ಬುಧವಾರ, ಮಾರ್ಚ್ 3, 2021
25 °C

ಆರ್ಥಿಕ ವೇಗ ಕುಂಠಿತ ಭೀತಿ

ಆದಿತ್ಯ ರಾಜ್ ದಾಸ್ Updated:

ಅಕ್ಷರ ಗಾತ್ರ : | |

ಆರ್ಥಿಕ ವೇಗ ಕುಂಠಿತ ಭೀತಿ

ಮೂರು ತಿಂಗಳ ಹಿಂದೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ತಮ್ಮ ಬಜೆಟ್ ಮಂಡಿಸುವಾಗ  ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಸರಿಯಾದ ದಿಸೆಯಲ್ಲಿಯೇ ಸಾಗುತ್ತಿದೆ ಎಂದು ಅಭಿಮಾನದಿಂದಲೇ ಹೇಳಿದ್ದರು. ಅವರು ಹಾಗೆ ಹೆಮ್ಮೆಪಡಲು ಕಾರಣವಿತ್ತು.

 

ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ತೆರಿಗೆ ಸಂಗ್ರಹ ಅಥವಾ ಕೈಗಾರಿಕಾ ಉತ್ಪಾದನೆಗಳಂತಹ ದೊಡ್ಡ ಆರ್ಥಿಕ ಸೂಚಿಗಳು ಪ್ರಗತಿಯ ಹಾದಿಯಲ್ಲಿ ಇದ್ದವು. ಆದರೆ, ಇಂದು ಮುಖರ್ಜಿ ಅವರು ತಮ್ಮ ಉತ್ಸಾಹವನ್ನು ಒಮ್ಮಿಂದೊಮ್ಮೆಲೆ ಕಳೆದುಕೊಂಡಂತಿದ್ದು, ಆರ್ಥಿಕ ಪ್ರಗತಿಯ ವೇಗ ನಿಧಾನವಾಗುವ ಆತಂಕ ವ್ಯಕ್ತಪಡಿಸಿದ್ದಾರೆ.ಈ ಆರ್ಥಿಕ ವರ್ಷದಲ್ಲಿ ಒಟ್ಟಾರೆ ವರಮಾನ ಸಂಗ್ರಹದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಲಿದೆ ಎಂದು ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಹಣದುಬ್ಬರ ಕುಗ್ಗಲು ನಿರಾಕರಿಸುತ್ತಿರುವುದರಿಂದ ದೇಶದ ಆರ್ಥಿಕ ಪ್ರಗತಿ ಈ ಮೊದಲು ನಿರೀಕ್ಷಿಸಿದ ಶೇ 9ರ ಬದಲಿಗೆ ಶೇ 8ರಷ್ಟು ಮಾತ್ರ ಆಗಬಹುದು ಎಂಬ ಭೀತಿ ಪ್ರಮುಖ ನೀತಿ ನಿರೂಪಕರಲ್ಲಿ ಮೂಡಿದೆ.ಜಿಡಿಪಿ ಪ್ರಗತಿಯ ವೇಗ ಕುಂಠಿತವಾದರೆ ಅದರಿಂದ ವ್ಯಾಪಕ ದುಷ್ಪರಿಣಾಮ ಆಗಲಿದೆ.ಮುಖ್ಯವಾಗಿ ಉತ್ಪಾದನೆ ಕಡಿಮೆಯಾಗಿ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಕುಸಿಯುತ್ತದೆ. ಅಮೆರಿಕದಲ್ಲಿ ಆರ್ಥಿಕ ಹಿನ್ನಡೆಯಿಂದಾಗಿ ಉಂಟಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ಭಾರತ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ದೇಶದ ಆರ್ಥಿಕ ರಂಗದಲ್ಲಿ ಈ ಬೆಳವಣಿಗೆ ನಡೆದಿದೆ.ಜಿಡಿಪಿಯ ಅಂಕಿ ಅಂಶ ನೋಡಿದಾಗ 2010-11ನೇ ಸಾಲಿನ ಮೊದಲ ಮೂರು ತ್ರೈಮಾಸಿಕದ ಅವಧಿಯಲ್ಲಿ ದೇಶದ ಆರ್ಥಿಕ ರಂಗ ಶೇ 9.4ರಷ್ಟು ಪ್ರಗತಿ ಕಂಡಿತ್ತು.ಆದರೆ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ (2011ರ ಜನವರಿ-ಮಾರ್ಚ್) ಶೇ 7.8ರಷ್ಟು ಪ್ರಗತಿ ಮಾತ್ರ ದಾಖಲಾಗಿತ್ತು.

