ಗುರುವಾರ , ಜೂನ್ 24, 2021
29 °C

ಆದಾಯ ತೆರಿಗೆದಾರರ ಕನಸು ಭಗ್ನ...

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, 2012-13ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ರಿಯಾಯ್ತಿಗಳನ್ನು ಘೋಷಿಸದಿದ್ದರೂ, ಅಲ್ಪ ಪ್ರಮಾಣದ ಉಳಿತಾಯಕ್ಕೆ ಅವಕಾಶ ಮಾಡಿಕೊಟ್ಟು ಹಣ ಹೂಡಿಕೆಗೆ ಹೊಸ ಮಾರ್ಗೋಪಾಗಳನ್ನು ಸೂಚಿಸಿದ್ದಾರೆ.ನೇರ ತೆರಿಗೆ ನೀತಿ ಸಂಹಿತೆಗೆ (ಡಿಟಿಸಿ) ಸಂಬಂಧಿಸಿದಂತೆ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು ಮಾಡಿದ ಶಿಫಾರಸುಗಳು, ಬಜೆಟ್ ಮಂಡನೆ ಪೂರ್ವ ಆದಾಯ ತೆರಿಗೆದಾರರಲ್ಲಿ ಹೆಚ್ಚಿನ ಪ್ರಮಾಣದ ಹಣ ಉಳಿತಾಯದ ಸಾಧ್ಯತೆಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿಸಿದ್ದವು. ಆದರೆ, ಬಜೆಟ್ ಇಂತಹ ಕನಸುಗಳಿಗೆ ತಣ್ಣೀರೆರಚಿದೆ. `ಡಿಟಿಸಿ~ ಮುಂದಿನ ಹಣಕಾಸು ವರ್ಷದಿಂದ (2013-14) ಜಾರಿಗೆ ಬರಲಿದೆ ಎಂದು ಪ್ರಣವ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಬಜೆಟ್‌ನಲ್ಲಿ ಆದಾಯ ತೆರಿಗೆ ಹಂತ(tax slabs) ಹೆಚ್ಚಿಸಿರುವುದರ ಜತೆಗೆ, ಮಹಿಳೆ ಮತ್ತು ಪುರುಷರಿಗೆ ಏಕ ರೂಪದ ತೆರಿಗೆ ಹಂತ ಅನ್ವಯಿಸಲಾಗಿದೆ. ಬಜೆಟ್ ಪ್ರಸ್ತಾವಗಳ ಪ್ರಕಾರ, ವಾರ್ಷಿಕ ರೂ 4 ಲಕ್ಷದಷ್ಟು ತೆರಿಗೆಗೆ ಒಳಪಡುವ ವರಮಾನ ಇದ್ದವರು ವರ್ಷಕ್ಕೆ ಕೇವಲ 2,000ದಷ್ಟು ಮಾತ್ರ ಉಳಿಸಬಹುದಾಗಿದೆ. ರೂ10 ಲಕ್ಷದಷ್ಟು ತೆರಿಗೆಗೆ ಒಳಪಡುವ ವರಮಾನ ಹೊಂದಿದವರು  ಗರಿಷ್ಠ ರೂ 22,660ಗಳನ್ನು ಉಳಿಸಬಹುದಾಗಿದೆ.ಮೂಲ ತೆರಿಗೆ ವಿನಾಯ್ತಿ ಮಿತಿಯಲ್ಲಿಯೂ ಸ್ತ್ರೀ - ಪುರುಷರಲ್ಲಿ ಏಕರೂಪತೆ ತರಲಾಗಿದೆ. ಹಿರಿಯ ನಾಗರಿಕರು (60 ರಿಂದ 70) ಮತ್ತು ಅತಿ ಹಿರಿಯ ನಾಗರಿಕರು (80 ವರ್ಷಕ್ಕಿಂತ ಹೆಚ್ಚಿನವರು) ಗರಿಷ್ಠ ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯುವುದು ಮುಂದುವರೆಯಲಿದೆ.