ಆಫ್ಘಾನಿಸ್ತಾನಕ್ಕೆ ಒಬಾಮ ಹಠಾತ್ ಭೇಟಿ

ಕಾಬೂಲ್ (ಐಎಎನ್ಎಸ್): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಫ್ಘಾನಿಸ್ತಾನಕ್ಕೆ ಹಠಾತ್ ಭೇಟಿ ನೀಡಿದ್ದು, ಸ್ಥಳ ವ್ಯತ್ಯಾಸದ ಕಾರಣ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ಭೇಟಿ ಮಾಡದೇ ವಾಪಸ್ಸಾಗಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
‘ಭಾನುವಾರ ಕಾಬೂಲ್ನಿಂದ ಉತ್ತರಕ್ಕೆ 50 ಕಿ.ಮೀ ದೂರದಲ್ಲಿರುವ ಬಗ್ರಾಂ ವಾಯುನೆಲೆಯಲ್ಲಿ ಅಮೆರಿಕ ಸೇನಾಪಡೆಯೊಂದಿಗೆ ಕೆಲವು ಗಂಟೆಗಳನ್ನು ಕಳೆದ ಒಬಾಮ ಸ್ವದೇಶಕ್ಕೆ ಮರಳಿದ್ದಾರೆ’ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಕರ್ಜೈ ಅವರು ಬಗ್ರಾಂಗೆ ಹೋಗಿ ಒಬಾಮ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ’ ಎಂದು ಆಫ್ಘಾನಿಸ್ತಾನ ಅಧ್ಯಕ್ಷರ ನಿವಾಸದ ಪ್ರಕಟಣೆ ತಿಳಿಸಿದೆ.
ಒಬಾಮ, ಕರ್ಜೈ ಅವರನ್ನು ಬಗ್ರಾಂನ ಸೇನಾನೆಲೆಯಲ್ಲಿ ಭೇಟಿಯಾಗಲು ಬಯಸಿದ್ದರು ಎಂದು ಆಫ್ಘಾನಿಸ್ತಾನದಲ್ಲಿನ ಅಮೆರಿಕ ರಾಯಭಾರ ಕಚೇರಿ ತಿಳಿಸಿತ್ತು.
ಒಬಾಮ ಅವರ ಆಮಂತ್ರಣದ ಬಗ್ಗೆ ತೃಪ್ತರಾಗದ ಕರ್ಜೈ, ‘ಅವರನ್ನು ಅಧ್ಯಕ್ಷರ ನಿವಾಸಕ್ಕೆ ನಮ್ಮ ಸರ್ಕಾರ ಆತ್ಮೀಯವಾಗಿ ಸ್ವಾಗತಿಸುತ್ತದೆ. ಆದರೆ ಒಬಾಮ ಅವರನ್ನು ಭೇಟಿಯಾಗಲು ಬಗ್ರಾಂಗೆ ಹೋಗುವ ಉದ್ದೇಶ ಇಲ್ಲ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಒಬಾಮ ಭಾನುವಾರ ರಾತ್ರಿ ಕರ್ಜೈ ಅವರಿಗೆ ದೂರವಾಣಿ ಕರೆ ಮಾಡಿ ಸುಮಾರು 15ರಿಂದ 20 ನಿಮಿಷ ಮಾತುಕತೆ ನಡೆಸಿದರು. ಏಪ್ರಿಲ್ 5ರ ಅಧ್ಯಕ್ಷೀಯ ಮತ್ತು ಪ್ರಾಂತೀಯ ಮಂಡಳಿ ಚುನಾವಣೆಯಲ್ಲಿ ಯಶಸ್ವಿಯಾಗಿ ಹಿಡಿತ ಸಾಧಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ’ ಎಂದೂ ಆಫ್ಘಾನಿಸ್ತಾನ ಅಧ್ಯಕ್ಷರ ನಿವಾಸದ ಇನ್ನೊಂದು ಪ್ರಕಟಣೆ ತಿಳಿಸಿದೆ.
ಎರಡೂ ದೇಶದ ನಾಯಕರು ದೂರವಾಣಿಯಲ್ಲಿ ಆಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಯ ಬಗೆಗೂ ಚರ್ಚಿಸಿದ್ದಾರೆ’ ಎಂದೂ ತಿಳಿಸಲಾಗಿದೆ.
ಅಮೆರಿಕಕ್ಕೆ ಪಯಣ: ಆಫ್ಘಾನಿಸ್ತಾನದಿಂದ ನೇರವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಒಬಾಮ, ಸೋಮವಾರ ಶ್ವೇತ ಭವನದಲ್ಲಿ ಏರ್ಪಡಿಸಿದ್ದ ಯೋಧರ ಸನ್ಮಾನ ಹಾಗೂ ಔತಣಕೂಟದಲ್ಲಿ ಪಾಲ್ಗೊಂಡರು ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ಪಟ್ಟ: ಒಬಾಮ ಜತೆ ಆಫ್ಘಾನಿಸ್ತಾನಕ್ಕೆ ತೆರಳಿದ ಅಧಿಕಾರಿಗಳ ಪಟ್ಟಿಯಲ್ಲಿ ಸಿಐಎ ಸ್ಥಳೀಯ ಮುಖ್ಯಸ್ಥರ ಹೆಸರು ಸೇರಿಸಿ ಶ್ವೇತ ಭವನ ಪ್ರಮಾದ ಎಸಗಿತ್ತು. ಆದರೆ, ಕೆಲಹೊತ್ತಿನ ಬಳಿಕ ಅವರ ಹೆಸರನ್ನು ಕೈಬಿಟ್ಟು ಪರಿಷ್ಕೃತ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಪ್ಪನ್ನು ಸರಿಪಡಿಸಿಕೊಂಡಿದೆ.
*‘ಉಕ್ರೇನ್ ಜತೆ ಕೆಲಸ ಮಾಡಲು ಅಮೆರಿಕ ಸಿದ್ಧ’
*‘ಆಫ್ಘಾನಿಸ್ತಾನ ಇನ್ನೂ ಅಪಾಯಕಾರಿ ಸ್ಥಳ’
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.