ಸೋಮವಾರ, ಜನವರಿ 20, 2020
24 °C

ಆಸ್ತಿಕರ ಆಚಾರಗಳ ಆಕರ ಕೃತಿ

–-ಎಂ.ಎನ್‌. ಪದ್ಮಾ. Updated:

ಅಕ್ಷರ ಗಾತ್ರ : | |

ಒಂದೂವರೆ ಸಾವಿರ ಪುಟಗಳಿರುವ ಈ ಪುಸ್ತಕ ಮೇಲುನೋಟಕ್ಕೆ ವೈದಿಕ ಆಚರಣೆಗಳು, ವಿಧಿ–ನಿಷೇಧಗಳ ಕುರಿತಂತೆ ಶ್ರುತಿ, ಸ್ಮೃತಿಗಳನ್ನು ಪರಾಮರ್ಶಿಸಿ ನಿರ್ಣಯಗಳನ್ನು ನೀಡಿರುವ ಒಂದು ಪುಸ್ತಕ. ಅಥವಾ ಒಂದು ನಿರ್ದಿಷ್ಟ ಧಾರ್ಮಿಕ ವಿಧಿ–ವಿಧಾನಗಳನ್ನು ವಿವರಿಸುವ ಗ್ರಂಥ. ಅಷ್ಟರ ಮಟ್ಟಿಗೆ ಇದು ವೈದಿಕ ಆಚಾರಗಳನ್ನು ‘ಸರಿಯಾಗಿ’ ಹೇಗೆ ಮಾಡಬೇಕು ಎಂಬುದರ ವಿವರಗಳನ್ನು ಆಸ್ತಿಕರಿಗೆ ಹೇಳುವ ಗ್ರಂಥ.

ಕ್ರಿಸ್ತ ಶಕ 1612ರಲ್ಲಿ ಕಮಲಾಕರ ಭಟ್ಟ ಎಂಬ ವಿದ್ವಾಂಸರು ಸಂಸ್ಕೃತದಲ್ಲಿ ರಚಿಸಿರುವ ಈ ಗ್ರಂಥವನ್ನು ಶೇಷ ನವರತ್ನ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಪಠ್ಯದ ಜೊತೆಗೆ ಅದರ ಅರ್ಥವೂ ಇದರಲ್ಲಿದೆ. ಈ ಗ್ರಂಥಕ್ಕೆ ಮತ್ತೊಂದು ಆಯಾಮವೂ ಇದೆ. ವೈದಿಕ ಆಚರಣೆಗಳ ಕುರಿತಂತೆ ಸಂಶೋಧನಾತ್ಮಕ ಆಸಕ್ತಿ ಇರುವವರಿಗೆ ಇದೊಂದು ಆಕರ ಗ್ರಂಥದಂತೆಯೂ ಕೆಲಸ ಮಾಡುತ್ತದೆ.

ಹಿಂದೂ ಧರ್ಮಶಾಸ್ತ್ರಗಳನ್ನು ಸಂಪಾದಿಸುವ ಕೆಲಸ ಮಾಡಿದ ವಿದ್ವಾಂಸ ಪಾಂಡುರಂಗ ವಾಮನ ಕಾಣೆಯವರ ಹಲವು ಸಂಪುಟಗಳ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಪುಸ್ತಕದಲ್ಲಿ ಅನೇಕ ಆಚರಣೆಗಳು ಮತ್ತು ವಿಧಿ–ನಿಷೇಧಗಳ ಕುರಿತಂತೆ ಭರತವಾಕ್ಯವಾಗಿ ಈ ಗ್ರಂಥದ ಸಾಲುಗಳ ಉಲ್ಲೇಖಗಳಿವೆ. ಈ ದೃಷ್ಟಿಯಲ್ಲಿ ‘ನಿರ್ಣಯ ಸಿಂಧು’ವಿನ ಪಠ್ಯಕ್ಕೆ ಒಂದು ಮಾನವಶಾಸ್ತ್ರೀಯ ಆಯಾಮವಿದೆ.ಈ ಗ್ರಂಥದ ಮತ್ತೊಂದು ಕುತೂಹಲಕರ ಲಕ್ಷಣವೆಂದರೆ ವೈದಿಕ ಪರಂಪರೆಯ ಮೂರೂ ಮತಗಳವರೂ ಈ ಗ್ರಂಥದ ನಿರ್ಣಯಗಳನ್ನು ಒಪ್ಪುತ್ತಾರೆ ಎಂಬುದು. ಈ ಕೃತಿಯನ್ನು ಅನುವಾದಿಸಿರುವ ಶೇಷ ನವರತ್ನ ಅವರು ಗ್ರಂಥ ರಚಿಸಿದ ವಿದ್ವಾಂಸ ಕಮಲಾಕರ ಭಟ್ಟ ಅವರಿಗೆ ಇದ್ದ ಬಹುಶ್ರುತ ಅರಿವಿನ ಕುರಿತಂತೆ ತಮ್ಮ ಮುನ್ನುಡಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಆದರೆ ಈ ವಿವರಗಳೆಲ್ಲವೂ ಗ್ರಂಥವನ್ನು ಅಧ್ಯಯನದ ಉದ್ದೇಶಕ್ಕೆ ಬಳಸುವವರ ಕುತೂಹಲಗಳನ್ನು ತಣಿಸುವುದಿಲ್ಲ.