ಉಳಿತಾಯ ಖಾತೆಗಳಿಂದ ಬರುವ ರೂ 10 ಸಾವಿರದವರೆಗಿನ ಬಡ್ಡಿ ವರಮಾನಕ್ಕೆ ಆದಾಯ ತೆರಿಗೆ ವಿನಾಯ್ತಿ ಮಿತಿ ಸೌಲಭ್ಯ  ಒದಗಿಸಲಾಗಿದೆ.ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಸಾಲಪತ್ರಗಳಿಂದ ಬರುವ ಬಡ್ಡಿ ವರಮಾನವು ರೂ 5000 ದಾಟಿದರೆ ಮಾತ್ರ  ವರಮಾನ ತೆರಿಗೆಯನ್ನು ಮೂಲದಲ್ಲಿಯೇ ಮುರಿದುಕೊಳ್ಳಲಾಗುವುದು. ಇದಕ್ಕೂ ಮೊದಲು ಈ ಮಿತಿ ರೂ 2,500 ಇತ್ತು.ಕಾಯಿಲೆಗಳು ಬರದಂತೆ ನೋಡಿಕೊಳ್ಳುವುದು ಆಧುನಿಕ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. `ರೋಗ ಬರದಂತೆ ನೋಡಿಕೊಳ್ಳುವುದು ಚಿಕಿತ್ಸೆಗಿಂತ ಒಳಿತು~ ಎನ್ನುವುದನ್ನು ಪ್ರತಿಯೊಬ್ಬರೂ ಅನುಸರಿಸಲು ಈಗ ಇನ್ನಷ್ಟು ಉತ್ತೇಜನ ಸಿಗಲಿದೆ.ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆಗೆ ವರ್ಷದಲ್ಲಿ             ರೂ5,000ವರೆಗೆ ಮಾಡುವ ವೆಚ್ಚವು ತೆರಿಗೆ ವಿನಾಯ್ತಿಗೆ ಒಳಪಡಲಿದೆ. ಆದರೆ, ಇದು ಈಗಾಗಲೇ ಜಾರಿಯಲ್ಲಿ ಇರುವ ಆರೋಗ್ಯ ವಿಮೆ ಕಂತಿನ ಮೇಲೆ ಇರುವ ತೆರಿಗೆ ಪ್ರಯೋಜನದ ಜೊತೆಗಷ್ಟೇ ದೊರೆಯಲಿದೆ. ಆರೋಗ್ಯ ವಿಮೆ  ಸೌಲಭ್ಯವನ್ನು(medi­claim insurance)  ಸಂಪೂರ್ಣವಾಗಿ ಬಳಕೆ ಮಾಡದ ಯುವ    ತಲೆಮಾರಿನವರಿಗೆ ಮತ್ತು ಮಾಲೀಕರಿಂದ ಗುಂಪು ವಿಮೆ ಸೌಲಭ್ಯ ಪಡೆದವರಿಗೆ  ಈ ಸೌಲಭ್ಯವು ದೊರೆಯಲಿದೆ.ಹಿರಿಯ ನಾಗರಿಕರಿಗೆ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಿರದಿದ್ದರೂ, ಅವರಿಗೆ ಹೆಚ್ಚುವರಿ ಉಳಿತಾಯ ದೊರೆಯುವ ಬಗ್ಗೆ ಕಾಳಜಿ ವಹಿಸಲಾಗಿದೆ. ಹಿರಿಯ ನಾಗರಿಕರು ವಹಿವಾಟು ಅಥವಾ ವೃತ್ತಿಯಿಂದ ವರಮಾನ ಪಡೆದಿರದಿದ್ದರೆ ಅವರು ಇನ್ನು ಮುಂದೆ ಮುಂಗಡ ತೆರಿಗೆ ಪಾವತಿಸುವಂತಿಲ್ಲ.ಬಜೆಟ್ ಪ್ರಸ್ತಾವಗಳನ್ನು ವಿಶ್ಲೇಷಿಸಿದರೆ, ಅದರಿಂದ ಆದಾಯ ತೆರಿಗೆ ಪಾವತಿದಾರರ ಬಳಿ ಕೆಲ ಮಟ್ಟಿಗೆ ಹೆಚ್ಚುವರಿ ಹಣ ಲಭ್ಯವಾಗಲು ಅನುವು ಮಾಡಿಕೊಡುವುದರ ಜತೆಗೆ, ಕಡಿಮೆ ವರಮಾನದವರಲ್ಲಿ ಹೂಡಿಕೆ ಮನೋಭಾವ ಉತ್ತೇಜಿಸಲು ಮುಂದಾಗಿರು ವುದು ಸ್ಪಷ್ಟಗೊಳ್ಳುತ್ತದೆ.