ಗುರುವಾರ , ಏಪ್ರಿಲ್ 15, 2021
24 °C

ಆಹಾ ಸುಂದರಿ!

ಅವನೀಶ್ Updated:

ಅಕ್ಷರ ಗಾತ್ರ : | |

ಈ ವಾದ್ಯದ ಹೆಸರು ಸುಂದರಿ. ಚಿಕ್ಕದಾಗಿ, ಚೊಕ್ಕದಾಗಿ `ಸುಂದ್ರಿ~ ಎಂದೂ ಕರೆಯಬಹುದು. ಇದು ಸುಷಿರ ವಾದ್ಯಗಳ ಗುಂಪಿಗೆ ಸೇರಿದ್ದು, ಶೆಹನಾಯ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಇದನ್ನು ಲೋಹದಿಂದ ಮಾಡುತ್ತಾರೆ. ಮರ, ದಂತದಿಂದಲೂ ಸುಂದರಿಯನ್ನು ತಯಾರಿಸುವುದುಂಟು.ವಾದ್ಯದಲ್ಲಿ ಏಳರಿಂದ ಒಂಬತ್ತು ರಂಧ್ರಗಳಿರುತ್ತವೆ. ಸುಮಾರು 11 ಇಂಚು ಉದ್ದವಿರುತ್ತದೆ. ಇದನ್ನು ಮಧ್ಯಮ ಮತ್ತು ತಾರಸ್ಥಾಯಿಯಲ್ಲಿ ಮಾತ್ರ ನುಡಿಸಬಹುದು. ಮಂದ್ರ ಸ್ಥಾಯಿಯಲ್ಲಿ ನುಡಿಸಲಾಗದು. ಶೆಹನಾಯ್ ಮತ್ತು ಸುಂದರಿ ವಾದ್ಯಗಳನ್ನು ಅಕ್ಕತಂಗಿಯರು ಎಂದು ಕರೆಯಬಹುದು. ವಾದ್ಯದ ಸ್ವರೂಪ ಒಂದೇ.ನುಡಿಸಾಣಿಕೆ ಕೂಡ ಹೆಚ್ಚು ಕಡಿಮೆ ಒಂದೇ ಆಗಿದ್ದರೂ ಅದನ್ನು ನುಡಿಸುವುದು ಶೆಹನಾಯ್‌ಗಿಂತಲೂ ಕಷ್ಟ. ಮಹಾರಾಷ್ಟ್ರದ ಸೋಲಾಪುರದಲ್ಲಿ ಸುಂದರಿ ವಾದ್ಯ ನುಡಿಸುವ ಒಂದೇ ಒಂದು ಕುಟುಂಬವಿದೆ. ಪಂ. ಭೀಮಣ್ಣ ಜಾದವ್ ಸದ್ಯ `ಸುಂದರಿ~ಯಲ್ಲಿ ಶಾಸ್ತ್ರೀಯ ಸಂಗೀತ ನುಡಿಸುವ ಅಪೂರ್ವ ಕಲಾವಿದರು.ಗುಜರಾತ್ ಮೂಲದ್ದು


ಇದು ಗುಜರಾತ್ ಮೂಲದ ವಾದ್ಯ. ಗುಜರಾತ್‌ನಲ್ಲಿ ಇದನ್ನು ಜಾನಪದ ಸಂಗೀತಕ್ಕೆ ಬಳಸುತ್ತಾರೆ. ಇಲ್ಲಿನ ಕಛ್ ಸಮುದಾಯದ ಜನರು ಈ ವಾದ್ಯದ ಗುಂಗು ಹತ್ತಿಸಿಕೊಂಡಿದ್ದಾರೆ.`ಸುಂದರಿ ವಾದ್ಯದ ನುಡಿಸಾಣಿಕೆ ಕೇಳಿದಾಗ ಶೆಹನಾಯ್ ರೀತಿಯೇ ಅನಿಸುತ್ತದೆ. ಇದು ಅತ್ಯಂತ ಚಿಕ್ಕ ವಾದ್ಯವಾದ್ದರಿಂದ ಮಂದ್ರ ಸ್ಥಾಯಿ ನುಡಿಸಲು ಸಾಧ್ಯವಿಲ್ಲ. ಆದರೆ ಹಿಂದೂಸ್ತಾನಿ ಶೈಲಿಯ ಎಲ್ಲ ರಾಗಗಳನ್ನೂ ನುಡಿಸಬಹುದು. ರಾಗ ಸೋಹಿನಿ, ಅಡಾಣ ಮುಂತಾದ ರಾಗಗಳನ್ನು ತಾರಸಪ್ತಕದಲ್ಲೇ ಇದರಲ್ಲಿ ಬಹಳ ಸೊಗಸಾಗಿ ನುಡಿಸಬಹುದು.

