ಗುರುವಾರ , ಜೂನ್ 17, 2021
21 °C

ಆಧುನಿಕ ಪಥದಲಿ ಕಿನ್ನಾಳ ಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕ ಪಥದಲಿ ಕಿನ್ನಾಳ ಕಲೆ

ವಿಜಯನಗರ ಸಾಮ್ರಾಜ್ಯದಲ್ಲಿ ಅರಳಿ, ಕೊಪ್ಪಳ ತಾಲ್ಲೂಕಿನ ಪುಟ್ಟ ಗ್ರಾಮ ಕಿನ್ನಾಳದಲ್ಲಿ ರೂಪು ಪಡೆದುಕೊಂಡಿರುವ ಕಲೆಯೇ ಕಿನ್ನಾಳ ಕಲೆ.  ಇತಿಹಾಸದ ಪುಟ ಸೇರುತ್ತಿರುವ ಈ ಕಲೆಗೆ ಆಧುನಿಕ ಸ್ಪರ್ಶ ನೀಡುವ ವಿಶಿಷ್ಟ ಪ್ರಯೋಗವೀಗ ಕೇಂದ್ರ ಲಲಿತಕಲಾ ಅಕಾಡೆಮಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ.ಇದರ ಮೊದಲ ಹಂತವಾಗಿ ಇದೀಗ ಶಿಬಿರವೊಂದು ನಡೆದಿದೆ. ಹೊರರಾಜ್ಯಗಳ ಕಲಾವಿದರನ್ನು ಕರೆಸಿ ಅವರ ಯೋಚನಾಧಾರೆಯನ್ನು ಈ ಕಲೆಗೆ ಅಳವಡಿಸಿ ಹೊಸ ಹೊಸ ಪ್ರಯೋಗಕ್ಕೆ ನಾಂದಿ ಹಾಡಲಾಗಿದೆ. ಒಬ್ಬೊಬ್ಬ ಕಲಾವಿದರ ಒಂದೊಂದು ತೆರನಾದ ಶಿಲ್ಪವನ್ನು ರಚಿಸುವ ಮೂಲಕ ನೂತನ ಕಿನ್ನಾಳ ಶಿಲ್ಪಗಳನ್ನು ಅನಾವರಣಗೊಳಿಸಿದ್ದಾರೆ.ಕೇರಳದ ಜೋಸೆಫ್ ಫರ್ನಾಂಡಿಸ್ ಅವರ ‘ಮೀನಿನ ಮೇಲೆ ಸವಾರಿ’, ಬರೋಡದ ಸಿದ್ದಾರ್ಥ್ ಅವರ ‘ರಥದಲ್ಲಿ ರಾಕ್ಷಸ’, ಒಡಿಶಾದ ವೀರೇಂದ್ರರ ‘ಪಾಣಿ ಕರ್ನಾಟಕದ ನಕ್ಷೆ’, ದೆಹಲಿಯ ಶಾಂಭವಿ ಸಿಂಗ್ ಅವರ ‘ಆಧುನಿಕ ಬಾತ್‌ಟಬ್’, ಬೆಂಗಳೂರಿನ ಶಾಂತಮಣಿಯವರ ‘ಕಿನ್ನಾಳ ಕಿಸಗಾಲು’, ಛತ್ತೀಸ್ ಗಡದ ಶಿವಕುಮಾರ್‌ವರ್ಮ ಅವರ ‘ಕಣ್ಣಿನೊಳಗೆ ಕಾಮಧೇನು’...  ಸೇರಿದಂತೆ ಕಲಾವಿದರ ಕಲ್ಪನೆಯ ಮೂಸೆಯಿಂದ ಹತ್ತು ಹಲವಾರು ವಿಭಿನ್ನ ರೀತಿಯಲ್ಲಿ ಕಿನ್ನಾಳ ಕಲೆ ಮೂಡಿಬಂತು.