 

ಮತ್ತಷ್ಟು ಕಳವಳದ ಸಂಗತಿಯೆಂದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಕೈಗಾರಿಕಾ ಪ್ರಗತಿ ಶೇ 6ರಷ್ಟು ಮಾತ್ರ. ಈ ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಇದು ಅರ್ಧಕ್ಕರ್ಧ ಕಡಿಮೆ! ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಕೈಗಾರಿಕಾ ಪ್ರಗತಿ ಶೇ 7.8ಕ್ಕೆ ಕುಸಿದಿದೆ. ಈ ಮೊದಲಿನ ವರ್ಷ ಅದು ಶೇ 10.5ರಷ್ಟಾಗಿತ್ತು. ಪ್ರಮುಖ ಉತ್ಪಾದನಾ ವಲಯ ಕಳಪೆ ಪ್ರದರ್ಶನ ತೋರಿದ್ದೇ ಆರ್ಥಿಕ ರಂಗ ಕುಸಿಯಲು ಮುಖ್ಯ ಕಾರಣ. ಕೈಗಾರಿಕಾ ಉತ್ಪಾದನೆ ಕುಂಠಿತದಲ್ಲಿ ಇದರ ಪಾಲು ಶೇ 80ರಷ್ಟಿದೆ.ಆರ್‌ಬಿಐ ಬಡ್ಡಿದರವನ್ನು ತೀವ್ರ ಪ್ರಮಾಣದಲ್ಲಿ ಹೆಚ್ಚಿಸಿದೆ. ಇಂತಹ ಹೆಚ್ಚಳ ಕಳೆದ 15 ತಿಂಗಳಲ್ಲಿ 10ನೇ ಬಾರಿಗೆ ನಡೆದಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಹಣದ ವೆಚ್ಚ ಸುಮಾರು ಶೇ 30ರಷ್ಟು ಹೆಚ್ಚಿದೆ. ಪರಿಣಾಮವಾಗಿ ಕೈಗಾರಿಕಾ ಚಟುವಟಿಕೆಯ ಮೇಲೆ ಭಾರಿ ದೊಡ್ಡ ಹೊಡೆತ ಬಿದ್ದಿದೆ.ಹಣಕಾಸಿನ ರೂಪದಲ್ಲೇ ಹಣದುಬ್ಬರ ನಿಯಂತ್ರಣದಲ್ಲಿ ಇರಿಸಬೇಕೆಂಬ ನೆಲೆಯಲ್ಲಿ ಬಡ್ಡಿದರ ಮತ್ತೆ ಹೆಚ್ಚಿಸುವ ಕಾರ್ಯಕ್ಕೆ ಆರ್‌ಬಿಐ ಮುಂದಾಗಿದೆ. ಕೈಗಾರಿಕಾ ರಂಗ ಇದರಿಂದ ಭಾರಿ ಕಳವಳಗೊಂಡಿದೆ.`ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸುತ್ತಲೇ ಇದ್ದರೆ ಉತ್ಪಾದನಾ ರಂಗ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವುದು ನಿಶ್ಚಿತ, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರ ಮೇಲೂ ಇದು ಪರಿಣಾಮ ಬೀರಲಿದೆ~ ಎಂದು ಎಫ್‌ಐಸಿಸಿಐ ಮಹಾನಿರ್ದೇಶಕ ರಾಜೀವ್ ಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ.ಕಚ್ಚಾ ಸಾಮಗ್ರಿಗಳು ಮತ್ತು ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಕಳೆದ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಉತ್ಪಾದನಾ ರಂಗದ ಲಾಭಾಂಶ ಕುಸಿಯಿತು.ಒಟ್ಟಾರೆ ಆರ್ಥಿಕ ವರ್ಷದಲ್ಲಿ ಈ ಹಿನ್ನಡೆ ಉಂಟಾಗುತ್ತದೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೂ ಹಣಕಾಸು ಸಚಿವರು ಈ ಬಗ್ಗೆ ಗಾಬರಿಗೊಂಡಿದ್ದಾರೆ.ನಿಗದಿಪಡಿಸಿದಷ್ಟು ವರಮಾನ ಸಂಗ್ರಹ ಈ ವರ್ಷ ಸಾಧ್ಯವಾಗುವ ಬಗ್ಗೆ ಹಿರಿಯ ತೆರಿಗೆ ಅಧಿಕಾರಿಗಳ ಸಭೆಯಲ್ಲಿ ಅವರು ಶಂಕೆ ವ್ಯಕ್ತಪಡಿಸಿದ್ದೇ ಅವರ ಕಳವಳ ಸೂಚಿಸುತ್ತದೆ.

