಾಗುತ್ತೇನೆ. ನಾನು ವಿನ್ಯಾಸ ಮಾಡಿದ್ದು ನನಗೆ ಖುಷಿ ನೀಡಿದರೆ ಸಾಕು. ನನ್ನ ಮೇಲೆ ಆತ್ಮವಿಶ್ವಾಸವಿದೆ. ಹಾಗಾಗಿ ಆ ವಿನ್ಯಾಸ ಇನ್ನೊಬ್ಬರಿಗೂ ಮೆಚ್ಚುಗೆ ಆಗುತ್ತದೆ.ನಿಮ್ಮ ಇಷ್ಟದ ಬಣ್ಣ?

ಮಣ್ಣಿನ ಬಣ್ಣ ನನಗೆ ತುಂಬಾ ಇಷ್ಟ. ಈ ಬಣ್ಣವಿಲ್ಲದೆ ನನ್ನ ವಿನ್ಯಾಸವನ್ನು ಊಹಿಸಿಕೊಳ್ಳುವುದಕ್ಕೂ ಆಗಲ್ಲ. ಪ್ರತಿಯೊಂದರಲ್ಲೂ ಆ ಬಣ್ಣದ ಛಾಯೆ ಇದ್ದೇ ಇರುತ್ತದೆ.ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಕಿರಿಯರಿಗೆ ನಿಮ್ಮ ಕಿವಿಮಾತು?

ನೀವು ಫ್ಯಾಷನ್ ಹಿಂದೆ ಓಡಬೇಡಿ. ನಿಮ್ಮ ಕ್ರಿಯಾಶೀಲತೆ, ನಿಮ್ಮದೇ ಸ್ಟೈಲ್ ಬಗ್ಗೆ ಆಲೋಚಿಸಿ ಅದನ್ನೇ ಕಾರ್ಯರೂಪಕ್ಕೆ ತನ್ನಿ. ಆಗ ಜಗತ್ತು ನಿಮ್ಮ ಕಡೆ ನೋಡುತ್ತದೆ. ನಿಮ್ಮ ಪರಿಶ್ರಮವೇ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುವುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.