ಭಾನುವಾರ, ಜನವರಿ 26, 2020
28 °C
ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿಶ್ವಾಸ

ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ

ಬೆಂಗಳೂರು: ‘ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಬೇರೆ ದಾರಿ­ಯಿಲ್ಲದೇ ಕಾಂಗ್ರೆಸ್‌ನ ಬೆಂಬಲ ಪಡೆದು ಸರ್ಕಾರ ರಚಿಸುವುದು ನಿಶ್ಚಿತ’ ಎಂದು ಸುಪ್ರೀಂ ಕೋರ್ಟ್‌ನ  ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.ಜನ ಸಂಗ್ರಾಮ ಪರಿಷತ್‌ ಮತ್ತು ಪ್ರೆಸ್‌ಕ್ಲಬ್‌ ಆಫ್‌ ಬೆಂಗಳೂರು ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣೆಗಳು ಮತ್ತು ರಾಜಕಾರಣದ ಜನತಂತ್ರೀ ಕರಣ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.‘ದೆಹಲಿಯಲ್ಲಿ ನಡೆದ ವ್ಯಾಪಕ ಸಮೀಕ್ಷೆಯಲ್ಲಿ  ಶೇ 70ರಷ್ಟು ಮಂದಿ ಸರ್ಕಾರ ರಚಿಸುವಂತೆ ಅಭಿಪ್ರಾಯ ಮಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ’ ಎಂದು ತಿಳಿಸಿದರು. ‘ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಗೆಲುವು ಹಾಗೂ ಬಹುಮತವೇ ಸರ್ಕಾರ ರಚನೆಯ ಮಾನದಂಡವಾಗಿದೆ.28 ಸ್ಥಾನ ಗಳಿಸಿರುವ ಎಎಪಿಗೆ  ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿದ್ದು, ಅದು ಎಲ್ಲಿಯವರೆಗೆ ಮುಂದುವರಿಯುತ್ತದೋ ತಿಳಿದಿಲ್ಲ. ಆಮ್‌ ಆದ್ಮಿ ಪಕ್ಷ ಸರ್ಕಾರ ರಚನೆ  ಮಾಡಿದರೆ 32 ಸ್ಥಾನಗಳಿಸಿರುವ ಬಹುದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿ ನಗಣ್ಯವಾಗಲಿದೆ’ ಎಂದು ಭವಿಷ್ಯ ನುಡಿದರು.‘ಆಮ್ ಆದ್ಮಿ ಪಕ್ಷ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಎಲ್ಲ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಹಳ್ಳಿಗರು ನಿರ್ಧರಿಸಬೇಕು ಎಂದರು.‘ಸ್ವಿಟ್ಜರ್ಲೆಂಡ್ ಮಾದರಿಯಲ್ಲಿ ಮತದಾನ ಅನುಪಾತ ಆಡಳಿತ ಪ್ರಾತಿನಿಧ್ಯ ಜಾರಿಗೆ ಬರಬೇಕು. ಶೇ 5ರಷ್ಟು ಮತದಾನ ಪಡೆದ ಪಕ್ಷಕ್ಕೆ ಅಷ್ಟೇ ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆಯಬೇಕು. ಆಗ ಮಾತ್ರ ವ್ಯವಸ್ಥೆ ಸುಧಾರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.‘ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಸಾಧ್ಯವಾಗಬೇಕು. ಸರ್ಕಾರ ರಚಿಸುವ ಸಲುವಾಗಿ ಅನೈತಿಕ ಕಸರತ್ತುಗಳು ಕಡಿಮೆಯಾಗಬೇಕು. ಪಾಶ್ಚಿಮಾತ್ಯ ಪ್ರಭಾವದಿಂದ ಹೊರಬಂದು ಪ್ರಜಾಪ್ರಭುತ್ವ ನೆಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಕಟ್ಟಬೇಕು’ ಎಂದು ತಿಳಿಸಿದರು.‘ಐದು ವರ್ಷದ ಆಡಳಿತಾವವಧಿಯಲ್ಲಿ  ಜನಪ್ರತಿನಿಧಿಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲ. ಅವರ ಎಲ್ಲ ನಿರ್ಧಾರಗಳ ಹಿಂದೆ ವಾಣಿಜ್ಯ ಹಿತಾಸಕ್ತಿ ಹಾಗೂ  ಮಾಫಿಯಾ ಶಕ್ತಿಗಳಿವೆ. ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ಪರಮಾಣು ನೀತಿಯ ಅಗತ್ಯವಿರಲಿಲ್ಲ. ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಲಾಬಿಯಿಂದಾಗಿ ಈ ನೀತಿ ರೂಪುಗೊಂಡಿತು’ ಎಂದು ಹೇಳಿದರು.ಯಶಸ್ಸಿಗೆ ಹೆದರಿದ ಕಾಂಗ್ರೆಸ್: ‘ಲೋಕಪಾಲ ಮಸೂದೆಯನ್ನು ಜಾರಿಮಾಡುವಂತೆ 2011ರಲ್ಲಿ ಬಹುದೊಡ್ಡ ಚಳವಳಿ ನಡೆಯಿತು. ಆಗ ಮನ್ನಣೆ ನೀಡದ ಕಾಂಗ್ರೆಸ್ ಈಗ ಎಎಪಿಯ ಯಶಸ್ಸಿಗೆ ಹೆದರಿಗೆ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಪಯುಕ್ತವಿಲ್ಲದ ಮಸೂದೆಯನ್ನು  ಜಾರಿ ಮಾಡಿದೆ’ ಎಂದು ಟೀಕಿಸಿದರು.‘ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಶೇ 80ರಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದರು. ಜನ ಇಚ್ಛೆಪಟ್ಟಂತೆ ಮಸೂದೆಯನ್ನು ಜಾರಿ ಮಾಡಿದ್ದರೆ, ಸಚಿವ ಸಂಪುಟದ ಶೇ 50ರಷ್ಟು ಮಂದಿ  ಸಚಿವರು ಜೈಲಿನಲ್ಲಿರಬೇಕಾಗಿತ್ತು’ ಎಂದು ವ್ಯಂಗ್ಯವಾಡಿದರು.ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ‘ ದೇಶದಲ್ಲಿ ಸುಮಾರು 1,350 ಪಕ್ಷಗಳಿವೆ. ಅವುಗಳಲ್ಲಿ 90 ಪಕ್ಷಗಳು ಕ್ರಿಯಾಶೀಲವಾಗಿವೆ. ಆದರೆ, ಪ್ರತಿಯೊಂದು ಪಕ್ಷವನ್ನು ಒಂದೊಂದು ಕುಟುಂಬ ನಿಯಂತ್ರಿಸುತ್ತಿ­ರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ‘ ದೆಹಲಿಯಲ್ಲಿ ನಡೆದ ಆಮ್ ಆದ್ಮಿ  ಪಕ್ಷದ ಪ್ರಯೋಗ ಎಲ್ಲೆಡೆಯು ಸಾಧ್ಯವಾಗುತ್ತದೆ ಎಂಬ ಭ್ರಮೆ ಬೇಡ. ವಿವಿಧ ರಾಜ್ಯಗಳಲ್ಲಿರುವ ಸಮಸ್ಯೆಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಸುಧಾರಿಸಬೇಕಿದೆ’ ಎಂದರು.

ಪ್ರತಿಕ್ರಿಯಿಸಿ (+)