ಶನಿವಾರ, ಮೇ 15, 2021
26 °C

ಇಂಗ್ಲಿಷ್ ಕುಂಡದ ಸಸ್ಯವಾದರೆ ಕನ್ನಡ ಬೇರು ಬಿಟ್ಟ ಹೆಮ್ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): `ನಮ್ಮ ರಾಜ್ಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಭಾಷಾ ನೀತಿ ಇಲ್ಲದಿರುವುದು ದೊಡ್ಡ ದುರಂತ. ಭಾಷಾ ನೀತಿ ಕುರಿತು ದಶಕಗಳಿಂದ ಚರ್ಚೆ-ಸಂವಾದ ನಡೆಯುತ್ತಿದ್ದರೂ ಸ್ಪಷ್ಟವಾದ ರೂಪು-ರೇಖೆ ಸಿದ್ಧಪಡಿಸಲು ಸಾಧ್ಯವಾಗಿಲ್ಲ' ಎಂದು ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ವಿಷಾದಿಸಿದರು.ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆ ಜಿಲ್ಲಾ ತೃತೀಯ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ `ಮಾತೃಭಾಷಾ ಶಿಕ್ಷಣದಿಂದ ಮಾತ್ರ ಗುಣಾತ್ಮಕ ಶಿಕ್ಷಣ ಸಾಧ್ಯ' ಎಂಬ ವಿಷಯದ  ಕುರಿತು ವಿಚಾರ ಮಂಡಿಸಿದ ಅವರು, ಭಾಷಾ ನೀತಿಯ ಕುರಿತು ಸ್ಪಷ್ಟವಾದ ರೂಪು-ರೇಖೆ ಸಿದ್ಧವಾಗದಿದ್ದರೆ, ಭಾಷೆಗೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತದೆ ಎಂದರು.ಯುನೆಸ್ಕೋ ವರದಿ ಪ್ರಕಾರ ಮಾತೃಭಾಷೆ ಕಲಿಕೆಗೂ ಮತ್ತು ಓದಿಗೂ ಸಂಬಂಧವಿದೆ. ಯಾವ ದೇಶದಲ್ಲಿ ಓದು ಹೆಚ್ಚಿರುತ್ತದೋ ಅಲ್ಲಿ ವಿಚಾರ ಸಂಪತ್ತು ಜಾಸ್ತಿಯಿರುತ್ತದೆ. ಒಬ್ಬ ವ್ಯಕ್ತಿ ವರ್ಷಕ್ಕೆ ಎರಡು ಸಾವಿರ ಪುಟದಷ್ಟು ಓದಿ ಅರಗಿಸಿಕೊಳ್ಳಬೇಕು. ಆದರೆ ವರದಿ ಪ್ರಕಾರ ಭಾರತೀಯರು ಕೇವಲ 33 ಪುಟಗಳನ್ನಷ್ಟೆ ಓದುತ್ತಾರೆ. ಅಮೆರಿಕಾ ಮತ್ತು ಚೀನಾ ದೇಶದವರು ಹೆಚ್ಚು ಓದುತ್ತಾರೆ. ಯಾವ ಸಮಾಜ ಓದುತ್ತದೋ ಅದು ವೈಚಾರಿಕ, ವೈಜ್ಞಾನಿಕವಾಗಿ ಬೆಳೆಯುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಓದುವ ಮತ್ತು ಓದು ಜೀವನದ ಭಾಗವಾಗಿಸುವ ಮನೋಭಾವ ಮೂಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅಗಾಧ ಎಂದರು.ವಿಜ್ಞಾನವನ್ನು ಕಥೆ- ಕಾದಂಬರಿಯಂತೆ ಬರೆದ ತೇಜಸ್ವಿಯವರಂತಹ ಲೇಖಕರ ಪುಸ್ತಕಗಳು, `ರಂಗಣ್ಣನ ಕನಸಿನ ದಿನಗಳು', ನಿರಂಜನರ `ಚಿರಸ್ಮರಣೆ' ಮುಂತಾದ ಪುಸ್ತಕಗಳು ಶಿಕ್ಷಕರಿಗೆ ಪ್ರೇರಣೆಯಾಗಲಿ ಮತ್ತು ಅವರಿಂದ ಮಕ್ಕಳು ಕಲಿಯುವಂತಾಗಲಿ. ಮಾತೃಭಾಷೆಯಿಂದ ಜ್ಞಾನ ಬೆಳೆಯುತ್ತದೆ, ಚಿಂತನೆ ಹೆಚ್ಚುತ್ತದೆ ಮತ್ತು ಸೃಜನಶೀಲತೆ ಮೂಡುತ್ತದೆ. ಇಂಗ್ಲಿಷ್ ಕಲಿಕೆ ಕುಂಡದ ಸಸ್ಯವಾದರೆ ಕನ್ನಡದ ಕಲಿಕೆ ಬೇರು ಬಿಟ್ಟ ಹೆಮ್ಮರದಂತೆ.

ಮಾತೃಬಾಷೆ ಕಲಿತ ನಂತರ ಯಾವ ಭಾಷೆಯನ್ನು ಬೇಕಾದರೂ ಮುಂದೆ ಕಲಿಯಬಹುದಾಗಿದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಮನಗಾಣಬೇಕು. ತಂತ್ರಜ್ಞಾನ ಇಂಗ್ಲಿಷ್‌ಗೆ ಸೀಮಿತವಾಗಿಲ್ಲ ಎಂಬುದನ್ನೂ ಎಲ್ಲರೂ ಅರಿಯಬೇಕು ಎಂದು ಅವರು ನುಡಿದರು.ಜಾಗತೀಕರಣ ಮತ್ತು ಶಿಕ್ಷಣದ ಸವಾಲುಗಳ ಕುರಿತು ತಮ್ಮ ವಿಚಾರ ಮಂಡಿಸಿದ ನಂದಿ ಪ್ರೌಢಶಾಲೆ ಶಿಕ್ಷಕ ತತ್ತೂರು ಲೋಕೇಶಪ್ಪ, ಅಭಿವ್ಯಕ್ತಿ ಮಾಧ್ಯಮದಲ್ಲಿ ನೆಲದ ಸಂವೇದನೆಗಳು ಬಹಳ ಮುಖ್ಯವಾಗಿ ಪರಿಗಣಿಸಬೇಕು. ಸಾಂಸ್ಕೃತಿಕ ಬೇರುಗಳು ಗಟ್ಟಿಗೊಳಿಸುವ ಕೆಲಸವನ್ನು ನಾಯಕರು ಮಾಡಬೇಕು. ಸೈದ್ಧಾಂತಿಕ ವಿಚಾರಗಳಿಲ್ಲದ ಯಾವುದೇ ಮುಖಂಡರಿಂದ ಕನ್ನಡದ ಬಿಕ್ಕಟ್ಟುಗಳನ್ನು ಪರಿಹರಿಸಲು ಆಗುವುದಿಲ್ಲ ಎಂದರು. ಗೋಷ್ಠಿ ಅಧ್ಯಕ್ಷತೆಯನ್ನು ಸ್ವಾತಂತ್ರ್ಯ ಹೋರಾಟಗಾರ ಡಿ.ಮಾರಪ್ಪ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.