ಕಲೆಯ ಹುಟ್ಟು: ಕಿನ್ನಾಳ ಗ್ರಾಮದಲ್ಲಿ ಮುಖ್ಯವಾಗಿ ಎರಡು ಕುಶಲಕಲೆಗಳಾದ ನೇಕಾರಿಕೆ ಮತ್ತು ಚಿತ್ರಗಾರಿಕೆಯಿದ್ದು, ಚಿತ್ರಗಾರ ಕುಟುಂಬಗಳು ಇಲ್ಲಿ ವಾಸವಾಗಿವೆ. ಚಿತ್ರ ಮತ್ತು ಶಿಲ್ಪ ಎರಡರ ಸಂಗಮವಾದ ಈ ಸಾಂಪ್ರದಾಯಿಕ ಕಲೆ ವಿಜಯನಗರದ್ದೆಂಬ ಪ್ರತೀತಿ ಇದೆ. ವಿಜಯನಗರದ ಆಳರಸರ ಕಾಲದಲ್ಲಿ ದೇವಸ್ಥಾನಗಳ ಅಲಂಕಾರ, ರಥ, ಚಿತ್ರರಚನೆ ಮಾಡಿಕೊಂಡಿದ್ದು ವಿಜಯನಗರ ಪತನಾನಂತರ (ಕ್ರಿ.ಶ. 1665) ನೆಲ ರಹಿತವಾದ ಈ ಚಿತ್ರಗಾರ ಕುಟುಂಬಗಳು ಆಂಧ್ರಪ್ರದೇಶ ಮತ್ತು ಕರ್ನಾಟಕದ ನಾನಾ ಪ್ರದೇಶಗಳಿಗೆ ವಲಸೆ ಹೋದರು. ಅವರು ತಮ್ಮ ಕಸುಬನ್ನು ಮುಂದುವರಿಸಲಿಲ್ಲ. ಕಿನ್ನಾಳಕ್ಕೆ ಬಂದವರು ಮಾತ್ರ ತಮ್ಮ ತಲೆಮಾರಿನ ಕಸುಬನ್ನು ಮುಂದುವರಿಸಿಕೊಂಡು ಬಂದರು ಎಂಬ ಮಾಹಿತಿಯಿದೆ. ಈ ಕಲೆಯ ಬಹುಮುಖ್ಯ ಮಾಧ್ಯಮ ಕಟ್ಟಿಗೆ ಮತ್ತು ಕಿಟ್ಟ.

ಕಟ್ಟಿಗೆಯಲ್ಲಿ ಪ್ರಧಾನವಾಗಿ ಅರಬೇವು (ಹೆಬ್ಬೇವು) ಪಳಕಿನಕಟ್ಟಿಗೆ, ನುಗ್ಗೆಕಟ್ಟಿಗೆಗಳನ್ನು ಬಳಸಲಾಗುತ್ತದೆ. ಏಕೆಂದರೆ ಈ ಕಟ್ಟಿಗೆ ತುಂಬಾ ಹಗುರವಾಗಿರುತ್ತದೆ. ಪಲ್ಲಕ್ಕಿ, ದೊಡ್ಡದಾದ ದೇವಿಯ ಮೂರ್ತಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಹಗುರವಾಗಿ ತಯಾರಿಸುತ್ತಾರೆ. ಇದರಿಂದಾಗಿ ಇವರು ಕೇವಲ ಗುಡಿಗಾರರಾಗಿರದೇ ಸಹಜವಾಗಿ ಬಡಗಿಗಳೂ ಹೌದು.ಆದ್ದರಿಂದ ಕಿನ್ನಾಳ ಕಲೆಯಲ್ಲಿ ಚಿತ್ರ ಮತ್ತು ಶಿಲ್ಪಗಳ ಸಂಬಂಧದ ಕುರಿತು ಹಲವಾರು ಶಾಸ್ತ್ರ ಗ್ರಂಥಗಳು ಎತ್ತಿ ತೋರಿಸಿವೆ. ‘ಶಿಲ್ಪಾದಿ ಶಂಸಂತಿ ರೇಖಾಂ ಪ್ರಶಂಸಂತಿ ಆಚಾರ್ಯ’ ಎಂಬ ಶಾಸ್ತ್ರ ಗ್ರಂಥಗಳಲ್ಲಿನ ಉಲ್ಲೇಖದಲ್ಲಿ ನಾಲ್ವರು ಶಿಲ್ಪಗಳಾದ ಸಥಪತಿ, ಸೂತ್ರಗಾಹಿ, ವರ್ಧಕಿ, ತಕ್ಷಕಗ್ರ ಹೆಸರಿದೆ. ಈ ನಾಲ್ವರು ಪರಸ್ಪರ ಪೂರಕವಾಗಿದ್ದು, ಚಿತ್ರಕಲೆ ಕುರಿತು ಪರಿಶ್ರಮಿಗಳಾಗಿರಬೇಕೆಂದು ಅರ್ಥೈಸುತ್ತವೆ. ಏಕೆಂದರೆ ಮೂರ್ತಿ ಮಾಡುವ ವ್ಯಕ್ತಿ ಒಬ್ಬನಾದರೆ ಅದಕ್ಕೆ ಬಣ್ಣ ಹಚ್ಚುವವ ಇನ್ನೊಬ್ಬ. ಹೀಗಿರುವಾಗ ಪರಸ್ಪರ ಇವರಲ್ಲಿ ಆ ಕುರಿತು ತಿಳಿವಳಿಕೆ ಇರದಿದ್ದರೇ ಅಭಾಸಗಳೇ ಜಾಸ್ತಿ. ಕಟ್ಟಿಗೆಗೆ ರೂಪು ನೀಡುವುದೂ ಅಲ್ಲದೇ ಅದಕ್ಕೆ ಕುಸರಿ ಕೆಲಸವನ್ನೂ ಮಾಡಿ ಅಂದಗೊಳಿಸುತ್ತಾರೆ. ನಾಲ್ಕು ಜನರ ಅವಶ್ಯಕತೆಯನ್ನು ಇಲ್ಲಿ ಒಬ್ಬನೇ ಪೂರೈಸುತ್ತಾನೆ. ಕಟ್ಟಿಗೆಯಲ್ಲಿ ಮಾಡಿದ ಮೂರ್ತಿಯ ಬಾಗು ಬಳುಕುಗಳನ್ನು, ಉಬ್ಬು ತಗ್ಗುಗಳನ್ನು ಕಿಟ್ಟದಿಂದ ಮಾಡಿ ಸ್ಪಷ್ಟರೂಪ ಕೊಡುತ್ತಾನೆ.  ಈ ಕಿಟ್ಟವೇ ಮೂರ್ತಿಗಳ ರಕ್ತಮಾಂಸ. ಈ ಕಿಟ್ಟ ತಯಾರಿಕೆ ತುಂಬ ವಿಶೇಷವಾದದ್ದು, ಹುಣಸೆ ಬೀಜವನ್ನು ಗಿರಣಿಯಲ್ಲಿ ಬೀಸಿ ಅದರ ಹಿಟ್ಟಿನಿಂದ ತಯಾರಿಸಿದ ಮಂದವಾದ ದ್ರವದಂಥ ವಸ್ತುವಿನಿಂದ ಜೋಡಿಸಿ, ಉಬ್ಬು-ತಗ್ಗು, ಬಾಗು-ಬಳುಕುಗಳನ್ನು ತಯಾರಿಸಿಕೊಳ್ಳುತ್ತಾರೆ. ಇದು ಕಟ್ಟಿಗೆಯಷ್ಟೇ ಗಟ್ಟಿಯಾಗಿ ನಿಲ್ಲುತ್ತದೆ. ಇದೂ ಅಲ್ಲದೆ ಗೋಣಿತಟ್ಟನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಕಟ್ಟಿಗೆ ಅಥವಾ ಹುಣಸೆ ಬೀಜದ ಹಿಟ್ಟಿನೊಂದಿಗೆ ಕಲಸಿ ಮೂರ್ತಿಯ ಮೊಳಕಾಲು, ಮೊಳಕೈ, ಕಿರೀಟದಂತಹ ವೃತ್ತಾಕಾರದ ಸ್ಥಳಗಳಲ್ಲಿ ಬಳಸುತ್ತಾರೆ. ಕಟ್ಟಿಗೆ ಇವರ ಪ್ರಮುಖ ಮಾಧ್ಯಮವಾಗಿದ್ದರೂ ಅದಕ್ಕೊಂದು