`ನಾವು ನಿಗದಿಪಡಿಸಿಕೊಂಡ ಅಧಿಕ ವರಮಾನ ಸಂಗ್ರಹ ಗುರಿಯನ್ನು ಸಾಧಿಸುವುದು ಈ ಬಾರಿ ಸವಾಲಿನ ಸಂಗತಿಯಾಗಲಿದೆ. ಜಾಗತಿಕ ಆರ್ಥಿಕ ಪ್ರಗತಿ ಬಹಳ ನಿಧಾನಗತಿಯಲ್ಲಿದೆ. ಶೇ 9ರಷ್ಟು ಆರ್ಥಿಕ ಪ್ರಗತಿ ಸಹ ಈ ಬಾರಿ ಕಷ್ಟಸಾಧ್ಯ ಎಂದೇ ತೋರುತ್ತದೆ~ ಎಂದು ಮುಖರ್ಜಿ ಹೇಳಿದ್ದರು.ಇದೇ ಅಭಿಪ್ರಾಯವನ್ನು ಹಣಕಾಸು ಕಾರ್ಯದರ್ಶಿ ಸುನಿಲ್ ಮಿತ್ರಾ ಅವರೂ ವ್ಯಕ್ತಪಡಿಸಿದ್ದಾರೆ. ಅಧಿಕ ಹಣದುಬ್ಬರ ಮತ್ತು ಸಾಧಾರಣ ಆರ್ಥಿಕ ಪ್ರಗತಿಯಿಂದಾಗಿ ನಿರೀಕ್ಷಿತ ವರಮಾನ ಸಂಗ್ರಹ ಆಗಲಾರದು. ಹಣದುಬ್ಬರ ದೇಶೀಯ ಬೇಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಆರ್ಥಿಕ ಪ್ರಗತಿ ಕುಂಠಿತವಾಗಿ ವರಮಾನ ಸಂಗ್ರಹವೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.ಜಾಗತಿಕ ಕಾರಣ

 ಅಮೆರಿಕ, ಯೂರೋಪ್, ಜಪಾನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿಗಳು ಜಾಗತಿಕ ಆರ್ಥಿಕ ಪ್ರಗತಿ ನಿರ್ಧರಿಸುತ್ತವೆ.ಅಮೆರಿಕದಲ್ಲಿ ಉತ್ತೇಜಕ ಕ್ರಮದ ರೂಪವಾಗಿ ಸುಮಾರು 1,500 ಶತಕೋಟಿ ಡಾಲರ್‌ಗಳನ್ನು ಆರ್ಥಿಕ ರಂಗಕ್ಕೆ ಒದಗಿಸಿದರೂ ಆರ್ಥಿಕ ಕುಸಿತ ನಿರೀಕ್ಷಿತ ಪ್ರಮಾಣದಲ್ಲಿ ಸರಿದಾರಿಗೆ ಬರುತ್ತಿಲ್ಲ.

 

ಉದ್ಯೋಗ ಸೃಷ್ಟಿಯಲ್ಲಿ ಈಚಿನ ದಿನಗಳಲ್ಲಿ ಕುಸಿತ ಕಂಡಿರುವುದು ಹಾಗೂ ನಿರುದ್ಯೋಗ ಪ್ರಮಾಣ ಅಧಿಕವಿರುವುದೇ ಇದರ ಸೂಚಕಗಳು. ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ ಚೇತರಿಕೆ ಆಗದಿರುವುದನ್ನು ಸ್ವತಃ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥ ಬೆನ್ ಬೆರ್ನಂಕೆ ಒಪ್ಪಿಕೊಂಡಿದ್ದಾರೆ.ಯೂರೋಪ್‌ನಲ್ಲಿ ಸಹ ಐರ್ಲೆಂಡ್, ಸ್ಪೇನ್, ಪೋರ್ಚುಗಲ್, ಗ್ರೀಸ್‌ನಂತಹ ದುರ್ಬಲ ದೇಶಗಳು ಉತ್ತೇಜಕ ಕ್ರಮಗಳ ಹೊರತಾಗಿಯೂ ಆರ್ಥಿಕ ಹಿಂಜರಿತದಿಂದ ಹೊರಬಂದಿಲ್ಲ.

 