ಉದ್ದೇಶಿತ `ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ~ಯು ಸಣ್ಣ ಮತ್ತು ರೂ 10 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನ ಇರುವ ಸಾಮಾನ್ಯ ಹೂಡಿಕೆದಾರರು ಷೇರುಗಳಲ್ಲಿ ಹಣ ತೊಡಗಿಸಲು ಉತ್ತೇಜನ ನೀಡಲಿದೆ.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣವನ್ನು ಮೂರು ವರ್ಷಗಳವರೆಗೆ ಮರಳಿ ಪಡೆಯುವಂತಿಲ್ಲ. ಯೋಜನೆಯ ಇನ್ನಷ್ಟು ವಿವರಗಳೂ ಪ್ರಕಟಗೊಳ್ಳಬೇಕಾಗಿದೆ.

ಷೇರುಪೇಟೆ ವಹಿವಾಟಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುವವರಿಗೆ  `ಷೇರು ವಹಿವಾಟು ತೆರಿಗೆ~ಯನ್ನು ಶೇ 0.125 ದಿಂದ ಶೇ 0.1ಕ್ಕೆ ಇಳಿಸಿರುವುದು ಕೂಡ ಉತ್ತೇಜನಕಾರಿಯಾಗಿದೆ.ಪರೋಕ್ಷ ತೆರಿಗೆಗಳಲ್ಲಿನ ಹೊರೆಯನ್ನು   ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕೆಲ ರಿಯಾಯ್ತಿ ನೀಡುವ ಮೂಲಕ ಕಡಿಮೆ ಮಾಡಲು ಪ್ರಯತ್ನಿಸಿರುವುದು ಕಂಡು ಬರುತ್ತದೆ.

ಆದಾಯ ತೆರಿಗೆ ಕಾಯ್ದೆ ಬದಲಾಗಿ ಜಾರಿಗೆ ಬರಲಿರುವ ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಬಗ್ಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿರದಿದ್ದರೂ, ಅದು ನಿಧಾನವಾಗಿ ಖಂಡಿತವಾಗಿಯೂ ಜಾರಿಗೆ ಬರಲಿದೆ. `ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ~ಯು `ಡಿಟಿಸಿ~ ಪ್ರಸ್ತಾವಗಳಿಗೆ ಅನುಗುಣವಾಗಿಯೇ ಇದೆ.ಷೇರುಗಳಿಗೆ ಸಂಬಂಧಿಸಿದ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯು ಸದ್ಯಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ `80-ಸಿ~ ಅಡಿ ವಿನಾಯ್ತಿಗೆ ಅರ್ಹವಾಗಿರುತ್ತದೆ.  