ಕಳೆಗಟ್ಟುವ, ಜೀವತುಂಬುವ ಕೆಲಸವನ್ನು ಇವರ ಬಣ್ಣಗಾರಿಕೆ ಮಾಡುತ್ತದೆ. ಈ ಬಣ್ಣದ ತಯಾರಿಕೆಯನ್ನು ಮೊದಲಿಂದಲೂ ತಾವೇ ತಯಾರಿಸಿಕೊಳ್ಳುತ್ತಿದ್ದರು ಅದು ವಿಶೇಷ. ಆದರೆ ಈಗ ಎರಡು ಬಣ್ಣಗಳನ್ನು ಮಾತ್ರ ಖುದ್ದಾಗಿ ತಯಾರಿಸಿ ಕೊಳ್ಳುತ್ತಾರೆ. ಉಳಿದಂತೆ ಎಲ್ಲಾ ಬಣ್ಣವನ್ನು ಮಾರುಕಟ್ಟೆಯಿಂದ ಪಡೆಯುತ್ತಾರೆ. ಸದ್ಯದ ಸ್ಥಿತಿಯಲ್ಲಿ ಮೊದಲಿನ ಅವರ ಬಣ್ಣಗಳು ಗೌಣವಾಗಿವೆ.

ಕಿನ್ನಾಳಶಿಲ್ಪ ರಚಿಸುವ ವಿಧಾನ: ಕಿನ್ನಾಳ ಶಿಲ್ಪ ರಚಿಸುವಾಗ ಶಿಲ್ಪದ ಅಳತೆಗೆ ತಕ್ಕಂತೆ ಗೋಡೆ ಮೇಲೆ ಮೊದಲು ರೇಖಾ ಚಿತ್ರವನ್ನು ಬಿಡಿಸಿಕೊಳ್ಳುತ್ತಾರೆ. ಅಳತೆಗೆ ತಕ್ಕಂತೆ ಹೆಬ್ಬೇವು ಕಟ್ಟಿಗೆಯನ್ನು ಕತ್ತರಿಸಿಕೊಂಡು ಮುಖ, ಕೈ, ಕಾಲುಗಳನ್ನು ಬಿಡಿ ಬಿಡಿಯಾಗಿ ರಚಿಸುತ್ತಾರೆ. ಕಟ್ಟಿಗೆಯ ಪೀಠದ ಮೇಲೆ ಎಲ್ಲಾ ಭಾಗಗಳನ್ನು ಜೋಡಿಸಿಟ್ಟು, ಹುಣಸೆ ಬೀಜವನ್ನು ಸಣ್ಣಗೆ ಜಜ್ಜಿ ಒಣಗಿಸಿ ಪುಡಿ ಮಾಡಿ ಗಿರಣಿ ಮೂಲಕ ಹಿಟ್ಟುಮಾಡಿಸಿ ಅದನ್ನು ಕಾದಿರುವ ನೀರಿನಲ್ಲಿ ಹಾಕಿ ಜಿಗಿ ಬರುವವರೆಗೆ ಕಾಯಿಸುತ್ತಾರೆ. ಅದಕ್ಕೆ ಮರದ ಹೊಟ್ಟು, ಪಾಟಿನ ಗುಂಜನ್ನು ಮಿಶ್ರಣ ಮಾಡಿ ಆಕೃತಿಗೆ ತಕ್ಕಂತೆ ಉಬ್ಬು ತಗ್ಗುಗಳನ್ನು ಮೊದಲು ರಚಿಸುತ್ತಾರೆ. ನಂತರ ಇದನ್ನು ಪಾಲಿಶ್ ಮಾಡಿ ಬಟ್ಟೆ ಹಚ್ಚಲಾಗುತ್ತದೆ. ಅದರ ಮೇಲೆ ಅಂಟುನೀರು ಮತ್ತು ಚಾಕ್‌ ಪುಡಿಯನ್ನು ಮಿಶ್ರ ಮಾಡಿ ಕಿನ್ನಾಳ ಗೊಂಬೆಗೆ ಸಂಪೂರ್ಣವಾಗಿ ಹಚ್ಚಲಾಗುವುದು. ಇದು ಒಂದು ಹಂತ ಇದಕ್ಕೆ ಬಿಳಿದು ಎನ್ನುತ್ತಾರೆ.