ಗುರುವಾರ , ಮೇ 19, 2022
23 °C

ಆರ್ಥಿಕ ಬಿಕ್ಕಟ್ಟಿನ ಸುನಾಮಿ?

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಉತ್ತರ ಜಪಾನಿನಲ್ಲಿ ಕಡ್ಡಿಪೆಟ್ಟಿಗೆಗಳಂತೆ ತೇಲಿ ಹೋಗಿ ಎಲ್ಲೆಡೆ ಚದುರಿ ಬಿದ್ದಿರುವ ಕಾರುಗಳು, ಕೊಚ್ಚಿ ಹೋದ ನೌಕೆಗಳು, ಮುರಿದು ಬಿದ್ದ  ಸೌಧಗಳು, ಕಿತ್ತು ಹೋದ ರಸ್ತೆ - ಸೇತುವೆಗಳು, ತೈಲ ಸ್ಥಾವರದಿಂದ ಹೊರಸೂಸುವ ಹೊಗೆ, ಕಾರ್ಖಾನೆಗಳ ಭಗ್ನಾವಶೇಷಗಳೆಲ್ಲವೂ ಜಪಾನಿನ ಒಟ್ಟಾರೆ ಅರ್ಥ ವ್ಯವಸ್ಥೆ ಮುರಿದು ಬಿದ್ದಿರುವುದರ ಕರಾಳ ಚಿತ್ರಣ ನೀಡುತ್ತವೆ.ಕಾರು ತಯಾರಿಕೆಯ ಪ್ರಮುಖ ಪ್ರದೇಶವಾಗಿರುವ ಈಶಾನ್ಯ ಜಪಾನ್,  ಕೋಟ್ಯಂತರ ಬಿಡಿಭಾಗ ತಯಾರಿಕಾ ಸಂಸ್ಥೆಗಳು, ಪೂರೈಕೆಯ ಸುಗಮ ಸಾಗಾಣಿಕೆಗೆ ನೆರವಾಗುತ್ತಿದ್ದ ರಸ್ತೆ ಮತ್ತು ಬಂದರುಗಳು ಎಲ್ಲವೂ ವಿನಾಶದ ಚಿತ್ರಣ ನೀಡುತ್ತವೆ. ಅಷ್ಟೇ ಅಲ್ಲದೇ ಆರ್ಥಿಕ ಮತ್ತು ಹಣಕಾಸಿನ ಆಘಾತದ ಅಲೆಗಳು ವಿಶ್ವದ ಪ್ರಮುಖ ಆರ್ಥಿಕತೆಗಳಿಗೂ ಅಪ್ಪಳಿಸಲಿವೆ.ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಜಪಾನ್, ಕಳೆದ ವರ್ಷವಷ್ಟೇ ಆ ಸ್ಥಾನಕ್ಕೆ ಎರವಾಗಿತ್ತು. ನಮ್ಮ ನೆರೆ ರಾಷ್ಟ್ರ ಚೀನಾ ಈಗ ಆ ಸ್ಥಾನಕ್ಕೆ ಏರಿದೆ. ಸದ್ಯಕ್ಕೆ 3ನೇ ಆರ್ಥಿಕ ಶಕ್ತಿಯಾಗಿರುವ ಜಪಾನ್, ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ತೀವ್ರವಾಗಿ ಜರ್ಜರಿತವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕಳೆದ 20 ವರ್ಷಗಳಿಂದ ತುಂಬ ನಾಜೂಕಿನ ಪರಿಸ್ಥಿತಿ ಎದುರಿಸುತ್ತಿದ್ದ ದೇಶಕ್ಕೆ   ಇನ್ನೊಂದು ಭಾರಿ ಪೆಟ್ಟು ಬಿದ್ದಿದೆ.