ಮಂಗಳವಾರ, ಮೇ 17, 2022
27 °C

ಆಸ್ಪತ್ರೆ ಪಕ್ಕವೇ ತಿಪ್ಪೆ: ಸ್ವಚ್ಛತೆಯ ಕೊರತೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನೂರಾರು ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರೆಯುವ ಸರಕಾರಿ ಆಸ್ಪತ್ರೆಯ ಆವರಣದ ಸುತ್ತ ತಿಪ್ಪೆ ಗುಂಡಿಗಳು, ಸುತ್ತಮುತ್ತಲೂ ಸ್ವಚ್ಛತೆಯ ಕೊರತೆ, ದುರ್ನಾತ, ಸಂಬಂಧಿಸಿದವರ ನಿರ್ಲಕ್ಷ್ಯ, ಗ್ರಾಮಸ್ಥರಿಂದ ಒತ್ತುವರಿ.ಇದು ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುಃಸ್ಥಿತಿಗೆ ಹಿಡಿದ ಕೈಗನ್ನಡಿ.ಸುಮಾರು 10 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಗ್ರಾಮದ ಮುಖ್ಯ ರಸ್ತೆಯಲ್ಲೇ, ಅದೂ ಗ್ರಾಮ ಪಂಚಾಯಿತಿಯ ಪಕ್ಕದಲ್ಲೇ ಇರುವ ಆರೋಗ್ಯ ಕೇಂದ್ರಕ್ಕೆ ಕಂಪೌಂಡ್ ಇಲ್ಲದಿರುವುದೇ ತಿಪ್ಪೆಗಳು ಪ್ರತ್ಯಕ್ಷವಾಗಲು ಕಾರಣವಾಗಿದೆ.ಆಸ್ಪತ್ರೆಯ ಹಿಂಭಾಗದಲ್ಲಿ ಕಂಪೌಂಡ್ ಇಲ್ಲದ್ದರಿಂದ ಗ್ರಾಮಸ್ಥರು, ಆ ಜಾಗೆಯಲ್ಲಿ ತಿಪ್ಪೆ ಹಾಕಿಕೊಂಡಿದ್ದಲ್ಲದೆ, ಚಿಕ್ಕಮಕ್ಕಳು, ದೊಡ್ಡವರು ಎನ್ನದೆ, ರಾತ್ರಿ ವೇಳೆ ಕತ್ತಲಲ್ಲಿ ಆ ಆವರಣವನ್ನೇ ಬಹಿರ್ದೆಸೆಗೆ ಬಳಕೆ ಮಾಡುವುದರಿಂದ ಸ್ವಚ್ಛತೆ ಇಲ್ಲದಂತಾಗಿ, ಉತ್ತಮ ಆರೋಗ್ಯ ಅರಸಿ ಬಂದು ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಗುಣಮುಖರಾಗದೆ, ಮತ್ತಷ್ಟು ಅಸ್ವಸ್ಥರಾಗುವಂಥ ವಾತಾವರಣ ನಿರ್ಮಾಣವಾಗಿದೆ.ಅಗತ್ಯವಿಲ್ಲದೆಡೆ ಕಂಪೌಂಡ್: ವಿಚಿತ್ರವೆಂದರೆ, ಈ ಆಸ್ಪತ್ರೆ ಪಕ್ಕದಲ್ಲೇ ಇರುವ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಈಗ ಬಳಕೆಯಲ್ಲಿ ಇಲ್ಲ. ಆದರೂ, ಗ್ರಾಮ ಪಂಚಾಯಿತಿಯು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕೆಲವು ತಿಂಗಳುಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಆ ಕಟ್ಟಡ ಇರುವ ಜಾಗೆಯಲ್ಲಿ ಹಾಳಾಗಿದ್ದ  ಕಂಪೌಂಡ್ ಅನ್ನು ದುರಸ್ತಿ ಮಾಡಿ ಆಶ್ಚರ್ಯ ಮೂಡಿಸಿದೆ.ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರಿಂದ 2000ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು, ಆ ಕಟ್ಟಡದ ಆವರಣಕ್ಕೆ ಕಂಪೌಂಡ್ ನಿರ್ಮಿಸದೆ, ಪಾಳು ಬಿದ್ದಿರುವ ಹಳೆಯ ಕಟ್ಟಡಕ್ಕೆ ರಕ್ಷಣೆ ಒದಗಿಸಲು ಕಂಪೌಂಡ್ ನಿರ್ಮಿಸಲಾಗಿದೆ. ಗ್ರಾಮದ ಗುತ್ತಿಗೆದಾರರೊಬ್ಬರು ಕಂಪೌಂಡ್ ನಿರ್ಮಿಸಲು ಆಸಕ್ತಿ ತೋರಿ, ಅಡಿಪಾಯ ಹಾಕಿದ್ದರೂ. ಅನುದಾನ ಬಿಡುಗಡೆ ಆಗದ್ದರಿಂದ ಅಷ್ಟಕ್ಕೇ ಕೈಬಿಟ್ಟಿರುವುದು, ಆರೋಗ್ಯ ಕೇಂದ್ರದ ಸುತ್ತ ಸ್ವಚ್ಛತೆ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ಆರೊಪ.ಗ್ರಾಮ ಪಂಚಾಯಿತಿ ಅಥವಾ ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತು ಕಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಂಡಲ್ಲಿ ರೋಗಿಗಳಿಗೆ ಎದುರಾಗುವ ಸಮಸ್ಯೆ ನಿವಾರಣೆ ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ನೈರ್ಮಲ್ಯ ಕಾಪಾಡಲು ಮುಂದಾಗುವ ಅಗತ್ಯವಿದೆ ಎಂದು ಗ್ರಾಮದ ತಿಮ್ಮಾರೆಡ್ಡಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.