ಸೋಮವಾರ, ಜೂಲೈ 6, 2020
27 °C

ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಮೊಳಕಾಲ್ಮುರು: ಬಹುದಿನಗಳಿಂದ ಸ್ಥಳ ಅಭಾವದಿಂದಾಗಿ ತಾಲ್ಲೂಕಿನ ನಾಗಸಮುದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರ ಸ್ಥಾಪನೆ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಸ್ಥಳೀಯ ಗ್ರಾ.ಪಂ. ಶನಿವಾರ ಭರವಸೆ ನೀಡಿತು.ಮೂರು ವರ್ಷದ ಹಿಂದೆ ಆಸ್ಪತ್ರೆ ನಿರ್ಮಾಣಕ್ಕೆ ರೂ 89 ಲಕ್ಷ ಅನುದಾನ ಮಂಜೂರಾಗಿದ್ದು, ಗ್ರಾ.ಪಂ. ಸ್ಥಳ ತೋರಿಸದ ಪರಿಣಾಮ ಅನುದಾನ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.ಗ್ರಾಮದ ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿ ಸಮೀಪವಿರುವ ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿ ಗ್ರಾ.ಪಂ.ಗೆ ಸೇರಿದ 21 ಎಕರೆ ಜಮೀನು ಇದ್ದು, ಈ ಪೈಕಿ ಐದು ಎಕರೆಯನ್ನು ಖಬರಸ್ತಾನ ನಿರ್ಮಾಣಕ್ಕೆ ನೀಡಲು ಉದ್ದೇಶಿಸಲಾಗಿದೆ. ಉಳಿದ 16 ಎಕರೆಯಲ್ಲಿ ಎರಡು ಎಕರೆ ಜಾಗವನ್ನು ಆರೋಗ್ಯ ಇಲಾಖೆಗೆ ನೀಡುವುದಾಗಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಭರವಸೆ ನೀಡಿದರು. ಈಗಾಗಲೇ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ಕಚೇರಿಗೆ ಹಾಗೂ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರವೇ ಸ್ಥಳ ನೀಡಲು ಶ್ರಮಿಸುವುದಾಗಿ ಅವರು ಹೇಳಿದರು.ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.ಎಂಜಿನಿಯರ್ ರಮೇಶ್, ಜಿ.ಪಂ. ಸದಸ್ಯೆ ನರಸಕ್ಕ, ತಾ.ಪಂ. ಸದಸ್ಯ ಅಡವಿ ಮಾರಯ್ಯ, ಗ್ರಾ.ಪಂ. ಅಧ್ಯಕ್ಷೆ ಮಾರಕ್ಕ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ನಜೀರ್, ನಾಗಭೂಷಣ್, ರಾಮಾಂಜನೇಯ, ಶಶಿಕಲಾ, ಲಕ್ಷ್ಮೀ, ಹನುಮಕ್ಕ, ತಿಪ್ಪೇಸ್ವಾಮಿ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.ಎಚ್‌ಐವಿ ಜಾಗೃತಿ

ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಭದ್ರಾವತಿಯ ಯಕ್ಷಗಾನ ಕಲಾತಂಡದ ಮೂಲಕ ಎಚ್‌ಐವಿ/ಏಡ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.11 ಕಲಾವಿದರ ತಂಡದ ಮೂಲಕ ಸ್ವೇಚ್ಛೆಯ ವರ್ತನೆಯಿಂದ ಆಗುವ ಅನಾಹುತಗಳು, ಸಂಯಮದ ಬದುಕಿನ ಲಾಭಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಸಾಧನ-ಸಲಕರಣೆಗಳನ್ನು ಬಳಸುವ ವಿಧಾನ, ರೋಗಿಯ ಆರೈಕೆ ಮೊದಲಾದ ವಿಚಾರಗಳನ್ನು ಕುರಿತು ರೂಪಕ ಪ್ರದರ್ಶನ ಮಾಡಲಾಯಿತು.ಕಿರಿಯ ಆರೋಗ್ಯ ಸಹಾಯಕ ಪ್ರಭಾಕರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.