ಮನುಕುಲ ಕಂಡ ಅತ್ಯಂತ ದೊಡ್ಡದಾದ ಈ ದುರಂತವು  ಭಾರತದ ಅರ್ಥ ವ್ಯವಸ್ಥೆ ಮೇಲೆ ಬೀರಬಹುದಾದ ಪರಿಣಾಮಗಳ ತೀವ್ರತೆಯನ್ನು ತಕ್ಷಣಕ್ಕೆ ಅಂದಾಜು ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲಿನ ವಿದ್ಯಮಾನಗಳು ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ನೆಲಕಚ್ಚಿದ ದೇಶವನ್ನು ಮರಳಿ ಕಟ್ಟುವ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ ಅದರಿಂದ ಭಾರತದ ಆರ್ಥಿಕತೆಗೆ ಚೇತರಿಕೆ ದೊರೆಯುವ ಸಾಧ್ಯತೆಗಳೂ ಇವೆ.ಇನ್ನೊಂದೆಡೆ ಅಣು ವಿದ್ಯುತ್ ಸ್ಥಾವರಗಳ ಬದಲಿಗೆ ಶಾಖೋತ್ಪನ್ನ ವಿದ್ಯುತ್ ಉತ್ಪಾದಿಸಲು ಮುಂದಾಗುತ್ತಿದ್ದಂತೆ  ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಹೆಚ್ಚಳಗೊಳ್ಳಬಹುದು ಎನ್ನುವ ಆತಂಕವೂ ಮೂಡಿದೆ.ಬ್ಯಾಂಕ್ ಆಫ್ ಜಪಾನ್, ದೇಶದ ಅರ್ಥ ವ್ಯವಸ್ಥೆಗೆ ಬೆಂಬಲ ನೀಡಲು 324 ಶತಕೋಟಿ ಡಾಲರ್‌ಗಳಷ್ಟು ಮೊತ್ತವನ್ನು  (ಅಂದಾಜು `14,58,000 ಕೋಟಿ)  ಮಾರುಕಟ್ಟೆಗೆ ಹರಿಸಿದೆ. ಪ್ರಾಥಮಿಕ ಅಂದಾಜುಗಳ ಪ್ರಕಾರ ಜಪಾನ್‌ಗೆ ಆಗಿರುವ ಆರ್ಥಿಕ ನಷ್ಟದ ಪ್ರಮಾಣವು 200 ಶತಕೋಟಿ ಡಾಲರ್‌ಗಳಷ್ಟು (`9,00,000 ಕೋಟಿ) ಇದೆ.ಆರ್ಥಿಕ ನಷ್ಟದ ಅಂದಾಜು 20 ಲಕ್ಷ ಯೆನ್‌ಗಳಿಗಿಂತ  (` 15,93,000 ಕೋಟಿ) ಹೆಚ್ಚಿಗೆ ಇರಲಿದೆ ಎಂದೂ ಲೆಕ್ಕ ಹಾಕಲಾಗಿದೆ. ಉದ್ದಿಮೆಗಳು ದಿನನಿತ್ಯದ ವಹಿವಾಟು ನಡೆಸಲು ಮತ್ತು ಹಾನಿ ಭರ್ತಿ ಮಾಡಿಕೊಳ್ಳಲು ಜಪಾನ್ ಸರ್ಕಾರ ತಕ್ಷಣಕ್ಕೆ 127 ಶತಕೋಟಿ ಡಾಲರ್‌ಗಳನ್ನು (` 5,71,500 ಕೋಟಿ) ಬಿಡುಗಡೆ ಮಾಡಲು ಮುಂದಾಗಿದೆ. ಕಳೆದ ಹಣಕಾಸು ವರ್ಷದಲ್ಲಿ  ಭಾರತ ಮತ್ತು ಜಪಾನಿನ ಮಧ್ಯೆ ನಡೆದ ವ್ಯಾಪಾರ ವಹಿವಾಟಿನ ಮೊತ್ತವು 10.4 ಶತಕೋಟಿ ಡಾಲರ್‌ಗಳಷ್ಟು (`45,000 ಕೋಟಿ) ಆಗಿದೆ.  ಜಪಾನ್ ಕೊಡ ಮಾಡುವ ಅಧಿಕೃತ ನೆರವಿನ ಪ್ರಮಾಣದಲ್ಲಿ ಭಾರತದ ಪಾಲೂ ಗಮನಾರ್ಹವಾಗಿದೆ.