ಶನಿವಾರ, ಜನವರಿ 18, 2020
26 °C

ಆರೋಗ್ಯದಿಂದ ಅಭಿವೃದ್ಧಿ ಸಾಧ್ಯ: ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಆರೋಗ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಅಪೌಷ್ಟಿಕತೆಯು ದೇಶದ ಬಹು ದೊಡ್ಡ ಸಮಸ್ಯೆಯಾಗಿದ್ದು, ದೇಶದ ಸಾಕಷ್ಟು ಮಹಿಳೆಯರು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ ವಿಷಾದ ವ್ಯಕ್ತಪಡಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಸೇವೆ ಹಾಗೂ ಸೌಲಭ್ಯಗಳ ಕುರಿತಾದ ಜಿಲ್ಲಾ ಮಟ್ಟದ ಜನಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಾರೋಗ್ಯ, ಅಪೌಷ್ಟಿಕತೆ ಮತ್ತು ಎಚ್‌ಐವಿಯಂತಹ ರೋಗಗಳು ತಮ್ಮ ಕದಂಬ ಬಾಹುಗಳನ್ನು ಚಾಚಿವೆ. ಕೇವಲ ನಮ್ಮ ಭಾಗದಲ್ಲಿಯೇ ಸುಮಾರು ಎರಡು ಲಕ್ಷ ಎಚ್‌ಐವಿ ಸೋಂಕಿತರು ಸಿಗುತ್ತಾರೆ.

 

ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸೇವೆ ಹಾಗೂ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ವಿಶ್ವ ಸೇವಾ ಮಿಷನ್ ಸಂಸ್ಥೆ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಇಂತಹ ಕಾರ್ಯಕ್ರಮಗಳು ಯಶಸ್ವಿ ಆಗಬೇಕಾದರೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯ. ಈ ಕಾರ್ಯಕ್ರಮಗಳ ಸಂದೇಶ ಸಮಾಜದ ಪ್ರತಿಯೊಬ್ಬ ಮಹಿಳೆಗೆ ತಲುಪಬೇಕು. ಸಮಾಜದ ಪರಿವರ್ತನೆಯಲ್ಲಿ ಮಹಿಳೆಯ ಪಾತ್ರ ಪ್ರಮುಖ ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಅದರ ಸೇವೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ನಾಗರಿಕರ ಪಾತ್ರ ದೊಡ್ಡದು. ಪ್ರತಿಯೊಬ್ಬರು ಈ ಬಗ್ಗೆ ಅರಿತುಕೊಂಡು ನಿತ್ಯದ ಜೀವನದಲ್ಲಿ ರೂಢಿಸಿಕೊಂಡಾಗ ಮುಂದೊಂದು ದಿನ ನಾವು ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಅದರ ಜ್ಞಾನವಿಲ್ಲದೇ ಕಂದಾಚಾರಕ್ಕೆ ಬಲಿಯಾಗಿ ಆರೋಗ್ಯ, ನೈರ್ಮಲ್ಯದ ವಿಷಯದಲ್ಲಿ ಅನಕ್ಷರಸ್ಥರಾಗಿದ್ದೇವೆ. ಅದರಿಂದ ಹೊರ ಬಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ, ಆರೊಗ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಆದರೆ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಶಿಶು ಮತ್ತು ತಾಯಿ ಮರಣಗಳು ನಡೆಯುತ್ತಿವೆ. ಅಲ್ಲದೇ ಶೌಚಾಲಯಗಳ ಬಳಕೆ ಮಾಡದೆ ಶೇ. ರಷ್ಟು 80 ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಇದೆಲ್ಲದರ ನಿರ್ಮೂಲನೆಗಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಸಾಮರ್ಥ್ಯಾಭಿವೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಮುಕ್ತ ನಿಧಿ ನೀಡಿ ರೋಗ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.ನಂತರ ನಡೆದ ಸಂವಾದದಲ್ಲಿ ನಾಗರಿಕರು ತಮ್ಮ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರವನ್ನು ಅಧಿಕಾರಿಗಳು ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕವಾಲ್ದಾರ, ಸದಸ್ಯ ಸಣ್ಣ ಹಣಮಂತಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಕುಮಾರ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಅಭಯಕುಮಾರ, ಜಿಲ್ಲಾ ಕುಷ್ಠರೋಗ ನಿಯಂತ್ರಾಣಾಧಿಕಾರಿ ಡಾ. ಕಟ್ಟಿಮನಿ, ಡಾ. ಭಗವಂತ ಅನ್ವರ ಕೆಎಚ್‌ಎಸ್‌ಡಿಆರ್‌ಪಿನ ಗುಲ್ಬರ್ಗ ವಿಭಾಗಿಯ ಅಧಿಕಾರಿ ದುರ್ಗೆಶ ಮಾಚನೂರ, ಸಿದ್ರಾಮ ಹೊನ್ಕಲ್, ಸಿದ್ರಾಮಪ್ಪ ಪೊಲೀಸ್‌ಪಾಟೀಲ,  ಜಿಲ್ಲಾ ಸಂಯೋಜಕ ಲೋಹಿತ ಕುಮಾರ ಎಂ.ಪಿ. ಮುಂತಾದವರು ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು. ವಿಶ್ವನಾಥರೆಡ್ಡಿ ನಿರೂಪಿಸಿದರು. ಮೊಹನರೆಡ್ಡಿ ಸ್ವಾಗತಿಸಿದರು. ಶಂಕರಗೌಡ ವಣಿಕ್ಯಾಳ ವಂದಿಸಿದರು.

ಪ್ರತಿಕ್ರಿಯಿಸಿ (+)