 

ವಾಗೇಶ್ವರಿ, ಭೀಮ್‌ಪಲಾಸ್, ಜೋಗ್, ಮಾರ್ವ, ಸಾರಂಗ್‌ದೇಶ್, ಅಸಾವರಿ, ಮಾಲ್‌ಕೌಂಸ್, ನಟ್‌ಕೇದಾರ್ ಮುಂತಾದ ರಾಗಗಳನ್ನು ಸುಂದರಿ ವಾದ್ಯದಲ್ಲಿ ಕೇಳಲು ಬಹಳ ಚೆನ್ನಾಗಿರುತ್ತದೆ ಎನ್ನುತ್ತಾರೆ `ಸುಂದರಿ~ಯ ಬಗ್ಗೆ ಹೆಚ್ಚಿನ ಜ್ಞಾನವಿರುವ ಖ್ಯಾತ ಬಾನ್ಸುರಿ ವಾದಕ ಉಸ್ತಾದ್ ಶೇಖ್ ಅಬ್ದುಲ್ಲಾ ಖಾಜಿ.ಮುಖ್ಯವಾಗಿ ಮಾಲ್‌ಕೌಂಸ್ ರಾಗವನ್ನು ವಿಲಂಬಿತ್ ಏಕ್‌ತಾಲ್‌ನಲ್ಲಿ ಕೇಳಿದಾಗ ದಿವ್ಯಾನುಭವವಾಗುತ್ತದೆ. ಸುಷಿರ ವಾದ್ಯಗಳಲ್ಲಿ ರಾಗ ದುರ್ಗಾ, ಕೀರವಾಣಿ ಮುಂತಾದ ರಾಗಗಳನ್ನು ಕೇಳಬೇಕಾದರೆ ಅದು `ಸುಂದರಿ ವಾದ್ಯ~ದಲ್ಲೇ ಕೇಳಬೇಕು ಎನ್ನುವಷ್ಟು ಸೊಗಸಾಗಿರುತ್ತದೆ.ಮೊದಮೊದಲು ಈ ವಾದ್ಯಕ್ಕೆ ಡೋಲನ್ನು ಸಾಥಿಯಾಗಿ ಬಳಸುತ್ತಿದ್ದರು. ಈಗ ತಬಲಾ ಬಳಸುತ್ತಾರೆ. ತಂಬೂರ, ಹಾರ್ಮೋನಿಯಂ ಮತ್ತು ಸ್ವರಮಂಡಲಗಳೂ ಸಾಥಿಯಾಗಿ ಒಪ್ಪುತ್ತವೆ. ಇದು ತುಂಬ ಅಪರೂಪದ ವಾದ್ಯ ಎಂದು ಮತ್ತಷ್ಟು ವಿವರ ನೀಡುತ್ತಾರೆ ಉಸ್ತಾದ್ ಖಾಜಿ.ಜಾನಪದ ಸಂಗೀತಕ್ಕೆ ಮಾತ್ರವೇ ಬಳಸುತ್ತಿದ್ದ ಸುಂದರಿ ವಾದ್ಯವನ್ನು ಕೊಂಚ ಮಾರ್ಪಾಡು ಮಾಡಿ ಇದಕ್ಕೆ ಹಿಂದೂಸ್ತಾನಿ ಸಂಗೀತವನ್ನು ಅಳವಡಿಸಿ ಯಶಸ್ವಿಯಾದವರು ಸೋಲಾಪುರದ ಪಂ. ಭೀಮಣ್ಣ ಜಾದವ್ ಅವರ ಕುಟುಂಬ. `ಸುರ್ ಹೈ ಈಶ್ವರ್ ಹೈ..~ (ಸಂಗೀತವೇ ದೇವರು) ಎಂದು ನಂಬಿದ ಇವರು ಸದ್ಯ ಈ ವಾದ್ಯದಲ್ಲಿ ಪರಿಣತಿ ಸಾಧಿಸಿದ ಕಲಾವಿದರು.