ತಯಾರಾದ ಕಿನ್ನಾಳ ಶಿಲ್ಪಕ್ಕೆ ಬಣ್ಣ ಹಚ್ಚುವ ಮುನ್ನ ಬಿಳಿ ವರ್ಣವನ್ನು ಮೊದಲು ಲೇಪಿಸಲಾಗುವುದು. ಆ ಮೇಲೆ ಮಾರುಕಟ್ಟೆಯಲ್ಲಿ ಸಿಗುವ ಹುಡಿ ಬಣ್ಣವನ್ನು ತಂದು ಅಂಟು ಹಾಗೂ ನೀರನ್ನು ಬೇರೆಸಿ ತಯಾರಿಸಿದ ವಿವಿಧ ಬಣ್ಣಗಳನ್ನು ತಯಾರಾದ ಶಿಲ್ಪಗಳಿಗೆ ಬಳಿಯಲಾಗುವುದು. ಮುಖ್ಯವಾಗಿ ಹಳದಿ ಮೈಬಣ್ಣವಾದರೆ, ಕೆಂಪು, ಹಸಿರು, ನೀಲಿ, ಗುಲಾಬಿ, ತಿಳಿನೀಲಿ ಮುಂತಾದ ಬಣ್ಣಗಳನ್ನು ಬಟ್ಟೆಗಳಂತೆ ಕಾಣುವ ಹಾಗೇ ವಿನ್ಯಾಸಗೊಳಿಸಲಾಗುತ್ತದೆ. ಕೊನೆಯ ಹಂತದಲ್ಲಿ ಕಪ್ಪುಬಣ್ಣದಿಂದ ಕಣ್ಣು, ಮೂಗು, ಬಾಯಿ, ಕಿವಿ, ಕೈಬೆರಳು ಆಭರಣಗಳನ್ನು ರೇಖಾತ್ಮಕವಾಗಿ ಬರೆಯಲಾಗುವುದು. ಈ ಬಣ್ಣಗಳಿಂದ ಪೂರ್ಣಗೊಂಡ ಕಿನ್ನಾಳ ಶಿಲ್ಪಗಳು ಇನ್ನೊಂದು ಹಂತದಲ್ಲಿ ಹೊಳಪನ್ನು ಪಡೆಯುತ್ತವೆ. ಇದಕ್ಕೆ ಕೆಂಪುರಾಳ ಮತ್ತು ಗುಬ್ಬೆರಾಳ ಸೇರಿಸಿ ತಯಾರಿಸಿಕೊಂಡ ಎಣ್ಣೆಯನ್ನು ಈ ಗೊಂಬೆಗಳಿಗೆ ಹಚ್ಚುವುದರಿಂದ ಇನ್ನೂ ಹೆಚ್ಚು ಹೊಳಪು ಬರುವುದಲ್ಲದೇ ಹಚ್ಚಿದ ಬಣ್ಣವು ಗಟ್ಟಿಯಾಗಿ ಉಳಿಯುತ್ತದೆ.‘ಈ ಕಲೆಯನ್ನೇ ನಮ್ಮ ವೃತ್ತಿಯನ್ನಾಗಿ ರೂಢಿಸಿಕೊಂಡು ಬಂದಿದ್ದೇವೆ. ಇಂದಿಗೂ ಈ ಕಲೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಇತ್ತೀಚೆಗೆ ಇದರ ಕಡೆ ಜನರು ಮುಖಮಾಡುತ್ತಿಲ್ಲ. ಇದರಿಂದ ಬೇಸತ್ತ ನಮ್ಮ ಜನ ವಲಸೆ ಹೊರಟಿದ್ದಾರೆ. ಇದನ್ನು ತಡೆಯಬೇಕು, ಸ್ಥಳೀಯವಾಗಿ ಈ ಕಲೆಗೆ ಮಾನ್ಯತೆ ಸಿಗುವ ಹಾಗೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕಿನ್ನಾಳಕಲೆಯ ಕಲಾವಿದ ನಾರಾಯಣಪ್ಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.