ಈ ಪೈಕಿ ಕೆಲವು ದೇಶಗಳಿಗೆ ಮತ್ತಷ್ಟು ಆರ್ಥಿಕ ಉತ್ತೇಜನ ಕ್ರಮಗಳ ಅಗತ್ಯ ಎದುರಾಗಿದೆ. ಆರ್ಥಿಕವಾಗಿ ಸದೃಢ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್‌ಗಳೇ ಆರ್ಥಿಕ ತತ್ತರದಿಂದ ಸಾವರಿಸಿಕೊಳ್ಳಲು ಕಷ್ಟಪಡುತ್ತಿವೆ.ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾದ ಜಪಾನ್‌ನ ಆರ್ಥಿಕತೆಯೂ ವಿನಾಶಕಾರಿ ಭೂಕಂಪ ಮತ್ತು ಸುನಾಮಿ ನೀಡಿದ ಹೊಡೆತದಿಂದ ಸುಧಾರಿಸಿಲ್ಲ.ಚೀನಾದಲ್ಲಿ ಸಹ ಆರ್ಥಿಕ ಕುಸಿತ ಉಂಟಾಗಿರುವುದು ಮತ್ತೊಂದು ಆತಂಕದ ಸಂಗತಿಯಾಗಿದೆ. ಇದರಿಂದ ಜಗತ್ತಿನ ಬಹುದೊಡ್ಡ ಬಳಕೆದಾರ ರಾಷ್ಟ್ರವಾಗಿರುವ ಅದು ಕಲ್ಲಿದ್ದಲು, ಮೆದು ಕಬ್ಬಿಣ, ಕಬ್ಬಿಣದ ಅದಿರು, ಹತ್ತಿ, ತಾಮ್ರ ಮುಂತಾದ ಸಾಮಗ್ರಿಗಳ ಆಮದನ್ನು ಕಡಿತಗೊಳಿಸಿದೆ.ವೆಚ್ಚ ತಗ್ಗಿಸುವ ಯಾವುದೇ ಸಾಧ್ಯತೆಯೂ ಸರ್ಕಾರದ ಮುಂದಿಲ್ಲ. ವೆಚ್ಚ ತಗ್ಗುವ ಬದಲಿಗೆ ಅದು ಹೆಚ್ಚುತ್ತಲೇ ಹೋಗುತ್ತದೆ, ಕಾರಣ, ಅಹಾರ, ರಸಗೊಬ್ಬರ, ತೈಲದಂತಹ ಕ್ಷೇತ್ರಗಳಲ್ಲಿ ಅದು ಸಬ್ಸಿಡಿ ಮುಂದುವರಿಸಬೇಕಾಗಿದೆ ಹಾಗೂ ಜನಪ್ರಿಯ ಸಾಮಾಜಿಕ-ಆರ್ಥಿಕ ಕಲ್ಯಾಣ ಯೋಜನೆಗಳಿಗೆ ಇನ್ನಷ್ಟು ಹಣ ತೆಗೆದಿರಿಸಬೇಕಾಗುತ್ತದೆ.ಕಳೆದ ವರ್ಷ ಟೆಲಿಕಾಂ ಪರವಾನಗಿ ಮಾರಾಟ ಮಾಡಿ ರೂ. 1 ಲಕ್ಷ ಕೋಟಿ  ಸಂಗ್ರಹಿಸಿದಂತಹ ವರಮಾನ ಬೋನಸ್ ಅನ್ನು ಸರ್ಕಾರ ಈ ಬಾರಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಬಜೆಟ್ ನಿರೀಕ್ಷೆಯಂತೆ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರು ವಿಕ್ರಯದಿಂದ ರೂ. 40 ಸಾವಿರ ಕೋಟಿ ಸಂಗ್ರಹಿಸುವ ಸಾಧ್ಯತೆಯೂ ಕಡಿಮೆ ಇದೆ.ಹಣದುಬ್ಬರದ ಜತೆಗೆ ಆರ್ಥಿಕ ಸ್ಥಿತಿಯನ್ನು ಹತೋಟಿಗೆ ತರಲು ನಡೆಸುವ ಹತಾಶ ಯತ್ನಗಳಿಂದಾಗಿ ಒಟ್ಟಾರೆ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದಕ್ಕಾಗಿ ಸರ್ಕಾರವು ವರಮಾನ ಸಂಗ್ರಹದಲ್ಲಿ ಯಾವುದೇ ಇಳಿಕೆಯಾಗದಂತೆ ಎಚ್ಚರವಹಿಸಬೇಕಾಗಿದೆ.ಸದ್ಯದ ಆಶಾಕಿರಣ ಎಂದರೆ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಸಾಧ್ಯತೆ ಮಾತ್ರ. ಇದರಿಂದ ದೇಶದ ಗ್ರಾಮೀಣ ಭಾಗದಲ್ಲಿ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಆರ್ಥಿಕ ಚೇತರಿಕೆಗೆ ಇದು ಬಹಳ ದೊಡ್ಡ ಉತ್ತೇಜನಕಾರಿ. ಜಾಗತಿಕ ತೈಲ ಬೆಲೆ ಕುಸಿದರೆ ಸಹ ಆರ್ಥಿಕ ರಂಗಕ್ಕೆ ಆಗಿರುವ ಹಾನಿಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸಬಹುದು.

                 

(ಪೂರಕ ಮಾಹಿತಿ-ದಿಲೀಪ್ ಮೈತ್ರಾ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.