ಆದರೆ, ಹೊಸ ಷೇರು ಉಳಿತಾಯ ಯೋಜನೆಯಲ್ಲಿನ ಹೂಡಿಕೆಯ ಶೇ 50ರಷ್ಟು, ತೆರಿಗೆಗೆ ಒಳಪಡುವ  ಆದಾಯದಲ್ಲಿ ಕಡಿತಕ್ಕೆ ಅರ್ಹವಾಗಲಿದೆ. ಆದಾಯ ತೆರಿಗೆದಾರರು ತೆರಿಗೆ ಪ್ರಯೋಜನ ಪಡೆಯಲು ಇಚ್ಛಿಸಿದ್ದರೆ `ಷೇರು ಉಳಿತಾಯ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿಗಳಲ್ಲಿ ಹಣ ತೊಡಗಿಸುವುದು ಈಗ ಹೆಚ್ಚು ಪ್ರಯೋಜನಕಾರಿಯಾಗಲಿದೆ.ತೆರಿಗೆ ಉಳಿಸಲು ಬಯಸುವವರೆಲ್ಲ ಜೀವ ವಿಮೆ ಪಾಲಿಸಿಗಳಲ್ಲಿ ಹಣ ತೊಡಗಿಸಲು ಮೊದಲ ಆದ್ಯತೆ ನೀಡುತ್ತಾರೆ. ಪಾವತಿಸುವ ಕಂತಿನ ಹಣವು ಆದಾಯ ತೆರಿಗೆ ವಿನಾಯ್ತಿಗೆ ಒಳಪಟ್ಟಿರುತ್ತದೆ. ಇದು ಸದ್ಯಕ್ಕೆ ಪಾಲಿಸಿ ಮೊತ್ತದ (ವಿಮೆ ಪರಿಹಾರ) ಶೇ 20ರಷ್ಟು ಕಂತು ಮೀರದಂತೆ ಈ ಸೌಲಭ್ಯ ಜಾರಿಯಲ್ಲಿ ಇದೆ. ಬಜೆಟ್‌ನಲ್ಲಿ ಈ ಮಿತಿಯನ್ನು ಶೇ 10ಕ್ಕೆ ಇಳಿಸಲಾಗಿದೆ.ಉದ್ದೇಶಿತ `ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ~ ಬಗೆಗಿನ ಗೊಂದಲಗಳನ್ನು ಪರಿಹರಿಸಬೇಕು ಎಂದು ಸಂಪತ್ತು ನಿರ್ವಹಣಾ ಉದ್ದಿಮೆಯು (ಮ್ಯೂಚುವಲ್ ಫಂಡ್) ಅಭಿಪ್ರಾಯಪಟ್ಟಿದೆ.ಈ ಯೋಜನೆಯಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗಳು ಭಾಗಿಯಾಗಲು ಅವಕಾಶ ಇರುವುದು ಅಥವಾ ಇಲ್ಲದಿರುವುದು ಇನ್ನೂ ದೃಢಪಟ್ಟಿಲ್ಲ.ಹೂಡಿಕೆದಾರರು ನೇರವಾಗಿ ಹಣ ತೊಡಗಿಸುವ ಬದಲಿಗೆ `ಎಂಎಫ್~ಗಳ ಮೂಲಕ ಹೂಡಿಕೆ ಮಾಡಬೇಕು ಎನ್ನುವ ಬೇಡಿಕೆಯೂ ಕೇಳಿ ಬರುತ್ತಿದೆ.ಪ್ರಣವ್ ಮುಖರ್ಜಿ ಅವರು ಆದಾಯ ತೆರಿಗೆದಾರರಿಗೆ ಹೆಚ್ಚಿನ ಪ್ರಯೋಜನ ಒದಗಿಸಿರದಿದ್ದರೂ, ಹಲವು ಬಗೆಯಲ್ಲಿ ಪರಿಹಾರ ನೀಡಲು ಮುಂದಾಗಿದ್ದಾರೆ. ಎಲ್ಲವೂ ದುಬಾರಿಯಾಗಿರುವ   ದಿನಗಳಲ್ಲಿ ಬಜೆಟ್  ಪ್ರಸ್ತಾವಗಳು ವೇತನ ವರ್ಗಕ್ಕೆ  ಹೆಚ್ಚಿನ ನೆರವು ಕಲ್ಪಿಸಲಾರವು.ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯ ಇದೆ.  `ಡಿಟಿಸಿ~ಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಶಿಫಾರಸುಗಳನ್ನಾದರೂ ಜಾರಿಗೆ ತಂದಿದ್ದರೆ ತೆರಿಗೆದಾರರು ಇನ್ನಷ್ಟು ಸಮಾಧಾನದ ನಿಟ್ಟುಸಿರು ಬಿಡಬಹುದಾಗಿತ್ತು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.