ಜಪಾನ್ ಕಂಡಿರುವ ಈ ನೈಸರ್ಗಿಕ ಪ್ರಕೋಪವು ಬೀರುವ ದೂರಗಾಮಿ ಪರಿಣಾಮಗಳಿಗೆ ಹಲವಾರು ಮುಖಗಳಿವೆ. ವಿದ್ಯುನ್ಮಾನ ಸಾಧನ ಸಲಕರಣೆ, ಕಾರು ಮತ್ತಿತರ ತಯಾರಿಕಾ ಉದ್ಯಮಕ್ಕೆ ಜಪಾನ್ ಅನ್ನೇ ನೆಚ್ಚಿಕೊಂಡಿರುವ ಕೈಗಾರಿಕೆಗಳ ಉತ್ಪಾದನೆ ಕುಸಿಯಲಿದೆ.ಇನ್ನೊಂದೆಡೆ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಹಲವಾರು ಬಗೆಯ ಉತ್ಪನ್ನಗಳ ವಹಿವಾಟು ಕೂಡ ಕಡಿಮೆಯಾಗಲಿದೆ.ಆದರೆ, ಮೂರನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯು ಸಂಕಷ್ಟಕ್ಕೆ ಸಿಲುಕಿರುವುದರಿಂದ ಜಾಗತಿಕ ಆರ್ಥಿಕ ಹಿಂಜರಿತ ಕಂಡು ಬರುವ ಸಾಧ್ಯತೆಗಳು ಮಾತ್ರ ಇಲ್ಲ. ಮೂರು ವರ್ಷಗಳ ಹಿಂದೆ ಅಮೆರಿಕದ  ಅತಿ ದೊಡ್ಡ ಹೂಡಿಕೆ ಬ್ಯಾಂಕ್ ಲೀಮನ್ ಬ್ರದರ್ಸ್ ದಿವಾಳಿ ಎದ್ದಾಗ ಕಂಡು ಬಂದಿದ್ದ ದಿವಾಳಿತನ ಈಗ ಕಂಡು ಬರುವ ಸಾಧ್ಯತೆಗಳು ಇಲ್ಲ.ವಿಶ್ವದಾದ್ಯಂತ ಇರುವ ವಾಹನ ತಯಾರಿಕೆ (ಆಟೊಮೊಬೈಲ್) ಮತ್ತು ವಿದ್ಯುನ್ಮಾನ  ಸಲಕರಣೆ ತಯಾರಿಸುವ ಕೈಗಾರಿಕೆಗಳ ಉತ್ಪಾದನೆ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಜಪಾನ್‌ನಲ್ಲಿನ ತಯಾರಿಕೆ ಚಟುವಟಿಕೆಗಳು ದೀರ್ಘಕಾಲದವರೆಗೆ      ಸ್ಥಗಿತಗೊಂಡರೆ, ಏಷ್ಯಾ, ಯೂರೋಪ್ ಮತ್ತು ಅಮೆರಿಕದಲ್ಲಿಯೂ ತಯಾರಿಕೆ ಪ್ರಕ್ರಿಯೆ ಕುಂಠಿತಗೊಳ್ಳಲಿದೆ.ಅಲ್ಪಾವಧಿಯಲ್ಲಿ ಜಪಾನ್ ತನ್ನ ವಿದ್ಯುತ್ ಅಗತ್ಯಗಳಿಗಾಗಿ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲ್ಲನ್ನು ಹೆಚ್ಚಾಗಿ ನೆಚ್ಚಿಕೊಳ್ಳಲಿದೆ. ಇದರಿಂದ ದ್ರವರೂಪದ ನೈಸರ್ಗಿಕ ಅನಿಲವೂ (ಎಲ್‌ಎನ್‌ಜಿ) ತುಟ್ಟಿಯಾಗುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ  ಕಚ್ಚಾ ತೈಲಕ್ಕೆ ಬೇಡಿಕೆ ಹೆಚ್ಚಬಹುದು,  ಕಚ್ಚಾ ತೈಲದ ಬೆಲೆ ಇನ್ನಷ್ಟು ಏರಿಕೆಯಾಗಿ ಹಣದುಬ್ಬರವೂ ಹೆಚ್ಚಬಹುದು.ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಬಹುದು. ಎಲೆಕ್ಟ್ರಾನಿಕ್ಸ್ ಕೈಗಾರಿಕೆ, ಆಟೊಮೊಬೈಲ್‌ಗಳಿಗೆ ಬಳಸುವ ಬಿಡಿಭಾಗಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಆರ್ಥಿಕ ಚಟುವಟಿಕೆ, ಜಿಡಿಪಿ ವೃದ್ಧಿ ದರ, ಹೂಡಿಕೆ ಕಡಿಮೆಯಾಗಿ ಐ.ಟಿ ರಂಗದ ಮೇಲೂ ಪರಿಣಾಮ ಬೀರಲಿದೆ.ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದರೂ, ಜಾಗತಿಕ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಜಪಾನಿನ ಪಾಲು ಶೇ 5ಕ್ಕಿಂತ ಕಡಿಮೆ ಇದೆ. ಹೀಗಾಗಿ ವಿಶ್ವದ ಒಟ್ಟಾರೆ ಅರ್ಥ ವ್ಯವಸ್ಥೆ ಮೇಲೆ ಇದರ ಪರಿಣಾಮವು ತೀರ ಕಡಿಮೆ ಎಂದೂ ಹೇಳಲಾಗುತ್ತಿದೆ.ಭೂಕಂಪ ಮತ್ತು ಸುನಾಮಿ ಪೀಡಿತ ಪ್ರದೇಶಗಳಲ್ಲಿ ಕೈಗಾರಿಕೆಗಳು ಗಮನಾರ್ಹ ಸಂಖ್ಯೆಯಲ್ಲಿ ಇರದಿದ್ದರೂ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಚಟುವಟಿಕೆಗಳಂತೂ ತೀವ್ರವಾಗಿ ಕುಂಠಿತಗೊಳ್ಳಲಿವೆ.ಮನೆ, ರಸ್ತೆ, ಸೇತುವೆ ಮತ್ತಿತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಶತ, ಶತಕೋಟಿ ಡಾಲರಗಳ ಅಗತ್ಯ ಇದೆ. ಭಾರಿ ಪ್ರಮಾಣದ ಸರ್ಕಾರಿ ವೆಚ್ಚವು ದೇಶದ ಸಾಲದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದೆ. ಭಾರತದಲ್ಲಿನ ವಾಹನ ತಯಾರಿಕಾ ರಂಗಕ್ಕೆ ಬೇಕಾದ ‘ಆಟೊ ಗ್ರೇಡ್ ಉಕ್ಕು’ ಆಮದು  ಮಾಡಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಜಪಾನಿ ಸಂಸ್ಥೆಗಳು ಈಗ ದೇಶದಲ್ಲಿನ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚು ಗಮನ ನೀಡುವುದರಿಂದ ಆಮದು ಪ್ರಮಾಣ ಕಡಿಮೆ ಆಗುವ ಸಾಧ್ಯತೆಗಳಿವೆ.