 

ಭೀಮಣ್ಣ ಜಾದವ್ ಅವರ ಅಜ್ಜ ದಿ. ಸಿದ್ರಾಮ ಜಾದವ್ ಮತ್ತು ತಂದೆ ದಿ. ಚಿದಾನಂದ ಜಾದವ್ ಅವರ ಬಳಿ ಸುಂದರಿ ನುಡಿಸಲು ಕಲಿತರು. ಭೀಮಣ್ಣ ನಾಲ್ಕು ವರ್ಷದ ಹುಡುಗನಾಗಿದ್ದಾಗಲೇ `ಸುಂದರಿ~ ನುಡಿಸಲಾರಂಭಿಸಿದರು.ಏಳು ವರ್ಷದ ಬಾಲಕನಾಗಿದ್ದಾಗ ಸ್ವತಂತ್ರ ಕಛೇರಿಯನ್ನೂ ನೀಡಿದ್ದರು. ಅವರ ಮೊದಲ ಕಾರ್ಯಕ್ರಮ ಸೋಲಾಪುರದ ಆಕಾಶವಾಣಿ ಯುವವಾಣಿ ವಿಭಾಗದಲ್ಲಿ ಪ್ರಸಾರವಾಗಿತ್ತು.ಅದಾಗಿ ಇವರು ಅನೇಕ ಕಛೇರಿಗಳನ್ನು ನೀಡುತ್ತಾ ಬಂದರು. ರಾಷ್ಟ್ರಪತಿ ಭವನ, ತಾನ್‌ಸೇನ್ ಸಮಾರೋಹ, ಗ್ವಾಲಿಯರ್ ಸಮ್ಮೇಳನ, ಜೈಪುರದ ಸ್ವರ್ಣ ಸಂಗೀತ ಪ್ರತಿಭಾ ಸಮ್ಮೇಳನ, ಸವಾಯ್ ಗಂಧರ್ವ ಉತ್ಸವ ಪುಣೆ ಮುಂತಾದ ಕಡೆಗಳಲ್ಲಿ ಕಛೇರಿ ರಂಜಿಸಿವೆ.2008ರಲ್ಲಿ ಭೀಮಣ್ಣ ಜಾದವ್ ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ ಲಭಿಸಿತು. ವಿದೇಶಗಳಲ್ಲೂ ಸುಂದರಿ ವಾದ್ಯದ ಕಂಪನ್ನು ಹರಡಿದ ಇವರು ಅಮೆರಿಕ, ಕೆನಡ, ಯೂರೋಪ್, ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಹಲವಾರು ಕಛೇರಿಗಳನ್ನು ನೀಡಿದ್ದಾರೆ.ಪುಟಾಣಿ ವಾದ್ಯ `ಸುಂದರಿ~ ಹೆಸರು ಪಡೆದದ್ದು ಹೇಗೆ?

ಮರದ ಸಣ್ಣ ತುಂಡಿಗೆ ಎಂಟು ರಂಧ್ರಗಳನ್ನು ಕೊರೆದು ಅದರಲ್ಲಿ ಸಂಗೀತ ಹೇಗೆ ಕೇಳುತ್ತದೆ ಎಂದು ಪ್ರಯೋಗ ಮಾಡಿದ್ದು 1928ರಲ್ಲಿ ಸೋಲಾಪುರದ ಈ ಜಾದವ್ ಕುಟುಂಬ. 1936ರಲ್ಲಿ ಪಂ. ಸಿದ್ರಾಮ ಜಾದವ್ ಅಕ್ಕಲಕೋಟೆಯ ರಾಜಾ ಫತೇಸಿಂಗ್ ಅವರ ದರ್ಬಾರ್‌ನಲ್ಲಿ ಈ  ವಾದ್ಯ ನುಡಿಸಿದರು.ಅದರ ಸುಮಧುರ ನಾದ ಕೇಳಿ, ಸುಂದರವಾಗಿರುವ ವಾದ್ಯವನ್ನು ನೋಡಿದ ಮಹಾರಾಜ ಇದಕ್ಕೆ `ಸುಂದರಿ~ ಎಂದೇ ಹೆಸರಿಟ್ಟರು. ಅಲ್ಲಿಂದ ಈ ಪುಟಾಣಿ ವಾದ್ಯ `ಸುಂದರಿ~ ಎನಿಸಿಕೊಂಡಿದೆ.ಈ ವಾದ್ಯ ಉತ್ತರ ಭಾರತದಲ್ಲಿ, ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತ್ರ ಲಭ್ಯ. ಬೆಂಗಳೂರಿನಲ್ಲಿ ಕಲಿಸುವವರು, ಕಲಿಯುವವರು ಇಲ್ಲದೇ ಇರುವ ಕಾರಣ ವಾದ್ಯವೂ ಲಭ್ಯವಿಲ್ಲ. ಆಕಾಶವಾಣಿಯನ್ನು ಕೇಳುವವರು ಅಪರೂಪಕ್ಕೆ `ಸುಂದರಿ~ಯ ನಾದವನ್ನು ಆಲಿಸಿ ಆಸ್ವಾದಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.