ಭಾನುವಾರ, ಜನವರಿ 26, 2020
29 °C

ಆತ್ಮ ಸಾಕ್ಷಿಗೆ ಗುಂಡುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತೆ

1

ಧ್ಯಾನಸ್ಥ ಮನ

ಮೌನದಲ್ಲಿ ಹೆಪ್ಪುಗಟ್ಟಿದ

ನೋವ ನುಂಗುತ್ತಿದೆ!

ಗೋಡೆಯ ಮೇಲಿನ ಹಲ್ಲಿ

ಹೊಂಚು ಹಾಕಿ, ಸಂಚು ಹೂಡಿ

ನುಂಗುವಂತೆ ನೊಣ ನೊರಜು

ಕೀಟ ಪರಿವಾರವ!

ಪಹರೆ ಕಾದಂತೆ ಕಾದು

ರಕ್ಷಕ ಜೀವವೇ

ಜೀವವನು ಹಿಡಿದು

ಸಾವಿಗೆ ಭಕ್ಷೀಸು ಕೊಟ್ಟಂತೆ ಭಕ್ಷಿಸುತ್ತಿದೆ!

ಧ್ಯಾನಸ್ಥ ಮನ

ಮೌನದಲ್ಲಿ ಹೆಪ್ಪುಗಟ್ಟಿದ

ನೋವ ನುಂಗುತ್ತಿದೆ!

 2

ತನ್ನೊಡಲ ನೂಲಿನಿಂದಲೇ ಜೇಡ

ತನ್ನ ಸಾವಿನ ಬಲೆಯ

ತಾನೇ ನೇದುಕೊಂಡಂತೆ

ದೇಹಾಲಯದೊಳಗೇ

ಬಂಧಿಯಾಗಿದೆ ಆತ್ಮ

ದೇವನಾಗುವ

ಪರಿಪಕ್ವತೆಯ ಸಿದ್ಧಿಗೆ

ಹಾಕಬೇಕು ಹಲವು ಪಟ್ಟು

ನಮಾಜು ಕೂತು,

ಕುಂಡೆ ಮೇಲಕ್ಕೆತ್ತಿ

ಅಂಡೂರಿ ನಮಸ್ಕರಿಸಿ

ಸಾಷ್ಟಾಂಗದಿಂದ ಅಷ್ಟಾಂಗದವರೆಗಿನ

ಅಭ್ಯಾಸಗತ ಸಂಧೀವಾತ ಪೀಡಿತ

ದೇವಮಾನವರಿಗೆಲ್ಲ

ಗ್ಯಾಸ್ಟ್‌ರೈಟೀಸು - ಹುಳಿತೇಗು

ಕೂತುಂಡ ಸುಖದ

ಮೂಲವ್ಯಾಧಿ ಮೊಳೆರೋಗ!

ಆಮೂಲಾಗ್ರ ಕಿತ್ತು, ಕೆತ್ತಿ

ಎಸೆಯದ ಹೊರತು

ಇಲ್ಲ ಮುಕ್ತಿ!

3

ತಿಮಿರಾಂಧ ಘನದ

ಗಾಢ ಕತ್ತಲ ಕೂಪದಲ್ಲಿ

ಆತ್ಮಸಾಕ್ಷಿಯ ಕತ್ತು ಹಿಚುಕಲು ಬರುವ

ಹಲಾಲುಖೋರ ಪಾಪಪ್ರಜ್ಞೆಗಳು!

ಲಾಕಪ್‌ಡೆತ್ತಿಗೆ ಬಲಿಯಾದ

ಕೈದಿಗಳ ಕೈಫಿಯತ್ತಿನಂತೆ

ಕಾಯುತ್ತಿದೆ ಆತ್ಮಸಾಕ್ಷಿ

ಕಾಲಪುರುಷನ ತೀರ್ಪಿಗೆ

ಸಾಕ್ಷಿ ನುಡಿಯಲು!

ಚುನಾವಣಾ ಪ್ರಚಾರಕ್ಕೆ ಬಂದ

ಗಾಂಧೀ ವೇಷಧಾರಿಗಳ

ಗುಂಡಿಟ್ಟು ಕೊಲ್ಲಲು

ಕಾದಿರುವ ಗೋಡ್ಸೆಗಳ

ಬಂದೂಕಿನ ತುಂಬೆಲ್ಲಾ

ತಣ್ಣಗೆ ಕಾದಿರುವ

ಮತೀಯ ಗುಂಡುಗಳು!

4

ಗಾಂಧಿಯ ಕನ್ನಡಕ ತೊಟ್ಟು

ಹುಡುಕುತ್ತಿದ್ದೇನೆ

ರಾಮನ ಮಂದಿರ

ಬುದ್ಧನ ಸ್ಥೂಪ

ಕ್ರಿಸ್ತನ ಇಗರ್ಜಿ

ಅಲ್ಲಾನ ಮಸೀದಿಗಳ ಮೇಲೆಲ್ಲಾ

ನೆತ್ತರ ಗುರುತುಗಳನ್ನು ಮಾಡಿದ

ಪಾಪಿಗಳ ಪಾಪದ ಕೊಡ

ಇನ್ನೂ ತುಂಬಲಿಲ್ಲವೇ ಪ್ರಭು ?

ಎಂದು,

ಮಂಡಿಯೂರಿ ಕೇಳುತ್ತಿದ್ದೇನೆ.

ನನ್ನ ಬೆನ್ನಿಗೇ ಗುರಿಯಿಟ್ಟ

ಬಂದೂಕಿನ ನಳಿಕೆಯಿಂದ

ಗುಂಡು ಸಿಡಿಯುವ ಮುನ್ನ

ನಾನೊಂದು ಬೇಡುವೆನು

ನಿಮ್ಮ ಧ್ಯಾನಸ್ಥ

ಮನಸುಗಳ ಕತ್ತಲಲ್ಲಿ

ಸಂಚು ಹೂಡುವ

ಆತ್ಮಸಾಕ್ಷಿಗಳ ವಿಚಾರಣೆ

ಇನ್ನಾದರೂ

ಶುರುವಾಗಲಿ

ಎಂದು.

 

ಪ್ರತಿಕ್ರಿಯಿಸಿ (+)