ಭಾನುವಾರ, ಏಪ್ರಿಲ್ 18, 2021
24 °C

ಆಶ್ರಯ ಮನೆಗಳ ಸಾಲ ಮನ್ನಾಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಆಶ್ರಯ ಮನೆಗಳ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಇಲ್ಲಿಯ ವಾರ್ಡ್ ನಂ.16ರ ಆಶ್ರಯ ಫಲಾನುಭವಿಗಳ ಕ್ಷೇಮಾಭಿವೃದ್ಧಿ ಒಕ್ಕೂಟದವರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಸ್ಥಳೀಯ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಗರಸಭೆ ಸದಸ್ಯ ಮಿಲಿಂದ ಚಂಚಲಕರ, ಯೋಗಾಪೂರ, ಮಹಾತ್ಮ ಗಾಂಧಿ ಹಾಗೂ ಬಸವನಗರ ಆಶ್ರಯ ಬಡಾವಣೆಗಳಲ್ಲಿಯ ಕಡು ಬಡವರಿಗೆ ಸರ್ಕಾರ ಉಚಿತವಾಗಿ ಮನೆಗಳನ್ನು ಮಂಜೂರು ಮಾಡಿದೆ. 1991-92ನೇ ಸಾಲಿನಲ್ಲಿ ನಗರಸಭೆಗೆ ರೂ.500 ಹಣ ತುಂಬಿಸಿಕೊಂಡು ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ಹಂಚಿಕೆ ಮಾದ್ದಾರೆ. ಈ ವಾರ್ಡ್‌ನಲ್ಲಿ ಒಟ್ಟಾರೆ 10 ಸಾವಿರ ಫಲಾನುಭವಿಗಳು ವಾಸವಾಗಿದ್ದಾರೆ ಎಂದರು.ಮನೆಗಳನ್ನು ಹಂಚಿಕೆ ಮಾಡಿ 20 ವರ್ಷಗಳ ನಂತರ ರಾಜೀವ್‌ಗಾಂಧಿ ವಸತಿ ನಿಗಮದವರು ಮಧ್ಯವರ್ತಿಗಳಿಂದ ಹಾಗೂ ನಗರಸಭೆ ಸಿಬ್ಬಂದಿ, ಬಡ ನಿವಾಸಿಗಳ ಮನೆಗಳಿಗೆ ದಾಳಿ ನಡೆಸಿ ಸಾಲ ವಸೂಲಿಗೆ ಒತ್ತಡ ತರುತ್ತಿದ್ದಾರೆ. 21 ದಿನಗಳೊಳಗೆ ಸಾಲಗಳ ಕಂತು ಹಾಗೂ ಭೂ ಕಂದಾಯ ಸೇರಿ 42 ಸಾವಿರ ರೂಪಾಯಿ ಸಂದಾಯ ಮಾಡದಿದ್ದರೆ ಮನೆಗಳ ಹಂಚಿಕೆ ರದ್ದು ಮಾಡಿ, ಮನೆಯನ್ನು ಖಾಲಿ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಬೆಲೆ ಏರಿಕೆ ಮತ್ತು ಬರದಿಂದ ತತ್ತರಿಸಿರುವ ಜನ ದುಡಿಯಲು ಗುಳೆ ಹೋಗಿದ್ದಾರೆ. ಸಾಲ ವಸೂಲಿಯನ್ನು ಕೈ ಬಿಡಬೇಕು. ಈ ಎಲ್ಲ ಆಶ್ರಯ ಬಡಾವಣೆಗಳ ಭೂ ಪರಿವರ್ತನೆ ಮಾಡಿ ಫಲಾನುಭವಿಗಳ ಹೆಸರಿಗೆ ಮನೆಗಳನ್ನು ನೋಂದಣಿ ಮಾಡಿಕೊಡಬೇಕು. ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಶೌಚಾಲಯದ ಸಮಸ್ಯೆ ಇದ್ದು, ಅಗತ್ಯಕ್ಕೆ ತಕ್ಕಷ್ಟು ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಅಪೂರ್ಣವಾಗಿರುವ ಕೆಲ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಬೇಕು. ಒಂದು ಉದ್ಯಾನವನ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.ಆಶ್ರಯ ಸಾಲವನ್ನು ಮನ್ನಾ ಮಾಡಬೇಕು. ಒಂದು ವೇಳೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದ ನಂತರ ಮಾಸಿಕ ಕಂತುಗಳಲ್ಲಿ ಸಂದಾಯ ಮಾಡಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿಠ್ಠಲ ಲಂಗೋಟಿ, ಬಾಳು ಪವಾರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.