17ನೇ ಶತಮಾನದಲ್ಲಿ ಇಂಥದ್ದೊಂದು ನಿರ್ಣಯ ಗ್ರಂಥವನ್ನು ರಚಿಸುವುದಕ್ಕೆ ಕಾರಣವಾದ ಐತಿಹಾಸಿಕ ಒತ್ತಡಗಳು ಯಾವುವು? ಈ ಕೃತಿಯ ಅನುವಾದ ಪರಂಪರೆ ಹೇಗಿದೆ? ಕೃತಿಯ ಕಾಲ ನಿರ್ಣಯವನ್ನು ಹೇಗೆ ಮಾಡಬಹುದು? ಇತ್ಯಾದಿ ಪ್ರಶ್ನೆಗಳಿಗೆ ಅನುವಾದಕರ ಸುದೀರ್ಘ ಮುನ್ನುಡಿಯಲ್ಲಿ ಉತ್ತರಗಳಿಲ್ಲ. ಅನುವಾದಕರು ಮುನ್ನುಡಿಯಲ್ಲಿ ನೀಡಿರುವ ಇತರ ವಿವರಗಳನ್ನು ಪರಿಗಣಿಸಿದಾಗ ಇಂಥ ವಿಷಯಗಳ ಕುರಿತು ಅವರಿಗೆ ತಿಳಿದಿರಲಾರದು ಅನ್ನಿಸುವುದಿಲ್ಲ.ಅನುವಾದವನ್ನು ಆಚರಣೆಗಳ ಕುರಿತ ನಿರ್ಣಯದಲ್ಲಿ ಆಸಕ್ತರಾಗಿರುವ ಆಸ್ತಿಕರನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡದ್ದರಿಂದ ಕೃತಿಯ ಸಂದರ್ಭದಲ್ಲಿ ಪ್ರಸ್ತುತವಾಗುವ ಐತಿಹಾಸಿಕ ಮತ್ತು ಮಾನವಶಾಸ್ತ್ರೀಯ ಪ್ರಶ್ನೆಗಳನ್ನು ಬದಿಗಿರಿಸಿದ್ದಾರೆ ಎನಿಸುತ್ತದೆ. ಅನುವಾದದ ಭಾಷೆಯ ಮೇಲೆ ಸಂಸ್ಕೃತದ ಗಾಢ ಪ್ರಭಾವವಿದೆ. ತಕ್ಕಮಟ್ಟಿಗಿನ ಸಂಸ್ಕೃತದ ಅರಿವಿಲ್ಲದೇ ಹೋದರೆ ಅನುವಾದಿತ ಭಾಗಗಳನ್ನು ಗ್ರಹಿಸುವುದೂ ಕಷ್ಟವಾಗಿಬಿಡುತ್ತದೆ.ಇಂಥ ಕೆಲವು ಕೊರತೆಗಳನ್ನು ಹೊರತು ಪಡಿಸಿದರೆ ಇದು ನಿಜಕ್ಕೂ ಕುತೂಹಲಕಾರಿಯಾದ ಒಂದು ಪುಸ್ತಕ. ಇದರಲ್ಲಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಮೌಲ್ಯ ನಿರ್ಣಯಕ್ಕೆ ಮುಂದಾಗದೆ ವೈದಿಕ ಪರಂಪರೆ ಹೇಗೆ ರೂಪುಗೊಂಡಿತು ಎಂದು ಅರಿಯಲು ಆಸಕ್ತರಾಗಿರುವವರಿಗೂ ಇದೊಂದು ಆಕರ ಗ್ರಂಥ. ವೈದಿಕ ಆಚರಣೆಗಳು, ವಿಧಿ–ನಿಷೇಧಗಳು ಇತ್ಯಾದಿಗಳ ಕುರಿತಂತೆ ಅಧ್ಯಯನ ನಡೆಸಲು ಮುಂದಾಗುವ ಮಾನವಶಾಸ್ತ್ರದ ವಿದ್ಯಾರ್ಥಿಗಳ ಮಟ್ಟಿಗಂತೂ ಇದು ಅನೇಕ ವಿವರಗಳನ್ನು ಒದಗಿಸುತ್ತದೆ.

–-ಎಂ.ಎನ್‌. ಪದ್ಮಾ.

ಪ್ರತಿಕ್ರಿಯಿಸಿ (+)