ದೇಶಿ ವಾಹನ ತಯಾರಿಕಾ ರಂಗಕ್ಕೆ ವಾರ್ಷಿಕ  40 ಲಕ್ಷ ಟನ್‌ಗಳಷ್ಟು ಆಟೊ ಗ್ರೇಡ್ ಉಕ್ಕಿನ ಅಗತ್ಯ ಇದೆ. ಇದರಲ್ಲಿ ಶೇ  50ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.ಜಪಾನಿನ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳಾದ ಸುಜುಕಿ, ಟೋಯೊಟಾ ಮತ್ತು ಹೊಂಡಾಗಳಿಗೆ ಬಿಡಿಭಾಗಗಳ ಪೂರೈಕೆ ಸಮಸ್ಯೆಯೂ ಎದುರಾಗಲಿದೆ. ವರದಿಗಳ ಪ್ರಕಾರ, ಮಾರುತಿ ಸುಜುಕಿ  ಇಂಡಿಯಾ ಲಿಮಿಟೆಡ್‌ನ ತಯಾರಿಕಾ ಚಟುವಟಿಕೆಗಳ ಮೇಲೆ  ಹೆಚ್ಚು ಪರಿಣಾಮ ಉಂಟಾಗಲಿದೆ.  ಆಟೊಮೊಬೈಲ್ ತಯಾರಿಕಾ ಸಂಸ್ಥೆಗಳು ಬಿಡಿಭಾಗಗಳ ಪೂರೈಕೆ ಕೊರತೆಯಿಂದ ಕೆಲ ಮಾದರಿಗಳ ವಾಹನಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಸಣ್ಣ ಕಾರು, ವಿವಿಧ ಬಗೆಯ ಇಂಧನ ಚಾಲಿತ (ಹೈಬ್ರೀಡ್) ಮತ್ತು ವಿಲಾಸಿ ಕಾರುಗಳ ತಯಾರಿಕೆಗೆ ಧಕ್ಕೆ ಒದಗಿದೆ.ಮುರಿದು ಬಿದ್ದ ಅರ್ಥ ವ್ಯವಸ್ಥೆಯನ್ನು ಮರಳಿ ಕಟ್ಟಲು ಜಪಾನಿಗೆ ಅಗಾಧ ಪ್ರಮಾಣದ ಹಣದ ಅಗತ್ಯ ಇದೆ. ಜಪಾನಿಯರ ಬಹುತೇಕ ಉಳಿತಾಯವು ಚಿನ್ನದ ರೂಪದಲ್ಲಿ ಇದೆ. ಜಪಾನಿಯರು ಹಣ ಹೊಂದಿಸಲು ಚಿನ್ನ ಮತ್ತು  ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇತರ ಹೂಡಿಕೆದಾರರೂ ಅದನ್ನೇ ಅನುಸರಿಸಲು ತೊಡಗಿದ್ದಾರೆ. ಇದರ ಪರಿಣಾಮವಾಗಿ ಕಚ್ಚಾ ಸರಕುಗಳಿಗೆ ಬೇಡಿಕೆ ಕುಗ್ಗುವ ಆತಂಕ ಎದುರಾಗಿದೆ.ಹೀಗಾಗಿ ಬೆಳ್ಳಿ, ಅಲ್ಯುಮಿನಿಯಂ, ತಾಮ್ರ, ಕಚ್ಚಾ ತೈಲದ ಬೆಲೆಗಳೂ ಇಳಿಯಲಿವೆ. ಕೃಷಿ ಉತ್ಪನ್ನಗಳಾದ ರಬ್ಬರ್, ರೋಬಸ್ಟಾ ಕಾಫಿ ಮತ್ತಿತರ ಸರಕುಗಳ ಬೆಲೆಗಳೂ ಈಗಾಗಲೇ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿವೆ. ಭಾರತದ 2 ಶತಕೋಟಿ ಡಾಲರ್‌ಗಳಷ್ಟು (9000 ಕೋಟಿ) ಮೊತ್ತದ ಸಾಗರ ಆಹಾರ ಉತ್ಪನ್ನಗಳ ರಫ್ತು ವಹಿವಾಟು ಕುಸಿಯುವ ಸಾಧ್ಯತೆಗಳಿವೆ.ಭೂಕಂಪ ಮತ್ತು ಸುನಾಮಿಯ ಕೇಂದ್ರ ಬಿಂದುವಾಗಿರುವ ಸೆಂಡಾಯಿ ನಗರದಲ್ಲಿ ಸಾಗರ ಆಹಾರ ಉತ್ಪನ್ನ ಮತ್ತು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಘಟಕಗಳ ಜೊತೆ ಭಾರತದ ರಫ್ತುದಾರರು ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ರಫ್ತು ವಹಿವಾಟಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ.ದೇಶದ ಒಟ್ಟಾರೆ ಸಾಗರ  ಉತ್ಪನ್ನಗಳ  ರಫ್ತಿನಲ್ಲಿ ಜಪಾನಿನ ಪಾಲು ಶೇ 15ರಷ್ಟಿದೆ.  ಇಂತಹ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವಲ್ಲಿ ಜಪಾನ್ ಮೂರನೇ ಅತಿ ದೊಡ್ಡ ದೇಶವಾಗಿದೆ.ಸದ್ಯಕ್ಕಂತೂ ಜಪಾನ್ ಜತೆಗಿನ ಭಾರತದ ಬಹುತೇಕ ರಫ್ತು ವಹಿವಾಟು ಸ್ಥಗಿತಗೊಂಡಿದೆ. ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳ ಕರಾವಳಿ ತೀರದಿಂದ ರಫ್ತಾಗುತ್ತಿದ್ದ ಸೀಗಡಿ ಮೀನುಗಳ  ವಹಿವಾಟಿಗೂ ನಷ್ಟ ಉಂಟಾಗಲಿದೆ.ಮುಂಬರುವ ದಿನಗಳಲ್ಲಿ ಜಪಾನ್, ಭಾರತದಿಂದ ಅದರಲ್ಲೂ ಕೇರಳದಿಂದ ಆಮದು ಮಾಡಿಕೊಳ್ಳುತ್ತಿದ್ದ ವಿಲಾಸಿ / ದುಬಾರಿ ಸಾಗರ ಉತ್ಪನ್ನ ಮತ್ತು ಗೋಡಂಬಿಗಳ ಆಮದು ಮೇಲೆ ಕಡಿವಾಣ ವಿಧಿಸುವ ಸಾಧ್ಯತೆಗಳಿವೆ. ಕೇರಳದಿಂದ 5,600 ಟನ್‌ಗಳಷ್ಟು ಗೋಡಂಬಿ ರಫ್ತಾಗುತ್ತದೆ. ಕೇರಳದಿಂದ ತೆಂಗಿನ ನಾರು ಕೂಡ ಜಪಾನ್‌ಗೆ ರಫ್ತಾಗುತ್ತಿದೆ. ಮೆಣಸು, ಏಲಕ್ಕಿ ಮತ್ತಿತರ ಸಂಬಾರ ಪದಾರ್ಥಗಳು ಮತ್ತು ರಬ್ಬರ್ ರಫ್ತಿಗೂ ಕತ್ತರಿ ಬೀಳಲಿದೆ.ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ರಫ್ತು ಮಾಡಿ ಲಾಭ ಮಾಡಿಕೊಳ್ಳಬೇಕು ಎನ್ನುವ ದಕ್ಷಿಣ ಭಾರತದ ರಫ್ತುದಾರರ ಕನಸೂ  ಭಗ್ನಗೊಂಡಿದೆ. ಭರವಸೆದಾಯಕ ಮಾರುಕಟ್ಟೆಯಾಗಿದ್ದ ಜಪಾನ್‌ನಿಂದ ಹೆಚ್ಚಿನ ವಹಿವಾಟಿನ ನಿರೀಕ್ಷೆಯಲ್ಲಿದ್ದ ಹೈದರಾಬಾದ್‌ನ ಮಾವಿನ ಹಣ್ಣು ಮತ್ತು ಮಾವಿನ ಹಣ್ಣಿನ ತಿರುಳಿನ ರಫ್ತುದಾರರು ಈಗ ತೀವ್ರ ನಿರಾಶೆಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಪಾನ್ ಜತೆಗಿನ ಮಾವಿನ ಹಣ್ಣು ರಫ್ತು ವಹಿವಾಟು ಏರಿಕೆ ಹಾದಿಯಲ್ಲಿತ್ತು.ವಿದ್ಯುತ್ ಪೂರೈಕೆ ಮತ್ತು ಸಾರಿಗೆ ಮೂಲ ಸೌಕರ್ಯಗಳು ನಾಶಗೊಂಡಿರುವುದರಿಂದ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಸಲಕರಣೆಗಳ ಬಿಡಿಭಾಗ ಸರಣಿ ಪೂರೈಕೆಯಲ್ಲಿ ಭಾರಿ ಅಡಚಣೆ ಉಂಟಾಗಲಿದೆ. ಗ್ರಾಹಕ ಬಳಕೆಯ ವಿದ್ಯುನ್ಮಾನ ಸಲಕರಣೆಗಳಾದ ಕ್ಯಾಮರಾ, ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳಲ್ಲಿ ಮಾಹಿತಿ ಸಂಗ್ರಹಿಸಲು ನೆರವಾಗುವ ಚಿಪ್‌ಗಳ ತಯಾರಿಸುವ ಕಾರ್ಖಾನೆಗಳು ಸ್ಥಗಿತಗೊಂಡಿವೆ.ಪ್ರಮುಖ ಜಾಗತಿಕ ಚಿಪ್ ಪೂರೈಕೆ ದೇಶವಾಗಿರುವ ಜಪಾನ್‌ನಲ್ಲಿ ಸೋನಿ, ಕ್ಯಾನನ್, ಫುಜಿತ್ಸು, ತೋಷಿಬಾ ಮತ್ತಿತರ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆ ಕುಸಿದಿರುವುದು ಜಾಗತಿಕ ಎಲೆಕ್ಟ್ರಾನಿಕ್ಸ್ ಸಲಕರಣೆಗಳ  ಉತ್ಪಾದನೆ ಕುಂಠಿತಗೊಳ್ಳಲು ಕಾರಣವಾಗಲಿದೆ.ಈ ಹಿಂದೆ ಮಾನವ ನಿರ್ಮಿತ ಅಣು ಬಾಂಬ್ ಸ್ಫೋಟದಿಂದ ತಲ್ಲಣಗೊಂಡು, ಇಡೀ ಜಗತ್ತೆ ಬೆಕ್ಕಸ ಬೆರಗಾಗುವಂತೆ ಮೈಕೊಡವಿಕೊಂಡು ಎದ್ದು ನಿಂತಂತೆ, ಈ ಬಾರಿಯ ಪ್ರಕೃತಿಯ ಮುನಿಸನ್ನೂ ಅದೇ ಕೆಚ್ಚೆದೆಯಿಂದ ಎದುರಿಸಿ ಮೆಟ್ಟಿ ನಿಲ್ಲುವ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಇಡೀ ವಿಶ್ವವೂ ಈ ಬಿಕ್ಕಟ್ಟಿನ ಗಳಿಗೆಯಲ್ಲಿ ಜಪಾನ್‌ಗೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಜಪಾನ್ ಅನ್ನು ಮರಳಿ ಕಟ್ಟುವುದರಲ್ಲಿಯೇ ಇಡೀ ವಿಶ್ವದ ಒಳಿತೂ ಅಡಗಿದೆ ಎನ್ನುವುದನ್ನು ನಿರ್ಲಕ್ಷಿಸಲಿಕ್ಕಾಗದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.